ಹಾವು ಕಚ್ಚಿ ಯುವಕ ಸಾವು: ಯುವಕನೊಂದಿಗೆ ಹಾವನ್ನೂ ಜೀವಂತ ಸುಟ್ಟ ಗ್ರಾಮಸ್ಥರು!

By Anusha KbFirst Published Sep 23, 2024, 6:01 PM IST
Highlights

ಛತ್ತೀಸ್‌ಗಢದಲ್ಲಿ ಹಾವು ಕಚ್ಚಿ 22 ವರ್ಷದ ಯುವಕ ಸಾವನ್ನಪ್ಪಿದ ನಂತರ, ಅಂತ್ಯಕ್ರಿಯೆಯ ವೇಳೆ ಗ್ರಾಮಸ್ಥರು ಹಾವನ್ನು ಸಹ ಚಿತೆಗೆ ಹಾಕಿ ಸುಟ್ಟ ಘಟನೆ ನಡೆದಿದೆ.

22 ವರ್ಷದ ಯುವಕನೋರ್ವ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಆದರೆ ಅದಕ್ಕಿಂತಲೂ ವಿಚಿತ್ರ ಎಂದರೆ ಆತನ ಸಾವಿನ ನಂತರ ಅಂತ್ಯಸಂಸ್ಕಾರ ಮಾಡುವ ವೇಳೆ ಆತನೊಂದಿಗೆ ಆತನಿಗೆ ಕಚ್ಚಿದ ಹಾವನ್ನು ಚಿತೆಗೆ ಹಾಕಿ ಜನ ಸುಟ್ಟಿದ್ದಾರೆ. ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ನಿನ್ನೆ ಭಾನುವಾರ ಈ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಾವನ್ನು  ಕೋಲೊಂದರಿಂದ ಎಳೆದುಕೊಂಡು ಬಂದು ಅದನ್ನು ಚಿತೆಗೆ ಹಾಕುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. 

ಅಲ್ಲಿನ ಕೆಲವರು ಹಾವು ನಮ್ಮನ್ನು ಕಚ್ಚಿ ಸಾಯಿಸಬಹುದು ಎಂದು ಭಯಗೊಂಡಿದ್ದು, ನಂತರ ಹಾವನ್ನು ಕೂಡ ಯುವಕನ ಚಿತೆಗೆ ಹಾಕಿ ಜೀವಂತವಾಗಿ ಸುಟ್ಟಿದ್ದಾರೆ.  ವಿಚಾರ ತಿಳಿದ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು  ಜನರಿಗೆ ಹಾವುಗಳನ್ನು ನಿರ್ವಹಿಸುವ ಬಗ್ಗೆ ಸರಿಯಾದ ಜ್ಞಾನ ನೀಡಬೇಕಿದೆ ಎಂದು ಹೇಳಿದ್ದಾರೆ. 

Latest Videos

ರೈಲು ಪ್ರಯಾಣಿಕರೇ ಎಚ್ಚರ! ಬೋಗಿಯಲ್ಲಿತ್ತು ಐದು ಅಡಿ ಉದ್ದದ ಹಾವು... ಪ್ರಯಾಣಿಕರು ಕಕ್ಕಾಬಿಕ್ಕಿ!

ಪಿಟಿಐ ವರದಿಯ ಪ್ರಕಾರ, ಅಧಿಕಾರಿಯೊಬ್ಬರು ಹೇಳಿದಂತೆ  ಆ ಪ್ರದೇಶದಲ್ಲಿ ಸಾಮಾನ್ಯವಾಗಿರುವ ಕ್ರೈಟ್ ಹಾವೊಂದು  ದಿಗೇಶ್ವರ ರಾಥಿಯಾ ಎಂಬ 22 ವರ್ಷದ ಯುವಕನಿಗೆ ಶನಿವಾರ ರಾತ್ರಿ ಕಚ್ಚಿದೆ.  ಕೋರ್ಬಾ ಜಿಲ್ಲೆಯ ಬೈಗಮರ್‌ನಲ್ಲಿರುವ ಮನೆಯಲ್ಲಿ ಮಲಗುವುದಕ್ಕಾಗಿ ತನ್ನ ಹಾಸಿಗೆಯನ್ನು ಸಿದ್ಧಪಡಿಸುತ್ತಿದ್ದಾಗ ಹಾವೊಂದು ಬಂದು ಈತನಿಗೆ ಕಚ್ಚಿದೆ.  ಹಾವು ಕಚ್ಚಿದ ವಿಚಾರವನ್ನು ಕೂಡಲೇ ರಾಥಿಯಾ ಕುಟುಂಬದವರಿಗೆ ತಿಳಿಸಿದ್ದಾನೆ. ಅದರಂತೆ ಕುಟುಂಬದವರು ಆತನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಭಾನುವಾರ ಮುಂಜಾನೆ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. 

ನಂತರ ಯುವಕನ ಮರಣೋತ್ತರ ಪರೀಕ್ಷೆ ನಡೆಸಿದ  ವೈದ್ಯರು  ಶವವನ್ನು ಕುಟುಂಬಕ್ಕೆ ಅಂತ್ಯಕ್ರಿಯೆ ನಡೆಸಲು ಹಸ್ತಾಂತರ ಮಾಡಿದ್ದಾರೆ. ಇದಾದ ನಂತರ ಗ್ರಾಮದ ಜನ ಹಾವನ್ನು ಹಿಡಿದು ಅದನ್ನು ಬಕೆಟೊಂದರಲ್ಲಿ ಹಾಕಿ ಇಟ್ಟಿದ್ದಾರೆ. ನಂತರ ಅದನ್ನು ಹಗ್ಗವೊಂದಕ್ಕೆ ಕಟ್ಟಿ ಕೋಲಿಗೆ ಸಿಕ್ಕಿಸಿದ್ದಾರೆ. 

ಕಚ್ಚಿದ ಹಾವನ್ನು ಕೊಂದು, ಅದೇ ಹಾವಿಡಿದು ಆಸ್ಪತ್ರೆಗೆ ಬಂದ ಹುಬ್ಬಳ್ಳಿಯ ಯುವಕ!

ಇತ್ತ ದಿಗೇಶ್ವರ್ ರಾಥಿಯಾನ ಅಂತ್ಯಸಂಸ್ಕಾರ ನಡೆಸಲು ಮನೆಯತ್ತ ಶವವನ್ನು ತರುತ್ತಿದ್ದರೆ, ಇತ್ತ ಗ್ರಾಮಸ್ಥರು ಶವಸಂಸ್ಕಾರ ನಡೆಸುತ್ತಿದ್ದ ಸ್ಥಳಕ್ಕೆ ಹಾವನ್ನು ಕೂಡ ಕೋಲಿನಲ್ಲಿ ಕಟ್ಟಿ ಎಳೆದುಕೊಂಡು ಬಂದಿದ್ದಾರೆ. ನಂತರ ದಿಗೇಶ್ವರನನ್ನು ಚಿತೆಗೆ ಏರಿಸಿ ಬೆಂಕಿಯಿಡುತ್ತಿದ್ದಂತೆ ಇತ್ತ ಜೀವಂತ ಹಾವನ್ನು ಕೂಡ ಆತನ ಚಿತೆಗೆ ಹಾಕಿ ಜೀವಂತವಾಗಿ ಸುಟ್ಟಿದ್ದಾರೆ.  ಆ ಹಾವು ಗ್ರಾಮದ ಇತರರಿಗೂ ಕಚ್ಚುವ ಭಯವಿತ್ತು. ಹಾಗಾಗಿ ಹಾವನ್ನು ಸುಟ್ಟಿದ್ದಾಗಿ ಗ್ರಾಮಸ್ಥರು ಹೇಳಿದ್ದಾರೆ. 

ಈ ಬಗ್ಗೆ ಗ್ರಾಮಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಕೇಳಿದಾಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಬ್ ಡಿವಿಷನಲ್ ಅಧಿಕಾರಿ ಅಶಿಶ್ ಖೆಲ್ವರ್‌, ಹಾವು ಕೊಂದ ಗ್ರಾಮಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.  ಅಲ್ಲದೇ ಜನರಿಗೆ ಹಾವುಗಳ ಬಗ್ಗೆ ಶಿಕ್ಷಣ ಹಾಗೂ ಅವುಗಳನ್ನು ನಿರ್ವಹಿಸುವ ರೀತಿಯ ಬಗ್ಗೆ ಶಿಕ್ಷಣ ನೀಡುವ ಅಗತ್ಯವಿದೆ, ಏಕೆಂದರೆ ಹಾವುಗಳು ಪರಿಸರ ವ್ಯವಸ್ಥೆಯನ್ನು ಚೆನ್ನಾಗಿ ಇರಿಸುತ್ತವೆ ಎಂದು ಅವರು ಹೇಳಿದ್ದಾರೆ. 

click me!