
ಕೊಯಮತ್ತೂರು: ತನ್ನ ತೊರೆದು ಹೋಗಿ, ಕೆಲಸ ಮಾಡಿಕೊಂಡು ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಮಹಿಳೆಯನ್ನು ಆಕೆಯ ಪತಿಯೇ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ತಮಿಳುನಾಡಿದ ಕೊಯಂಬತ್ತೂರಿನಲ್ಲಿ ನಡೆದಿದೆ. ಇಲ್ಲಿನ ಗಾಂಧಿಪುರಂ ಬಳಿಯ ರಾಜಾ ನಾಯ್ಡು ಬೀದಿಯಲ್ಲಿರುವ ಕೆಲಸ ಮಾಡುವ ಮಹಿಳೆಯರು ವಾಸವಿರುವ ಹಾಸ್ಟೆಲ್‌ನಲ್ಲಿ ಈ ಅನಾಹುತ ನಡೆದಿದೆ.
ಭಾನುವಾರ ಬೆಳಗ್ಗೆ 32 ವರ್ಷದ ವ್ಯಕ್ತಿಯೊಬ್ಬ ಈ ಕೃತ್ಯವೆಸಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರಥಿನಪುರಿ ಪೊಲೀಸರು ತಿರುನಲ್ವೇಲಿಯ ಎಸ್ ಬಾಲಮುರುಗನ್ ಎಂಬಾತನನ್ನು ಬಂಧಿಸಿದ್ದಾರೆ. ಈತನ ಪತ್ನಿ 30 ವರ್ಷದ ಶ್ರೀ ಪ್ರಿಯಾ ಕೊಲೆಯಾದವರು. ಪತ್ನಿ ಶ್ರೀಪ್ರಿಯಾಳನ್ನು ಕೊಲೆ ಮಾಡಿದ ಆರೋಪಿ, ಆಕೆಯ ವಿರುದ್ಧ ಅನೈ*ತಿಕ ಸಂಬಂಧದ ಆರೋಪ ಮಾಡಿದ್ದಾನೆ. ಚಾಕುವಿನಿಂದ ಇರಿದು ಕೊಲೆ ಮಾಡಿದ ನಂತರ ಮೃತದೇಹದೊಂದಿಗೆ ಸೆಲ್ಫಿ ತೆಗೆದುಕೊಂಡ ಆರೋಪಿ ಬಾಲಮುರುಗನ್ ಆ ಫೋಟೋವನ್ನು ತನ್ನ ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿದ್ದಾನೆ. ಬಳಿಕ ದಾಂಪತ್ಯ ದ್ರೋಹಕ್ಕೆ ಪ್ರತಿಫಲ ಸಾವು ಎಂದು ಬರೆದುಕೊಂಡಿದ್ದಾನೆ.
ಪತಿ ಮಕ್ಕಳನ್ನು ಬಿಟ್ಟು ಬಂದು ಕೊಯಮತ್ತೂರಿನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಪ್ರಿಯಾ:
ಇದಾದ ಬಳಿಕ ರಥಿನಪುರಿ ಪೊಲೀಸರು ತಿರುನಲ್ವೇಲಿಯ ನಿವಾಸಿಯಾಗಿರುವ ಎಸ್ ಬಾಲಮುರುಗನ್‌ನ್ನು ಬಂಧಿಸಿದ್ದಾರೆ. ತನಿಖಾ ಅಧಿಕಾರಿಯೊಬ್ಬರ ಪ್ರಕಾರ, ಬಾಲಮುರುಗನ್ ಅವರ ಪತ್ನಿ ಶ್ರೀ ಪ್ರಿಯಾ (30) ತಿರುನಲ್ವೇಲಿ ಮೂಲದವರಾಗಿದ್ದು, ನಾಲ್ಕು ತಿಂಗಳ ಹಿಂದೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿಂದಾಗಿ ಅವರು ತಮ್ಮ ಪತಿಯನ್ನು ತೊರೆದು ಕೊಯಮತ್ತೂರಿಗೆ ಹೋಗಿದ್ದರು. ಅಲ್ಲಿ ಅವರು ಕ್ರಾಸ್ ಕಟ್ ರಸ್ತೆಯಲ್ಲಿರುವ ಬ್ಯಾಗ್‌ಗಳ ಚಿಲ್ಲರೆ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಅವರಿಗೆ 10 ವರ್ಷದ ಮಗ ಮತ್ತು ಮೂರು ವರ್ಷದ ಮಗಳಿದ್ದು, ಇಬ್ಬರೂ ಮಕ್ಕಳನ್ನು ಪತಿ ಬಾಲಮುರುಗನ್ ಸುಪರ್ದಿಗೆ ಬಿಟ್ಟು ಹೋಗಿದ್ದರು. ಬಾಲಮುರುಗನ್ ಆ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.
ಇದನ್ನೂ ಓದಿ: ಗಾಳಿಪಟದ ಚೈನೀಶ್ ಮಾಂಜಾ ಕತ್ತಿಗೆ ಸಿಲುಕಿ ಬೈಕ್‌ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿ ಸಾವು
ಶ್ರೀಪ್ರಿಯಾಗೆ ಪತಿಯ ಸಂಬಂಧಿ ಜೊತೆ ಅನೈ*ತಿಕ ಸಂಬಂಧ
ರಾಜಾ ನಾಯ್ಡು ಬೀದಿಯಲ್ಲಿರುವ ಕೆಲಸ ಮಾಡುವ ಮಹಿಳೆಯರ ಹಾಸ್ಟೆಲ್‌ನಲ್ಲಿ ತಂಗಿದ್ದ ಶ್ರೀಪ್ರಿಯಾಗೆ ಈ ಮಧ್ಯೆ ಬಾಲಮುರುಗನ್ ಅವರ ದೂರದ ಸಂಬಂಧಿ ಇಸಕ್ಕಿ ರಾಜಾ ಜೊತೆ ವಿವಾಹೇತರ ಸಂಬಂಧ ಬೆಳೆದಿದೆ. ಆ ಇಸಕ್ಕಿ ರಾಜಾನಿಗೂ ಮದುವೆಯಾಗಿದ್ದು ಮೂರು ಮಕ್ಕಳಿದ್ದರು. ಈ ನಡುವೆ ಶನಿವಾರ ಶ್ರೀಪ್ರಿಯಾ ಪತಿ ಬಾಲಮುರುಗನ್ ಕೊಯಮತ್ತೂರಿನಲ್ಲಿ ಪ್ರಿಯಾಳನ್ನು ಭೇಟಿಯಾಗಿದ್ದಾನೆ. ಇಸಕ್ಕಿ ರಾಜಾ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿ ತನ್ನೊಂದಿಗೆ ಸಂತೋಷದ ಜೀವನ ನಡೆಸಲು ಮತ್ತೆ ಒಂದಾಗುವಂತೆ ಕೇಳಿಕೊಂಡಿದ್ದಾನೆ. ಆದರೆ ಶ್ರೀಪ್ರಿಯಾ ತನ್ನ ಊರಿಗೆ ಮರಳಲು ನಿರಾಕರಿಸಿದ್ದಾಳೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಬ್ಬರು ಆತ್ಮೀಯರಾಗಿರುವ ಫೋಟೋವನ್ನು ಬಾಲಮುರುಗನ್‌ಗೆ ಕಳುಹಿಸಿದ ಶ್ರೀಪ್ರಿಯಾ ಪ್ರಿಯಕರ
ಈ ಮಧ್ಯೆ ಬಾಲಮುರುಗನ್ ತನ್ನ ಪತ್ನಿ ಶ್ರೀಪ್ರಿಯಾಳನ್ನು ಭೇಟಿಯಾಗಲು ಬಂದ ವಿಚಾರ ತಿಳಿದ ಇಸಕ್ಕಿ ರಾಜ, ಶ್ರೀಪ್ರಿಯಾ ಹಾಗೂ ತಾನು ಬಹಳ ಆತ್ಮೀಯವಾಗಿದ್ದ ಫೋಟೋವೊಂದನ್ನು ವಾಟ್ಸಾಪ್‌ನಲ್ಲಿ ಬಾಲಮುರುಗನ್‌ಗೆ ಕಳುಹಿಸಿದ್ದಾನೆ. ಇದು ಬಾಲಮುರುಗನ್ ಕೋಪಗೊಳ್ಳುವಂತೆ ಮಾಡಿದೆ. ಇದೇ ಸಿಟ್ಟಿನಲ್ಲಿ ಕುಡಿದು ಬಂದ ಆತ ಕುಡಿದ ಮತ್ತಿನಲ್ಲಿ ಪ್ರಿಯಾಳನ್ನು ಹಾಸ್ಟೆಲ್‌ನಲ್ಲಿ ಭೇಟಿ ಮಾಡಿ ಆ ಫೋಟೋದ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಆಗ ಇಬ್ಬರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಇದ್ದಕ್ಕಿದ್ದಂತೆ, ಬಾಲಮುರುಗನ್ ತನ್ನ ಬ್ಯಾಗ್‌ನಿಂದ ಚೂರಿ ತೆಗೆದು ಆಕೆಗೆ ಇರಿದು ಸ್ಥಳದಲ್ಲೇ ಕೊಂದಿದ್ದಾನೆ.
ಇದನ್ನೂ ಓದಿ: ತಮಿಳುನಾಡಿನ ಕಾರೈಕುಡಿ ಬಳಿ 2 ಬಸ್‌ಗಳ ಮಧ್ಯೆ ಭೀಕರ ಅಪಘಾತ: 12 ಮಂದಿ ಸಾವು
ಕೊಲೆ ಮಾಡಿ ವಾಟ್ಸಾಪ್ ಸ್ಟೇಟಸ್ ಹಾಕಿದ ಪತಿ:
ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ, ಬಾಲಮುರುಗನ್ ಆಕೆಯ ಮೃತದೇಹದೊಂದಿಗೆ ಸೆಲ್ಫಿ ತೆಗೆದುಕೊಂಡು ಅದನ್ನು ತಮ್ಮ ವಾಟ್ಸಾಪ್ ಸ್ಟೇಟಸ್ ಆಗಿ ಪೋಸ್ಟ್ ಮಾಡಿದ್ದಾನೆ. ವಿಷಯ ತಿಳಿದ ರಥಿನಪುರಿ ಪೊಲೀಸರು ಶ್ರೀಪ್ರಿಯಾಳ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಿದ್ದಾರೆ. ಪತ್ನಿಯ ಶವದ ಬಳಿ ಕುಳಿತಿದ್ದ ಬಾಲಮುರುಗನ್ ಅವರನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವೂ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಒಟ್ಟಿನಲ್ಲಿ ಎರಡು ಮಕ್ಕಳ ತಾಯಿಯ ಅನೈತಿಕ ಸಂಬಂಧವೊಂದು ಕೊಲೆಯಲ್ಲಿ ಅಂತ್ಯವಾಗಿದ್ದು, ಇತ್ತ ಅಪ್ಪ ಜೈಲಿಗೆ ಹೋಗುವಂತಾಗಿದೆ. ಜೊತೆಗೆ ಮಕ್ಕಳು ಅಪ್ಪ ಅಮ್ಮ ಇಬ್ಬರೂ ಇಲ್ಲದೇ ತಬ್ಬಲಿಗಳಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ