
ಈತನ ಕೈಗಳು ನಡುಗುತ್ತಿವೆ. ಕಣ್ಣುಗಳಲ್ಲಿ ಸಾವಿನ ಭಯವಿದೆ. ಆದರೂ ಹೊಟ್ಟೆ ತುಂಬ ಊಟ ಮಾಡುವ ಹಂಬಲವಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಸಾವು ಈತನನ್ನು ಆವರಿಸುತ್ತದೆ. ಅದು ಬಯಸಿ ಬಂದ ಸಾವಲ್ಲ, ಕಾನೂನು ಕೊಟ್ಟಿರುವ ಶಿಕ್ಷೆ, ಅದು ಗ*ಲ್ಲು ಶಿಕ್ಷೆ. ಈ ಊಟ ಮುಗಿಯುತ್ತಿದ್ದಂತೆಯೇ ಆತ ನೇ*ಣಿಗೆ ಕೊರಳು ಒಡ್ಡಬೇಕು, ಅದು ಆತನ ಇಚ್ಛೆಯಲ್ಲ, ಅವನಿಗೆ ಬದುಕುವ ಆಸೆ ಇದೆ. ಆದರೂ ಭೂಮಿಯ ಮೇಲೆ ಜೀವನದ ಕೊನೆಯ ಊಟ ಮಾಡುವ ಹಂಬಲವೂ ಇದೆ. ಬಟ್ಟಲಿನಲ್ಲಿ ಇದ್ದ ಅನ್ನದ ಅಗುಳು ಮುಗಿಯುತ್ತಿದ್ದಂತೆಯೇ ಈ ಭೂಮಿಯ ಮೇಲಿನ ಋಣವೂ ತೀರಿಬಿಡುತ್ತದೆ. ಹೇಗಿರಬೇಡ ಈತನ ಮಾನಸಿಕ ಸ್ಥಿತಿ?
'ಇನ್ನು ಕೆಲವೇ ಕ್ಷಣಗಳಲ್ಲಿ ನೀನು ಸಾಯುತ್ತಿ' ಎಂದು ಯಾರಿಗಾದರೂ ಹೇಳಿದರೆ, ಅವರ ಮಾನಸಿಕ ಸ್ಥಿತಿ ಹೇಗಿರುತ್ತೆ ಎಂದು ಊಹಿಸಿಕೊಳ್ಳುವುದೂ ಕಷ್ಟ ಅಲ್ಲವೇ, ಎಂಥದ್ದೇ ಘೋರ ಕಾಯಿಲೆಯಿಂದ ಬಳಲುತ್ತಿದ್ದರೂ, ವೃದ್ಧಾಪ್ಯದಲ್ಲಿ ಇದ್ದರೂ, ಉಸಿರಷ್ಟೇ ಹಿಡಿದು ಇಟ್ಟುಕೊಂಡಿದ್ದರೂ ನಿನ್ನ ಸಾವು ಕಣ್ಣ ಮುಂದೆ ಇದೆ ಅಂದಾಗ ಆ ವ್ಯಕ್ತಿಗೆ ಒಂದು ಕ್ಷಣವಾದರೂ ಬದುಕುವ ಆಸೆ ಹುಟ್ಟಬಹುದು. ಸಾವನ್ನು ನೆನೆಸಿಕೊಂಡರೇನೇ ಭಯಾನಕ ಎನ್ನಿಸಿಬಿಡುತ್ತದೆ. ಇಷ್ಟಪಟ್ಟು ಸಾವಿನ ಹಾದಿ ಹಿಡಿಯುವವರಿಗೂ ಬಹುಶಃ ಇದೇ ರೀತಿ ಅನ್ನಿಸಬಹುದು. ಆದರೆ ಬದುಕಿಗಿಂತ ಸಾವೇ ಮೇಲು ಎನ್ನುವ ಆ ಕ್ಷಣದ ನಿರ್ಧಾರದಿಂದ ಸಾವಿನ ಹಾದಿ ತುಳಿಯುತ್ತಾರೆ.
ಆದರೆ ಇಲ್ಲಿ ಹಾಗಲ್ಲ, ಈ ಯುವಕನಿಗೆ ಗಲ್ಲು ಶಿಕ್ಷೆಯಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಆತನನ್ನು ನೇ*ಣುಗಂಬಕ್ಕೆ ಏರಿಸುತ್ತಾರೆ. (ಇದಾಗಲೇ ಈತನಿಗೆ ಶಿಕ್ಷೆಯಾಗಿದೆ). ಆ ಸಂದರ್ಭದಲ್ಲಿ ಕಾನೂನಿನ ಪ್ರಕಾರ, ನಿನ್ನ ಕೊನೆಯ ಆಸೆ ಏನು ಎಂದು ಕೇಳುತ್ತಾರೆ, ಆಗ ಈತ ಹೇಳಿದ್ದು ಹೊಟ್ಟೆ ತುಂಬಾ ಊಟ ಎಂದು. ಬಹುಶಃ ಎಂಥವರಿಗೂ ಈ ಮಾತು ಕೇಳಿದರೆ ಕರುಳು ಚುರುಕ್ ಎನ್ನದೇ ಇರಲಾರದು. ಯಾವುದೇ ಘೋರಾತಿಘೋರ ಅಪರಾಧ ಮಾಡಿದರೂ, ಈ ವಿಡಿಯೋ ಒಂದು ಕ್ಷಣ ಕಣ್ಣೀರು ತರಿಸುವುದಂತೂ ದಿಟ.
ಅಷ್ಟಕ್ಕೂ ಇದು ಹಳೆಯ ವಿಡಿಯೋ. ಈತನ ಹೆಸರು ನಾಗೇಂದ್ರನ್ ಧರ್ಮಲಿಂಗಮ್, ಭಾರತದ ಮೂಲದವನು. ಮಲೇಷಿಯಾದ ನಿವಾಸಿಯಾಗಿದ್ದ. ಈತನನ್ನು ಮಾದಕ ವಸ್ತು ಸಾಗಾಣಿಕೆ ಆರೋಪದಲ್ಲಿ ಸಿಂಗಪುರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಅಲ್ಲಿ ಮಾದಕ ವಸ್ತು ಸಾಗಾಣಿಕೆಗೆ ಕಠಿಣಾತಿಕಠಿಣ ಶಿಕ್ಷೆ ಇದೆ. ಅದೇ ಗಲ್ಲು ಶಿಕ್ಷೆ. ಆದರೆ, ನಾಗೇಂದ್ರನ್ ಬುದ್ಧಿಮಾಂದ್ಯ ಎಂದು ಹೇಳಲಾಗಿತ್ತು. ಆತನನ್ನು ಈ ಕೇಸ್ನಲ್ಲಿ ಸಿಲುಕಿಸಲಾಗಿತ್ತು ಎನ್ನಲಾಗಿದೆ. ಅವನಿಗೆ ಈ ಬಗ್ಗೆ ಅರಿವೇ ಇರಲಿಲ್ಲ. ಮಾದಕ ವಸ್ತು ಜಾಲವು ಈತನನ್ನು ಈ ಕೇಸ್ನಲ್ಲಿ ಸಿಲುಕಿಸಿತ್ತು ಎನ್ನುವ ವರದಿಗಳೂ ಇವೆ.
ಈತನ ತೊಡೆಗೆ 42.7 ಗ್ರಾಂನಷ್ಟು ಹೆರಾಯಿನ್ ಬಂಡಲ್ ಕಟ್ಟಲಾಗಿತ್ತು. ಅದನ್ನು ಪೊಲೀಸರು ಪತ್ತೆ ಮಾಡಿದ್ದರು. ಈತ ಬುದ್ಧಿಮಾಂದ್ಯ, ಇವನಿಗೆ ಅದರ ಅರಿವೇ ಇಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದ್ದರೂ, ಅದನ್ನು ಅಲ್ಲಿಯ ಕೋರ್ಟ್ ಮಾನ್ಯ ಮಾಡಿರಲಿಲ್ಲ. ತನ್ನ ಮಗನ ಮರಣದಂಡನೆಯನ್ನು ನಿಲ್ಲಿಸುವಂತೆ ನಾಗೇಂದ್ರನ್ ಅವರ ತಾಯಿ ಮಾಡಿದ ಪ್ರಯತ್ನವನ್ನು ಮೇಲ್ಮನವಿ ನ್ಯಾಯಾಲಯ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವನಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಅತ್ಯಂತ ದುಃಖಕರ ಸಂಗತಿ ಎಂದರೆ ಆತ ಬುದ್ಧಿಮಾಂದ್ಯ ಎಂದು ಸಾಬೀತು ಮಾಡಲು ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಕೋರ್ಟ್ಗೆ ಸಿಕ್ಕಿರಲಿಲ್ಲ. ಅದರ ದಾಖಲೆ ಇಲ್ಲದೇ ಇದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದಿತ್ತು ಕೋರ್ಟ್. ಆತ ಅಪರಾಧ ಎಸಗುವ ಸಮಯದಲ್ಲಿ ಅವನಿಗೆ ಸರಿಯಾದ ತಿಳಿವಳಿಕೆ ಇತ್ತು, ಆದ್ದರಿಂದ ಇದನ್ನು ಮನ್ನಿಸಲು ಸಾಧ್ಯವಿಲ್ಲ ಎಂದು ಗ*ಲ್ಲು ಶಿಕ್ಷೆ ನೀಡಿತು. ಆ ಸಮಯದಲ್ಲಿ ಆತ ಕೊನೆಯ ಇಚ್ಛೆಯಾಗಿ ಹೊಟ್ಟೆ ತುಂಬಾ ಊಟ ಕೇಳಿದ್ದ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ