ಸರ್ಕಾರದಲ್ಲಿದ್ದ 40% ಕಮೀಷನ್‌ಗೆ ತಿಲಾಂಜಲಿ ಹಾಡಿದ ಸಿಎಂ; ಕಡಿಮೆ ದರಕ್ಕೆ ಟೆಂಡರ್ ಹಿಡಿಯುತ್ತಿರುವ ಕಾಂಟ್ರಾಕ್ಟರ್ಸ್!

Published : Jul 02, 2026, 06:46 PM IST
Tamil Nadu Assembly

ಸಾರಾಂಶ

ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲಿಯೇ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗಿದ್ದು, ಮುಕ್ತ ಸ್ಪರ್ಧಾತ್ಮಕ ಟೆಂಡರ್ ಪದ್ಧತಿ ಜಾರಿಗೆ ತರಲಾಗಿದೆ. 40% ಕಮೀಷನ್‌ಗೆ ತಿಲಾಂಜಲಿ ಹಾಡಿದ್ದು, ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ಉಳಿತಾಯವಾಗುತ್ತಿದೆ.

ಮಿಳುನಾಡು ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ನೇತೃತ್ವದ ಟಿവിಕೆ ಸರ್ಕಾರ, ಆಡಳಿತದಲ್ಲಿ ಪಾರದರ್ಶಕತೆ ತರುವ ಮೂಲಕ ದೊಡ್ಡ ಬದಲಾವಣೆಗೆ ಮುನ್ನುಡಿ ಬರೆದಿದೆ. ತಮಿಳುನಾಡು ಸರ್ಕಾರದ ಮೇಲಿರುವ 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲದ ಬಗ್ಗೆ ಜನರಿಗೆ ಬಹಿರಂಗವಾಗಿ ತಿಳಿಸುತ್ತೇವೆ, ಈ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇವೆ ಎಂದು ವಿಜಯ್ ತಮ್ಮ ಆಡಳಿತ ಆರಂಭಿಸಿದ್ದರು. ಇದೀಗ ಅವರ ಈ ಪಾರದರ್ಶಕ ನಡೆಯಿಂದ ರಾಜ್ಯದ ಖಜಾನೆಗೆ ಕೋಟಿ ಕೋಟಿ ಲಾಭವಾಗುತ್ತಿದೆ.

ವಿಜಯ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದು ತಿಂಗಳಲ್ಲೇ, ಲೋಕೋಪಯೋಗಿ ಇಲಾಖೆಯಂತಹ ದೊಡ್ಡ ಮೊತ್ತದ ಕಾಮಗಾರಿಗಳಲ್ಲಿ ಈ ಬದಲಾವಣೆ ಕಾಣಿಸುತ್ತಿದೆ. ಈ ಹಿಂದೆ ಇದ್ದ ಫಿಕ್ಸ್ಡ್ ಅಥವಾ ಸೀಮಿತ ಟೆಂಡರ್ ಪದ್ಧತಿಯನ್ನು ವಿಜಯ್ ಸರ್ಕಾರ ರದ್ದು ಮಾಡಿದೆ. ಬದಲಾಗಿ, ಎಲ್ಲಾ ಸಿವಿಕ್ ಗುತ್ತಿಗೆಗಳನ್ನು 'ಓಪನ್ ಕಾಂಪಿಟೇಟಿವ್ ಬಿಡ್ಡಿಂಗ್' (ಮುಕ್ತ ಸ್ಪರ್ಧಾತ್ಮಕ ಟೆಂಡರ್) ಮೂಲಕವೇ ನಡೆಸಬೇಕೆಂದು ಆದೇಶ ಹೊರಡಿಸಿದೆ. ಗುತ್ತಿಗೆಗಳ ಹಿಂದಿನ ಭ್ರಷ್ಟಾಚಾರ ಮತ್ತು ಕಮಿಷನ್ ಹಾವಳಿಗೆ ಕಡಿವಾಣ ಹಾಕುವುದೇ ಇದರ ಮುಖ್ಯ ಉದ್ದೇಶ.

ಅರ್ಧ ಬೆಲೆಗೆ ಗುತ್ತಿಗೆ; ಖಜಾನೆಗೆ ಕೋಟಿ ಕೋಟಿ ಲಾಭ

ಜೂನ್ 28ರಂದು 'ದಿ ಟೈಮ್ಸ್ ಆಫ್ ಇಂಡಿಯಾ' ಪ್ರಕಟಿಸಿದ ವರದಿಯ ಪ್ರಕಾರ, ಚೆನ್ನೈ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗಳಿಗಾಗಿ ಗುತ್ತಿಗೆದಾರರು ಸಲ್ಲಿಸಿರುವ ಬಿಡ್ ಮೊತ್ತ, ಸರ್ಕಾರದ ಅಂದಾಜು ವೆಚ್ಚಕ್ಕಿಂತ ಶೇ. 25ರಿಂದ 30ರಷ್ಟು ಕಡಿಮೆಯಿದೆ. ಹಿಂದೆಲ್ಲಾ ಸರ್ಕಾರದ ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ಮೊತ್ತಕ್ಕೆ ಗುತ್ತಿಗೆ ನೀಡಲಾಗುತ್ತಿತ್ತು ಅನ್ನೋದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಉದಾಹರಣೆಗೆ, ಅಂಬತ್ತೂರು ವಲಯದಲ್ಲಿ 25 ಲಕ್ಷ ರೂಪಾಯಿ ಅಂದಾಜು ವೆಚ್ಚದ ರಸ್ತೆ ಕಾಮಗಾರಿಗೆ 9 ಗುತ್ತಿಗೆದಾರರು ಬಿಡ್ ಸಲ್ಲಿಸಿದ್ದರು. ಅಂತಿಮವಾಗಿ ಗುತ್ತಿಗೆ ಪಡೆದವರು, ಸರ್ಕಾರದ ಅಂದಾಜಿಗಿಂತ ಶೇ. 25.9ರಷ್ಟು ಕಡಿಮೆ ಮೊತ್ತವನ್ನು ನಮೂದಿಸಿದ್ದರು. ಅಂದರೆ, 25 ಲಕ್ಷದ ಪ್ರಾಜೆಕ್ಟ್‌ ಕೇವಲ 17 ಲಕ್ಷ ರೂಪಾಯಿಗೆ ಮುಗಿಯಲಿದೆ. ಈ ಒಂದೇ ಒಂದು ಟೆಂಡರ್‌ನಿಂದ ಕಾರ್ಪೊರೇಷನ್‌ಗೆ ಬರೋಬ್ಬರಿ 9 ಲಕ್ಷ ರೂಪಾಯಿ ಉಳಿತಾಯವಾಗಿದೆ. ಅದೇ ರೀತಿ, ತೊಂಡಿಯಾರ್‌ಪೇಟ್‌ನಲ್ಲಿ 30 ಲಕ್ಷದ ಯೋಜನೆಗೆ ಶೇ. 25ರಷ್ಟು ಕಡಿಮೆ ಮೊತ್ತಕ್ಕೆ ಮತ್ತು ಶೋಲಿಂಗನಲ್ಲೂರಿನಲ್ಲಿ ಅಂದಾಜು ವೆಚ್ಚಕ್ಕಿಂತ ಶೇ. 36ರಷ್ಟು ಕಡಿಮೆ ದರಕ್ಕೆ ಗುತ್ತಿಗೆದಾರರು ಬಿಡ್ ಮಾಡಿದ್ದಾರೆ.

ಹಿಂದಿನ ಸರ್ಕಾರಗಳ ಭ್ರಷ್ಟಾಚಾರ ಬಯಲು

ಈ ಬದಲಾವಣೆಯು ಹಿಂದಿನ ಸರ್ಕಾರಗಳ ಅವಧಿಯಲ್ಲಿ ಪ್ರಾಜೆಕ್ಟ್‌ಗಳ ಬಜೆಟ್‌ ಅನ್ನು ಹೇಗೆ ಹೆಚ್ಚಿಸಿ ತೋರಿಸಲಾಗುತ್ತಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಚೆನ್ನೈ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಮರಾವ್ ಹೇಳಿದ್ದಾರೆ. 'ಹಿಂದೆ 25 ಲಕ್ಷದ ಟೆಂಡರ್ ಅನ್ನು ಗುತ್ತಿಗೆದಾರರು 27.5 ಲಕ್ಷಕ್ಕೆ ತೆಗೆದುಕೊಳ್ಳುತ್ತಿದ್ದರು. ಆದರೆ ಇಂದು ಅದೇ ಕೆಲಸವನ್ನು 16 ಲಕ್ಷ ರೂಪಾಯಿಗೆ ಮಾಡಲು ಸಿದ್ಧರಾಗಿದ್ದಾರೆ. ಹಾಗಾದರೆ, ಶೇ. 35-40ರಷ್ಟು ಹೆಚ್ಚುವರಿ ಹಣವನ್ನು ಅಂದಾಜು ಮಾಡಲು ಅಧಿಕಾರಿಗಳು ಹೇಗೆ ಅನುಮತಿ ನೀಡುತ್ತಿದ್ದರು ಎಂಬುದರ ಬಗ್ಗೆ ತನಿಖೆಯಾಗಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ತಮಿಳುನಾಡು ಲೋಕೋಪಯೋಗಿ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಆಧವ್ ಅರ್ಜುನ್ ಕೂಡ ಹಿಂದಿನ ಸರ್ಕಾರಗಳ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. 'ಹಿಂದಿನ ಆಡಳಿತದಲ್ಲಿ ಗುತ್ತಿಗೆ ನೀಡುವಾಗ ವ್ಯವಸ್ಥಿತವಾಗಿ ನಿಯಮ ಉಲ್ಲಂಘನೆ ಮತ್ತು ಲಂಚಗುಳಿತನ ನಡೆಯುತ್ತಿತ್ತು. ಹಲವು ಗುತ್ತಿಗೆದಾರರಿಂದ ಹಣ ಪಡೆದು, ಕೊನೆಗೆ ಕೆಲಸ ನೀಡದೆ ವಂಚಿಸಲಾಗಿದೆ' ಎಂದು ಅವರು ಆರೋಪಿಸಿದರು. 'ವಿಜಯ್ ಸರ್ಕಾರದಲ್ಲಿ ಗುತ್ತಿಗೆದಾರರಿಂದ ಯಾವುದೇ ಕಮಿಷನ್ ಅಥವಾ ಲಂಚ ಪಡೆಯುವುದಿಲ್ಲ. ಹೆದ್ದಾರಿ ಗುತ್ತಿಗೆಗಳು ಸಂಪೂರ್ಣ ಪಾರದರ್ಶಕವಾಗಿರುತ್ತವೆ' ಎಂದು ಅವರು ಜೂನ್ 6ರಂದೇ ಸ್ಪಷ್ಟಪಡಿಸಿದ್ದರು.

ಇಡೀ ದೇಶಕ್ಕೇ ಮಾದರಿ ಎಂದ ತಜ್ಞರು

ವಿಜಯ್ ಸರ್ಕಾರದ ಈ ಭ್ರಷ್ಟಾಚಾರ-ವಿರೋಧಿ ನಡೆಗಳು ತಮಿಳುನಾಡಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. 'ಹಿಂದೆ ಇದ್ದ '40 ಪರ್ಸೆಂಟ್ ಕಮಿಷನ್' ಸಂಸ್ಕೃತಿಯನ್ನು ವಿಜಯ್ ಅವರು ಕೊನೆಗಾಣಿಸಿದರೆ, ಅದು ಇಡೀ ಭಾರತದ ಎಲ್ಲಾ ರಾಜ್ಯಗಳಿಗೆ ಮತ್ತು ಆಡಳಿತಗಾರರಿಗೆ ಒಂದು ಹೊಸ ಮಾದರಿಯಾಗುತ್ತದೆ' ಎಂದು ಆರ್ಥಿಕ ತಜ್ಞ ವೆಂಕಟೇಶ್ವರ ರಾವ್ ಪಡಕೋಡ ಅಭಿಪ್ರಾಯಪಟ್ಟಿದ್ದಾರೆ. 'ತಮಿಳುನಾಡಿನ ಜನರು ಹಣ ಪಡೆಯದೆ ಮತ ಹಾಕಿದ್ದರ ಫಲವನ್ನು ಈಗ ಅನುಭವಿಸುತ್ತಿದ್ದಾರೆ' ಎಂದು ಅವರು 'ಎಕ್ಸ್' (ಹಿಂದಿನ ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ.

ಖಾಸಗಿ ವ್ಯಕ್ತಿಗಳ ಜೇಬಿಗೆ ಹಣ ಹೋಗುವುದು ನಿಂತಿದ್ದರಿಂದಲೇ ಗುತ್ತಿಗೆದಾರರು ಈಗ ಶೇ. 25-30ರಷ್ಟು ಕಡಿಮೆ ಮೊತ್ತಕ್ಕೆ ಬಿಡ್ ಮಾಡಲು ಮುಂದೆ ಬರುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಮುತ್ತುಕೃಷ್ಣನ್ ದಂಡಪಾಣಿ ಹೇಳಿದ್ದಾರೆ. 'ಭ್ರಷ್ಟಾಚಾರ ವಿರೋಧಿ ಕ್ರಮಗಳು, ಡ್ರಗ್ಸ್ ವಿರುದ್ಧದ ಅಭಿಯಾನ ಮತ್ತು ಮಹಿಳಾ ಸುರಕ್ಷತೆಯ ಮೂಲಕ ವಿಜಯ್ ಅವರು ತಮಿಳುನಾಡು ಆಡಳಿತದಲ್ಲಿ ಒಂದು ಹೊಸ ಮಾನದಂಡವನ್ನೇ ಸ್ಥಾಪಿಸುತ್ತಿದ್ದಾರೆ' ಎಂದು ಮತ್ತೊಬ್ಬ ರಾಜಕೀಯ ವಿಶ್ಲೇಷಕ ಜಾರ್ಜ್ ಹೇಳಿದ್ದಾರೆ.

ಕಡಿಮೆ ಮೊತ್ತಕ್ಕೆ ಗುತ್ತಿಗೆ ನೀಡಿದರೂ, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ನಿಗದಿತ ಸಮಯಕ್ಕೆ ಯೋಜನೆಗಳನ್ನು ಪೂರ್ಣಗೊಳಿಸುವುದು ವಿಜಯ್ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಆದರೂ, ಆಡಳಿತದ ಮೊದಲ ತಿಂಗಳಲ್ಲೇ ಪಾರದರ್ಶಕ ಟೆಂಡರ್ ಪ್ರಕ್ರಿಯೆ ಮೂಲಕ ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣವನ್ನು ಉಳಿಸಿದ್ದು ವಿಜಯ್ ಸರ್ಕಾರದ ದೊಡ್ಡ ಯಶಸ್ಸು ಎಂದೇ ವಿಶ್ಲೇಷಿಸಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
ಮೊಬೈಲ್‌ನಲ್ಲಿ ಮಾತನಾಡುತ್ತಾ ಮ್ಯಾನ್‌ಹೋಲ್‌ಗೆ ಬಿದ್ದ ವ್ಯಕ್ತಿ; ಗುತ್ತಿಗೆದಾರರನ ವಿರುದ್ಧ ಕ್ರಮ