Parliament Budget Session ನ್ಯಾಯಾಂಗಕ್ಕೆ ರಾಹುಲ್‌ ಅವಮಾನ: ಹೊಸ ವಿವಾದ ಸೃಷ್ಟಿಸಿದ ರಾಹುಲ್ ಗಾಂಧಿ

Published : Feb 03, 2022, 05:15 AM IST
Parliament Budget Session ನ್ಯಾಯಾಂಗಕ್ಕೆ ರಾಹುಲ್‌ ಅವಮಾನ: ಹೊಸ ವಿವಾದ ಸೃಷ್ಟಿಸಿದ ರಾಹುಲ್ ಗಾಂಧಿ

ಸಾರಾಂಶ

ರಾಜ್ಯಗಳ ದನಿ ಹತ್ತಿಕ್ಕಲು ನ್ಯಾಯಾಂಗ, ಚುನಾವಣಾ ಆಯೋಗ ಬಳಕೆ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ವ್ಯಾಪಕ ಖಂಡನೆ ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

ನವದೆಹಲಿ(ಫೆ.03): ಕಾಂಗ್ರೆಸ್‌ ಮಾಜಿ ಅಧ್ಯಕ್ಷ, ಸಂಸದ ರಾಹುಲ್‌ ಗಾಂಧಿ(Rahul Gandhi) ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ‘ರಾಜ್ಯಗಳ ಒಕ್ಕೂಟದ ದನಿ ಅಡಗಿಸಲು ಕೇಂದ್ರ ಸರ್ಕಾರವು ನ್ಯಾಯಾಂಗ ವ್ಯವಸ್ಥೆ, ಚುನಾವಣಾ ಆಯೋಗ ಹಾಗೂ ಪೆಗಾಸಸ್‌ ಸ್ಪೈವೇರ್‌ಗಳನ್ನು ಸಾಧನವಾಗಿ ಬಳಸಿಕೊಳ್ಳುತ್ತಿದೆ’ ಎಂದು ಅವರು ಲೋಕಸಭೆಯಲ್ಲಿ ಹೇಳಿದ್ದು ತೀವ್ರ ಪ್ರತಿರೋಧಕ್ಕೆ ಕಾರಣವಾಗಿದೆ. ಇದು ನ್ಯಾಯಾಂಗ ವ್ಯವಸ್ಥೆ ಹಾಗೂ ಚುನಾವಣಾ ಆಯೋಗಕ್ಕೆ ಮಾಡಿದ ಅವಮಾನ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಸೇರಿದಂತೆ ಆಡಳಿತಾರೂಢ ಬಿಜೆಪಿಯ(BJP) ಅನೇಕ ನಾಯಕರು ಟೀಕಿಸಿದ್ದಾರೆ. ಕೂಡಲೇ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.

ಇದಕ್ಕೂ ಮುನ್ನ ರಾಷ್ಟ್ರಪತಿ ಭಾಷಣ ಕುರಿತು ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್‌, ‘1947ರಲ್ಲಿ ನಾವು ರಾಜಪ್ರಭುತ್ವದ ಪರಿಕಲ್ಪನೆಯನ್ನು ಬಿಟ್ಟು, ರಾಜ್ಯಗಳ ಒಕ್ಕೂಟದ ಪರಿಕಲ್ಪನೆಯನ್ನು ಆಯ್ದುಕೊಂಡಿದ್ದೆವು. ಆದರೆ ಬಿಜೆಪಿ ಆಳ್ವಿಕೆಯಲ್ಲಿ ರಾಜನ ಪರಿಕಲ್ಪನೆ ಮರುಕಳಿಸುತ್ತಿದೆ’ ಎಂದು ಪ್ರಧಾನಿಯ ಹೆಸರೆತ್ತದೇ ಪರೋಕ್ಷವಾಗಿ ಕಿಡಿಕಾರಿದರು.

Rahul Gandhi In Parliament : ರಾಹುಲ್ ಗಾಂಧಿ ಮಾತಿಗೆ ಸಾಕ್ಷಿ ಸಮೇತ ಉತ್ತರ ಕೊಟ್ಟ ಜೈಶಂಕರ್!

‘ಭಾರತವು ಒಂದು ‘ದೇಶ’ ಅಲ್ಲ ‘ರಾಜ್ಯಗಳ ಒಕ್ಕೂಟ’ ಎಂದು ಸಂವಿಧಾನವೇ ಹೇಳುತ್ತದೆ. ಯಾವುದೇ ಒಬ್ಬ ವ್ಯಕ್ತಿ ಇಡೀ ದೇಶದ ಮೇಲೆ ಪ್ರಭುತ್ವ ಸಾಧಿಸಲು ಆಗದು. ದೇಶದಲ್ಲಿ ಬಹುಸಂಸ್ಕೃತಿ ಹಾಗೂ ಬಹುಭಾಷೆ ಇವೆ. ಇವನ್ನು ದಮನಿಸಲು ಆಗದು. ಇದು ಒಂದು ಒಕ್ಕೂಟ ವ್ಯವಸ್ಥೆಯೇ ಹೊರತು ಸಾಮ್ರಾಜ್ಯವಲ್ಲ’ ಎಂದರು.

‘ಭಾರತದಲ್ಲಿ ದಶಕಗಳಿಂದ ದಶಕಗಳಿಂದ ಪರಸ್ಪರ ಚರ್ಚೆ-ಸಹಕಾರದಿಂದ ಆಡಳಿತ ನಡೆದಿತ್ತು. ಅಶೋಕ ಹಾಗೂ ಮೌರ್ಯರ ಆಳ್ವಿಕೆಯಲ್ಲೂ ಇದನ್ನು ಕಾಣಬಹುದಿತ್ತು. ನೆಹರು, ಇಂದಿರಾ, ರಾಜೀವ್‌ ಕೂಡ ಇದೇ ಮಾದರಿಯ ಆಳ್ವಿಕೆ ನಡೆಸಿದ್ದರು. ಆದರೆ ಇದೀಗ ಅಪಾಯಕಾರಿ ರೀತಿಯಲ್ಲಿ ಬದಲಾಗತೊಡಗಿದೆ. ಇತಿಹಾಸ ನೋಡದ ಈಗಿನ ಸರ್ಕಾರ, ಒಕ್ಕೂಟ ವ್ಯವಸ್ಥೆಯನ್ನು ದಮನಿಸಲು ಹೊರಟಿದೆ. ರಾಜ್ಯಗಳ ಒಕ್ಕೂಟದ ದನಿ ಅಡಗಿಸಲು ನ್ಯಾಯಾಂಗ ವ್ಯವಸ್ಥೆ, ಚುನಾವಣಾ ಆಯೋಗ ಹಾಗೂ ಪೆಗಾಸಸ್‌ ಸ್ಪೈವೇರ್‌ಗಳನ್ನು ಸಾಧನವಾಗಿ ಬಳಸಿಕೊಳ್ಳುತ್ತಿದೆ’ ಎಂಬ ಗಂಭೀರ ಆರೋಪ ಮಾಡಿದರು.

Rahul Gandhi ನ್ಯಾಯಾಂಗ, ಆಯೋಗ, ಪೆಗಾಸಸ್ ಬಳಸಿ ರಾಜ್ಯಗಳ ಧ್ವನಿ ಹತ್ತಿಕ್ಕುತ್ತಿದೆ ಸರ್ಕಾರ, ರಾಹುಲ್ ಮಾತಿಗೆ ಖಂಡನೆ!

ರಾಹುಲ್‌ ಹೇಳಿದ್ದೇನು?
1. 1947ರಲ್ಲಿ ರಾಜಪ್ರಭುತ್ವ ಕೈಬಿಟ್ಟು ರಾಜ್ಯಗಳ ಒಕ್ಕೂಟ ಪರಿಕಲ್ಪನೆ ಅನುಷ್ಠಾನ

2. ಆದರೆ, ದೇಶದಲ್ಲಿ ಬಿಜೆಪಿ ಆಳ್ವಿಕೆಯಲ್ಲಿ ರಾಜನ ಪರಿಕಲ್ಪನೆ ಮರುಕಳಿಸುತ್ತಿದೆ

3. ರಾಜ್ಯಗಳ ಒಕ್ಕೂಟದ ದನಿಯನ್ನು ಅಡಗಿಸಲು ಕೇಂದ್ರ ಸರ್ಕಾರ ಅಡ್ಡದಾರಿ

4. ನ್ಯಾಯಾಂಗ, ಚುನಾವಣಾ ಆಯೋಗ, ಪೆಗಾಸಸ್‌ ಸ್ಪೈವೇರ್‌ ತಂತ್ರ ಬಳಕೆ

5. ಅಲ್ಲದೆ, ಶ್ರೀಮಂತರಿಗೊಂದು, ಬಡವರಿಗೊಂದು ಪ್ರತ್ಯೇಕ ಭಾರತ ಸೃಷ್ಟಿ

ದೇಶದ ಕ್ಷಮೆ ಕೇಳಲಿ
ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ನ್ಯಾಯಾಂಗ, ಚುನಾವಣಾ ಆಯೋಗದ ಬಗ್ಗೆ ರಾಹುಲ್‌ ಗಾಂಧಿ ನೀಡಿದ ಹೇಳಿಕೆಯನ್ನು ಕಾನೂನು ಸಚಿವನಾಗಿ ಮಾತ್ರವಲ್ಲ, ಜನಸಾಮಾನ್ಯನಾಗಿಯೂ ಖಂಡಿಸುತ್ತೇನೆ. ರಾಹುಲ್‌ ಗಾಂಧಿ ಕೂಡಲೇ ನ್ಯಾಯಾಂಗ, ಚುನಾವಣಾ ಆಯೋಗ ಹಾಗೂ ಭಾರತದ ಜನತೆಯ ಕ್ಷಮೆಯಾಚಿಸಬೇಕು.
- ಕಿರಣ್‌ ರಿಜಿಜು, ಕೇಂದ್ರ ಕಾನೂನು ಸಚಿವ

ಎರಡು ಭಾರತ:
‘ನಿರುದ್ಯೋಗದಂತಹ ಸವಾಲುಗಳ ಉಲ್ಲೇಖ ರಾಷ್ಟ್ರಪತಿಗಳ ಭಾಷಣದಲ್ಲಿ ಇರಲಿಲ್ಲ. ಬದಲಾಗಿ, ಅಧಿಕಾರಶಾಹಿ ಆಲೋಚನೆಗಳ ಪಟ್ಟಿಹೊಂದಿತ್ತು. ಇದರಿಂದಾಗಿ ‘ಎರಡು ಭಾರತಗಳು’ ಸೃಷ್ಟಿಯಾಗಿವೆ: ಶ್ರೀಮಂತರಿಗಾಗಿ ಒಂದು, ಬಡವರಿಗಾಗಿ ಇನ್ನೊಂದು. ಜೊತೆಗೆ ಇವೆರಡರ ನಡುವಿನ ಅಂತರ ಹೆಚ್ಚಾಗುತ್ತಿದೆ’ ಎಂದರು.

‘ದೇಶದ ಎಲ್ಲ ಬಂದರು, ವಿಮಾನ ನಿಲ್ದಾಣ, ಟವರ್‌, ಟೆಲಿಕಾಂ ವ್ಯವಸ್ಥೆ, ಗಣಿಗಾರಿಕೆ, ಹಸಿರು ಇಂಧನ, ಗ್ಯಾಸ್‌ ವಿತರಣೆ, ತೈಲ ವಿತರಣೆಯ ಸ್ವಾಮಿತ್ವ ಒಬ್ಬ ವ್ಯಕ್ತಿಯ ಪಾಲಾಗಿದೆ. ಎಲ್ಲೆಡೆ ಅದಾನಿಜೀ ಕಾಣುತ್ತಾರೆ. ಉಳಿದ ಶೇ.84 ಭಾರತೀಯರ ಆದಾಯ ಕಡಿಮೆಯಾಗುತ್ತಿದ್ದು ಅವರನ್ನು ಬಡತನದತ್ತ ತಳ್ಳುತ್ತಿದೆ. ನಾವು 27 ಕೋಟಿ ಜನರನ್ನು ಬಡತನದಿಂದ ಹೊರತೆಗೆದಿದ್ದೆವು. ನೀವು 23 ಕೋಟಿ ಜನರನ್ನು ಮತ್ತೆ ಬಡತನದ ಕೂಪದಲ್ಲಿ ತಳ್ಳಿದ್ದೀರಿ’ ಎಂದು ರಾಹುಲ್‌ ದೂರಿದರು.

ಕೇಂದ್ರ ಸಚಿವ ಕಿಡಿ:
ರಾಹುಲ್‌ ಹೇಳಿಕೆಗೆ ಕೇಂದ್ರ ಸಚಿವರಾದ ಕಿರಣ್‌ ರಿಜಿಜು, ಪ್ರಹ್ಲಾದ ಜೋಶಿ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕಿಡಿಕಾರಿದ್ದಾರೆ. ‘ರಾಹುಲ್‌ ಕ್ಷಮೆಯಾಚಿಸಲಿ’ ಎಂದು ರಿಜಿಜು ಹೇಳಿದ್ದರೆ, ‘ರಾಹುಲ್‌ ಗೊಂದಲದ ಮನಸ್ಸಿನ ನಾಯಕ’ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ. ‘ಕಾರ್ಯಕರ್ತರನ್ನು ಪ್ರಾಣಿಗಳಂತೆ ನಿಕೃಷ್ಟವಾಗಿ ನೋಡುತ್ತಿದ್ದ ಗಾಂಧಿ ಈಗ ರಾಜಕೀಯ ಸಭ್ಯತೆ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಶರ್ಮಾ ಆಕ್ಷೇಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ