ಮೋದಿ ಸಾಕ್ಷ್ಯಚಿತ್ರ ಮತ್ತಷ್ಟು ಕಿಚ್ಚು; ಕೆಲವೆಡೆ ಪ್ರದರ್ಶನ: ಸತ್ಯ ಹೊರಗೆ ಬಂದೇ ಬರುತ್ತದೆ ಎಂದ ರಾಹುಲ್‌ ಗಾಂಧಿ

By Kannadaprabha NewsFirst Published Jan 25, 2023, 8:27 AM IST
Highlights

ಮೋದಿ ಸಾಕ್ಷ್ಯಚಿತ್ರ ಮತ್ತಷ್ಟು ಕಿಚ್ಚು ಹತ್ತಿದ್ದು, ಹೈದರಾಬಾದ್‌ ವಿವಿ, ಕೇರಳ ಕಾಲೇಜಲ್ಲಿ ಪ್ರದರ್ಶನಗೊಂಡಿದೆ. ಇದನ್ನು ಇನ್ನಷ್ಟು ಕಡೆ ಪ್ರದರ್ಶನ ಮಾಡಲಾಗುವುದು ಎಂದು ಕೇರಳ ವಿದ್ಯಾರ್ಥಿ ಸಂಘಟನೆಗಳು ಘೋಷಣೆ ಮಾಡಿದೆ. ಈ ಹಿನ್ನೆಲೆ ಪ್ರದರ್ಶನ ನಿಲ್ಲಿಸಿ ಎಂದು ಕೇರಳ ಸಿಎಂಗೆ ಬಿಜೆಪಿ ಆಗ್ರಹ ಮಾಡಿದೆ. 

ಹೈದರಾಬಾದ್‌/ತಿರುವನಂತಪುರ/ದೆಹಲಿ: 2002ರ ಗುಜರಾತ್‌ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಇತ್ತು ಎಂದು ಆರೋಪಿಸಿ ಬಿಬಿಸಿ ಹೊರತಂದಿರುವ ಸಾಕ್ಷ್ಯಚಿತ್ರ, ಈಗ ಭಾರತದ ಕೆಲವು ರಾಜ್ಯಗಳ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಸದ್ದು ಮಾಡಲು ಆರಂಭಿಸಿದೆ. ಹೈದರಾಬಾದ್‌ನ ಒಂದು ವಿಶ್ವವಿದ್ಯಾಲಯ ಹಾಗೂ ಕೇರಳದ ಕಾಲೇಜೊಂದರಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಸಲಾಗಿದೆ. ಇದೇ ವೇಳೆ ಕೇರಳದಲ್ಲಿ ಎಸ್‌ಎಫ್‌ಐ, ಡಿವೈಎಫ್‌ಐ ಸೇರಿದಂತೆ ಕೆಲವು ವಿದ್ಯಾರ್ಥಿ ಸಂಘಟನೆಗಳು ವಿವಿ/ಕಾಲೇಜುಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡುತ್ತೇವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಿಸಿವೆ. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರದರ್ಶನಕ್ಕೆ ತಡೆ ನೀಡುವಂತೆ ಕೇರಳ ಸರ್ಕಾರಕ್ಕೆ ಆಗ್ರಹಿಸಿದೆ.

ಇನ್ನು ಮಂಗಳವಾರ ದಿಲ್ಲಿಯ ಜೆಎನ್‌ಯುನಲ್ಲಿ ಕೂಡ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ ನಿರ್ಧರಿಸಿತ್ತಾದರೂ ಜೆಎನ್‌ಯು ಆಡಳಿತ ಮಂಡಳಿ ಅದಕ್ಕೆ ಅವಕಾಶ ನೀಡಿಲ್ಲ. ಆಗ ವಿದ್ಯಾರ್ಥಿಗಳು ಮೊಬೈಲ್‌, ಲ್ಯಾಪ್‌ಟಾಪ್‌ನಲ್ಲಿ ಚಿತ್ರ ವೀಕ್ಷಣೆ ಮಾಡಿದರು. ಈ ವೇಳೆ ಪ್ರದರ್ಶನಕ್ಕೆ ಯತ್ನಿಸಿದ ವೇಳೆ ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಲಾಗಿದೆ. ಕೇಂದ್ರ ಸರ್ಕಾರ (Central Government) ಈಗಾಗಲೇ ಯೂಟ್ಯೂಬ್‌ (You Tube) ಹಾಗೂ ಟ್ವಿಟ್ಟರ್‌ನಲ್ಲಿ (Twitter) ಹಾಕಲಾಗಿದ್ದ ಸಾಕ್ಷ್ಯಚಿತ್ರದ (Documentary) ಸಂದೇಶಗಳು ಹಾಗೂ ಲಿಂಕ್‌ಗೆ (Link) ನಿರ್ಬಂಧ ವಿಧಿಸಿದೆ.

ಇದನ್ನು ಓದಿ: ಬ್ಯಾನ್‌ ಆದರೂ ಹೈದರಾಬಾದ್‌ ವಿವಿಯಲ್ಲಿ ಮೋದಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಕೇರಳ, ಜೆಎನ್‌ಯೂನಲ್ಲೂ ಸ್ಕ್ರೀನಿಂಗ್..!

ಕೇರಳ, ಹೈದರಾಬಾದ್‌ನಲ್ಲಿ ಪ್ರದರ್ಶನ:
ಹೈದರಾಬಾದ್‌ ಸೆಂಟ್ರಲ್‌ ವಿವಿಯಲ್ಲಿ ಕಳೆದ ಭಾನುವಾರವೇ ವಿದ್ಯಾರ್ಥಿ ಸಂಘಟನೆಯೊಂದು ‘ದ ಮೋದಿ ಕ್ವೆಶ್ಚನ್‌’ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದೆ. ಇದಕ್ಕೆ ಸಂಬಂಧಿಸಿದಂತೆ ಎಬಿವಿಪಿ ದೂರು ನೀಡಿದ್ದು, ವಿವಿ ಅಧಿಕಾರಿಗಳು ವಿದ್ಯಾರ್ಥಿಗಳಿಂದ ಸ್ಪಷ್ಟನೆ ಕೇಳಿದ್ದಾರೆ.

ಇನ್ನು ಕೇರಳದ ತಿರುವನಂತಪುರದ ಕಾನೂನು ಕಾಲೇಜಿನಲ್ಲಿ ಮಂಗಳವಾರ ಕ್ಲಾಸ್‌ನ ಸ್ಮಾರ್ಟ್‌ ಟಿವಿ ಮೇಲೆ ಕೆಲವು ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿದ್ದಾರೆ. ಇದರ ವಿರುದ್ಧ ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆ ಕಾರ್ಯಕರ್ತರು ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭಾರತದಲ್ಲಿ ‘ನಿಷೇಧ’

ಸತ್ಯ ಎಂದಾದರೂ ಹೊರಗೆ ಬಂದೇ ಬರುತ್ತದೆ: ರಾಹುಲ್‌
‘ಸತ್ಯ ಯಾವತ್ತಿದ್ದರೂ ಹೊರಗೆ ಬಂದೇ ಬರುತ್ತದೆ’ ಎಂದು ಗುಜರಾತ್‌ ಗಲಭೆಯಲ್ಲಿ ಪ್ರಧಾನಿ ಮೋದಿ ಅವರ ಪಾತ್ರವಿದೆ ಎಂದು ಆರೋಪಿಸಿರುವ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನೀವು ಭಗವದ್ಗೀತೆ ಅಥವಾ ಉಪನಿಷತ್ತನ್ನು ಓದಿದಾಗ ಸತ್ಯ ಯಾವತ್ತಿದ್ದರೂ ಬಯಲಾಗೇ ಆಗುತ್ತದೆ ಎಂದು ತಿಳಿದು ಬರುತ್ತದೆ. ನೀವು ನಿಷೇಧ ಮಾಡಬಹುದು. ಮಾಧ್ಯಮಗಳನ್ನು ಹೊಸಕಿ ಹಾಕಬಹುದು. ಸಾಂವಿಧಾನಿಕ ಸಂಸ್ಥೆಗಳನ್ನು ನಿಯಂತ್ರಿಸಬಹುದು. ಇ.ಡಿ., ಸಿಬಿಐ ದಾಳಿ ಮಾಡಿಸಬಹುದು. ಆದರೆ ಸತ್ಯ ಯಾವತ್ತೂ ಸತ್ಯವೇ. ಸತ್ಯ ಯಾವಾಗಲೂ ಪ್ರಕಾಶಿಸುತ್ತದೆ’ ಎಂದರು.

ಸಾಕ್ಷ್ಯಚಿತ್ರ ಪ್ರಸಾರಕ್ಕೆ  ಕಾಂಗ್ರೆಸ್‌ ನಾಯಕ ಆ್ಯಂಟನಿ ಪುತ್ರ ವಿರೋಧ
ಗುಜರಾತ್‌ ಗಲಭೆ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯ ಚಿತ್ರವನ್ನು ಭಾರತದಲ್ಲಿ ಪ್ರದರ್ಶನ ಮಾಡುವುದಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್‌ ವಿರೋಧ ವ್ಯಕ್ತಪಡಿಸಿದ್ದಾರೆ. ‘ಬಿಜೆಪಿಯೊಂದಿಗೆ ನನಗೆ ದೊಡ್ಡ ಭಿನ್ನಾಭಿಪ್ರಾಯ ಇರಬಹುದು, ಆದರೆ ಭಾರತದ ಸಂಸ್ಥೆಗಳ ಮೇಲೆ ಬ್ರಿಟನ್‌ನ ಪ್ರಸಾರಕರ ಅಭಿಪ್ರಾಯವನ್ನು ಹೇರುವುದು ದೇಶದ ಸಾರ್ವಭೌಮತೆಗೆ ಧಕ್ಕೆ ತಂದಂತೆ. ಬಿಸಿಸಿ ಅಭಿಪ್ರಾಯ ಮತ್ತು ಇದಕ್ಕೆ ಕಾರಣವಾದ ಸಾಕ್ಷ್ಯಚಿತ್ರದ ರೂವಾರಿ, ಬ್ರಿಟನ್‌ ಮಾಜಿ ವಿದೇಶಾಂಗ ಸಚಿವ ಜಾಕ್‌ ಸ್ಟ್ರಾ ಅವರ ನಿಲುವುಗಳನ್ನು ಬೆಂಬಲಿಸುವುದು ಹೊಸ ಅಪಾಯಕಾರಿ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆ ಆಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಬಿಬಿಸಿ ವಿರುದ್ಧ ಮತ್ತಷ್ಟು ಆಕ್ರೋಶ: ನಿಷೇಧದ ಬಳಿಕವೂ ಮತ್ತೆ ಸಾಕ್ಷ್ಯಚಿತ್ರ ಶೇರ್‌ ಮಾಡಿದ ಟಿಎಂಸಿ ಎಂಪಿ..!

click me!