BSF Jawan Crossed Pak Border: ಆಕಸ್ಮಿಕವಾಗಿ ಪಾಕ್‌ ಗಡಿ ದಾಟಿದ ಭಾರತದ ಸೈನಿಕ!

By Santosh NaikFirst Published Dec 1, 2022, 5:58 PM IST
Highlights

ಆಕಸ್ಮಿಕವಾಗಿ ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ ಬಿಎಸ್‌ಎಫ್‌ ಜವಾನನನ್ನು ಪಾಕಿಸ್ತಾನದ ರೇಂಜರ್ಸ್‌ ಗುರುವಾರ ಬಂಧನಕ್ಕೆ ಒಳಪಡಿಸಿತ್ತು. ಆ ಬಳಿಕ ಬಿಎಸ್‌ಎಫ್‌ ಅಧಿಕಾರಿಗಳು ಪಾಕ್‌ ರೇಂಜರ್ಸ್‌ ನಡುವಿನ ಸಭೆಯ ಬಳಿಕ ಆತನನ್ನು ಮರಳಿ ಕಳುಹಿಸಲಾಗಿದೆ.

ಅಮೃತ್‌ಸರ್‌ (ಡಿ.1): ಪಂಜಾಬ್‌ನಲ್ಲಿರುವ ಭಾರತ ಹಾಗೂ ಪಾಕಿಸ್ತಾನದ ನಡುವಿನ ಅಂತಾರಾಷ್ಟ್ರೀಯ ಗಡಿ ಹಾಗೂ ಜೀರೋ ಲೈನ್‌ಅನ್ನು ದಾಟಿ ಪಾಕಿಸ್ತಾನಕ್ಕೆ ತೆರಳಿದ್ದ ಬಿಎಸ್‌ಎಫ್‌ ಸೈನಿಕನನ್ನುಪಾಕಿಸ್ತಾನದ ರೇಂಜರ್ಸ್‌ಗಳು ಬಂಧಿಸಿದ ಘಟನೆ ಗುರುವಾರ ನಡೆದಿದೆ. ಬೆಳಗ್ಗೆ 6.30ರ ಸುಮಾರಿಗೆ ಸೈನಿಕ ಪಾಕಿಸ್ತಾನದ ಗಡಿಯನ್ನು ದಾಟಿದ್ದ. ಗಡಿ ಭಾಗದಲ್ಲಿ ದಟ್ಟ ಮಂಜಿನ ವಾತಾವರಣ ಇರುವ ಕಾರಣ ಗಡಿ ರೇಖೆ ಹಾಗೂ ಜೀರೋ ಲೈನ್ ಗಮನಕ್ಕೆ ಬರದೆ ಪಾಕಿಸ್ತಾನದ ಪ್ರದೇಶಕ್ಕೆ ತೆರಳಿದ್ದ. ಈ ವೇಳೆ ಭದ್ರತೆಯಲ್ಲಿ ಪಾಕಿಸ್ತಾನ ರೇಂಜರ್ಸ್‌ ಸೈನಿಕನನ್ನು ಬಂಧನ ಮಾಡಿದ್ದರು. ಭಾರತೀಯ ಗಡಿ ಭದ್ರತಾ ಪಡೆದ 66 ಬೆಟಾಲಿಯನ್‌ನ ಸೈನಿಕ ಬೆಳಗ್ಗೆ ನಾಪತ್ತೆಯಾಗಿದ್ದ. ಆತ ಗಡಿಯನ್ನು ದಾಟಿದ ವಿವರ, ಬಿಎಸ್‌ಎಫ್‌ಗೆ ತಿಳಿಯುತ್ತಿದ್ದಂತೆ ಪಾಕಿಸ್ತಾನದ ಜೊತೆ ಮಾತನಾಡಲು ಹಿರಿಯ ಅಧಿಕಾರಿಗಳು ನಿರ್ಧಾರ ಮಾಡಿದ್ದರು. ತಕ್ಷಣವೇ ಪಾಕಿಸ್ತಾನ ರೇಂಜರ್ಸ್‌ನ ಹಿರಿಯ ಅಧಿಕಾರಿಗಳ ಜೊತೆ ಬಿಎಸ್‌ಎಫ್‌ನ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿದರು. ಈ ವೇಳೆ, ಪಾಕ್‌ ರೇಂಜರ್ಸ್ ಸೈನಿಕ ತಮ್ಮ ವಶದಲ್ಲಿರುವುದನ್ನು ಖಚಿತಪಡಿಸಿದ್ದರು.

ಇದಾದ ನಂತರ ಬಿಎಸ್‌ಎಫ್ ಅಧಿಕಾರಿಗಳು ಪಾಕ್ ರೇಂಜರ್‌ಗಳೊಂದಿಗೆ ತುರ್ತು ಸಭೆ ನಡೆಸಿ ಜವಾನನನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡರು. ಆರಂಭದಲ್ಲಿ ಸೈನಿಕನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದ ಪಾಕ್ ರೇಂಜರ್‌ಗಳು ಬಳಿಕ ಬಿಎಸ್‌ಎಫ್ ಜವಾನನನ್ನು ಬಿಡುಗಡೆ ಮಾಡಲು ಒಪ್ಪಿಕೊಂಡರು. ಈ ಸಂಪೂರ್ಣ ಘಟನೆಯು ಪಂಜಾಬ್‌ನ ಬಿಎಸ್‌ಎಫ್‌ನ ಫಿರೋಜ್‌ಪುರ ಸೆಕ್ಟರ್‌ನ ಅಬೋಹರ್ ಪ್ರದೇಶದಲ್ಲಿ ನಡೆದಿದೆ.

ಪಂಜಾಬ್‌ ಗಡಿ ಬಳಿ ಮತ್ತೆ ಪಾಕ್‌ ಡ್ರೋನ್‌ಗಳು ಪತ್ತೆ: ಭದ್ರತಾ ಪಡೆಗಳಿಂದ ಗುಂಡಿನ ದಾಳಿ

ಪಂಜಾಬ್‌ನ ಗಡಿ ಭಾಗದಲ್ಲಿ ದಟ್ಟ ಮಂಜಿನ ವಾತಾವರಣವಿದೆ.  ಅಂದಾಜು ಮೂರು ಗಂಟೆಯ ಬಳಿಕ ಬಿಎಸ್‌ಎಫ್‌ಗೆ ಸೈನಿಕ ನಾಪತ್ತೆಯಾಗಿರುವ ವಿಚಾರ ಗೊತ್ತಾಗಿದೆ. ಬೆಳಗ್ಗೆ 9.30ರ ವೇಳೆ ಬಿಎಸ್‌ಎಫ್‌ ಸೈನಿಕರ ರೋಲ್‌ ಕಾಲ್‌ ಮಾಡಿ ಅವರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು ಈ ವೇಳೆ ಒಬ್ಬ ಸೈನಿಕ ನಾಪತ್ತೆಯಾಗಿರುವುದು ಗೊತ್ತಾಗಿತ್ತು. ಸಾಕಷ್ಟು ಶೋಧ ಕಾರ್ಯ ನಡೆಸಿದ ಬಳಿಕವೂ ಸೈನಿಕನ ಮಾಹಿತಿ ಲಭ್ಯವಾಗಿರಲಿಲ್ಲ. ಇದರಿಂದಾಗಿ ಬೆಟಾಲಿಯನ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ನದಿಯಲ್ಲಿ ತೇಲುತ್ತಿದ್ದ 38 ಲಕ್ಷ ರೂಪಾಯಿ ಮೌಲ್ಯದ 317 ಮೊಬೈಲ್‌ ಫೋನ್‌ ವಶಪಡಿಸಿಕೊಂಡ ಬಿಎಸ್‌ಎಫ್‌!

ತರಾತುರಿಯಲ್ಲಿ ಇಡೀ ಪ್ರದೇಶದಲ್ಲಿ ಹುಡುಕಾಟ ನಡೆಸಲಾಗಿತ್ತು. ಆದರೆ, ಜವಾನನ ಕುರಿತು ಯಾವ ಮಾಹಿತಿ ಕೂಡ ಸಿಕ್ಕಿರಲಿಲ್ಲ. ಇದರ ನಂತರ, ಪಾಕಿಸ್ತಾನಿ ರೇಂಜರ್‌ಗಳನ್ನು ಈ ಕುರಿತಾಗಿ ಸಂಪರ್ಕ ಮಾಡಲಾಯಿತು. ಈ ವೇಳೆ ಸೈನಿಕ ತಮ್ಮ ವಶದಲ್ಲಿರುವುದನ್ನು ಅವರು ಖಚಿತಪಡಿಸಿದ್ದರು. ಅಂತರಾಷ್ಟ್ರೀಯ ಗಡಿಯನ್ನು ದಾಟಿ ತಮ್ಮ ಪ್ರದೇಶವನ್ನು ತಲುಪಿದ ಕಾರಣ ಬಿಎಸ್‌ಎಫ್‌ ಸೈನಿಕನನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನಿ ರೇಂಜರ್‌ಗಳು ತಿಳಿಸಿದ್ದರು.

ಕೆಲವೇ ಗಂಟೆಗಳಲ್ಲಿ ವ್ಯಾಪಕ ಸಭೆ: ಬಿಎಸ್‌ಎಫ್‌ನ 66ನೇ ಬೆಟಾಲಿಯನ್‌ನ ಒಬ್ಬ ಸೈನಿಕ ಆಕಸ್ಮಿಕವಾಗಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಪಾಕಿಸ್ತಾನದ ವಶದಲ್ಲಿದ್ದಾನೆ ಎಂದು ತಿಳಿದ ಬಳಿಕ, ಹಿರಿಯ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಪಾಕಿಸ್ತಾನಿ ರೇಂಜರ್ಸ್‌ಗಳ ಬಳಿ ಮೊದಲು ಸೈನಿಕನ ಬಗ್ಗೆ ಮಾಹಿತಿ ಪಡೆದುಕೊಂಡ ಬಿಎಸ್‌ಎಫ್‌ ಆ ಬಳಿಕ ಒಂದರ ಹಿಂದೆ ಒಂದರಂತೆ ಸಾಕಷ್ಟು ಸಭೆ ನಡೆಸಿತು. ಸಾಕಷ್ಟು ಸಭೆಯ ಬಳಿಕ ಕೊನೆಯಲ್ಲಿ ಪಾಕಿಸ್ತಾನದ ರೇಂಜರ್ಸ್‌ ಬಿಎಸ್‌ಎಫ್‌ ಸೈನಿಕನನ್ನು ಬಿಡುಗಡೆ ಮಾಡಲು ಒಪ್ಪಿಕೊಂಡರು. ಮಧ್ಯಾಹ್ನದ ವೇಳೆಗೆ ಬಿಎಸ್‌ಎಫ್‌ ಜವಾನ ಭಾರತಕ್ಕೆ ಮರಳಿ ಪ್ರವೇಶಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

click me!