ಬಿಎಸ್‌ವೈಗೆ ಬರ್ತ್‌ಡೇ ಗಿಫ್ಟ್, ಫೆ.27ಕ್ಕೆ ಪ್ರಧಾನಿ ಮೋದಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ!

By Suvarna NewsFirst Published Jan 20, 2023, 8:29 PM IST
Highlights

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್. ಫೆಬ್ರವರಿ 27ಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗದಲ್ಲಿನ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. 
 

ನವದೆಹಲಿ(ಜ.20): ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕನಸಿನ ಶಿವಮೊಗ್ಗ ವಿಮಾನ ನಿಲ್ದಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಇದೀಗ ಉದ್ಘಾಟನೆ ಸಜ್ಜಾಗಿದೆ. ಇದೇ ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದರೆ. ಫೆಬ್ರವರಿ 27 ರಂದು ಬಿಎಸ್ ಯಡಿಯೂರಪ್ಪ 80ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಹುಟ್ಟು ಹಬ್ಬದ ದಿನದಂದೇ, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಗುತ್ತಿದೆ. ಈ ಕುರಿತು ಪ್ರಧಾನಿ ಕಾರ್ಯಾಲಯದಿಂದ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಸೋಗಾನೆ ಬಳಿ  ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ.  ನಿಲ್ದಾಣದ ರನ್‌ ವೇ  3110 ಮೀಟ​ರ್‌ ಉದ್ದ, ಅದರ ಅಗಲ 45 ಮೀಟರ್‌ ಇದೆ. ರಾಜ್ಯದಲ್ಲಿಯೇ ಎರಡನೇ ಅತಿ ಉದ್ದದ ರನ್‌ ವೇ ಆಗಲಿದೆ. ಅಪ್ರೋಚ್‌ ರಸ್ತೆ, 8 ಕಿಲೋಮೀಟರ್ ಪೆರಿಪರಲ್‌ 8 ರಸ್ತೆ, ಏಪ್ರಾನ್‌ , ಟರ್ಮಿನಲ್‌ ಬಿಲ್ಡಿಂಗ್‌ ಕಾಮಾಗಾರಿಗಳು ಪೂರ್ಣಗೊಂಡಿದೆ. 13.5 ಕಿಮೀ ಉದ್ದದ ಕಾಂಪೌಂಡ್‌ ಗೋಡೆ ಪೂರ್ಣಗೊಂಡಿದೆ. ಏರ್‌ ಟ್ರಾಫಿ​ಕ್‌ ಕಂಟ್ರೋ​ಲ್‌ನ 8 ಮಹಡಿ ಪೂರ್ಣವಾಗಿವೆ. 10 ವಾಚ್‌ ಟವರ್‌ ನಿರ್ಮಿಸಲಾಗಿದೆ. ಎರಡು ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌ ಕಾಮಗಾರಿ ಮುಕ್ತಾಯಗೊಂಡಿದೆ. 

ಜಾಗತಿಕ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರು ಏರ್‌ಪೋರ್ಟ್‌ಗೆ 2ನೇ ಸ್ಥಾನ..!

220 ಕೋಟಿ ರು. ವೆಚ್ಚದಲ್ಲಿ 662.38 ಎಕರೆ ಪ್ರದೇಶದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಉಡಾನ್‌ ಯೋಜನೆಯಡಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಇದೀಗ ಇದಕ್ಕಾಗಿ ಬಿಎಸ್ ಯಡಿಯೂರಪ್ಪ ಅವಿರತ ಪ್ರಯತ್ನ ಮಾಡಿದ್ದರು. 

ಇದೇ ವೇಳೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು ಅನ್ನೋ ಚರ್ಚೆ ಶುರುವಾಗಿದೆ. ಶಿವಮೊಗ್ಗ ನಿಲ್ದಾಣಕ್ಕೆ ಬಿಎಸ್ ಯಡಿಯೂರಪ್ಪ ಹೆಸರಿಡಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದರು. ಈ ಘೋಷಣೆ ಬಳಿಕ ಸೃಷ್ಟಿಯಾದ ಗೊಂದಲ ಹಾಗೂ ವಿವಾದಕ್ಕೆ ಸ್ವತಃ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದರು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ನಾಮಕರಣ ಮಾಡುವ ಬದಲು ರಾಷ್ಟ್ರಕ್ಕೆ ದೊಡ್ಡ ಕೊಡುಗೆ ನೀಡಿದ ಮಹನೀಯರ ಹೆಸರಿಡುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ  ಹೇಳಿದ್ದರು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ Happy Journey ಹೇಳೋ ಸ್ವೀಪರ್, ನೀವು ಥ್ಯಾಂಕ್ಸ್ ಹೇಳ್ತೀರಾ?

ಈ ಕುರಿತು ಈಗಾಗಲೇ ಬಿಎಸ್‌ವೈ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಅಭಿವೃದ್ಧಿಗೆ ನನ್ನದು ಅಳಿಲು ಸೇವೆ. ರಾಷ್ಟ್ರದ ಅಭಿವೃದ್ಧಿಗೆ ನನಗಿಂತ ಹೆಚ್ಚು ಶ್ರಮಿಸಿರುವ ಅನೇಕ ಮಹನೀಯರು ಮತ್ತು ದೇಶಭಕ್ತರಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರವನ್ನು ಪುನರ್‌ ಪರಿಶೀಲಿಸಿ, ಸೂಕ್ತ ವೇದಿಕೆಯಲ್ಲಿ ಚರ್ಚಿಸುವ ಮೂಲಕ ರಾಷ್ಟ್ರದ, ನಾಡಿನ ಅಭಿವೃದ್ಧಿಗೆ ಹಾಗೂ ಇತಿಹಾಸಕ್ಕೆ ಕೊಡುಗೆ ನೀಡಿದಂತಹ ಮಹನೀಯರ ಹೆಸರನ್ನು ಈ ಹೊಸ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಮನವಿ ಮಾಡಿದ್ದರು.
 

click me!