ಅಯೋಧ್ಯೆ ತೀರ್ಪು: ಸಂಧಾನದ ಮೂಲಕವೂ ವಿವಾದ ಬಗೆಹರಿಸಲು ನಡೆದಿತ್ತು ಪ್ರಯತ್ನ

By Web DeskFirst Published Nov 10, 2019, 8:59 AM IST
Highlights

ನಿವೃತ್ತ ನ್ಯಾಯಮೂರ್ತಿ ಕಲೀಫುಲ್ಲಾ ನೇತೃತ್ವದಲ್ಲಿ ರಚನೆಯಾಗಿತ್ತು| ತ್ರಿಸದಸ್ಯ ಸಮಿತಿ ಸುಮಾರು 155 ದಿನಗಳ ಕಾಲ ಸಂಧಾನ ಮಾತುಕತೆಯಲ್ಲಿ ತೊಡಗಿದ್ದ ಸಮಿತಿ|
 

ನವದೆಹಲಿ[ನ.10]: ಅಯೋಧ್ಯೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲು ಸುಪ್ರೀಂಕೋರ್ಟ್ ದೈನಂದಿನ ವಿಚಾರಣೆಗೆ ನಿರ್ಧರಿಸಿದ ಬಳಿಕವೂ ಸಂಧಾನದ ಮೂಲಕ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಯತ್ನವನ್ನು ಮುಂದುವರೆಸಿತ್ತು. ಈ ಮೂಲಕ ಹಲವು ಶತಮಾನಗಳ ಹಿಂದಿನ ಭಾವನಾತ್ಮಕ ವಿವಾದಕ್ಕೆ ಕಾನೂನು ಚೌಕಟ್ಟಿನಾಚೆಗೆ ಸೌಹಾರ್ದಯುತ ಕೊನೆ ಹಾಡಬೇಕೆಂಬುದು ನ್ಯಾಯಾಲಯದ ಉದ್ದೇಶವಾಗಿತ್ತು.  ಈ ನಿಟ್ಟಿನಲ್ಲಿ ನ್ಯಾಯಾಲಯವು ನಿವೃತ್ತ ನ್ಯಾಯಾಧೀಶ ಎಫ್‌ಎಂಐ ಕಲೀಫುಲ್ಲಾ ನೇತೃತ್ವದ ತ್ರಿಸದಸ್ಯರ ಸಮಿತಿ ರಚಿಸಿತ್ತು.

ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿ ಶನಿವಾರ ತೀರ್ಪು!

ಮೂವರ ಸಮಿತಿ: 

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಫ್‌ಎಂಐ ಕಲೀಫುಲ್ಲಾ, ಹಿರಿಯ ನ್ಯಾಯವಾದಿ ಶ್ರೀರಾಮ್ ಪಂಚು ಮತ್ತು ಆಧ್ಯಾತ್ಮಿಕ ಗುರು ಶ್ರೀ ಶ್ರೀರವಿಶಂಕರ್ ಗುರೂಜಿ ಅವರು ಸುಪ್ರೀಂ ಕೋರ್ಟ್ ನೇಮಿಸಿದ್ದ ಸಂಧಾನ ಸಮಿತಿಯಲ್ಲಿದ್ದರು. ಮಾ.8 ರಂದು ರಚನೆಗೊಂಡ ಈ ಸಮಿತಿಯು ಉತ್ತರಪ್ರದೇಶದ ಫೈಜಾಬಾದ್‌ನಲ್ಲಿ 155 ದಿನಗಳ ಸುದೀರ್ಘ ಸಮಾಲೋಚನೆ ನಡೆಸಿದ್ದು ವಿಶೇಷ. ಗೌಪ್ಯವಾಗಿ ಆದರೆ ಇನ್‌ಕ್ಯಾಮೆರಾ(ವಿಡಿಯೋ ಚಿತ್ರೀಕರಣ)ದೊಂದಿಗೆ ನಡೆದ ಸಂಧಾನ ಮಾತುಕತೆ ಆರಂಭದಲ್ಲಿ ಉತ್ತಮ ಪ್ರಗತಿ ಕಂಡಿತಾದರೂ ಜುಲೈ ಅಂತ್ಯದ ವೇಳೆಗೆ ಕೆಲಕಾರಣಗಳಿಂದಾಗಿ ವೈಫಲ್ಯದ ಹಾದಿ ಹಿಡಿಯಿತು. ಈ ಸಂಬಂಧ ನ್ಯಾಯಾಲಯಕ್ಕೂ ಸಮಿತಿ ವರದಿ ನೀಡಿದ್ದು ಅದರಂತೆ ಆ.2 ರಿಂದ ಸುಪ್ರೀಂ ಕೋರ್ಟ್ ವಿವಾದಕ್ಕೆ ಸಂಬಂಧಿಸಿ ಸಂಧಾನ ಮಾರ್ಗ ಕೈಬಿಟ್ಟು ದೈನಂದಿನ ವಿಚಾರಣೆಗೆ ಒತ್ತು ನೀಡಿತು. 

ಅಯೋಧ್ಯೆ ತೀರ್ಪಿಗೆ ಎಎಸ್ಐ ಉತ್ಖನನವೇ ಪ್ರಮುಖ ಆಧಾರ

ಏತನ್ಮಧ್ಯೆ, ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟಲ್ಲಿ 25 ದಿನಗಳ ವಿಚಾರಣೆ ನಡೆಯುತ್ತಿದ್ದಾಗ ಪ್ರಕರಣದಲ್ಲಿ ಅರ್ಜಿದಾರರಲ್ಲಿ ಒಬ್ಬರಾದ ನಿರ್ವಾಣ ಅಖಾಡ ಮತ್ತು ಸುನ್ನಿ ವಕ್ಫ್ ಬೋರ್ಡ್ ಮತ್ತೆ ಮಾತುಕತೆಯತ್ತ ಒಲವು ತೋರಿಸಿತು. ನ್ಯಾಯಾಲಯ ಈ ಮನವಿಯನ್ನು ಪುರಸ್ಕರಿಸಿದರೂ ಕೂಡ ಎರಡನೇ ಹಂತದ ಈ ಸಂಧಾನ ಪ್ರಕ್ರಿಯೆಯೂ ದಡಸೇರಲಿಲ್ಲ. ನಿವೃತ್ತ ನ್ಯಾಯಮೂರ್ತಿ ಕಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಯ ಕಾರ್ಯಕ್ಕೆ ಸುಪ್ರೀಂ ಕೋರ್ಟ್‌ನಿಂದ ಕೂಡ ಮೆಚ್ಚುಗೆ ವ್ಯಕ್ತವಾಗಿದೆ. ಒಂದು ಹಂತದಲ್ಲಿ ಸಮಿತಿಯು ವಿವಾದಕ್ಕೆ ಕೊನೆಹಾಡುವಲ್ಲಿ ಬಹುತೇಕ ಯಶಸ್ವಿಯಾಗಿತ್ತು. ಹೀಗಾಗಿ ಸಮಿತಿಯ ಈಕಾರ್ಯವನ್ನು ನಾವು ಶ್ಲಾಘಿಸುತ್ತೇವೆ ಎಂದಿದೆ ಕೋರ್ಟ್.

ಸಂಧಾನ ಸಮಿತಿಗೆ ಸುಪ್ರೀಂ ಪ್ರಶಂಸೆ 

ಶತಮಾನದಷ್ಟು ಹಳೆಯದಾದ ಅಯೋಧ್ಯೆ ರಾಮಜನ್ಮಭೂಮಿ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಯತ್ನಿಸಿದ್ದ ನ್ಯಾ| ಎಫ್.ಎಂ.ಐ. ಖಲೀಫುಲ್ಲಾ ನೇತೃತ್ವದ ಸಮಿತಿಯ ಕಾರ್ಯಕ್ಕೆ ಸುಪ್ರೀಂ ಕೋರ್ಟ್‌ ಪ್ರಶಂಸೆ ವ್ಯಕ್ತಪಡಿಸಿದೆ. ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಯು ವಿವಾದವನ್ನು ಪರಿಹರಿಸುವ ಸನಿಹಕ್ಕೆ ಬಂದಿತ್ತು. ಆದರೆ ಸಾಧ್ಯವಾಗಲಿಲ್ಲಎಂದು ಹೇಳಿದೆ. 

ಮಸೀದಿ ಒಡೆದಿದ್ದು ತಪ್ಪು ಎಂದಾದ್ರೆ ಪರಿಹಾರ ಹೇಳ್ಬೋದಿತ್ತು: ದೇವೇಗೌಡ

ನ್ಯಾಯಾಲಯದ ಹೊರಗೆ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಖಲೀಫುಲ್ಲಾ ನೇತೃತ್ವದ ಸಮಿತಿಯನ್ನು ಸುಪ್ರೀಂಕೋರ್ಟ್‌ ರಚಿಸಿತ್ತು. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ ಆಶ್ರಮದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಹಾಗೂ ಮದ್ರಾಸ್ ಹೈಕೋರ್ಟ್‌ ವಕೀಲ ಶ್ರೀರಾಮ್ ಪಾಂಚು ಅವರು ಸಮಿತಿಯಲ್ಲಿದ್ದರು. ಹಲವು ತಿಂಗಳ ಕಾಲ ಸಮಿತಿ ಸಭೆ ನಡೆಸಿತ್ತಾದರೂ ಪರಿಹಾರ ಸಿಕ್ಕಿರಲಿಲ್ಲ.
 

click me!