ಪಿಎಂ ಕೇರ್ಸ್ ಫಂಡ್‌ಗೆ ದೇಶದ ಜನತೆ ಹೃದಯಪೂರ್ವಕವಾಗಿ ದೇಣಿಗೆ ನೀಡುತ್ತಿರುವುದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಉಪಕ್ರಮವು ತುರ್ತು ಮತ್ತು ಸಂಕಷ್ಟದ ಸಂದರ್ಭಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ದೊಡ್ಡ ದೃಷ್ಟಿಯನ್ನು ಹೊಂದಿದೆ ಎಂದೂ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪಿಎಂ ಕೇರ್ಸ್ ಫಂಡ್ (PM CARES Fund) ಮಂಡಳಿಯ ಸಭೆ (Board Meeting) ನಡೆಸಿದ್ದು, ಈ ವೇಳೆ ಪಿಎಂ ಕೇರ್ಸ್ ಫಂಡ್‌ಗೆ ಜನರು ಹೃದಯಪೂರ್ವಕವಾಗಿ ದೇಣಿಗೆ (Donation) ನೀಡುತ್ತಿರುವುದಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು, ಪಿಎಂ ಕೇರ್ಸ್ ಫಂಡ್ ಉಪಕ್ರಮವು ತುರ್ತು (Emergency) ಮತ್ತು ಸಂಕಷ್ಟದ (Distress) ಸಂದರ್ಭಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ದೊಡ್ಡ ದೃಷ್ಟಿಯನ್ನು ಹೊಂದಿದೆ ಎಂದೂ ಪ್ರಧಾನ ಮಂತ್ರಿ ಕಚೇರಿ ಬುಧವಾರ ಮಾಹಿತಿ ನೀಡಿದೆ. ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟಿಗಳ ಮಂಡಳಿಯ ಸಭೆಯ ನೇತೃತ್ವವನ್ನು ಪ್ರಧಾನಿ ಮೋದಿ ವಹಿಸಿದ್ದರು. ಈ ವೇಳೆ ನೂತನ ಸದಸ್ಯರನ್ನು ಮೋದಿ ಸ್ವಾಗತಿಸಿದರು. ಪಿಎಂ ಕೇರ್ಸ್ ಫಂಡ್‌ನ ನೂತನ ಟ್ರಸ್ಟಿಯಾಗಿ ಪ್ರಮುಖವಾಗಿ ರತನ್ ಟಾಟಾ ಇತ್ತೀಚೆಗೆ ನೇಮಕವಾಗಿದ್ದು, ಅವರು ಸಹ ಈ ಸಭೆಗೆ ಹಾಜರಾಗಿದ್ದರು. ಇನ್ನು, ಈ ಸಭೆಯ ವೇಳೆ ಇನ್ಫೋಸಿಸ್ ಫೌಂಡೇಷನ್‌ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರನ್ನು ಪಿಎಂ ಕೇರ್ಸ್ ಫಂಡ್ ಸಲಹಾ ಮಂಡಳಿಗೆ (Advisory Board) ನೇಮಕ ಮಾಡಲು ನಿರ್ಧರಿಸಲಾಗಿದೆ.
ಪ್ರಧಾನಿ ಮೋದಿ ನೇತೃತ್ವ ವಹಿಸಿದ್ದ ಪಿಎಂ ಕೇರ್ಸ್ ಫಂಡ್ ಸಭೆಯ ವೇಳೆ ನಿಧಿಯ ಹಣದ ಮೂಲಕ ಕೈಗೊಳ್ಳಲಾಗಿರುವ ನಾನಾ ಉಪಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಪೈಕಿ, ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಸ್ಕೀಂ ಎಂಬ ಯೋಜನೆ ಬಗ್ಗೆಯೂ ಮಾಹಿತಿ ನೀಡಿದ್ದು, ಈ ಯೋಜನೆಯ ಮೂಲಕ 4,345 ಮಕ್ಕಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಮಾಹಿತಿ ನೀಡಿದೆ. ಅಲ್ಲದೆ, ಈ ದೇಶಕ್ಕೆ ನಿರ್ಣಾಯಕ ಸಮಯದಲ್ಲಿ ಪಿಎಂ ಕೇರ್ಸ್ ಫಂಡ್ ನಿರ್ವಹಿಸಿದ ಪಾತ್ರವನ್ನು ಟ್ರಸ್ಟಿಗಳು ಶ್ಲಾಘಿಸಿದರು. ಇನ್ನು, ಈ ನಿಧಿಗೆ ದೇಶದ ಜನತೆ ಹೃದಯಪೂರ್ವಕವಾಗಿ ಹಣ ನೀಡಿರುವುದಕ್ಕೂ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪಿಎಂಒ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: PM Cares Fund ಪಿಎಂ ಕೇರ್ಸ್ ಫಂಡ್‌ಗೆ 10,900 ಕೋಟಿ ರೂ ದೇಣಿಗೆ, 3976 ಕೋಟಿ ವೆಚ್ಚ!
ಇನ್ನು,ಪಿಎಂ ಕೇರ್ಸ್ ತುರ್ತು ಮತ್ತು ಸಂಕಷ್ಟದ ಸಂದರ್ಭಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ದೊಡ್ಡ ದೃಷ್ಟಿಯನ್ನು ಹೊಂದಿದ್ದು, ಕೇವಲ ಪರಿಹಾರ ಸಹಾಯದ ಮೂಲಕ ಮಾತ್ರವಲ್ಲದೆ, ತಗ್ಗಿಸುವ ಕ್ರಮಗಳನ್ನು ಮತ್ತು ಸಾಮರ್ಥ್ಯ ವರ್ಧನೆಯನ್ನು ತೆಗೆದುಕೊಳ್ಳುತ್ತದೆ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಈ ಸಭೆಯಲ್ಲಿ ಪಿಎಂ ಕೇರ್ಸ್ ಫಂಡ್‌ನ ಅವಿಭಾಜ್ಯ ಅಂಗವಾಗುತ್ತಿರುವ ಟ್ರಸ್ಟಿಗಳನ್ನು ಪ್ರಧಾನ ಮಂತ್ರಿ ಸ್ವಾಗತಿಸಿದ್ದಾರೆ..
ಈ ಸಭೆಯಲ್ಲಿ ಪಿಎಂ ಕೇರ್ಸ್ ಫಂಡ್ ಟ್ರಸ್ಟಿಗಳಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಹ ಭಾಗಿಯಾಗಿದ್ದರು. ಅಲ್ಲದೆ, ಇತ್ತೀಚೆಗಷ್ಟೇ ಟ್ರಸ್ಟಿಗಳಾಗಿ ನೇಮಕವಾದ ಸುಪ್ರೀಂಕೋರ್ಟ್ ಮಾಜಿ ಜಡ್ಜ್ ಜಸ್ಟೀಸ್ ಕೆ.ಟಿ. ಥಾಮಸ್, ಮಾಜಿ ಡೆಪ್ಯುಟಿ ಸ್ಪೀಕರ್ ಕರಿಯಾ ಮುಂಡಾ ಹಾಗೂ ಟಾಟಾ ಸನ್ಸ್‌ನ ಗೌರವಾನ್ವಿತ ಅಧ್ಯಕ್ಷ ರತನ್ ಟಾಟಾ ಸಹ ಈ ಸಭೆಯಲ್ಲಿ ಭಾಗಿಯಾಗಿದ್ದರು.
ಅಲ್ಲದೆ, ಈ ವೇಳೆ ಪಿಎಂ ಕೇರ್ಸ್ ಫಂಡ್‌ನ ಸಲಹಾ ಮಂಡಳಿಯನ್ನು ಸ್ಥಾಪಿಸಿದ್ದು, ಈ ಸಲಹಾ ಮಂಡಳಿಗೆ ಖ್ಯಾತ ವ್ಯಕ್ತಿಗಳನ್ನು ನೇಮಕ ಮಾಡಿದ್ದಾರೆ. ಮಾಜಿ ಸಿಎಜಿ ರಾಜೀವ್ ಮೆಹ್ರಿಷಿ, ಇನ್ಫೋಸಿಸ್ ಫೌಂಡೇಷನ್‌ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ, ಟೀಚ್ ಫಾರ್ ಇಂಡಿಯಾದ ಸಹ ಸಂಸ್ಥಾಫಕ ಹಾಗೂ ಇಂಡಿಕಾರ್ಪ್ಸ್ ಹಾಗೂ ಪಿರಾಮಲ್ ಫೌಂಡೇಷನ್‌ನ ಮಾಜಿ ಸಿಇಒ ಆನಂದ್ ಶಾ ಅವರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಪಿಎಂ ಕೇರ್ಸ್ ಫಂಡ್ ಸರ್ಕಾರಿ ನಿಧಿ ಅಲ್ಲ, RTIನಡಿ ಬರಲ್ಲ: ಕೇಂದ್ರ!
ಹೊಸ ಟ್ರಸ್ಟಿಗಳು ಮತ್ತು ಸಲಹೆಗಾರರ ಭಾಗವಹಿಸುವಿಕೆಯು ಪಿಎಂ ಕೇರ್ಸ್ ಫಂಡ್‌ನ ಕಾರ್ಯಚಟುವಟಿಕೆಗೆ ವ್ಯಾಪಕ ದೃಷ್ಟಿಕೋನಗಳನ್ನು ಒದಗಿಸುತ್ತದೆ. ಅಲ್ಲದೆ, ಸಾರ್ವಜನಿಕ ಜೀವನದ ಅವರ ಅಪಾರ ಅನುಭವವು ವಿವಿಧ ಸಾರ್ವಜನಿಕ ಅಗತ್ಯಗಳಿಗೆ ನಿಧಿಯನ್ನು ಹೆಚ್ಚು ಸ್ಪಂದಿಸುವಂತೆ ಮಾಡುವಲ್ಲಿ ಮತ್ತಷ್ಟು ಚೈತನ್ಯವನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಸೆಪ್ಟೆಂಬರ್ 20, ಮಂಗಳವಾರ ನಡೆದ ಪಿಎಂ ಕೇರ್ಸ್ ಫಂಡ್ ಸಭೆಯ ವೇಳೆ ಹೇಳಿದ್ದಾರೆ.