ಹಳ್ಳಿ ‘ಕೊರೋನಾ’ ಮದ್ದಿಗೆ ಆಂಧ್ರಪ್ರದೇಶ ಸರ್ಕಾರ ಓಕೆ!

By Kannadaprabha NewsFirst Published Jun 1, 2021, 8:29 AM IST
Highlights

* ಹಳ್ಳಿ ‘ಕೊರೋನಾ’ ಮದ್ದಿಗೆ ಆಂಧ್ರ ಓಕೆ

* ಆನಂದಯ್ಯನ ಆಯುರ್ವೇದ ಔಷಧಕ್ಕೆ ಆಂಧ್ರ ಸರ್ಕಾರ ಅನುಮತಿ

* ವೈದ್ಯರು ಸೂಚಿಸಿದ ಔಷಧದ ಜತೆ ಇದನ್ನು ಬಳಸಬಹುದು

* ಅಡ್ಡ ಪರಿಣಾಮ ಇಲ್ಲದ ‘ಕೃಷ್ಣಪಟ್ಟಣಂ ಹಳ್ಳಿ ಮದ್ದು’

ಮರಾವತಿ(ಜೂ.01): ಕೆಲ ದಿನಗಳ ಹಿಂದೆ ಭಾರೀ ಸುದ್ದಿಯಾಗಿದ್ದ ಆನಂದಯ್ಯನ ‘ಕೊರೋನಾ ಆಯುರ್ವೇದ ಔಷಧ’ ಬಳಕೆ ಆಂಧ್ರ ಪ್ರದೇಶ ಸರ್ಕಾರ ಸೋಮವಾರ ಅನುಮತಿ ನೀಡಿದೆ.

ನೆಲ್ಲೂರು ಜಿಲ್ಲೆಯ ಕಷ್ಣಪಟ್ಟಣಂ ಗ್ರಾಮದ ಆಯುರ್ವೇದ ವೈದ್ಯ ಆನಂದಯ್ಯ ಸಿದ್ಧಪಡಿಸಿರುವ ಔಷಧವಿ ಕೊರೋನಾವನ್ನು ಅಚ್ಚರಿಯ ರೀತಿಯಲ್ಲಿ ಗುಣಪಡಿಸಲಿದೆ ಎಂಬ ಊಹಾಪೋಹ ಹರಡಿ, ‘ಕೃಷ್ಣಪಟ್ಟಣಂ ಹಳ್ಳಿ ಮದ್ದು’ ಭಾರೀ ಪ್ರಸಿದ್ಧಿ ಪಡೆದುಕೊಂಡಿದೆ. ಈ ಔಷಧವನ್ನು ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಕೃಷ್ಣಪಟ್ಟಣಂ ಗ್ರಾಮಕ್ಕೆ ಜನರು ದೌಡಾಯಿಸಿದ್ದರು. ಈ ಹಿನ್ನೆಲೆಯಲ್ಲಿ ತಜ್ಞರ ತಂಡ ಗ್ರಾಮಕ್ಕೆ ಭೇಟಿ ನೀಡಿ ಔಷಧಿಯನ್ನು ಪರೀಕ್ಷೆಗೆ ಒಳಪಡಿಸಿತ್ತು.

ಕೊರೋನಾಗೆ ಆಂಧ್ರದ ಹಳ್ಳಿಮದ್ದು, ಸರ್ಕಾರಕ್ಕೆ ಕೋರ್ಟ್‌ ಮಹತ್ವದ ಆದೇಶ!

‘ಇದು ಕೊರೋನಾ ಗುಣಪಡಿಸುವ ಔಷಧ ಎಂದೇನೂ ಸಾಬೀತಾಗಿಲ್ಲ’ ಎಂದು ಆಯುರ್ವೇದ ಸಂಶೋಧನಾ ಸಂಸ್ಥೆ ಸ್ಪಷ್ಟಪಡಿಸಿದೆ. ಆದರೆ, ಈ ಔಷಧ ಸೇವನೆಯಿಂದ ಜನರ ಮೇಲೆ ಯಾವುದೇ ಅಡ್ಡ ಪರಿಣಾಮ ಕಂಡುಬಂದಿಲ್ಲ ಎಂದು ಅದು ಹೇಳಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯ ವೇಳೆ ಈ ಸಾಂಪ್ರದಾಯಿಕ ಔಷಧ ಬಳಕೆಗೆ ಅನುಮತಿ ನೀಡಲಾಗಿದೆ. ಈ ಔಷಧವನ್ನು ಪಿ, ಎಲ್‌ ಹಾಗೂ ಎಫ್‌ ಎಂಬ ಮೂರು ವಿಧದಲ್ಲಿ ವಿಂಗಡಿಸಲಾದೆ. ಜನರು ವೈದ್ಯರು ಸೂಚಿಸಿದ ಕೊರೋನಾ ಔಷಧದ ಜೊತೆಗೆ ಆನಂದಯ್ಯನ ಔಷಧಿಯನ್ನು ಬಳಕೆ ಮಾಡಬಹುದು. ಅದು ಜನರ ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು ಎಂದು ಸರ್ಕಾರ ತಿಳಿಸಿದೆ.

ಕೊರೋನಾಕ್ಕೆ ಗಿಡಮೂಲಿಕೆ ಮದ್ದು, ಸಾಗರೋಪಾದಿಯಲ್ಲಿ ಈ ಹಳ್ಳಿಗೆ ಬಂದ್ರು!

ಕಣ್ಣಿನ ಡ್ರಾಪ್‌ಗಿಲ್ಲ ಅನುಮತಿ:

ಇದೇ ವೇಳೆ ಆನಂದಯ್ಯ ಸಿದ್ಧಪಡಿಸಿರುವ ಕಣ್ಣಿನ ಡ್ರಾಪ್‌ ಬಳಕೆಗೆ ಅನಮತಿ ನೀಡಿಲ್ಲ. ಆನಂದಯ್ಯ ಸಿದ್ಧಪಡಿಸಿರುವ ಕಣ್ಣಿನ ಹನಿಗಳ ಬಳಕೆಯಿಂದ ಕೆಲವೇ ನಿಮಿಷಗಳಲ್ಲಿ ಆಮ್ಲಜನಕದ ಮಟ್ಟ ಏರಿಕೆ ಆಗಿರುವುದು ಕಂಡು ಬಂದಿತ್ತು. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಕೈಗೊಳ್ಳುವ ಅಗತ್ಯವಿದೆ ಎಂದು ಸರ್ಕಾರ ತಿಳಿಸಿದೆ.

click me!