
ಪಹಲ್ಗಾಮ್ ದಾಳಿಯ ನಂತರ ಭಯೋತ್ಪಾದಕರ ಹುಟ್ಟಡಗಿಸಲು ಪಣ ತೊಟ್ಟಿರುವ ಭಾರತ ಈಗಾಗಲೇ ಪಾಕಿಸ್ತಾನದ ಒಟ್ಟು 9 ಕಡೆ ಭಯೋತ್ಪಾದಕ ಕ್ಯಾಂಪ್‌ಗಳ ಮೇಲೆ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಸುಕಿನ ಜಾವ ನಡೆದ ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಎಂಟು ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಆದರೆ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತದ ಸೇನಾಪಡೆಗಳು ತಕ್ಕ ಪ್ರತ್ಯುತ್ತರ ನೀಡುತ್ತಿದ್ದಂತೆ ಇಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಗಾಂಧೀಜಿ ಪೋಟೊ ಹಾಕಿ ಶಾಂತಿ ಮಂತ್ರ ಜಪಿಸಿದೆ. ಎಕ್ಸ್‌ನಲ್ಲಿ ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ ಎಂದು ಮಹಾತ್ಮ ಗಾಂಧಿಯವರ ಹೇಳಿಕೆಯನ್ನು ಕಾಂಗ್ರೆಸ್ ಟ್ವಿಟ್ ಮಾಡಿತ್ತು. ಈ ಟ್ವಿಟ್ ಕೂಡಲೇ ವೈರಲ್ ಆಗಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೂಡಲೇ ಕಾಂಗ್ರೆಸ್ ಈ ಟ್ವಿಟ್ ಅನ್ನು ಡಿಲೀಟ್ ಮಾಡಿದೆ. ಹೀಗೆ ಕರ್ನಾಟಕ ಕಾಂಗ್ರೆಸ್ ದೇಶದ ಸಂಕಷ್ಟಕಾಲದಲ್ಲಿ ಈ ರೀತಿ ಶಾಂತಿಯ ಕತೆ ಹೇಳಿ ವಿವಾದ ಸೃಷ್ಟಿಸಿದ್ದರೆ ಅತ್ತ ಎಐಸಿಸಿ ಅಧ್ಯಕ್ಷ, ಮಲ್ಲಿಕಾರ್ಜುನ್ ಖರ್ಗೆ ಅವರು ಸೇನಾ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದು, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಿಂದ ಹೊರಹೊಮ್ಮುವ ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಭಾರತವು ದೃಢವಾದ ರಾಷ್ಟ್ರೀಯ ನೀತಿಯನ್ನು ಹೊಂದಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಹತ್ತಿಕ್ಕಿರುವ ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ. ಅವರ ದೃಢನಿಶ್ಚಯ ಮತ್ತು ಧೈರ್ಯವನ್ನು ನಾವು ಶ್ಲಾಘಿಸುತ್ತೇವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ದಿನದಿಂದ, ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಯಾವುದೇ ನಿರ್ಣಾಯಕ ಕ್ರಮ ಕೈಗೊಳ್ಳಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಶಸ್ತ್ರ ಪಡೆಗಳು ಮತ್ತು ಸರ್ಕಾರದೊಂದಿಗೆ ಸ್ಪಷ್ಟವಾಗಿ ನಿಂತಿದೆ. ರಾಷ್ಟ್ರೀಯ ಏಕತೆ ಮತ್ತು ಒಗ್ಗಟ್ಟು ಇಂದಿನ ಅಗತ್ಯವಾಗಿದೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಮ್ಮ ಸಶಸ್ತ್ರ ಪಡೆಗಳೊಂದಿಗೆ ನಿಂತಿದೆ. ನಮ್ಮ ನಾಯಕರು ಹಿಂದೆ ಇದೇ ಮಾರ್ಗವನ್ನು ತೋರಿಸಿದ್ದಾರೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ನಮಗೆ ಅತ್ಯುನ್ನತವಾಗಿದೆ ಎಂದು ಖರ್ಗೆ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಹಾಗೆಯೇ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಪ್ರತಿಕ್ರಿಯಿಸಿದ್ದು, ಭಯೋತ್ಪಾದನೆ ವಿಚಾರಕ್ಕೆ ಜಗತ್ತು ಶೂನ್ಯ ಸಹಿಷ್ಣುತೆಯನ್ನು ತೋರಿಸಬೇಕು' ಎಂದು ಹೇಳಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಒಟ್ಟು 9 ಉಗ್ರರ ತಾಣಗಳ ಮೇಲೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯ ಕೆಲ ಗಂಟೆಗಳ ನಂತರ ಎಕ್ಸ್‌ನಲ್ಲಿ ಟ್ವಿಟ್ ಮಾಡಿದ ಸಚಿವ ಜೈಶಂಕರ್, ಭಯೋತ್ಪಾದನೆ ಬಗ್ಗೆ ಜಗತ್ತು ಯಾವುದೇ ಸಹನೆ ತೋರಿಸಬಾರದು ಎಂದು ಟ್ವಿಟ್ ಮಾಡಿದ್ದಾರೆ. ಭಾರತೀಯ ನೌಕಾ ಸೇನೆ, ವಾಯುಸೇನೆ ಹಾಗೂ ಭೂಸೇನೆ ಜೊತೆಯಾಗಿ ನಡೆಸಿದ ಕಾರ್ಯಾಚರಣೆ ಇದಾಗಿದ್ದು, ಗಡಿ ನಿಯಂತ್ರಣ ರೇಖೆಯಾದ್ಯಂತ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆದಿದೆ. ಸೇನೆ ದಾಳಿ ನಡೆಸಿದ ಈ ಸ್ಥಳಗಳನ್ನು ಲಷ್ಕರ್-ಎ-ತೈಬಾ, ಹಿಜ್ಬುಲ್ ಮುಹಾಜಿದೀನ್ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಭಯೋತ್ಪಾದಕ ಗುಂಪುಗಳು ಬಳಸುತ್ತಿದ್ದವು.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಪರೇಷನ್ ಸಿಂಧೂರ್ ಅಡಿಯಲ್ಲಿ ಗುರಿಯಾದ ಒಂಬತ್ತು ಭಯೋತ್ಪಾದಕ ತಾಣಗಳ ಪಟ್ಟಿ ಇಲಿದೆ.
1. ಮರ್ಕಜ್ ಸುಭಾನ್ ಅಲ್ಲಾ, ಬಹವಾಲ್ಪುರ್ - ಜೆಎಂ ಉಗ್ರರ ತಾಣ
2. ಮರ್ಕಝ್ ತೈಬಾ, ಮುರಿಡ್ಕೆ - ಎಲ್‌ಇಟಿ ಉಗ್ರರ ತಾಣ
3. ಸರ್ಜಾಲ್, ತೆಹ್ರಾ ಕಲಾನ್ - ಜೆಎಂ ಉಗ್ರರ ತಾಣ
4. ಮೆಹಮೂನಾ ಜೋಯಾ, ಸಿಯಾಲ್‌ಕೋಟ್ - ಎಚ್‌ಎಂ ಉಗ್ರರ ತಾಣ
5. ಮರ್ಕಝ್ ಅಹ್ಲೆ ಹದೀಸ್, ಬರ್ನಾಲಾ - ಎಲ್‌ಇಟಿ ಉಗ್ರರ ತಾಣ
6. ಮರ್ಕಝ್ ಅಬ್ಬಾಸ್, ಕೋಟ್ಲಿ - ಜೆಎಂ ಉಗ್ರರ ತಾಣ
7. ಮಸ್ಕರ್ ರಹೀಲ್ ಶಾಹಿದ್, ಕೋಟ್ಲಿ - ಎಚ್.ಎಂ ಉಗ್ರರ ತಾಣ
8. ಶವಾಯಿ ನಲ್ಲಾ ಕ್ಯಾಂಪ್, ಮುಜಫರಾಬಾದ್ - ಎಲ್‌ಇ ಉಗ್ರರ ತಾಣ
9. ಸೈಯದ್ನಾ ಬಿಲಾಲ್ ಕ್ಯಾಂಪ್, ಮುಜಫರಾಬಾದ್ - ಜೆಎಂ ಉಗ್ರರ ತಾಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ