
ಇಂಜಿನಿಯರಿಂಗ್ ಪದವಿಯಲ್ಲಿ ರಾಜ್ಯಕ್ಕೇ ರ್‍ಯಾಂಕ್ ಪಡೆದಿದ್ದ ಪ್ರತಿಭಾವಂತ ಯುವಕನೊಬ್ಬ, ಸತತ ಪ್ರಯತ್ನದ ನಂತರವೂ ಒಂದು ಸರ್ಕಾರಿ ಕೆಲಸ (Government Job) ಸಿಗದಿದ್ದಕ್ಕೆ ನೊಂದು ಜೀವನವನ್ನೇ ಅಂತ್ಯಗೊಳಿಸಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಮೃತ ಯುವಕನನ್ನು 23 ವರ್ಷದ ಆನಂದ್ ಎಂದು ಗುರುತಿಸಲಾಗಿದೆ. ಆನಂದ್ ಸಾಮಾನ್ಯ ವಿದ್ಯಾರ್ಥಿಯಾಗಿರಲಿಲ್ಲ. 2024ರಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಿಂದ ಬಿಟೆಕ್ (.Tech) ಪದವಿ ಪೂರೈಸಿದ್ದ ಈತ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ್ದ. ಅಷ್ಟೇ ಅಲ್ಲದೆ, ಇಡೀ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದ ಈತನಿಗೆ ಕಳೆದ ಆಗಸ್ಟ್ 13ರಂದು ನಡೆದ ಕಾಲೇಜು ಸಮಾರಂಭದಲ್ಲಿ ಚಿನ್ನದ ಪದಕ (Gold Medal) ನೀಡಿ ಗೌರವಿಸಲಾಗಿತ್ತು. ಇಂತಹ ಪ್ರತಿಭಾನ್ವಿತ ಯುವಕ ಈಗ ಇಹಲೋಕ ತ್ಯಜಿಸಿರುವುದು ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗಿಸಿದೆ.
ಪದವಿ ಮುಗಿದ ನಂತರ ಆನಂದ್ ಸರ್ಕಾರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ. ಇದಕ್ಕಾಗಿ ಆತ ಹಗಲಿರುಳು ಕಷ್ಟಪಟ್ಟು ಓದುತ್ತಿದ್ದ. ರೈಲ್ವೆ (Railway), ಎಸ್‌ಎಸ್‌ಸಿ (SSC), ಬ್ಯಾಂಕ್ ಮತ್ತು ಶಿಕ್ಷಣ ಇಲಾಖೆ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ವಿವಿಧ ಸರ್ಕಾರಿ ಪರೀಕ್ಷೆಗಳನ್ನು ಬರೆದಿದ್ದ. ಆದರೆ, ಪ್ರತಿ ಬಾರಿಯೂ ಅದೃಷ್ಟ ಕೈಕೊಡುತ್ತಿತ್ತು. ಈ ಸತತ ವೈಫಲ್ಯಗಳಿಂದಾಗಿ ಆನಂದ್ ತೀವ್ರ ಮಾನಸಿಕ ಒತ್ತಡಕ್ಕೆ (Mental Pressure) ಒಳಗಾಗಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಹಿರಿಯ ಮಗನ ಮದುವೆ ಮಾತುಕತೆಗಾಗಿ ಮನೆಯವರೆಲ್ಲರೂ ಬಿಹಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಆನಂದ್ ಈ ನಿರ್ಧಾರ ತೆಗೆದುಕೊಂಡಿದ್ದಾನೆ. ಮನೆಗೆಲಸದವರು ಬಂದು ಎಷ್ಟೇ ಕರೆದರೂ ಬಾಗಿಲು ತೆರೆಯದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಬಾಗಿಲು ಒಡೆದು ನೋಡಿದಾಗ ಆನಂದ್ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲೇ ಐದು ಸಾಲಿನ ಡೆತ್ ನೋಟ್ (Death Note) ಪತ್ತೆಯಾಗಿದ್ದು, ಅದರಲ್ಲಿ "ಅಪ್ಪಾ ಕ್ಷಮಿಸಿ, ನಾನು ಸುಮಾರು 50 ಬಾರಿ ಪ್ರಯತ್ನಿಸಿದರೂ ಸರ್ಕಾರಿ ಕೆಲಸ ಸಿಗಲಿಲ್ಲ" ಎಂದು ಬರೆದಿದ್ದಾನೆ.
ಈ ಘಟನೆಯು ದೇಶದ ನಿರುದ್ಯೋಗ (Unemployment) ಸಮಸ್ಯೆ ಮತ್ತು ಯುವಜನತೆಯ ಮೇಲಿರುವ ಕೆರಿಯರ್ ಒತ್ತಡವನ್ನು ಪ್ರತಿಬಿಂಬಿಸುತ್ತಿದೆ. ಪದವಿಗಳಲ್ಲಿ ಟಾಪರ್ ಆಗಿದ್ದರೂ, ಉದ್ಯೋಗ ಮಾರುಕಟ್ಟೆಯಲ್ಲಿನ ಸ್ಪರ್ಧೆ ಮತ್ತು ಸವಾಲುಗಳನ್ನು ಎದುರಿಸಲಾಗದೆ ಪ್ರತಿಭಾವಂತ ಜೀವಗಳು ಬಲಿಯಾಗುತ್ತಿರುವುದು ವಿಪರ್ಯಾಸ.
(ಗಮನಿಸಿ: ಮಾನಸಿಕ ಒತ್ತಡ ಅಥವಾ ಖಿನ್ನತೆಯ ಲಕ್ಷಣಗಳಿದ್ದರೆ ತಕ್ಷಣ ಸಹಾಯ ಪಡೆಯಿರಿ. ನಿಮ್ಮ ಪ್ರಾಣ ಅಮೂಲ್ಯವಾದುದು. ಸಹಾಯವಾಣಿ ಸಂಖ್ಯೆಗಳು: 1056, 0471-2552056)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ