ಪ್ರತಿಷ್ಠಿತ ಏರೋ ಇಂಡಿಯಾ ಶೋ ಟಿಕೆಟ್ ಬೆಲೆ ಬಹಿರಂಗವಾಗಿದೆ. ಫೆಬ್ರವರಿ 13 ರಿಂದ 17ರ ವರೆಗೆ ನಡೆಯಲಿರುವ ಈ ಶೋ ಕುರಿತು ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಬೆಲೆ ವಿವರ ಇಲ್ಲಿದೆ.
ಬೆಂಗಳೂರು(ಜ.20): ಪ್ರತಿಷ್ಠಿತ ಏರೋ ಇಂಡಿಯಾ ಶೋಗೆ ಅಂತಿಮ ಹಂತದ ಸಿದ್ದತೆ ನಡೆಯುತ್ತಿದೆ. 14ನೇ ಆವೃತ್ತಿ ಏರೋ ಇಂಡಿಯಾ ಶೋ ಬೆಂಗಳೂರಿನ ಯಲಹಂಕಾ ವಾಯುನೆಲೆಯಲ್ಲಿ ಫೆಬ್ರವರಿ 13 ರಿಂದ 17ರ ವರೆಗೆ ನಡೆಯಲಿದೆ. ಕಳೆದ 7 ತಿಂಗಳಿನಿಂದ ಏರೋ ಇಂಡಿಯಾ ಶೋಗೆ ಬೆಂಗಳೂರಿನಲ್ಲಿ ಸಿದ್ಧತೆಗಳು ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಏರೋ ಇಂಡಿಯಾ ಶೋ ಉದ್ಘಾಟನೆ ಮಾಡಲಿದ್ದಾರೆ. 5 ದಿನಗಳ ಕಾಲ ನಡೆಯಲಿರುವ ಈ ಏರ್ ಶೋದಲ್ಲಿ ರಕ್ಷಣಾ ಕ್ಷೇತ್ರ ಹಾಗೂ ಏರೋಸ್ಪೇಸ್ ಟ್ರೇಡಿಂಗ್ ನಡೆಯಲಿದೆ. ಪ್ರದರ್ಶನ ಹಾಗೂ ಲೋಹದ ಹಕ್ಕಿಗಳ ವೈಮಾನಿಕ ಪ್ರದರ್ಶನವೂ ನಡೆಯಲಿದೆ. ಇದೀಗ ಏರೋ ಇಂಡಿಯಾ ಶೋ ಟಿಕೆಟ್ ಬೆಲೆ ಪ್ರಕಟಗೊಂಡಿದೆ.
ಏರೋ ಇಂಡಿಯಾ ಟಿಕೆಟ್ ಬೆಲೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಏರ್ ಶೋವನ್ನು ಹಲವು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಏರ್ ಡಿಸ್‌ಪ್ಲೆ ಏರಿಯಾ(ADVA)ಟಿಕೆಟ್, ಸಾಮಾನ್ಯ ವೀಕ್ಷಕರ ಟಿಕೆಟ್, ಬ್ಯೂಸಿನೆಸ್ ಟಿಕೆಟ್ ಸೇರಿದಂತೆ ಕಲ ವಿಭಾಗದಲ್ಲಿ ವಿಂಗಡಿಸಲಾಗಿದೆ. ADVA ಹಾಗೂ ಸಾಮಾನ್ಯರ ಟಿಕೆಟ್ ಒಂದೇ ದಿನಕ್ಕೆ ಅನ್ವಯವಾಗಲಿದೆ. 5 ದಿನ ವೀಕ್ಷಿಸಲು 5 ಟಿಕೆಟ್ ಪಡೆಯಬೇಕಾಗುತ್ತದೆ. ಒಂದು ದಿನಕ್ಕೆ ಒಂದು ಬಾರಿ ಮಾತ್ರ ಎಂಟ್ರಿ ಇರಲಿದೆ.
Air Force Day: ವೆಪನ್ ಸಿಸ್ಟಮ್ ಬ್ರ್ಯಾಂಚ್ ಸ್ಥಾಪನೆಗೆ ಒಪ್ಪಿಗೆ ನೀಡಿದ ಕೇಂದ್ರ ಸರ್ಕಾರ!
ADVA ಹಾಗೂ ಸಾಮಾನ್ಯರ ಟಿಕೆಟ್ ಬೆಲೆ ಒಬ್ಬ ವ್ಯಕ್ತಿಗೆ 2,500 ರೂಪಾಯಿ. ವಿದೇಶಿ ನಾಗರೀಕರಿಗೆ 50 ಅಮೆರಿಕನ್ ಡಾಲರ್. ADVA ಭಾರತೀಯ ಅತಿಥಿಗಳ ಟಿಕೆಟ್ ಬೆಲೆ 1,000 ರೂಪಾಯಿ. ವಿದೇಶಿ ಅತಿಥಿಗಳ ಬೆಲೆ 50 ಅಮೆರಿಕನ್ ಡಾಲರ್. ಇನ್ನು ಬ್ಯೂಸಿನೆಸ್ ವಿಸಿಟರ್ ಭಾರತೀಯರಿಗೆ 5,000 ರೂಪಾಯಿ ಹಾಗೂ ವಿದೇಶಿಗರಿಗೆ 150 ಅಮೆರಿಕನ್ ಡಾಲರ್. ಇನ್ನು ಎಲ್ಲಾ ವಿಭಾಗದ ಟಿಕೆಟ್ ಬೆಲೆ ಮೇಲೆ ಜಿಎಸ್‌ಟಿ ಅನ್ವಯವಾಗಲಿದೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜನೆಗೊಳ್ಳುವ ಏಷ್ಯಾದ ಅತಿದೊಡ್ಡ ಏರ್‌ಶೋ ‘ಏರೋ ಇಂಡಿಯಾ’ 2023ರಿಂದ ಫೆ.13ರಿಂದ 5 ದಿನ ಬೆಂಗಳೂರಿನಲ್ಲಿ ನಡೆಯಲಿದೆ. 2021ರಲ್ಲಿ ಕೋವಿಡ್ ಕಾರಣದಿಂದಾಗಿ ಕಾರ್ಯಕ್ರಮವನ್ನು ಕೇವಲ 3 ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಈ ಬಾರಿ 5 ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಪೈಕಿ ಮೊದಲ 3 ದಿನದ ಏರ್‌ಶೋವನ್ನು ವ್ಯಾಪಾರಿ ಸಂದರ್ಶಕರಿಗಾಗಿ ಕಾಯ್ದಿರಿಸಲಾಗಿದೆ. ಕೊನೆಯ 2 ದಿನಗಳ ಶೋ ಸಾರ್ವಜನಿಕರಿಗಾಗಿ ತೆರೆದಿರಲಿದೆ.
ಬೆಂಗ್ಳೂರು ಏರ್ ಶೋ ಪ್ರದರ್ಶನಕ್ಕೆ 7 ತಿಂಗಳ ಮುಂಚೆಯೇ ಸಿದ್ಧತೆ..!
ಏರೋ ಇಂಡಿಯಾ 2023 ಕಾರ್ಯಕ್ರಮವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಆಯೋಜನೆ ಮಾಡಲಿದೆ. 2018ರಿಂದಲೂ ಎಚ್‌ಎಎಲ್ ರಕ್ಷಣಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಬಂದಿದೆ. 1996ರಿಂದಲೂ ಯಲಹಂಕದ ವಾಯುಪಡೆ ನೆಲೆಯಲ್ಲಿ ನಡೆಯುತ್ತಲೇ ಬಂದಿದೆ. ಕೋವಿಡ್ ನಂತರ ಈ ಬಾರಿಯ ಏರೋ ಇಂಡಿಯಾದಲ್ಲಿ ಭಾರೀ ಸಂಖ್ಯೆಯಲ್ಲಿ ಭಾರತೀಯ ಹಾಗೂ ವಿದೇಶಿ ಪ್ರದರ್ಶಕರು ಸೇನಾ ಹಾಗೂ ನಾಗರಿಕ ವಿಮಾನಗಳ ಪ್ರದರ್ಶನದಲ್ಲಿ ಭಾಗವಹಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಏರೋ ಇಂಡಿಯಾ ಜಗತ್ತಿನ ಮಹತ್ವದ ಹಾಗೂ ಅತಿದೊಡ್ಡ ಸೇನಾ ವೈಮಾನಿಕ ಪ್ರದರ್ಶನವಾಗಿ ಹಾಗೂ ಏಷ್ಯಾದ ಅತಿದೊಡ್ಡ ಏರ್‌ಶೋ ಆಗಿದೆ. ಏರೋಸ್ಪೇಸ್ ಹಾಗೂ ವಿಮಾನಯಾನ ಉದ್ಯಮದಿಂದ ಯುದ್ಧ ಹಾಗೂ ನಾಗರಿಕ ವಿಮಾನ ಉತ್ಪಾದಕರು ಹಾಗೂ ಪೂರೈಕೆದಾರರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಹಾಗೂ ಸಂಭಾವ್ಯ ಖರೀದಿದಾರರನ್ನು ಭೇಟಿಯಾಗಲು ಈ ವೇದಿಕೆ ಉತ್ತಮ ಅವಕಾಶ ಕಲ್ಪಿಸಿಕೊಡುತ್ತದೆ. ಮೈಕೋಯನ್ ಮಿಗ್-35 ಹಾಗೂ ಎಫ್-16ಐಎನ್ ಸೂಪರ್ ವೈಪರ್ ಮೊದಲಾದ ಪ್ರಸಿದ್ಧ ವಿಮಾನಗಳನ್ನು ಮೊಟ್ಟಮೊದಲು ಏರೋ ಇಂಡಿಯಾದಲ್ಲೇ ಪ್ರದರ್ಶಿಸಲಾಗಿತ್ತು.