ಕಾಶ್ಮೀರ(16): ದೇಶ ಕಾಯುವುದಕ್ಕಾಗಿ ಮನೆ ಮಠ ಬಿಟ್ಟು ದೂರದಲ್ಲೆಲ್ಲೋ ಇರುವ ಯೋಧರಿಗೆ ಹಬ್ಬ ಹರಿದಿನ ಯಾವುದು ಇಲ್ಲ. ತಾವೆಲ್ಲಿರುತ್ತಾರೋ ಅದೇ ಮನೆ. ತನ್ನ ಜೊತೆ ಇರುವವರೇ ಕುಟುಂಬದವರು. ಅವರೊಂದಿಗೆಯೇ ಹಬ್ಬ. ಹೌದು ಮೈನಸ್ ತಾಪಮಾನದ ರಕ್ತ ಹೆಪ್ಪುಗಟ್ಟುವಂತಹ ಚಳಿಯಲ್ಲಿ ಭಾರತೀಯ ಯೋಧರು ಬಿಹು ಹಬ್ಬ ಆಚರಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ಚಳಿಯಲ್ಲೂ ಯೋಧರ ಉತ್ಸಾಹಕ್ಕೆ ನೆಟ್ಟಿಗರು ಸೆಲ್ಯೂಟ್ ಹೊಡೆದಿದ್ದಾರೆ.
ಬಿಎಸ್‌ಜೆ ಜವಾನರು ಕಾಶ್ಮೀರದ ಹಿಮದಿಂದ ಆವೃತವಾದ ಪರ್ವತಗಳಲ್ಲಿ ಹೆಪ್ಪುಗಟ್ಟುವಂತಹ ತಾಪಮಾನದ ನಡುವೆ ಜಾನಪದ ಹಾಡಿಗೆ ನೃತ್ಯ ಮಾಡಿ ತಮ್ಮ ಸಂಪ್ರದಾಯಿಕ ಹಬ್ಬ ಬಿಹುವನ್ನು ಆಚರಿಸಿದರು. ಕಾಶ್ಮೀರದ ಗಡಿ ಭದ್ರತಾ ಪಡೆಯ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದ್ದು, ಸೈನಿಕರು ಜಾನಪದ ಹಾಡಿಗೆ ಡಾನ್ಸ್ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಪರ್ವತಗಳು ಹಾಗೂ ಹಿಮದ ಪರ್ವತಗಳು, ಕುರುಡು ಹಿಮಪಾತಗಳು, ಹೆಪ್ಪುಗಟ್ಟಿಸುವ ತಾಪಮಾನ, 24 ಗಂಟೆಗಳ ಜಾಗರಣೆ ಎಲ್‌ಒಸಿಯ ಒತ್ತಡ, ಮನೆಗಳಿಂದ ದೂರ. ಇವುಗಳ್ಯಾವುದು ಕೂಡ ಬಿಎಸ್‌ಎಫ್ ಪಡೆಗಳ ಕೆಲವು ಹೆಜ್ಜೆಗಳ ಡಾನ್ಸ್ ಮಾಡುವುದನ್ನು ತಡೆಯಲಾಗಲಿಲ್ಲ ಎಂದು ಬರೆದು ಕಾಶ್ಮೀರದ ಬಿಎಸ್‌ಎಫ್ ಖಾತೆ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ.
ಭೀಕರ ಹಿಮಪಾತಕ್ಕೆ ಅಂಜದೆ ನಿಂತ ಗಂಡು... ಭಾರತೀಯ ಯೋಧನ ವಿಡಿಯೋ ವೈರಲ್
ಕಾಶ್ಮೀರದ (Kashmir) ಕುಪ್ವಾರಾ (Kupwara) ಜಿಲ್ಲೆಯ ಕೆರಾನ್ ಸೆಕ್ಟರ್‌ನಲ್ಲಿ (Keran sector) ಮೈ ಕೊರೆಯುವ ತಾಪಮಾನ, ಹಿಮಪಾತಗಳು ಮತ್ತು 24 ಗಂಟೆಗಳ ಕರ್ತವ್ಯದ ಒತ್ತಡದ ಹೊರತಾಗಿಯೂ ಸೈನಿಕರು ಬಿಹುವನ್ನು ಆಚರಿಸಿದರು ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.
ಮೈನಸ್ ತಾಪಮಾನದಲ್ಲಿ ಖುಕುರಿ ಡಾನ್ಸ್... ಮೈ ಕೊರೆಯುವ ಚಳಿಯಲ್ಲಿ ಯೋಧರ ಸಖತ್ ಸ್ಟೆಪ್
ಜವಾನರಲ್ಲಿ ಒಬ್ಬರು ಸಾಂಪ್ರದಾಯಿಕ ಗಾಮೋಸ/ಗಮುಸಾವನ್ನು(ಶಾಲು) ಧರಿಸಿರುವುದು ಕಂಡುಬರುತ್ತದೆ, ಇದು ಮುಖ್ಯವಾಗಿ ಮೂರು ಬದಿಗಳಲ್ಲಿ ಕೆಂಪು ಬಾರ್ಡರ್‌ನ್ನು ಹೊಂದಿರುವ ಬಟ್ಟೆಯ ತುಂಡು ಇದು ಅಸ್ಸಾಮಿ ಸಂಸ್ಕೃತಿಯ ಪ್ರತೀಕ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು , ಯೋಧರ ಉತ್ಸಾಹಕ್ಕೆ ಭೇಷ್ ಎಂದಿದ್ದಾರೆ.
ಪ್ರವಾಹವೇ ಬರಲಿ, ಭೂಕಂಪವಾಗಲಿ ಹೀಗೆ ಎಂಥಹದ್ದೇ ನೈಸರ್ಗಿಕ ವಿಕೋಪಗಳು ಸಂಭವಿಸಲಿ ತಕ್ಷಣವೇ ದೇಶದ ನಾಗರಿಕ ರಕ್ಷಣೆಗೆ ಧಾವಿಸುವುದು ಭಾರತೀಯ ಸೇನೆ. ಮಳೆ, ಮೈ ಕೊರೆಯುವ ಚಳಿ, ಬಿಸಿಲೆನ್ನದೆ ದೇಶ ಕಾಯವ ಯೋಧರು ಪೋಷಕರು, ಹೆಂಡತಿ ಮಕ್ಕಳಿಂದ ದೂರವುಳಿದು ದೇಶವನ್ನು ಕಾಯಲು ತೆರಳುತ್ತಾರೆ. ತಾವಿದ್ದಲ್ಲೇ ತಮ್ಮ ಜೊತೆ ಇರುವವರನ್ನೇ ಕುಟುಂಬವೆಂದು ತಿಳಿದು ಸಂಭ್ರಮಿಸಿ ಖುಷಿ ಪಡುವ ಸೈನಿಕರ ಮನಸ್ಥಿತಿ ಪದಗಳಿಗೆ ನಿಲುಕದ್ದು.
ಮೊನ್ನೆ ಮೊನ್ನೆಯಷ್ಟೇ ರಾಶಿಬಿದ್ದಿರು ಮೊಣಕಾಲೆತ್ತರದ ಹಿಮದಲ್ಲಿ ಯೋಧರು ವಾಲಿಬಾಲ್ ಆಟವಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಆ ಮೈನಸ್ ಡಿಗ್ರಿ ಚಳಿಯಲ್ಲೂ ಯೋಧರ ಕ್ರೀಡಾಸ್ಪೂರ್ತಿಗೆ ನೆಟ್ಟಿಗರು ಭೇಷ್ ಎಂದಿದ್ದರು. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ (Awanish Sharan)ಶೇರ್ ಮಾಡಿದ್ದಾರೆ. ಅತ್ಯುತ್ತಮ 'ಚಳಿಗಾಲದ ಆಟಗಳು.' ನಮ್ಮ ಜವಾನರು ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ. ಭಾರತೀಯ ಯೋಧರು ಶೀತ, ಚಳಿ ವಾತಾವರಣವನ್ನು ಎದುರಿಸಿ ಹಿಮದ ಮೇಲೆ ವಾಲಿಬಾಲ್ ಆಡುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ. ವಿಡಿಯೋ ಎಲ್ಲಾ ಕಡೆಯಿಂದ ಮೆಚ್ಚುಗೆ ಗಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ