
ಬೆಂಗಳೂರು (ಸೆ.27): ಸಿಲಿಕಾನ್ ಸಿಟಿ ಬೆಂಗಳೂರಿನ ಥಣಿಸಂದ್ರದ ಮೋನಾರ್ಚ್ ಅಪಾರ್ಟ್‌ಮೆಂಟ್‌ನಲ್ಲಿ ಮಲೆಯಾಳಿಗರ ಓಣಂ ಹಬ್ಬದ ದಿನ ಮನೆ ಮುಂದೆ ಹಾಕಿದ್ದ ರಂಗೋಲಿ ಅಳಿಸಿಹಾಕಿ ವಿಕೃತಿ ಮೆರೆದಿದ್ದ ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದೇಶ, ವಿದೇಶದ ಎಲ್ಲ ವರ್ಗ ಹಾಗೂ ಎಲ್ಲ ಧರ್ಮ, ಭಾಷೆ, ಜಾತಿಯುಳ್ಳ ಜನರು ವಾಸ ಮಾಡುತ್ತಿದ್ದಾರೆ. ಎಲ್ಲರೂ ಅವರವರದ್ದೇ ಧಾರ್ಮಿಕ ಆಚರಣೆ ಮಾಡಿಕೊಂಡು ಹೋಗುವುದಕ್ಕೆ ಸ್ವತಂತ್ರರಾಗಿದ್ದಾರೆ. ಇದಕ್ಕೆ ಸಂವಿಧಾನದಲ್ಲಿಯೇ ಅವಕಾಶ ನೀಡಿರುವಾಗ ಇಲ್ಲೊಬ್ಬ ಮಹಿಳೆ ಕೇರಳದ ಮೂಲ ನಿವಾಸಿಗಳು ಬೆಂಗಳೂರಿನಲ್ಲಿ ವಾಸವಾಗಿದ್ದು, ಓಣಂ ಆಚರಣೆಗೆ ಮನೆ ಮುಂದೆ ಹಾಕಿಕೊಂಡಿದ್ದ ರಂಗೋಲಿಯಲ್ಲಿ ಕಾಲಿನಿಂದ ತುಳಿದು ಕೆಡಿಸಿದ್ದ ಮಹಿಳೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿಯೇ ರಂಗೋಲಿ ಕೆಡಿಸಿದ ಮಹಿಳೆಯ ವಿರುದ್ಧ ಅಪಾರ್ಟ್‌ಮೆಂಟ್ ನಿವಾಸಿಗಳು ದೂರು ನೀಡಿದ್ದು, ಪೊಲೀಸರು ಆಕೆಯ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಕನ್ನಡಿಗರನ್ನು ಕೆಣಕಿದ ಸುಗಂಧ ಶರ್ಮಾಗೆ ಇದೆಂಥಾ ಸ್ಥಿತಿ ಬಂತು: ಕೆಲಸ ಕಳೆದುಕೊಂಡವಳಿಗೆ ನೆಲೆ ಕಳೆದುಕೊಳ್ಳುವ ಆತಂಕ!
ಮಹಿಳೆಯಿಂದ ಓಣಂ ಹಬ್ಬಕ್ಕೆ ಬಿಡಿಸಿದ್ದ ರಂಗೋಲಿ ಹಾಳು ಮಾಡಿದ ವಿಚಾರವಾಗಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ದ FIR ದಾಖಲು ಆಗಿದೆ. ಸಿಮಿ ನಾಯರ್ ಎಂಬ ಮಹಿಳೆಯ ವಿರುದ್ಧ ಬೆಂಗಳೂರಿನಲ್ಲಿರುವ ಓಣಂ ಸಮಿತಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಲಾಗಿದೆ. ಥಣಿಸಂದ್ರದ ಮೋನಾರ್ಚ್ ಅಪಾರ್ಟ್‌ಮೆಂಟ್ ನಲ್ಲಿ ಈ ಘಟನೆ ನಡೆದಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಕೇರಳದ ಮಲೆಯಾಳಂ ಸಮುದಾಯದವರಿಂದ ಓಣಂ ಹಬ್ಬದ ಅಂಗವಾಗಿ ಸೆ.21ರಂದು ಮುಂಜಾನೆ ಅಪಾರ್ಟ್ಮೆಂಟ್ ಪ್ರವೇಶ ದ್ವಾರದಲ್ಲಿ ರಂಗೋಲಿ ಬಿಡಿಸಲಾಗಿತ್ತು. ಆದರೆ, ಇದನ್ನು ವಿರೋಧಿಸಿದ್ದ ಸಿಮಿ ನಾಯರ್ ಎಂಬ ಮಹಿಳೆ ನೀವ್ಯಾಕೆ ಇಲ್ಲಿ ರಂಗೋಲಿ ಹಾಕಿದ್ದೀರಿ ಎಂದು ಪ್ರಶ್ನೆ ಮಾಡುತ್ತಾ ರಂಗೋಲಿ ಮೇಲೆ ನಿಂತಿದ್ದಾಳೆ.
ಇದನ್ನು ನೋಡಿದ ರಂಗೋಲಿ ಬಿಡಿಸಿದವರು ಇಂದು ಓಣಂ ಹಬ್ಬವಿರುವ ಕಾರಣ ಈ ರಂಗೋಲಿಯನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಎಲ್ಲ ಸಮುದಾಯದವರೂ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಇದನ್ನು ನೀವು ಹಾಕುವಂತಿಲ್ಲ ಎಂದು ಸುಖಾ ಸುಮ್ಮನೆ ಕ್ಯಾತೆ ಆರಂಭಿಸಿದ್ದಾಳೆ. ನಂತರ, ಒಂದು ದಿನ ಆಚರಣೆ ಮಾಡಲು ಬಿಡಿ, ಸಂಜೆ ವೇಳೆಗೆ ತೆರವು ಮಾಡುವುದಾಗಿ ಅಪಾರ್ಟ್‌ಮೆಂಟ್ ನಿವಾಸಿಗಳು ಮನವಿ ಮಾಡಿದ್ದಾರೆ. ಇದಕ್ಕೆ ಕ್ಯಾರೇ ಎನ್ನದ ಮಹಿಳೆ ಸಿಮಿ ನಾಯರ್, ರಂಗೋಲಿಯನ್ನು ಮನಸೋ ಇಚ್ಛೆ ತುಳಿದು ಕಾಲಿನಿಂದ ಇಡೀ ರಂಗೋಲಿಯನ್ನು ಅಳಿಸಿ ಹಾಕಿ ಹಾಳು ಮಾಡಿದ್ದಾಳೆ. ಇದರಿಂದ ಹಬ್ಬ ಆಚರಣೆ ಮಾಡುತ್ತಿದ್ದವರಿಗೆ ಕೋಪ ಬಂದರೂ ಅದನ್ನು ತಡೆದುಕೊಂಡು ಕಾನೂನಾತ್ಮಕ ಕ್ರಮ ಕೈಗೊಳ್ಳಲು ದೂರು ಕೊಡುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ಬೆಂಗಳೂರು ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಇನ್ಮುಂದೆ ಧೈರ್ಯವಾಗಿ ಓಡಾಡಿ!
ಅಪಾರ್ಟ್‌ಮೆಂಟ್‌ನಲ್ಲಿ ಓಣಂ ಆಚರಣೆಗೆ ಅವಕಾಶ ನೀಡದೇ ರಂಗೋಲಿ ಅಳಿಸಿ ಹಾಕಿದ್ದ ವಿಡಿಯೋವನ್ನು ಅಪಾರ್ಟ್‌ಮೆಂಟ್ ವಾಟ್ಸಾಪ್ ಗುಂಪಿಗೆ ಹಂಚಿಕೊಳ್ಳಲಾಗಿತ್ತು. ಇದಾದ ನಂತರ, ಸಿಮಿ ನಾಯರ್ ಎಂಬ ಮಹಿಳೆ ಓಣಂ ಆಚರಣೆ ಮಾಡುತ್ತಿದ್ದ ಕುಟುಂಬಗಳಿಗೆ ಬೆದರಿಕೆ ಹಾಕಿದ್ದಾರಂತೆ. ಹಾಗಾಗಿ, ಮಹಿಳೆ ಸಿಮಿ ನಾಯರ್ ಓಣಂ ಆಚರಣೆಯ ರಂಗೋಲಿ ಅಳಿಸಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದ್ದು, ರಂಗೋಲಿ ಅಳಿಸಿದ್ದ ಮಹಿಳೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮಲಯಾಳಿ ಸಮುದಾಯಕ್ಕೆ ನೋವುಂಟು ಮಾಡಲಾಗಿದೆ ಎಂಬ ದೂರಿನ ಆಧಾರದಲ್ಲಿ ಪೊಲೀಸರು ಮಹಿಳೆಯ ವಿರುದ್ಧ FIR ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ