ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಿಂದ ಇನ್ನೊಂದು ಕೆಟ್ಟ ಸುದ್ದಿ ಬಂದಿದೆ. ನಮೀಬಿಯಾದಿಂದ ಬಂದಿದ್ದ ಸಿಯ್ಯಾ ಅಲಿಯಾಸ್ ಜ್ವಾಲಾ ಹೆಸರಿನ ಹೆಣ್ಣು ಚೀತಾಗೆ ಹುಟ್ಟಿದ್ದ ನಾಲ್ಕು ಮರಿಗಳ ಪೈಕಿ ಒಂದು ಮರಿ ಸಾವು ಕಂಡಿದೆ.
ನವದೆಹಲಿ (ಮೇ.23): ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಸಾವಿಗೆ ಕೊನೆಯೇ ಇಲ್ಲದಂತಾಗಿದೆ. ಇತ್ತೀಚೆಗೆ ದಕ್ಷಾ ಚೀತಾ ಗಂಡು ಚೀತಾದ ಆಕ್ರಮಣಕಾರಿ ಸಂಭೋಗದಿಂದಾಗಿ ಸಾವು ಕಂಡಿತ್ತು. ಈ ಘಟನೆ ನಡೆದು ಒಂದು ತಿಂಗಳೂ ಆಗಿಲ್ಲ. ಆಗಲೇ ಮತ್ತೊಂದು ಚೀತಾ ಸಾವಿನ ಸುದ್ದಿ ಅಪ್ಪಳಿಸಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಭಾರತಕ್ಕೆ ಕರೆತರಲಾಗಿದ್ದ ಎಂಟು ಚೀತಾಗಳ ಪೈಕಿ ಸಿಯ್ಯಾ ಅಲಿಯಾಸ್ ಜ್ವಾಲಾ ಹೆಸರಿನ ಹೆಣ್ಣು ಚೀತಾ, ನಾಲ್ಕು ಮರಿಗಳಿಗೆ ಎರಡು ತಿಂಗಳ ಹಿಂದೆ ಜನ್ಮ ನೀಡಿತ್ತು. ಅದರಲ್ಲಿ ಒಂದು ಹೆಣ್ಣು ಚೀತಾ ಸಾವು ಕಂಡಿದೆ ಎಂದು ಕುನೋ ಪಾರ್ಕ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಭಾರತದಲ್ಲಿ ಈಗಾಗಲೇ ನಶಿಸಿ ಹೋಗಿರುವ ಚೀತಾ ಸಂತತಿಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದೊಂದಿಗೆ ಆಫ್ರಿಕಾ ಖಂಡದ ದೇಶನಗಳಾದ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗಿತ್ತು. ಕಳೆದ ವರ್ಷ ಪ್ರಧಾನಿ ಮೋದಿಯ ಜನ್ಮದಿನದಂದು ನಮೀಬಿಯಾದಿಂದ ತಂದಿದ್ದ ಎಂಟು ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದ್ದರೆ, ದಕ್ಷಿಣ ಆಫ್ರಿಕಾದಿಂದ ತಂದಿದ್ದ 12 ಚೀತಾಗಳನ್ನು ಫೆಬ್ರವರಿಯಲ್ಲಿ ಇದೇ ಪಾರ್ಕ್‌ನಲ್ಲಿ ಬಿಡಲಾಗಿತ್ತು.
'ಎರಡು ತಿಂಗಳ ಹೆಣ್ಣು ಚೀತಾ ಮರಿ ಸಾವು ಕಂಡಿದ್ದರ ಹಿಂದಿನ ಕಾರಣವೇನು ಅನ್ನೋದರ ಬಗ್ಗೆ ತಮ್ಮ ತಂಡ ಕೆಲಸ ಮಾಡುತ್ತಿದೆ' ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಮೀಬಿಯಾದಿಂದ ಕರೆತಂದಿದ್ದ ಸಿಯ್ಯಾ ಹೆಸರಿನ ಚೀತಾಗೆ ಭಾರತದಲ್ಲಿ ಜ್ವಾಲಾ ಎಂದು ಹೆಸರು ನೀಡಲಾಗಿತ್ತು. ಈ ವರ್ಷದ ಮಾರ್ಚ್‌ನಲ್ಲಿ ಇದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆಗ ಇಡೀ ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ನಮೀಬಿಯಾದಿಂದ ಬರುವಾಗಲೇ ಕಿಡ್ನಿ ಸೋಂಕಿಗೆ ಒಳಗಾಗಿದ್ದ ಸಾಶಾ ಮಾರ್ಚ್‌ನಲ್ಲಿ ಮೃತಪಟ್ಟಿತ್ತು. ಆ ಬಳಿಕ ಉದಯ್ ಹೆಸರಿನ ಚೀತಾ ಕೂಡ ಅಸ್ವಸ್ಥಗೊಂಡು ಸಾವು ಕಂಡಿತ್ತು. ಮೂಲಗಳ ಪ್ರಕಾರ, ಉದಯ್ ಹೆಸರಿನ ಚೀತಾಗೆ ಹಾವು ಕಚ್ಚಿದ್ದರಿಂದ ಸಾವು ಕಂಡಿದೆ ಎನ್ನಲಾಗಿತ್ತು. ತೀರಾ ಇತ್ತೀಚೆಗೆ ದಕ್ಷಾ ಹೆಸರಿನ ಹೆಣ್ಣು ಚೀತಾ, ಎರಡು ಗಂಡು ಚೀತಾಗಳ ಆಕ್ರಮಣಕಾರಿ ಸಂಭೋಗದಿಂದಾಗಿ ಸಾವು ಕಂಡಿತ್ತು. ಈಗ ನಾಲ್ಕನೇ ಚೀತಾ ಸಾವು ಕಂಡಿದೆ.
ಗಂಡು ಚೀತಾದ ಆಕ್ರಮಣಕಾರಿ ಸಂಭೋಗ, ದಕ್ಷಿಣ ಆಫ್ರಿಕಾದಿಂದ ಬಂದಿದ್ದ 'ದಕ್ಷಾ' ಚೀತಾ ಸಾವು!
ಹೆಣ್ಣು ಚೀತಾ ಜ್ವಾಲಾದ ಮರಿ ಚೀತಾ ಸಾವು ಕಂಡ ಬೆನ್ನಲ್ಲಿಯೇ ಮಾತನಾಡಿರುವ ಕುನೋ ರಾಷ್ಟ್ರೀಯ ಉದ್ಯಾನವನದ ಅರಣ್ಯ ಇಲಾಖೆಯ ಮುಖ್ಯ ಸಂರಕ್ಷಣಾಧಿಕಾರಿ ಜೆಎಸ್ ಚೌಹಾಣ್ 'ಚಿರತೆಗಳನ್ನು ಬೇರೆಡೆಗೆ ಸ್ಥಳಾಂತರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾತ್ರ ತೆಗೆದುಕೊಳ್ಳಬಹುದು, ಅದು ನಮ್ಮ ನಿಯಂತ್ರಣದಲ್ಲಿಲ್ಲ' ಎಂದಿದ್ದಾರೆ.
ಕಳೆದ ವರ್ಷ ನಮೀಬಿಯಾದಿಂದ ಬಂದಿದ್ದ 5 ವರ್ಷದ ಹೆಣ್ಣು ಚೀತಾ ಸಾವು!
ಇಂದು ನಿಗಾ ತಂಡ ಉದ್ಯಾನವನಕ್ಕೆ ಭೇಟಿ ನೀಡಿದಾಗ ಚೀತಾ ಮರಿ ತುಂಬಾ ದುರ್ಬಲವಾಗಿದ್ದ ರೀತಿ ಕಂಡಿತ್ತು. ತಾಯಿಯ ಜೊತೆಗೆ ಈ ನಾಲ್ಕೂ ಮರಿಗಳು ಇದ್ದವು. ಆದರೆ, ಒಮ್ಮೆ ತಾಯಿ ಚೀತಾ ಎದ್ದು ನಡೆಯಲು ಆರಂಭಿಸಿದಾಗ ಉಳಿದ ಮೂರೂ ಚೀತಾಗಳು ಅದರ ಹಿಂದೆ ಹೋದರೆ, ಇನ್ನೊಂದು ಮರಿಗೆ ಏಳಲು ಸಾಧ್ಯವಾಗುತ್ತಿರಲಿಲ್ಲ. ಮೇಲೇಳುವ ಪ್ರಯತ್ನ ಮಾಡುತ್ತಿದ್ದರೂ ಅದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆಗ ತಂಡ ಪಶುವೈದ್ಯರನ್ನು ಕರೆಸಿ ಆಸ್ಪತ್ರೆಗೆ ಕರೆದೊಯ್ದರೂ 5-10 ನಿಮಿಷಗಳ ಬಳಿಕ ಮರಿ ಸಾವನ್ನಪ್ಪಿದೆ. ಆ ಮರಿ ಹುಟ್ಟಿದಾಗಲಿಂದಲೇ ದುರ್ಬಲವಾಗಿತ್ತು. ಹುಟ್ಟಿದ ಬಳಿಕ ಸಾಮಾನ್ಯವಾಗಿ ಮರಿಗಳು ತಾಯಿಯ ಹಾಲು ಕುಡಿದು ಗಟ್ಟಿಯಾಗುತ್ತದೆ. ಆದರೆ, ಈ ಮರಿ ಅಷ್ಟಾಗಿ ಚುಟುವಟಿಕೆಯಲ್ಲಿ ಇದ್ದಿರಲಿಲ್ಲ. ಇದಕ್ಕೆ ಅಗತ್ಯ ಹಾಲು ಕೂಡ ತಾಯಿಯಿಂದ ಸಿಗುತ್ತಿರಲಿಲ್ಲ. ಸಾಕಷ್ಟು ದುರ್ಬಲವಾಗಿದ್ದೇ ಮರಿಯ ಸಾವಿಗೆ ಕಾರಣ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ನಂತರ ಕಾರಣದ ಹೆಚ್ಚಿನ ವಿವರಗಳನ್ನು ನೀಡಬಹುದು. ಉಳಿದ ಮೂರು ಮರಿಗಳು ಬಹಳ ಉತ್ತಮವಾಗಿದ್ದು, ಚಟುವಟಿಕೆಯಿಂದ ಇದೆ ಎಂದು ಹೇಳಿದ್ದಾರೆ.