
ನವದೆಹಲಿ: 13 ವರ್ಷಗಳ ಹಿಂದೆ 4ನೇ ಮಹಡಿಯಿಂದ ಬಿದ್ದ ಪರಿಣಾಮ ಮೆದುಳಿಗೆ ಪೆಟ್ಟಾಗಿ ಕೋಮಾಗೆ ಜಾರಿದ್ದ ಹರೀಶ್(32) ರಾಣಾಗೆ ದಯಾಮರಣ ನೀಡಲು ಸುಪ್ರೀಂ ಕೋರ್ಟ್ ಅನುಮತಿಸಿದ ಬೆನ್ನಲ್ಲೇ ಪ್ಯಾಸಿವ್ ಯೂಥನೇಷಿಯಾ (ಜೀವನಾಧಾರಗಳನ್ನು ಹಿಂಪಡೆಯುವ) ಪ್ರಕ್ರಿಯೆಯನ್ನು ಶನಿವಾರದಿಂದ ಆರಂಭಿಸಲಾಗಿದೆ.
ಈ ಪ್ರಕ್ರಿಯೆಗಾಗಿ ಅವರನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿದೆ. ಅಲ್ಲಿ ವಿಶೇಷ ವೈದ್ಯರ ತಂಡವು ರಾಣಾಗೆ ದಯಾಮರಣ ಕೊಡುವ ವೈದ್ಯಕೀಯ ಪ್ರಕ್ರಿಯೆಯನ್ನು ಶುರು ಮಾಡಿದ್ದಾರೆ. ಇದು ಮುಗಿಯುವ ವರೆಗೂ ರಾಣಾ ಅವರ ಆರೈಕೆಯಲ್ಲೇ ಇರಲಿದ್ದಾರೆ. ಕರ್ನಾಟಕದ ಅರುಣಾ ಶಾನ್ಭಾಗ್ ಪ್ರಕರಣದಲ್ಲಿ ದಯಾಮಣವನ್ನು ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ಅದಕ್ಕೆ ಅನುಮತಿಸಿದ ಮೊದಲ ಕೇಸ್ ಇದಾಗಿದೆ.
ದಯಾಮರಣದಲ್ಲಿ ಆ್ಯಕ್ಟಿವ್ (ಇಂಜೆಕ್ಷನ್ ಮೂಲಕ ಸಾವಿಗೆ ಎಡೆಮಾಡಿಕೊಡುವುದು) ಮತ್ತು ಪ್ಯಾಸಿವ್ (ಜೀವನಾಧಾರ ತೆಗೆಯುವುದು) ಎಂಬೆರಡು ವಿಧಾನಗಳಿದ್ದು, ರಾಣಾರನ್ನು ಎರಡನೇ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ರೋಗಿಯ ಆರೋಗ್ಯದಲ್ಲಿ ಚೇತರಿಕೆಯು ಸಾಧ್ಯವೇ ಇಲ್ಲ ಎಂಬ ಸ್ಥಿತಿಯನ್ನು ತಲುಪಿದಾಗ ಪ್ಯಾಸಿವ್ ಯೂಥನೇಷಿಯಾ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ. ಇದರಡಿಯಲ್ಲಿ ರೋಗಿಯನ್ನು ಜೀವಂತವಾಗಿಡಲು ನೀಡಲಾಗಿದ್ದ ವೆಂಟಿಲೇಟರ್, ಆಹಾರದ ಟ್ಯೂಬ್, ಔಷಧಿ ನೀಡುವ ಟ್ಯೂಬ್ ಇತ್ಯಾದಿ ಆಧಾರಗಳನ್ನು ಒಂದೊಂದಾಗಿ ಹಿಂಪಡೆಯಲಾಗುತ್ತದೆ.
2013ರಲ್ಲಿ ಪಂಜಾಬ್ ವಿವಿಯ ವಿದ್ಯಾರ್ಥಿಯಾಗಿದ್ದ ರಾಣಾ, ತಾವು ಉಳಿದುಕೊಂಡಿದ್ದ ಪಿ.ಜಿ.ಯ 4ನೇ ಮಹಡಿಯಿಂದ ಬಿದ್ದಿದ್ದರು. ಪರಿಣಾಮ ಅವರ ಮೆದುಳಿಗೆ ಗಂಭೀರ ಏಟು ಬಿದ್ದಿದ್ದು, ಕೋಮಾಗೆ ಜಾರಿದ್ದರು. ಅಂದಿನಿಂದ ಇಂದಿನ ವರೆಗೆ ನಿಸ್ತೇಜವಾಗಿ ಮಲಗಿದ್ದ ರಾಣಾಗೆ ಈ ಸಾವು-ಬದುಕಿನ ನಡುವಿನ ಹೋರಾಟದಿಂದ ಮುಕ್ತಿ ಕೊಡಿಸುವ ಉದ್ದೇಶದಿಂದ ಅವರ ಪರಿವಾರ ದಯಾಮರಣಕ್ಕೆ ಅನುಮತಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಇದಕ್ಕೊಪ್ಪಿದ ನ್ಯಾಯಾಲಯ, ರಾಣಾಗೆ ಘನತೆಯಿಂದ ಸಾಯುವ ಹಕ್ಕನ್ನು ನೀಡುವ ಮೂಲಕ ಪ್ಯಾಸಿವ್ ಯೂಥನೇಷಿಯಾಗೆ ಅನುಮತಿಸಿತ್ತು.
ಎಲ್ಲರನ್ನೂ ಕ್ಷಮಿಸು, ಹೊರಡುವ ಸಮಯ ಬಂದಿದೆ.…
ಗಾಜಿಯಾಬಾದ್: ಕೋಮಾದಲ್ಲಿರುವ ಹರೀಶ್ ರಾಣಾ ಚೇತರಿಸಿಕೊಳ್ಳುವುದಿಲ್ಲ ಎಂದು ತಿಳಿದಿದ್ದರೂ ಕಳೆದ 13 ವರ್ಷಗಳಿಂದ ಮಗುವಿನಂತೆ ಆರೈಕೆ ಮಾಡಿದ್ದ ಪರಿವಾರ, ಶನಿವಾರ ಅವರಿಗೆ ಅಂತಿಮ ವಿದಾಯ ಹೇಳಿದೆ. ಯೂಥನೇಷಿಯಾಗಾಗಿ ಗಾಜಿಯಾಬಾದ್‌ನಿಂದ ದೆಹಲಿಗೆ ಕರೆದೊಯ್ಯುವ ಮುನ್ನ ರಾಣಾರ ಪರಿವಾರವೆಲ್ಲಾ ಅವರ ಸುತ್ತ ಸೇರಿತ್ತು. ಬ್ರಹ್ಮಾಕುಮಾರಿ ಸಹೋದರಿಯೊಬ್ಬರು ರಾಣಾರ ಹಣೆಗೆ ತಿಲಕವಿಟ್ಟು, ‘ಎಲ್ಲರನ್ನೂ ಕ್ಷಮಿಸಿ ಹಾಗೂ ಎಲ್ಲರಿಂದಲೂ ಕ್ಷಮೆ ಯಾಚಿಸಿ ಮಲಗು. ಇಲ್ಲಿಂದ ಹೊರಡುವ ಸಮಯ ಬಂದಿದೆ’ ಎಂದು ತಲೆ ನೇವರಿಸುತ್ತಾ ಅಂತಿಮ ವಿದಾಯ ಹೇಳಿದರು. ಈ ಮೂಲಕ ಇಹಲೋಕದಿಂದ ಪರಲೋಕದ ಯಾತ್ರೆಗೆ ಅವರನ್ನು ಅಣಿಗೊಳಿಸಿದರು. ಬಳಿಕ ರಾಣಾರನ್ನು ದೆಹಲಿಗೆ ಸಾಗಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ