ಶತ್ರು ಆಸ್ತಿ ಮಾರಿ 1 ಲಕ್ಷ ಕೋಟಿ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಸಜ್ಜು !

By Kannadaprabha News  |  First Published Mar 20, 2023, 6:26 AM IST

ಭಾರತದಿಂದ ಪಾಕಿಸ್ತಾನ ಹಾಗೂ ಚೀನಾಗೆ ವಲಸೆ ಹೋಗಿ ಅಲ್ಲಿನ ನಾಗರಿಕತ್ವ ಪಡೆದವರ ಆಸ್ತಿಗಳ ತೆರವು ಹಾಗೂ ಮಾರಾಟ ಪ್ರಕ್ರಿಯೆಯನ್ನು ಕೇಂದ್ರ ಗೃಹ ಸಚಿವಾಲಯ ಆರಂಭಿಸಿದೆ. ಇದರಿಂದ ಸರ್ಕಾರಕ್ಕೆ 1 ಲಕ್ಷ ಕೋಟಿ ರು. ಆದಾಯ ಹರಿದುಬರುವ ನಿರೀಕ್ಷೆಯಿದೆ. ಇಂಥ ಸ್ಥಿರಾಸ್ತಿ ಮಾರಾಟ ಇದೇ ಮೊದಲು.


ಪಿಟಿಐ ನವದೆಹಲಿ (ಮಾ.20) : ಭಾರತದಿಂದ ಪಾಕಿಸ್ತಾನ ಹಾಗೂ ಚೀನಾಗೆ ವಲಸೆ ಹೋಗಿ ಅಲ್ಲಿನ ನಾಗರಿಕತ್ವ ಪಡೆದವರ ಆಸ್ತಿಗಳ ತೆರವು ಹಾಗೂ ಮಾರಾಟ ಪ್ರಕ್ರಿಯೆಯನ್ನು ಕೇಂದ್ರ ಗೃಹ ಸಚಿವಾಲಯ ಆರಂಭಿಸಿದೆ. ಇದರಿಂದ ಸರ್ಕಾರಕ್ಕೆ 1 ಲಕ್ಷ ಕೋಟಿ ರು. ಆದಾಯ ಹರಿದುಬರುವ ನಿರೀಕ್ಷೆಯಿದೆ. ಇಂಥ ಸ್ಥಿರಾಸ್ತಿ ಮಾರಾಟ ಇದೇ ಮೊದಲು.

1947ರಲ್ಲಿ ದೇಶ ವಿಭಜನೆ ವೇಳೆ ಭಾರತದಲ್ಲೇ ಆಸ್ತಿ ಬಿಟ್ಟು ಪಾಕ್‌ಗೆ ತೆರಳಿದವರ ಆಸ್ತಿಗೆ ‘ಶತ್ರು ಆಸ್ತಿ’ (enemy properties)ಎನ್ನುತ್ತಾರೆ. ಇದೇ ರೀತಿ ವಿವಿಧ ಕಾಲಘಟ್ಟದಲ್ಲಿ ಚೀನಾಗೆ ವಲಸೆ ಹೋಗಿ ಅಲ್ಲಿನ ಪೌರತ್ವ ಪಡೆದವರ ಭಾರತದಲ್ಲಿನ ಆಸ್ತಿಗಳನ್ನೂ ‘ಶತ್ರು ಆಸ್ತಿ’ ಎಂದು ಪರಿಗಣಿಸಲಾಗುತ್ತದೆ. ಒಟ್ಟು 12,611 ಆಸ್ತಿಗಳನ್ನು ಈಗ ಗುರುತಿಸಿ ಮಾರಾಟಕ್ಕೆ ಇಡಲಾಗಿದೆ. ಇವುಗಳಲ್ಲಿ 126 ಆಸ್ತಿಗಳು ಚೀನಾಗೆ ವಲಸೆ ಹೋದ ವ್ಯಕ್ತಿಗಳಿಗೆ ಸೇರಿವೆ. ಇನ್ನುಳಿದ 12,485 ಆಸ್ತಿಗಳು ಪಾಕಿಸ್ತಾನಕ್ಕೆ ವಲಸೆ ಹೋದವರಿಗೆ ಸೇರಿವೆ.

Latest Videos

undefined

9,400 ಶತ್ರು ಆಸ್ತಿ ಮೇಲೆ ಕಣ್ಣಿಟ್ಟ 'ಚಾಣಕ್ಯ' ಶಾ ನೇತೃತ್ವದ ಸಮಿತಿ!

ದಶಕಗಳಿಂದಲೂ ಇಂಥ ಕಾಯ್ದೆ ದೇಶದಲ್ಲಿ ಇತ್ತಾದರೂ, ಅದರಲ್ಲಿದ್ದ ಹಲವು ಕ್ಲಿಷ್ಟಪ್ರಕ್ರಿಯೆಗಳ ಕಾರಣ ಆಸ್ತಿ ಮಾರಾಟ ಸುಲಭವಾಗಿರಲಿಲ್ಲ. ಹೀಗಾಗಿ ಭಾರೀ ಪ್ರಮಾಣದ ಆಸ್ತಿ ಸರ್ಕಾರ ಬಳಿ ಇದ್ದರೂ ಅದನ್ನು ಮಾರಾಟ ಮಾಡಲು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ವರ್ಷಗಳ ಹಿಂದೆ ಈ ಕಾಯ್ದೆಗೆ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರ, ತೆರವು ಮತ್ತು ಮಾರಾಟ ಪ್ರಕ್ರಿಯೆ ಸರಳಗೊಳಿಸಿತ್ತು.

ಅದರ ಮುಂದುವರೆದ ಭಾಗವಾಗಿ ಇದೀಗ ಆಸ್ತಿಗಳನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳ ನೆರವಿನಿಂದ ತೆರವುಗೊಳಿಸಿ ಮಾರಾಟಕ್ಕೆ ಇಡಲಾಗುವುದು. 1 ಕೋಟಿ ರು. ಮೌಲ್ಯಕ್ಕಿಂತ ಕಡಿಮೆ ಬೆಲೆಯ ಆಸ್ತಿಗಳಲ್ಲಿ ಈಗ ಯಾರಾದರೂ ವಾಸಿಸುತ್ತಿದ್ದರೆ ಅವರಿಗೇ ಮೊದಲು ಖರೀದಿಸಲು ಅವಕಾಶ ನೀಡಲಾಗುವುದು. ಅವರು ಖರೀದಿಗೆ ನಿರಾಕರಿಸಿದರೆ ನಿಯಮಾನುಸಾರ ಇತರ ಆಸಕ್ತರಿಗೆ ಆದ್ಯತೆ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇನ್ನು 1 ಕೋಟಿ ರು.ಗಿಂತ ಹೆಚ್ಚಿನ ಹಾಗೂ 100 ಕೋಟಿ ರು.ಗಿಂತ ಕೆಳಗಿನ ಬೆಲೆಯ ಆಸ್ತಿಯನ್ನು ಇ-ಹರಾಜು ಮೂಲಕ ಮಾರಲಾಗುವುದು. ಇದರ ಬೆಲೆಯನ್ನು ಶತ್ರು ಆಸ್ತಿ ಮಾರಾಟ ಸಮಿತಿ ನಿರ್ಣಯಿಸಲಿದೆ ಎಂದು ಹೇಳಲಾಗಿದೆ. ಈಗಾಗಲೇ ಶತ್ರುಗಳ ಚಿನ್ನ ಮುಂತಾದ ಚರಾಸ್ತಿಗಳನ್ನು ಮಾರಿ ಸರ್ಕಾರ 3,400 ಕೋಟಿ ರು. ಆದಾಯ ಗಳಿಸಿದೆ.

ದೇಶದಲ್ಲಿ 1 ಲಕ್ಷ ಕೋಟಿ ಮೌಲ್ಯದ ಶತ್ರು ಆಸ್ತಿ ಹರಾಜಿಗೆ ಕೇಂದ್ರ ನಿರ್ಧಾರ

ಕರ್ನಾಟಕದಲ್ಲೂ ಇವೆ 24 ಶತ್ರು ಆಸ್ತಿ

ದೇಶಾದ್ಯಂತ 12,611 ಕೋಟಿ ರು. ಶತ್ರು ಆಸ್ತಿ ಇದ್ದು, ಈ ಪೈಕಿ ಕರ್ನಾಟಕದಲ್ಲೂ 24 ಆಸ್ತಿಗಳಿವೆ. ಅವುಗಳಲ್ಲಿ ಹೆಚ್ಚಿನವು ಬೆಂಗಳೂರಿನಲ್ಲಿವೆ ಎನ್ನಲಾಗಿದೆ. ದೇಶದಲ್ಲಿ ಅತಿ ಹೆಚ್ಚು ಶತ್ರು ಆಸ್ತಿ ಉತ್ತರ ಪ್ರದೇಶದಲ್ಲಿ (6255), ಪ.ಬಂಗಾಳದಲ್ಲಿ (4088) ಇವೆ. ದೇಶಾದ್ಯಂತ 20 ರಾಜ್ಯಗಳಲ್ಲಿ ಶತ್ರು ಆಸ್ತಿಗಳು ಸಮೀಕ್ಷೆ ವೇಳೆ ಪತ್ತೆ ಆಗಿದ್ದವು.

click me!