ಜಡ್ಜ್‌ಗಳ ಹಿನ್ನೆಲೆ ಕುರಿತ ‘ರಾ’ ವರದಿ ಬಹಿರಂಗ: ಕೊಲಿಜಿಯಂ ನಡೆಗೆ ಕೇಂದ್ರ ಸಚಿವ ಕಿರಣ್‌ ರಿಜಿಜು ಕಿಡಿ

By Kannadaprabha News  |  First Published Jan 25, 2023, 7:49 AM IST

ಗುಪ್ತಚರ ವರದಿ ಬಹಿರಂಗ ಮಾಡಿದ ಕೊಲಿಜಿಯಂ ನಡೆಗೆ ರಿಜಿಜು ಕಿಡಿ ಕಾರಿದ್ದು, ಇದೇ ರೀತಿ ಆದರೆ ‘ರಾ’ ಸಿಬ್ಬಂದಿ ಕರ್ತವ್ಯ ನಿರ್ವಹಿಸಲ್ಲ ಎಂದಿದ್ದಾರೆ. ಈ ಮೂಲಕ ನ್ಯಾಯಾಂಗ ಬಗ್ಗೆ ಕಾನೂನು ಸಚಿವರು ಮತ್ತೊಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 


ನವದೆಹಲಿ (ಜನವರಿ 25, 2023): ನ್ಯಾಯಾಂಗದ ವಿರುದ್ಧ ನಿತ್ಯ ಒಂದಿಲ್ಲೊಂದು ಹೇಳಿಕೆ ನೀಡುತ್ತಿರುವ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಮಂಗಳವಾರ ಕೂಡ ಸುಪ್ರೀಂಕೋರ್ಟ್‌ ಕೊಲಿಜಿಯಂ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಲಿಜಿಯಂನವರು ಭಾರತದ ಗುಪ್ತಚರ ಸಂಸ್ಥೆ ‘ರಾ’ ನೀಡಿದ್ದ ವರದಿಗಳನ್ನು ಬಹಿರಂಗಪಡಿಸಿದ್ದಕ್ಕೆ ಆಕ್ಷೇಪಿಸಿದ್ದಾರೆ. ಇತ್ತೀಚೆಗೆ ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಆದ ಕೆಲವು ಹೆಸರುಗಳಿಗೆ ಕೇಂದ್ರ ಸರ್ಕಾರ ಆಕ್ಷೇಪಿಸಿತ್ತು. ತನ್ನ ಆಕ್ಷೇಪಕ್ಕೆ ಜಡ್ಜ್‌ ಆಕಾಂಕ್ಷಿಗಳ ವಿರುದ್ಧ ಗುಪ್ತಚರ ಸಂಸ್ಥೆ ನೀಡಿದ್ದ ವರದಿಗಳನ್ನು ಪುರಾವೆಯಾಗಿ ನೀಡಿತ್ತು. ಈ ವರದಿಯಲ್ಲಿನ ಅಂಶಗಳನ್ನು ಕೊಲಿಜಿಯಂ ಕಳೆದ ವಾರ ಬಹಿರಂಗಪಡಿಸಿ, ಜಡ್ಜ್‌ಗಳ ನೇಮಕವನ್ನು ಏಕೆ ಕೇಂದ್ರ ಒಪ್ಪುತ್ತಿಲ್ಲ ಎಂಬುದಕ್ಕೆ ಕಾರಣ ನೀಡಿತ್ತು. ಈ ಮೂಲಕ ಕೇಂದ್ರ ಸರ್ಕಾರದ ಆಕ್ಷೇಪದ ವಿಷಯವನ್ನು ಕೊಲಿಜಿಯಂ ಮೊದಲ ಬಾರಿಗೆ ಬಹಿರಂಗಪಡಿಸಿತ್ತು.

ಈ ಪೈಕಿ ಸುಪ್ರೀಂಕೋರ್ಟ್‌ನ (Supreme Court) ನಿವೃತ್ತ ಸಿಜೆ (Retired Chief Justice) ಬಿ.ಎನ್‌. ಕಿರ್ಪಾಲ್‌ ಅವರ ಪುತ್ರ ಸೌರಭ್‌ ಕಿರ್ಪಾಲ್‌ ಅವರ ಹೆಸರನ್ನು ತಿರಸ್ಕರಿಸಲು ನೀಡಿದ ಕಾರಣ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ನ್ಯಾಯಮೂರ್ತಿ (Judge) ಸೌರಭ್‌ ಸಲಿಂಗಕಾಮದಲ್ಲಿ (Same Sex) ಆಸಕ್ತಿ ಹೊಂದಿದ್ದಾರೆ. 

Tap to resize

Latest Videos

ಇದನ್ನು ಓದಿ: ನನ್ನ ಹೆಗಲ ಮೇಲೆ ಗನ್‌ ಇಟ್ಟು ಶೂಟ್‌ ಮಾಡಬೇಡಿ: ಕೇಂದ್ರ ಸಚಿವ ರಿಜಿಜುಗೆ ನಿವೃತ್ತ ನ್ಯಾಯಮೂರ್ತಿ ಸೋಧಿ ಕೋರಿಕೆ

ಹೀಗಾಗಿ ಅಂಥ ಪ್ರಕರಣಗಳಲ್ಲಿ (Cases) ಅವರು ತಾರತಮ್ಯದ ತೀರ್ಪು (Judgement) ನೀಡಬಹುದು. ಜೊತೆಗೆ ಅವರ ಜೀವನ ಸಂಗಾತಿ ಸ್ವಿಜರ್ಲೆಂಡ್‌ ಮೂಲದವರು. ಹೀಗಾಗಿ ಇವರ ಹೆಸರನ್ನು ಮತ್ತೊಮ್ಮೆ ಪರಿಶೀಲಿಸಿ ಎಂದು ಕೇಂದ್ರ ಸರ್ಕಾರ ಕೊಲಿಜಿಯಂಗೆ ಶಿಫಾರಸು ಪತ್ರವನ್ನು ಮರಳಿಸಿತ್ತು. ವರದಿಯಲ್ಲಿನ ಈ ಅಂಶಗಳನ್ನು ಕೊಲಿಜಿಯಂ ಕಳೆದ ವಾರ ಬಹಿರಂಗಪಡಿಸಿತ್ತು. 

ಇದಕ್ಕೆ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದ ರಿಜಿಜು, ‘ಗುಪ್ತಚರ ಅಧಿಕಾರಿಗಳು ದೇಶಕ್ಕಾಗಿ ರಹಸ್ಯವಾಗಿ ಕೆಲಸ ಮಾಡುತ್ತಿರುತ್ತಾರೆ. ಆದರೆ ಅವರ ವರದಿಗಳು ಬಹಿರಂಗ ಆಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸಲು ಎರಡೆರಡು ಬಾರಿ ಯೋಚಿಸುತ್ತಾರೆ. ರಾ ಹಾಗೂ ಗುಪ್ತಚರ ದಳದ ಸೂಕ್ಷ್ಮ ಅಥವಾ ರಹಸ್ಯ ವರದಿಗಳನ್ನು ಬಹಿರಂಗಪಡಿಸುವುದು ಕಳವಳಕಾರಿ. ಇದಕ್ಕೆ ನಾನು ಸೂಕ್ತ ಸಂದರ್ಭದಲ್ಲಿ ಪ್ರತಿಕ್ರಿಯಿಸುತ್ತೇನೆ’ ಎಂದು ಹೇಳಿದರು. ಈ ಮೂಲಕ ನ್ಯಾಯಾಂಗದ ವಿರುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮರ ಸಾರುವ ಸುಳಿವು ನೀಡಿದರು.

ಇದನ್ನೂ ಓದಿ: ಮತ್ತೆ ಕೇಂದ್ರ v/s ಸುಪ್ರೀಂ: ಸುಪ್ರೀಂನಿಂದ ಸಂವಿಧಾನ ಹೈಜಾಕ್‌; ನಿವೃತ್ತ ಜಡ್ಜ್‌ ಹೇಳಿಕೆಗೆ ಸಚಿವ ಬೆಂಬಲ

ಕೇಜ್ರಿವಾಲ್‌ ಕಿಡಿ:
ನ್ಯಾಯಾಂಗದ ಬಗ್ಗೆ ಸರ್ಕಾರದ ನಡೆಗೆ ಆಕ್ಷೇಪಿಸಿರುವ ಆಪ್‌ ನೇತಾರ ಅರವಿಂದ ಕೇಜ್ರಿವಾಲ್‌, ‘ದೇಶದ ಅನೇಕ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಆಕ್ರಮಿಸಿಕೊಂಡಿದೆ. ಈಗ ನ್ಯಾಯಾಂಗವನ್ನೂ ವಶಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಆದರೆ ಜನರು ಇದಕ್ಕೆ ಅವಕಾಶ ನೀಡಲ್ಲ’ ಎಂದರು.

ಏನಿದು ವಿವಾದ..?
ಉನ್ನತ ಹಂತದ ಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕ ಕುರಿತು ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಮೂರ್ತಿಗಳ ಹೆಸರು ಅಂಗಿಕಾರಕ್ಕೂ ಮುನ್ನ ಕೇಂದ್ರ ಸರ್ಕಾರ ಗುಪ್ತಚರ ಇಲಾಖೆಯಿಂದ ವರದಿ ಕೇಳುತ್ತದೆ. ಅದು ನೀಡಿದ ವರದಿ ಅಂಥ ವ್ಯಕ್ತಿಗಳ ಹೆಸರು ಅನುಮೋದಿಸುವ ಅಥವಾ ತಿರಸ್ಕರಿಸುವ ಕೆಲಸ ಮಾಡುತ್ತದೆ. ಜೊತೆಗೆ ತಿರಸ್ಕರಿಸಲು ಕಾರಣವಾದ ಅಂಶಗಳನ್ನು ಕೊಲಿಜಿಯಂಗೆ ರವಾನಿಸುತ್ತದೆ. ಇದುವರೆಗೂ ಇಂಥ ಕಾರಣಗಳನ್ನು ಕೊಲಿಜಿಯಂ ಬಹಿರಂಗಪಡಿಸುತ್ತಿರಲಿಲ್ಲ. ಆದರೆ ತನ್ನ ವಿಶ್ವಾಸಾರ್ಹತೆಯನ್ನೇ ಕೇಂದ್ರ ಸರ್ಕಾರ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೊಲಿಜಿಯಂ ಗುಪ್ತಚರ ವರದಿಯನ್ನೇ ಇತಿಹಾಸದಲ್ಲೇ ಮೊದಲ ಬಾರಿ ಬಹಿರಂಗಪಡಿಸಿತ್ತು. 

ಇದನ್ನೂ ಓದಿ: ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ಸೇರ್ಪಡೆ ಮಾಡಿ: ಸಿಜೆಐಗೆ ಕಾನೂನು ಸಚಿವ ರಿಜಿಜು ಪತ್ರ

click me!