ಹಿಂದಿ ಗೊತ್ತಿಲ್ಲದ್ದಕ್ಕೆ ಸಾಲ ನಿರಾಕರಿಸಿದ್ದ ಬ್ಯಾಂಕ್ ಅಧಿಕಾರಿ| ಗ್ರಾಹಕರೊಬ್ಬರಿಗೆ ಅವಮಾನಿಸಿದ ಆರೋಪ, ಮ್ಯಾನೇಜರ್ ಎತ್ತಂಗಡಿ ಮಾಡಿದ ಬ್ಯಾಂಕ್
ಚೆನ್ನೈ(ಸೆ.24): ಹಿಂದಿಯಲ್ಲಿ ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಸಾಲ ತಿರಸ್ಕರಿಸಿ ಗ್ರಾಹಕರೊಬ್ಬರಿಗೆ ಅವಮಾನಿಸಿದ್ದ ತಮಿಳುನಾಡಿನಲ್ಲಿನ ಗಂಗೈಕೊಂಡಚೋಲಪುರಂ ಶಾಖೆಯ ಅಧಿಕಾರಿಯನ್ನು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಅಲ್ಲಿಂದ ಎತ್ತಂಗಡಿ ಮಾಡಿದೆ.
ಪ್ರಾದೇಶಿಕ ಭಾಷೆಗೆ ಅಧಿಕೃತ ಭಾಷೆ ಸ್ಥಾನಮಾನವಿಲ್ಲ: ಕೇಂದ್ರ
ಮಹಾರಾಷ್ಟ್ರ ಮೂಲದ ವಿಶಾಲ್ ನಾರಾಯಣ ಕಾಂಬ್ಳೆ ಎಂಬುವರೇ ಹೀಗೆ ಬ್ಯಾಂಕ್ ಸಾಲ ಬೇಕಿದ್ದರೆ ಹಿಂದಿಯಲ್ಲೇ ಅರ್ಜಿ ಸಲ್ಲಿಸುವಂತೆ ಸೂಚಿಸಿ ಎತ್ತಂಗಡಿಯಾಗಿರುವ ಬ್ಯಾಂಕ್ ಮ್ಯಾನೇಜರ್. 12 ದಿನಗಳ ಹಿಂದೆಯಷ್ಟೇ ನಿವೃತ್ತ ವೈದ್ಯರಾದ ಬಾಲಸುಬ್ರಮಣಿಯನ್ ಎಂಬುವರು ತಮ್ಮ ಸ್ವಂತ ಜಾಗದಲ್ಲಿ ವಾಣಿಜ್ಯ ಕಟ್ಟಡವೊಂದರ ನಿರ್ಮಾಣಕ್ಕೆ ಸಾಲ ಮಂಜೂರಾತಿಗೆ ಕೋರಿ ಇಲ್ಲಿನ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ವೇಳೆ ಬ್ಯಾಂಕ್‌ನ ವ್ಯವಸ್ಥಾಪಕರಾಗಿದ್ದ ವಿಶಾಲ್ ಅವರು ಹಿಂದಿಯಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದರು. ಆಗ ತನಗೆ ತಮಿಳು ಮತ್ತು ಇಂಗ್ಲಿಷ್ ಭಾಷೆಗಳು ಮಾತ್ರವೇ ಗೊತ್ತಿದ್ದು, ಹಿಂದಿ ಗೊತ್ತಿಲ್ಲ ಎಂದು ಬಾಲಸುಬ್ರಮಣಿಯನ್ ಉತ್ತರಿಸಿದ್ದಾರೆ.
ಪ್ರಾದೇಶಿಕ ಭಾಷೆಗೆ ಅಧಿಕೃತ ಭಾಷೆ ಸ್ಥಾನಮಾನವಿಲ್ಲ: ಕೇಂದ್ರ
ಈ ವೇಳೆ ಇಬ್ಬರ ಮಧ್ಯೆಯ ಮಾತುಕತೆ ತಾರಕಕ್ಕೇರಿದ್ದು, ಇದರಿಂದ ಬೇಸತ್ತ ಬಾಲಸುಬ್ರಮಣಿಯನ್ ಅವರು ಭಾಷಾ ಆಧಾರದ ಮೇಲೆ ಸೇವೆ ನಿರಾಕರಿಸುವುದು ಅಸಮಂಜಸವಾಗಿದೆ. ಅಲ್ಲದೆ, ಬ್ಯಾಂಕ್ ಅಧಿಕಾರಿಯಿಂದ ತಮಗಾದ ಮಾನಸಿಕ ಕಿರುಕುಳಕ್ಕೆ 1 ಲಕ್ಷ ರು. ಪರಿಹಾರ ಒದಗಿಸಬೇಕು ಎಂದು ನೋಟಿಸ್ ರವಾನೆ ಮಾಡಿದ್ದರು. ಒಂದು ವೇಳೆ ಪರಿಹಾರ ನೀಡಲು ನಿರಾಕರಿಸಿದ್ದಲ್ಲಿ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಕದ ತಟ್ಟುವುದಾಗಿ ಎಚ್ಚರಿಕೆ ನೀಡಿದ್ದರು.