200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಲಂಕನ್ ಮೂಲದ ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡೀಸ್ ಅವರಿಗೆ ವಂಚಕ ಸುಕೇಶ್ ಚಂದ್ರಶೇಖರ್ ವಂಚನೆ ಬಗ್ಗೆ ಎಲ್ಲ ತಿಳಿದಿತ್ತು, ತಿಳಿದು ತಿಳಿದೇ ಆಕೆ ಆತ ವಂಚನೆ ಹಣದಿಂದ ತನಗೆ ನೀಡಿದ ಎಲ್ಲಾ ಸವಲತ್ತುಗಳನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಳು ಎಂದು ಜಾರಿ ನಿರ್ದೇಶನಾಲಯವೂ ದೆಹಲಿ ಹೈಕೋರ್ಟ್ ಮುಂದೆ ಹೇಳಿದೆ.
ನವದೆಹಲಿ: 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಲಂಕನ್ ಮೂಲದ ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡೀಸ್ ಅವರಿಗೆ ವಂಚಕ ಸುಕೇಶ್ ಚಂದ್ರಶೇಖರ್ ವಂಚನೆ ಬಗ್ಗೆ ಎಲ್ಲ ತಿಳಿದಿತ್ತು, ತಿಳಿದು ತಿಳಿದೇ ಆಕೆ ಆತ ವಂಚನೆ ಹಣದಿಂದ ತನಗೆ ನೀಡಿದ ಎಲ್ಲಾ ಸವಲತ್ತುಗಳನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಳು ಎಂದು ಜಾರಿ ನಿರ್ದೇಶನಾಲಯವೂ ದೆಹಲಿ ಹೈಕೋರ್ಟ್ ಮುಂದೆ ಹೇಳಿದೆ. ವಂಚಕ ಸುಕೇಶ್ ಚಂದ್ರಶೇಖರ್ ಪ್ರಮುಖ ಆರೋಪಿಯಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಇಡಿ ಈ ವಾದ ಮಂಡಿಸಿದೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರ ಮುಂದೆ ಇಡೀ ಈ ಅಫಿಡವಿಟ್ ಸಲ್ಲಿಕೆ ಮಾಡಿದ್ದು, ಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನು ಪ್ರತಿನಿಧಿಸುವ ವಕೀಲರು ಇಡಿ ಅಫಿಡವಿಟ್‌ಗೆ ಪ್ರತಿಕ್ರಿಯೆಯಾಗಿ ಮರು ಪ್ರತಿಕ್ರಿಯೆ ಸಲ್ಲಿಸಲು ಸಮಯ ಕೋರಿದ್ದು, ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿದೆ. ವಂಚಕ ಸುಕೇಶ್ ಚಂದ್ರಶೇಖರ್ ಅವರೊಂದಿಗಿನ ಹಣಕಾಸಿನ ವಹಿವಾಟಿನ ಬಗ್ಗೆ ನಟಿ ಜಾಕ್ವೇಲಿನ್ ಫೆರ್ನಾಂಡಿಸ್ ಎಂದಿಗೂ ಸತ್ಯವನ್ನು ಬಹಿರಂಗಪಡಿಸಿಲ್ಲ. ಸಾಕ್ಷ್ಯವನ್ನು ತಂದು ಸಾಬೀತುಪಡಿಸುವವರೆಗೂ ಅವರು ಸತ್ಯವನ್ನು ಮರೆಮಾಚುತ್ತಲೇ ಬಂದಿದ್ದಾರೆ ಎಂದು ಕೋರ್ಟ್ ಮುಂದೆ ಇಡಿ ಹೇಳಿದೆ.
ತಾವೇ ಬೀಸಿದ ಗಾಳಕ್ಕೆ ಬಿದ್ದುಬಿಟ್ಟರಾ ನಟಿ ಜಾಕ್ವೆಲಿನ್? ಸುಕೇಶ್ ಜೊತೆಗಿನ ಚಾಟ್ಗಳು ತನಿಖಾಧಿಕಾರಿಗಳ ಕೈಗೆ!
ಈಗಲೂ ಆಕೆ ಸತ್ಯವನ್ನು ಅಡಗಿಸಿದ್ದು, ಸುಕೇಶ್ ಚಂದ್ರಶೇಖರ್ ಬಂಧನವಾಗುತ್ತಿದ್ದಂತೆ ಜಾಕ್ವೇಲಿನ್ ಫರ್ನಾಂಡೀಸ್ ತನ್ನ ಮೊಬೈಲ್ ಫೋನ್‌ನಲ್ಲಿದ್ದ ಎಲ್ಲಾ ಡಾಟಾವನ್ನು, ಸಾಕ್ಷ್ಯವನ್ನು ಡಿಲೀಟ್ ಮಾಡಿದ್ದಳು. ಇದರ ಜೊತೆಗೆ ಸಾಕ್ಷ್ಯ ನಾಶಪಡಿಸುವಂತೆ ಆಕೆ ತನ್ನ ಸಹೋದ್ಯೋಗಿಗಳ ಬಳಿಯೂ ಕೇಳಿದ್ದಳು. ಸುಕೇಶ್ ಚಂದ್ರಶೇಖರ ಮಾಡಿದ ಆರ್ಥಿಕ ವಂಚನೆಯಿಂದ ಬಂದ ಆದಾಯವನ್ನು ಆಕೆ ಬಳಸಿಕೊಂಡು ಎಂಜಾಯ್ ಮಾಡುತ್ತಿದ್ದಳು ಹಾಗೂ ಆತನ ಅಕ್ರಮ ಗಳಿಕೆಯನ್ನು ಸ್ವಾಧೀನಪಡಿಸಿಕೊಳ್ಳಲು ನೋಡುತ್ತಿದ್ದಳು ಎಂಬುದನ್ನು ಇದು ನಿಸ್ಸಂದೇಹವಾಗಿ ಸಾಬೀತುಪಡಿಸುತ್ತಿದೆ. ಇದೆಲ್ಲವೂ ನಟಿ ಜಾಕ್ವೇಲಿನ್ ಉದ್ದೇಶಪೂರ್ವಕವಾಗಿಯೇ ಈ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ಸಾಬೀತುಪಡಿಸುತ್ತಿದೆ ಎಂದು ತನ್ನ ಅಫಿಡವಿಟ್‌ನಲ್ಲಿ ಇಡಿ ಮಾಹಿತಿ ನೀಡಿದೆ.
ಆರಂಭದಲ್ಲಿ ಆಕೆ ತಾನು ಸುಕೇಶ್ ಚಂದ್ರಶೇಖರ್ ಎಸಗಿದ ಅಕ್ರಮಗಳ ಬಲಿಪಶು ಎಂದು ಬಿಂಬಿಸಿಕೊಳ್ಳಲು ಯತ್ನಿಸಿದ್ದಳು. ಆದರೆ ಇದನ್ನು ಸಾಬೀತುಪಡಿಸುವುದಕ್ಕೆ ಆಕೆ ವಿಫಲಳಾದಳು. ಸುಕೇಶ್ ಚಂದ್ರಶೇಖರ್‌ನ ಅಪರಾಧದ ಹಿನ್ನೆಲೆ ಆಕೆಗೆ ತಿಳಿದಿದ್ದರೂ, ಅವಳು ತಾನು ಮತ್ತು ತನ್ನ ಕುಟುಂಬ ಸದಸ್ಯರು ಈ ಅಪರಾಧದ ಆದಾಯವನ್ನು ಸ್ವೀಕರಿಸಿ ಸುಖವಾಗಿರಲು ಬಯಸಿದ್ದಳು ಎಂದು ಇಡಿ ಹೇಳಿದೆ.
ಭಾರತ ಮತ್ತು ವಿದೇಶದಲ್ಲಿರುವ ತನ್ನ ಕುಟುಂಬಕ್ಕಾಗಿ ಫೆರ್ನಾಂಡಿಸ್ ದೊಡ್ಡ ಮೊತ್ತದ ಹಣ ಮತ್ತು ಅಮೂಲ್ಯ ಉಡುಗೊರೆಗಳನ್ನು ಸ್ವೀಕರಿಸಿದ್ದನ್ನು ತನಿಖೆ ಆರಂಭದಲ್ಲಿ ನಟಿ ಒಪ್ಪಿಕೊಂಡಿರಲಿಲ್ಲ, ಬರೀ ಇಷ್ಟೇ ಅಲ್ಲದೇ ಈ ನಟಿಗೆ ಚಂದ್ರಶೇಖರ್ ಅವರ ಕ್ರಿಮಿನಲ್ ಪೂರ್ವಾಪರ ಮತ್ತು ಆತ ಓರ್ವ ವಿವಾಹಿತ, ಲೀನಾ ಮರಿಯಾ ಪಾಲ್ ಆತನ ಪತ್ನಿ ಎಂಬ ಅಂಶವೂ ತಿಳಿದಿತ್ತು. ಆದರೂ ಆಕೆ ಆತನೊಂದಿಗೆ ಸಂಬಂಧವನ್ನು ಮುಂದುವರೆಸಿದಳು ಮತ್ತು ಆತನಿಂದ ಹಣಕಾಸಿನ ಲಾಭವನ್ನು ಪಡೆದರು ಎಂದು ತನಿಖಾ ಸಂಸ್ಥೆ ಹೇಳಿದೆ.
ಮಾಡೋದೆಲ್ಲಾ ಮಾಡಿ ಕೈಕೊಡ್ತಾಳಾ? ನಟಿ ಜಾಕ್ವೆಲಿನ್ ವಿಡಿಯೋ ಬಹಿರಂಗ ಮಾಡ್ತೇನೆಂದು ಜೈಲಿನಿಂದ್ಲೇ ಗುಡುಗಿದ ಸುಕೇಶ್!