ಲಂಪಿ ರೋಗದ ಬಗ್ಗೆ ಮೌನ: ಪ್ರತಿಭಟನೆಗೆ ವಿಧಾನಸೌಧಕ್ಕೆ ಹಸುವಿನೊಂದಿಗೆ ಬಂದ ಶಾಸಕ: ಆಮೇಲೇನಾಯ್ತು ನೋಡಿ

Published : Sep 21, 2022, 04:27 PM ISTUpdated : Sep 21, 2022, 04:29 PM IST
ಲಂಪಿ ರೋಗದ ಬಗ್ಗೆ ಮೌನ: ಪ್ರತಿಭಟನೆಗೆ ವಿಧಾನಸೌಧಕ್ಕೆ ಹಸುವಿನೊಂದಿಗೆ ಬಂದ ಶಾಸಕ: ಆಮೇಲೇನಾಯ್ತು ನೋಡಿ

ಸಾರಾಂಶ

ರಾಜಸ್ತಾನದಲ್ಲಿ ಲಂಪಿ ಸ್ಕಿನ್ ಕಾಯಿಲೆಗೆ ತುತ್ತಾಗಿ ಸಾವಿರಾರು ಹಸುಗಳು ಪ್ರಾಣ ಕಳೆದುಕೊಂಡಿವೆ. ಆದರೆ ಈ ಬಗ್ಗೆ ಸರ್ಕಾರ ಯಾವುದೇ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶಗೊಂಡ ಬಿಜೆಪಿ ಶಾಸಕರೊಬ್ಬರು ಹಸುವೊಂದನ್ನು ವಿಧಾನಸೌಧಕ್ಕೆ ಕರೆತಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಆದರೆ ಹಸು ಭಯಗೊಂಡು ಅಲ್ಲಿಂದ ಓಡಿದೆ.

ರಾಜಸ್ತಾನ: ರಾಜಸ್ತಾನದಲ್ಲಿ ಲಂಪಿ ಸ್ಕಿನ್ ಕಾಯಿಲೆಗೆ ತುತ್ತಾಗಿ ಸಾವಿರಾರು ಹಸುಗಳು ಪ್ರಾಣ ಕಳೆದುಕೊಂಡಿವೆ. ಇದರಿಂದ ಹೈನುಗಾರಿಕೆಯನ್ನೇ ಮೂಲ ಕಸುಬಾಗಿಸಿಕೊಂಡಿರುವ ಅನೇಕರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಈ ಬಗ್ಗೆ ಸರ್ಕಾರ ಯಾವುದೇ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶಗೊಂಡ ಬಿಜೆಪಿ ಶಾಸಕರೊಬ್ಬರು ಹಸುವೊಂದನ್ನು ವಿಧಾನಸೌಧಕ್ಕೆ ಕರೆತಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಆದರೆ ವಿಧಾನಸಭೆ ಕಲಾಪದ ಬಗ್ಗೆ ಏನು ಅರಿಯದ ಹಸು ಮಾತ್ರ ಮಾಧ್ಯಮದ ಮಂದಿ ಕ್ಯಾಮರಾ ಮೈಕ್ ಹಿಡಿದು ಹಸುವಿನ ಮುಂದೆ ಬರುತ್ತಿದ್ದಂತೆ ವಿಚಲಿತಗೊಂಡಿದ್ದು, ಭಯಗೊಂಡು ಬದುಕಿದೆನೋ ಬಡಜೀವ ಎಂಬಂತೆ ಸ್ಥಳದಿಂದ ಪರಾರಿಯಾಗಿದೆ. ಇದು ಹಸು ಕರೆತಂದ ಶಾಸಕ ನಗೆ ಪಾಟಲಿಗೀಡಾಗುವಂತೆ ಮಾಡಿದೆ. ಇತ್ತ ಬೆದರಿದ ಹಸು ಹಗ್ಗದ ಸಮೇತ ರಸ್ತೆಯಲ್ಲಿ ಓಡಿ ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಕಾಮೆಂಟ್ ಮಾಡುತ್ತಿದ್ದಾರೆ. 

ಬಿಜೆಪಿ ಶಾಸಕ ಸುರೇಶ್ ಸಿಂಗ್ ರಾವತ್ ಅವರು ವಿಧಾನಸಭೆಗೆ ಹಸುವನ್ನು ಕರೆದುಕೊಂಡು ಬಂದು ಹೀಗೆ ಮುಜುಗರಕ್ಕೊಳಗಾದವರು. ಇವರು ಹಸುಗಳನ್ನು ಕಾಡುತ್ತಿರುವ ಲಂಪಿ ಚರ್ಮ ಕಾಯಿಲೆಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹಸುವನ್ನು ಕರೆ ತಂದಿದ್ದರು. ಆದರೆ ಇವರು ಕರೆತಂದ ಹಸು ವಿಧಾನಸೌಧವನ್ನು ತಲುಪುವ ಮೊದಲೇ ಓಡಿ ಹೋಗಿದೆ. ಹಸುವನ್ನು ಕರೆದುಕೊಂಡು ಬಂದ ಶಾಸಕ ಸುರೇಶ್ ಸಿಂಗ್ ರಾವತ್ (Suresh Singh Rawat) ಅವರು, ರಾಜಸ್ಥಾನದ ವಿಧಾನಸೌಧದ ಗೇಟ್‌  ಮುಂದೆ, ಮಾಧ್ಯಮದವರ ಜೊತೆ ಮಾತನಾಡಲು ಶುರು ಮಾಡಿದ್ದರು. ಅಷ್ಟರಲ್ಲಿ ಹಸು ಹಗ್ಗವನ್ನು ಎಳೆದುಕೊಂಡು ವಿಧಾನಸೌಧದ ಮುಂದೆ ಓಡಿ ಹೋಗಿದೆ. ಘಟನೆ ಬಗ್ಗೆ ಕಾಂಗ್ರೆಸ್ ಶಾಸಕ ಗೋವಿಂದ್ ಸಿಂಗ್ ದೊತಸ್ರ ಕೂಡ ಪ್ರತಿಕ್ರಿಯಿಸಿದ್ದು, ಈ ಭಾವನೆಗಳಿಲ್ಲದ ಸರ್ಕಾರದ ವಿರುದ್ಧ ಹಸು ಕೂಡ ಕೋಪಗೊಂಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. 

ರಾಜ್ಯದಲ್ಲಿ ಲಂಪಿ ಕಾಯಿಲೆಯಿಂದಾಗಿ ಸಾವಿರಾರು ಹಸುಗಳು ಮೃತಪಟ್ಟಿದ್ದು, ಸರ್ಕಾರ ಮಾತ್ರ ಸುಧೀರ್ಘವಾದ ನಿದ್ದೆಗೆ ಜಾರಿದೆ. ಹೀಗಾಗಿ ನಾನು ನಿದ್ದೆಯಲ್ಲಿರುವ ಸರ್ಕಾರದ ಗಮನವನ್ನು ಸೆಳೆಯಲು ವಿಧಾನಸಭೆಯ ಅವರಣಕ್ಕೆ ಹಸುವನ್ನು ಕರೆತಂದೆ ಎಂದು ಹೇಳಿದ್ದಾರೆ. ರಾಜಸ್ಥಾನ ರಾಜ್ಯದ ಪಶು ಸಂಗೋಪನೆ ಇಲಾಖೆಯ (animal husbandry department) ಅಂಕಿ ಅಂಶಗಳ ಪ್ರಕಾರ, ಸೋಮವಾರದವರೆಗೆ ಈ ಲಂಪಿ ಕಾಯಿಲೆಯಿಂದ ಸುಮಾರು 59,027 ಹಸುಗಳು ಸಾವನ್ನಪ್ಪಿವೆ. ಈ ಲಂಪಿ ಕಾಯಿಲೆಯಿಂದ (lumpy skin disease) 13,02,907 ಹಸುಗಳು ಸಂಕಷ್ಟಕ್ಕೊಳಗಾಗಿವೆ. 

ಹಾವೇರಿ: ಜಾನುವಾರುಗಳ ಜೀವ ಹಿಂಡುತ್ತಿರುವ ಲಂಪಿ ಸ್ಕಿನ್‌ ಕಾಯಿಲೆ

ಏನಿದು ಲಂಪಿ ಕಾಯಿಲೆ
ಇದನ್ನು ಚರ್ಮ ಗಂಟು ರೋಗ ಎಂದೂ ಕರೆಯಲಾಗುತ್ತದೆ. ಈ ರೋಗ ಭಾಧಿಸುತ್ತಿರುವ ದನಕರುಗಳ ಮೈಮೇಲೆ ಗುಳ್ಳೆಗಳು ಕಾಣಸಿಕೊಂಡು ಅವು ಆಹಾರ ಸೇವಿಸುವುದನ್ನೇ ನಿಲ್ಲಿಸುತ್ತಿವೆ. ದಿನದಿಂದ ದಿನಕ್ಕೆ ರೋಗ ವ್ಯಾಪಿಸುತ್ತಿದೆ. ನೀರು ಆಹಾರ ಸೇವಿಸದೇ ಜಾನುವಾರುಗಳು ನಿತ್ರಾಣಗೊಳ್ಳುತ್ತಿವೆ. ಕಾಯಿಲೆ ಬಂದಿರುವ ಹಸು ಹಾಲು ನೀಡುವುದನ್ನೇ ನಿಲ್ಲಿಸಿವೆ. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಒಂದೇ ಕೊಟ್ಟಿಗೆಯಲ್ಲಿರುವ ಮತ್ತು ಮೇಯಲು ಹೋಗುವ ದನಕರುಗಳಿಗೆ ಹರಡುತ್ತಿವೆ. 

ಮಾನವ ಸಂಕುಲ ಆಯ್ತು : ಈಗ ಜಾನುವಾರುಗಳಿಗೆ ಕಾಡ್ತಿದೆ ಮಹಾಮಾರಿ

ಈ ರೋಗದಿಂದಾಗಿ ಕೃಷಿ ಹಾಗೂ ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಪ್ರೀತಿಯಿಂದ ಸಾಕಿದ್ದ ಎತ್ತು, ಆಕಳುಗಳ ಮೈತುಂಬಾ ಗಡ್ಡೆಗಳು ತುಂಬಿಕೊಂಡಿದ್ದು, ರಕ್ತ ಸೋರುತ್ತಿವೆ. ಇದನ್ನು ನೋಡಿ ರೈತರು ಮಮ್ಮಲ ಮರುಗುತ್ತಿದ್ದಾರೆ. ಉಪಚಾರಕ್ಕೆ ನಿತ್ಯ ಸಾವಿರಾರು ರು. ಖರ್ಚು ಮಾಡಿದರೂ ಮಲಗಿದ ಜಾನುವಾರುಗಳು ಮೇಲಕ್ಕೇಳುತ್ತಿಲ್ಲ. ಹೈನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಅನೇಕ ರೈತರಿಗೆ ಚಿಂತೆ ಶುರುವಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ