
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ದೇಶದ ರಾಜಧಾನಿಯಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ. ನೀಟ್ (NEET-UG) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ 'ಕಾಕ್ರೋಚ್ ಜನತಾ ಪಕ್ಷ' (CJP) ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆದಿದೆ. ಸದ್ಯ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿರುವ ಪ್ರತಿಭಟನೆಗೆ ಹಲವು ಪಕ್ಷಗಳು ಬೆಂಬಲ ಸೂಚಿಸಿವೆ. ಪರಿಸ್ಥಿತಿ ಕೈ ಮೀರಿ ಹೋಗಿದ್ದು ದೆಹಲಿಯ ಜಂತರ್ ಮಂತರ್, ಸಂಸತ್ ಭವನ ಮತ್ತು ಸುತ್ತಮುತ್ತ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ. ಸಂಸತ್ ಭವನದ ಹೊರಗಡೆ ಕಾಕ್ರೋಚ್ ಪಾರ್ಟಿ ಪ್ರತಿಭಟನೆ ನಡೆದರೆ ಒಳಗಡೆ ಸದನದಲ್ಲಿ ವಿಪಕ್ಷಗಳಿಂದ ಆಡಳಿತ ಪಕ್ಷದ ಮೇಲೆ ಮಾತಿನ ಪ್ರಹಾರವೇ ನಡೆಯುತ್ತಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಿಂದ ಆರಂಭವಾದ ಈ ಮೆರವಣಿಗೆಯಲ್ಲಿ ಕನಿಷ್ಠ 10,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಭಾಗವಹಿಸಿದ್ದರು. ಪ್ರತಿಭಟನಾಕಾರರು ಸಂಸತ್ ಭವನದ ಕಡೆಗೆ ಮುನ್ನುಗ್ಗುತ್ತಿದ್ದಂತೆ ಮೆಟ್ರೋ ನಿಲ್ದಾಣವನ್ನು ಅಧಿಕಾರಿಗಳು ತಕ್ಷಣವೇ ಸ್ಥಗಿತಗೊಳಿಸಿದರು. ಆದರೆ ಆಕ್ರೋಶಿತ ಪ್ರತಿಭಟನಾಕಾರರು ಮೆಟ್ರೋ ನಿಲ್ದಾಣದ ಬಂದ್ ಆಗಿದ್ದ ಗೇಟ್‌ಗಳನ್ನು ಹಾರಿ ಒಳಗೆ ನುಗ್ಗಿದ್ದಾರೆ. ಪೊಲೀಸರು ಇವರನ್ನು ತಡೆಯಲು ತೀವ್ರ ಹರಸಾಹಸ ಪಡಬೇಕಾಯಿತು. ಭದ್ರತೆಯ ದೃಷ್ಟಿಯಿಂದ ಸಂಸತ್ ಸಂಕೀರ್ಣದ ಬೃಹತ್ ಕಬ್ಬಿಣದ ಗೇಟ್‌ಗಳನ್ನು ಮುಚ್ಚಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನಗಳು ಹಾಗೂ ಜಲಫಿರಂಗಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಕಳೆದ ಮೂರು ವಾರಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಲಡಾಖ್‌ನ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಶನಿವಾರ ಪೊಲೀಸರು ಬಲವಂತವಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿದ್ದರೂ ವಾಂಗ್‌ಚುಕ್ ತಮ್ಮ ಉಪವಾಸವನ್ನು ಮುಂದುವರಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿನ ಇತ್ತೀಚಿನ ಸರಣಿ ವೈಫಲ್ಯಗಳ ಹೊಣೆಯನ್ನು ಸರ್ಕಾರ ಹೊತ್ತುಕೊಳ್ಳುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಘೋಷಿಸಿದ್ದಾರೆ. ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ಸ್ಥಳಾಂತರಿಸಿದ ಹೊರತಾಗಿಯೂ, ತಮ್ಮ ಹೋರಾಟ ಮುಂದುವರಿಯಲಿದ್ದು, ಪ್ರಧಾನಿ ಮೋದಿ ರಾಜೀನಾಮೆ ನೀಡಲೇಬೇಕು ಎಂದು ಸಿಜೆಪಿ (CJP) ಟ್ವೀಟ್ ಮಾಡಿದೆ.
ನವದೆಹಲಿ ಜಿಲ್ಲೆಯಾದ್ಯಂತ ಸೆಕ್ಷನ್ 163 BNSS (ಹಳೆಯ ಸೆಕ್ಷನ್ 144 CrPC) ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಪ್ರತಿಭಟನಾಕಾರರು ಬ್ಯಾನರ್‌ಗಳು ಹಾಗೂ ಶಹೀದ್ ಭಗತ್ ಸಿಂಗ್ ಅವರ ಫೋಟೋಗಳನ್ನು ಹಿಡಿದು ಭದ್ರತಾ ಕವಚಗಳನ್ನು ಭೇದಿಸಲು ಯತ್ನಿಸಿದರು. ಕಾನ್ಸ್ಟಿಟ್ಯೂಷನ್ ಕ್ಲಬ್ ಬಳಿ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿದಾಗ ಇಡೀ ಪ್ರದೇಶ ರಣರಂಗದಂತಾಯಿತು. ಶಿಕ್ಷಣ ಸಚಿವರು ರಾಜೀನಾಮೆ ನೀಡುವವರೆಗೂ ಆಂದೋಲನ ಕೈಬಿಡುವುದಿಲ್ಲ ಎಂದು ವಿದ್ಯಾರ್ಥಿ ಸಂಘಟನೆಗಳು ಪ್ರತಿಜ್ಞೆ ಮಾಡಿವೆ.
ಪ್ರತಿಭಟನೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ.
ಮನೀಶ್ ಸಿಸೋಡಿಯಾ ಭಾಗಿ: ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರು ಸಿಜೆಪಿ ಪ್ರತಿಭಟನೆಯಲ್ಲಿ ನೇರವಾಗಿ ಪಾಲ್ಗೊಂಡರು. ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಅವರು, ಪ್ರಧಾನಿಗಳು ಸದಾ ಮಾತನಾಡುತ್ತಿದ್ದ ದೇಶದ ಯುವಕರು ಇವರೇ. ಇಂದು ಅವರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಿದ್ದಾರೆ, ಈಗಲಾದರೂ ಸರ್ಕಾರ ಅವರ ಧ್ವನಿಯನ್ನು ಆಲಿಸಬೇಕು ಎಂದರು.
ಅಖಿಲೇಶ್ ಯಾದವ್ ಆಕ್ರೋಶ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ನೀಟ್ ವಿದ್ಯಾರ್ಥಿಗಳಿಗೆ ತಕ್ಷಣ ನ್ಯಾಯ ಒದಗಿಸುವುದು ಮತ್ತು ಪ್ರತಿಭಟನಾಕಾರರನ್ನು ಗೌರವಯುತವಾಗಿ ನಡೆಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಲಾಠಿ, ಅಶ್ರುವಾಯು ಹಾಗೂ ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಈ ಹೋರಾಟದ ಕಿಡಿ ಮಹಾರಾಷ್ಟ್ರಕ್ಕೂ ವ್ಯಾಪಿಸಿದೆ. ಸೋನಮ್ ವಾಂಗ್‌ಚುಕ್ ಮತ್ತು ಕಾಕ್ರೋಚ್ ಜನತಾ ಪಕ್ಷದ ಹೋರಾಟವನ್ನು ಬೆಂಬಲಿಸಿ ಸೋಮವಾರ ನಾಗ್ಪುರದ ಸಂವಿಧಾನ್ ಚೌಕದಲ್ಲಿ ನೂರಾರು ವಿದ್ಯಾರ್ಥಿಗಳು, ಯುವಕರು ಹಾಗೂ ಹಿರಿಯ ನಾಗರಿಕರು ಬೃಹತ್ ಪ್ರದರ್ಶನ ನಡೆಸಿದರು. ಪರೀಕ್ಷಾ ಅಕ್ರಮ ಎಸಗಿದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ನಾಗ್ಪುರದ ಪ್ರತಿಭಟನಾಕಾರರು, ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಚಾರ್ಜ್ ಅನ್ನು ತೀವ್ರವಾಗಿ ಖಂಡಿಸಿದರು. ಪ್ರಸ್ತುತ ದೆಹಲಿಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ