ಆಪ್‌ನಿಂದ ಖಲಿಸ್ತಾನ ಹೋರಾಟ ಮತ್ತೆ ಆರಂಭ, ರಾಜಕೀಯಕ್ಕಾಗಿ ಪಂಜಾಬ್ ಬಲಿ ಎಂದ ಬಿಜೆಪಿ!

By Suvarna NewsFirst Published Mar 19, 2023, 10:20 PM IST
Highlights

ಪಂಜಾಬ್‌ನಲ್ಲಿ ಗಟ್ಟಿಯಾಗಿ ಬೇರೂರಲು ಯತ್ನಿಸುತ್ತಿರುವ ಖಲಿಸ್ತಾನ ಉಗ್ರಸಂಘಟನೆ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಈ ಪರಿಸ್ಥಿತಿ ಎದುರಾಗಲು ಕಾರಣ ಆಮ್ ಆದ್ಮಿ ಪಾರ್ಟಿ. 80ರ ದಶಕದಲ್ಲಿ ಕಾಂಗ್ರೆಸ್ ರೀತಿಯಲ್ಲೇ ಇದೀಗ ಆಪ್ ರಾಜಕೀಯ ಲಾಭಕ್ಕಾಗಿ ಖಲಿಸ್ತಾನ ಪೋಷಿಸಿ, ಪಂಜಾಬ್ ಬಲಿಕೊಟ್ಟಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಪಂಜಾಬ್(ಮಾ.19): ಪಂಜಾಬ್‌ನಲ್ಲಿ ಕಳೆದರೆಡು ದಿನದಿಂದ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಇತ್ತ ಖಲಿಸ್ತಾನ ನಾಯಕ, ವಾರಿಸ್ ಪಂಜಾಬ್ ದೇ ಸಂಘಟನೆ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್ ಅರೆಸ್ಟ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅಮೃತ್‌ಪಾಲ್ ಬೆಂಬಲಿಗರನ್ನು ಬಂಧಿಸಲಾಗುತ್ತಿದೆ. ಪಂಜಾಬ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಪಂಜಾಬ್ ಉಗ್ರರ ನೆಲೆಯಾಗಲು, ಆತಂಕ ವಾತಾವರಣ ಎದರಾಗಲು ಆಮ್ ಆದ್ಮಿ ಪಾರ್ಟಿ ಕಾರಣ ಎಂದು ಬಿಜೆಪಿ ನಾಯಕ ಸುನಿಲ್ ಜಖಾರ್ ಹೇಳಿದ್ದಾರೆ.  ಖಲಿಸ್ತಾನ ಸಂಘಟನೆಗೆ ನೀರೆರೆದು ಪೋಷಿಸಿದ ಆಮ್ ಆದ್ಮಿ ಪಾರ್ಟಿ, ಈಗ ಬಂಧನ, ಹತ್ತಿಕ್ಕುವ ನಾಟಕವಾಡುತ್ತಿದೆ ಎಂದು ಆರೋಪಿಸಿದೆ.

80ರ ದಶಕದಲ್ಲಿ ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಖಲಿಸ್ತಾನ ಉಗ್ರ ಸಂಘಟನೆಯನ್ನು ಬೆಳೆಸಿತು. ಬಳಿಕ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿತು. ದೇಶಕ್ಕೆ ಗಂಡಾಂತರ ಎದುರಾಗಿತ್ತು. ಇದೀಗ ಆಮ್ ಆದ್ಮಿ ಪಾರ್ಟಿ ತನ್ನ ರಾಜಕೀಯ ಲಾಭಕ್ಕಾಗಿ ಖಲಿಸ್ತಾನ ಜೊತೆ ಕೈಜೋಡಿಸಿತ್ತು. ಪಂಜಾಬ್‌ನಲ್ಲಿ ಆಮ್ ಆದ್ಮಿ ಸರ್ಕಾರ ರಚಿಸುತ್ತಿದ್ದಂತೆ ಖಲಿಸ್ತಾನ ಉಗ್ರ ಸಂಘಟನೆ ಮತ್ತೆ ಭಾರತದಲ್ಲಿ ಗಟ್ಟಿಯಾಗಿ ಬೇರೂರಲು ಆರಂಭಿಸಿದೆ. ರಾಜಕೀಯ ಲಾಭಕ್ಕಾಗಿ ಪಂಜಾಬ್ ಬಲಿಕೊಟ್ಟಿದೆ ಎಂದು ಸುನಿಲ್ ಜಖಾರ್ ಹೇಳಿದ್ದಾರೆ. 

ಪರಾರಿಯಾದ ಖಲಿಸ್ತಾನಿ ನಾಯಕ ಅಮೃತ್‌ಪಾಲ್‌ ಸಿಂಗ್: ಪಂಜಾಬ್‌ ಹೈ ಅಲರ್ಟ್‌..!

1980ರ ದಶಕದಲ್ಲಿ ಇದೇ ಖಲಿಸ್ತಾನ ಹೋರಾಟ ತೀವ್ರಗೊಂಡಿತ್ತು. ಬಿಂದ್ರನವಾಲೆ ಖಲಿಸ್ತಾನ ಹೋರಾಟದ ಮುಖ್ಯಸ್ಥನಾಗಿ ಸರ್ಕಾರದ ವಿರುದ್ದ  ಹೋರಾಟ ಆರಂಭಿಸಿದ್ದ. ಖಲಿಸ್ತಾನ ಉಗ್ರರು ಸ್ವರ್ಣಮಂದಿರದೊಳಗೆ ಪ್ರವೇಶಿಸಿ, ಸಾರ್ವಜನಿಕರನ್ನು ಒತ್ತೆಯಾಳಾಗಿಟ್ಟುಕೊಂಡಿತು. ಬಳಿಕ ಇಂದಿರಾ ಗಾಂಧಿ ಸರ್ಕಾರ ಸೈನ್ಯವನ್ನು ಕಳುಹಿಸಿ ಖಲಿಸ್ತಾನ ಉಗ್ರರನ್ನು ಸಂಪೂರ್ಣವಾಗಿ ಸದೆಬಡಿಯಲಾಯಿತು. ಬಿಂದ್ರನವಾಲೆ ಕೂಡ ಇದೇ ಆಪರೇಶನ್ ಬ್ಲೂ ಸ್ಟಾರ್‌ನಲ್ಲಿ ಹತ್ಯೆಯಾಗಿದ್ದ. ಬಳಿಕ ಭಾರತದಲ್ಲಿ ಖಲಿಸ್ತಾನ ಉಗ್ರ ಸಂಘಟನೆ ನಿಷೇಧಗೊಂಡಿತು. ಆದರೆ ಕೆನಾಡಾ, ಆಸ್ಟ್ರೇಲಿಯಾ ಸೇರಿದಂತೆ ಇತರ ದೇಶದಲ್ಲಿ ಖಲಿಸ್ತಾನ ಬೆಳೆದು ನಿಂತಿತು.

ಇತ್ತೀಚಿನ ಕೆಲ ವರ್ಷಗಳಲ್ಲಿ ಖಲಿಸ್ತಾನ ಹೋರಾಟ ಭಾರತದಲ್ಲಿ ತೀವ್ರಗೊಂಡಿದೆ. ಕೇಂದ್ರದ ವಿರುದ್ಧ ಕೃಷಿ ಕಾನೂನು ಹೋರಾಟದಿಂದ ಖಲಿಸ್ತಾನದ ಭಾರತದಲ್ಲಿ ಗಟ್ಟಿಯಾಗಿ ಬೇರೂರಲು ಆರಂಭಿಸಿದೆ. ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸಿದ ಹೋರಾಟದ ಹಿಂದೆ ಇದೇ ಖಲಿಸ್ತಾನ ಸಂಘಟನೆ ನೆರವು ಇದೇ ಅನ್ನೋ ಆರೋಪ ಗೌಪ್ಯವಾಗಿ ಉಳಿದಿಲ್ಲ. ಇದೇ ಹೋರಾಟಕ್ಕೆ ಆಮ್ ಆದ್ಮಿ ಪಾರ್ಟಿ ಎಲ್ಲಾ ರೀತಿಯ ನೆರವು ನೀಡಿತ್ತು. ಪಂಜಾಬ್ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಎಲ್ಲಾ ರಣತಂತ್ರಗಳು ರೂಪಿಸಲಾಗಿತ್ತು ಅನ್ನೋ ಆರೋಪ ಹೊಸದೇನಲ್ಲ.

ಖಲಿಸ್ತಾನ ಹೋರಾಟದ ನೇತೃತ್ವದ ವಹಿಸಿದ ಅಮೃತ್ ಪಾಲ್ ಸಿಂಗ್ ಯಾರು?

ಇದೀಗ ಖಲಿಸ್ತಾನ ನಾಯಕನಾಗಿ ಗುರುತಿಸಿಕೊಂಡು ಮತ್ತೆ ಪ್ರತ್ಯೇಕತೆ, ಉಗ್ರವಾದ ಬಿತ್ತಲು ಆರಂಭಿಸಿದ ಅಮೃತಪಾಲ್ ಸಿಂಗ್ ಬಂಧಿಸಲು ಪೊಲೀಸರು ಹುಡುಕಾಡುತ್ತಿದ್ದಾರೆ. ಅಮೃತಪಾಲ್ ಸಿಂಗ್ ಪರಾರಿ ಎಂದು ಪೊಲೀಸರು ಹೇಳಿದ್ದಾರೆ. ಇದುವರೆಗೂ ಎಲ್ಲಿದ್ದಾನೆ ಅನ್ನೋ ಸುಳಿವು ಸಿಕ್ಕಿಲ್ಲ. ಶನಿವಾರ ಪೊಲೀಸರು ಅಮೃತಪಾಲ್ ಸಿಂಗ್‌ನನ್ನು ಚೇಸಿಂಗ್ ಮಾಡಿ ಹಿಡಿಯಲು ಯತ್ನಿಸಿದ್ದಾರೆ. ಆದರೆ ಪೊಲೀಸರಿಗೆ ಚಳ್ಳೇ ಹಣ್ಣು ತಿನ್ನಿಸಿ ಮತ್ತೊಂದು ಕಾರಿನಲ್ಲಿ ಪರಾರಿಯಾಗಿದ್ದಾನೆ.

click me!