RSS ಸಂಘಟನೆಗೆ ನಿರ್ಬಂಧ ಹೇರಿ, ಆಸ್ತಿ ಜಪ್ತಿ ಮಾಡಿ: ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಆಯೋಗದಿಂದ ಸರ್ಕಾರಕ್ಕೆ ಶಿಫಾರಸು

Published : Mar 17, 2026, 05:06 AM IST
RSS

ಸಾರಾಂಶ

ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್ ಸಿಐಆರ್‌ಎಫ್) ತನ್ನ ವಾರ್ಷಿಕ ವರದಿಯಲ್ಲಿ, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಕಳವಳಕಾರಿಯಾಗಿ ಹದಗೆಟ್ಟಿದೆ ಎಂದು ಆರೋಪಿಸಿದೆ. ಹಿಂದೂ ರಾಷ್ಟ್ರೀಯವಾದಿ ಗುಂಪುಗಳಿಂದ ಅಲ್ಪಸಂಖ್ಯಾತರ ಮೇಲೆ ದಾಳಿ ಹೆಚ್ಚುತ್ತಿದೆ ಎಂದು ಅದು ಆರೋಪಿಸಿದೆ.

ಭಾರತದ ಆರ್‌ಎಸ್ಎಸ್ ಹಾಗೂ ರಾ ಮೇಲೆ ಅಮೆರಿಕಾದ ಕಣ್ಣು

ನವದೆಹಲಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಳವಳಕಾರಿಯಾಗಿ ಹದಗೆಟ್ಟಿದೆ. ಹಿಂದೂ ರಾಷ್ಟ್ರೀಯವಾದಿ ಗುಂಪುಗಳಿಂದ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚುತ್ತಿವೆ ಎಂದು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್ ಸಿಐಆರ್‌ಎಫ್) ಆರೋಪಿಸಿದೆ. ಅಲ್ಲದೆ, ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘಿಸುತ್ತಿರುವ ಆರೋಪ ಮೇರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಂಥ (ಆರೆಸ್ಸೆಸ್) ಸಂಘಟನೆ ಹಾಗೂ ಭಾರತದ ಗುಪ್ತಚರ ಸಂಸ್ಥೆ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ಆರ್ ಆ್ಯಂಡ್ ಎಡಬ್ಲ್ಯು) ಮೇಲೆ ನಿರ್ಬಂಧ ಹೇರುವಂತೆ ಅಮೆರಿಕಾದ ಸಿಎಸ್‌ಐಆರ್‌ಎಫ್ ಶಿಫಾರಸು ಮಾಡಿದೆ. ಜತೆಗೆ, ಭಾರತಕ್ಕೆ ಶಸ್ತ್ರಾಸ್ತ್ರಗಳ ಮಾರಾಟ ತಡೆಹಿಡಿಯಬೇಕು ಎಂದು ಅಮೆರಿಕ ಸರ್ಕಾರಕ್ಕೆ ಅದು ಒತ್ತಾಯಿಸಿದೆ.

ಯುಎಸ್ ಸಿಐಆರ್‌ಎಫ್ ಇತ್ತೀಚೆಗೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಭಾರತವನ್ನು ಮತ್ತೊಮ್ಮೆ ನಿರ್ದಿಷ್ಟ ಕಳವಳದ ದೇಶ ಎಂದು ಹೇಳಲಾಗಿದ್ದು, ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹದಗೆಟ್ಟಿದೆ ಎಂದು ಆರೋಪಿಸಿದೆ.

ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ವರದಿಯಲ್ಲಿ ಏನಿದೆ?:

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತಷ್ಟು ಹದಗೆಟ್ಟಿದೆ. ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪ್ರಾರ್ಥನಾ ಸ್ಥಳಗಳನ್ನು ಗುರಿ ಮಾಡುತ್ತಿದೆ. ಕಠಿಣ ಜೈಲುವಾಸಕ್ಕೆ ಅವಕಾಶವಿರುವ ಮತಾಂತರ ವಿರೋಧಿ ಕಾನೂನುಗಳನ್ನು ಅನೇಕ ರಾಜ್ಯಗಳು ಜಾರಿ ಮಾಡಲು ಪ್ರಯತ್ನಿಸುತ್ತಿವೆ. ಧಾರ್ಮಿಕ ನಿರಾಶ್ರಿತರು ಹಾಗೂ ಪ್ರಜೆಗಳನ್ನು ಅಕ್ರಮವಾಗಿ ಗಡೀಪಾರು ಮಾಡುವ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿಯ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಪಸಂಖ್ಯಾತರ ಮೇಲಿನ ದಾಳಿ ವಿರುದ್ಧ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಬಾರಾಮತಿ ಕ್ಷೇತ್ರದ ಉಪ ಚುನಾವಣೆ: ಅತ್ತಿಗೆ ಸುನೇತ್ರಾ ಪವಾರ್ ವಿರುದ್ಧ NCP ಅಭ್ಯರ್ಥಿ ಕಣಕ್ಕಿಳಿಸಲ್ಲ ಎಂದ ಸುಪ್ರಿಯಾ ಸುಳೆ

ವಕ್ಸ್‌ ತಿದ್ದುಪಡಿ ಕಾಯ್ದೆ, ಉತ್ತರಾಖಂಡದ ರಾಜ್ಯ ಅಲ್ಪಸಂಖ್ಯಾತರ ಶಿಕ್ಷಣ ಕಾಯ್ದೆಯ ವಿಚಾರವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಇಸ್ಲಾಮಿಕ್ ಧಾರ್ಮಿಕ ದತ್ತಿಯ ನಿರ್ವಹಣೆಯಲ್ಲಿ ಭಾರೀ ಬದಲಾವಣೆಗೆ ಸರ್ಕಾರ ಮುಂದಾಗಿದೆ. ಈ ಮೂಲಕ ಅಲಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದೆ. ಮಹಾರಾಷ್ಟ್ರ, ಒಡಿಶಾ ಮತ್ತು ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿರುವ ಕೋಮುಗಲಭೆ ಹಾಗೂ ಹಿಂಸಾಚಾರಗಳನ್ನು ಆರೆಸ್ಸೆಸ್‌ನ ಸಹಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ ತಲೆಗೆ ಕಟ್ಟಲಾಗಿದೆ.

ಶಿಫಾರಸು ಏನು?: ಆರೆಸ್ಸೆಸ್, ಮತ್ತಿತರ ಸಂಘಟನೆಗಳು, ಕೆಲ ವ್ಯಕ್ತಿಗಳಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಬೇಕು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಅಮೆರಿಕ ಸರ್ಕಾರವು ಧಾರ್ಮಿಕ ಸ್ವಾತಂತ್ರ್ಯದಲ್ಲಿ ಸುಧಾರಣೆ ತರುವಂತೆ ಭಾರತದ ಮೇಲೆ ಒತ್ತಡ ಹೇರಬೇಕು. ಅಮೆರಿಕದ ನಾಗರಿಕರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಬೆದರಿಕೆ ಮತ್ತು ಕಿರುಕುಳ ನೀಡುತ್ತಿರುವ ಆರೋಪದ ಮೇಲೆ ಶಸ್ತ್ರಾಸ್ತ್ರ ಪೂರೈಕೆ ನಿಯಂತ್ರಣ ಕಾಯ್ದೆಯ ಸೆಕ್ಷನ್ 6 ಅನ್ನು ಜಾರಿ ಮಾಡಿ ಶಸ್ತ್ರಾಸ್ತ್ರ ಮಾರಾಟ ತಡೆಹಿಡಿಯಬೇಕು ಎಂದು ಅಮೆರಿಕ ಸರ್ಕಾರಕ್ಕೆ ಯುಎಸ್‌ಸಿಐಆರ್‌ಎಫ್ ಶಿಫಾರಸು ಮಾಡಿದೆ.

ಇದನ್ನೂ ಓದಿ: ಒಡಿಶಾದಲ್ಲಿ ರಣ ಭೀಕರ ಸುಂಟರಗಾಳಿಗೆ ಇಬ್ಬರು ಬಲಿ: 70ಕ್ಕೂ ಹೆಚ್ಚು ಮನೆಗಳಿಗೆ ಹಾನಿ: ವೀಡಿಯೋ ವೈರಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಜೆಪಿ ಅಧ್ಯಕ್ಷ ನಿತಿನ್‌, ಜೆಡಿಯು ಅಧ್ಯಕ್ಷ ನಿತೀಶ್‌ಗೆ ಹೊಸ ಹುದ್ದೆ
ಕರ್ನಾಟಕದಲ್ಲಿ ಕಿರು ಸಾಲದ ನೀಡಿಕೆ ಶೇ.34ರಷ್ಟು ಕುಸಿತ