ಶರದ್‌ ಪವಾರ್‌ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಅಜಿತ್‌ ಪವಾರ್‌: ಅಚ್ಚರಿಗೆ ಕಾರಣವಾದ ಭೇಟಿ

By Kannadaprabha NewsFirst Published Jul 17, 2023, 2:09 PM IST
Highlights

ಶರದ್‌ ಪವಾರ್‌ ಅವರ ಕಾಲಿಗೆ ಬಿದ್ದ ಅಜಿತ್‌ ಪವಾರ್‌, ಬಂಡಾಯ ಎದ್ದಿದ್ದಕ್ಕೆ ಕ್ಷಮೆ ಕೇಳಿದರು ಎಂದು ಮೂಲಗಳು ಹೇಳಿವೆ. ಆದಾಗ್ಯೂ ಅಜಿತ್‌ ಬಣದ ಮಾತುಗಳನ್ನೆಲ್ಲ ಕೇಳಿದ ಪವಾರ್‌ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ತಾಳಿದ್ದರು ಎಂದೂ ತಿಳಿದುಬಂದಿದೆ.

ಮುಂಬೈ (ಜುಲೈ 17, 2023): 2 ವಾರಗಳ ಹಿಂದಷ್ಟೇ ಎನ್‌ಸಿಪಿಯಿಂದ ಬಂಡೆದ್ದು, ಬಿಜೆಪಿ- ಶಿವಸೇನೆ ಮೈತ್ರಿಕೂಟದ ಸರ್ಕಾರ ಸೇರಿದ್ದ ಎನ್‌ಸಿಪಿಯ ಬಂಡಾಯ ನಾಯಕರು ಭಾನುವಾರ ದಿಢೀರನೆ ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಭೇಟಿಯ ವೇಳೆ ಶರದ್‌ ಪವಾರ್‌ ಅವರ ಕಾಲಿಗೆ ಬಿದ್ದ ಅಜಿತ್‌ ಪವಾರ್‌, ಬಂಡಾಯ ಎದ್ದಿದ್ದಕ್ಕೆ ಕ್ಷಮೆ ಕೇಳಿದರು ಎಂದು ಮೂಲಗಳು ಹೇಳಿವೆ.

ಆದಾಗ್ಯೂ ಅಜಿತ್‌ ಬಣದ ಮಾತುಗಳನ್ನೆಲ್ಲ ಕೇಳಿದ ಪವಾರ್‌ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ತಾಳಿದ್ದರು ಎಂದೂ ತಿಳಿದುಬಂದಿದೆ.

ಇದನ್ನು ಓದಿ: ಅಜಿತ್‌ ಸಭೆಗೆ 32, ಪವಾರ್‌ ಸಭೆಗೆ 18 ಶಾಸಕರು ಹಾಜರು; ಎನ್‌ಸಿಪಿ, ಚಿಹ್ನೆ ಹೆಸರು ಬಿಟ್ಟುಕೊಡಲ್ಲ: ಶರದ್‌ ಪವಾರ್ ಖಡಕ್‌ ನುಡಿ

ಭೇಟಿಯಲ್ಲಿ ಆಗಿದ್ದೇನು?:
ಎನ್‌ಸಿಪಿ ಬಂಡಾಯ ಬಣದ ನೇತೃತ್ವ ವಹಿಸಿದ್ದ ಮತ್ತು ಹಾಲಿ ಸಚಿವರಾಗಿರುವ ಅಜಿತ್‌ ಪವಾರ್‌, ಹಸನ್‌ ಮುಶ್ರಿಫ್‌, ಛಗ್ಗನ್‌ ಬುಜ್‌ಬಲ್‌, ಅದಿತಿ ತತ್ಕರೆ, ದಿಲೀಪ್‌ ವಾಲ್ಸೆ, ಸಂಸದ ಪ್ರಫುಲ್‌ ಪಟೇಲ್‌ ಇಲ್ಲಿನ ವೈ.ಬಿ.ಚವ್ಹಾಣ್‌ ಸೆಂಟರ್‌ನಲ್ಲಿ ಶರದ್‌ ಪವಾರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಭೇಟಿ ವೇಳೆ ಶರದ್‌ ಪವಾರ್‌ ಬಣದ ನಾಯಕರಾದ ಜಯಂತ್‌ ಪಾಟೀಲ್‌, ಜಿತೇಂದ್ರ ಅವ್ಹಾಡ್‌ ಕೂಡಾ ಇದ್ದರು.

ಭೇಟಿ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಫುಲ್‌ ಪಟೇಲ್‌, ‘ಇಂದು ನಾವು ನಮ್ಮ ದೇವರು ಮತ್ತು ನಮ್ಮ ನಾಯಕರಾದ ಶರದ್‌ ಪವಾರ್‌ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು ಬಂದಿದ್ದೆವು. ಸಭೆಯೊಂದರಲ್ಲಿ ಭಾಗಿಯಾಗಲು ಶರದ್‌ ಪವಾರ್‌ ಇಲ್ಲಿಗೆ ಆಗಮಿಸಿದ್ದರು. ಹೀಗಾಗಿ ನಾವು ಯಾವುದೇ ಪೂರ್ವಾನುಮತಿ ಪಡೆಯದೆಯೇ ಅವರನ್ನು ಭೇಟಿ ಮಾಡಿದೆವು. ಈ ಭೇಟಿ ವೇಳೆ ನಾವೆಲ್ಲಾ ನಿಮ್ಮನ್ನು ಬಹುವಾಗಿ ಗೌರವಿಸುತ್ತೇವೆ, ಆದರೆ ಎನ್‌ಸಿಪಿ ಒಂದಾಗಿ ಇರಬೇಕು ಎಂಬುದು ನಮ್ಮ ಆಶಯ. ಹೀಗಾಗಿ ಈ ವಿಷಯದಲ್ಲಿ ನೀವು ಕೂಡಾ ಸಾಕಷ್ಟು ಯೋಚಿಸಬೇಕು ಮತ್ತು ಭವಿಷ್ಯದಲ್ಲಿ ನಮಗೆ ನೆರವು ನೀಡಬೇಕು ಎಂದು ಕೋರಿದೆವು. ನಮ್ಮ ಎಲ್ಲಾ ಮಾತುಗಳನ್ನೂ ಶರದ್‌ ಪವಾರ್‌ ಆಲಿಸಿಕೊಂಡರು, ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ’ ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿಗರು 75ಕ್ಕೆ ನಿವೃತ್ತಿ ಆಗ್ತಾರೆ, ನಿಮ್ದು 83 ಆಯ್ತು, ಇನಿಂಗ್ಸ್‌ ಮುಗಿಸಿ: ಶರದ್‌ ಪವಾರ್‌ಗೆ ಅಜಿತ್‌ ಟಾಂಗ್‌

ಆದರೆ ಅಜಿತ್‌ ಪವಾರ್‌ ಅವರು ಶರದ್‌ ಕಾಲಿಗೆ ಬಿದ್ದು ಕ್ಷಮೆ ಕೇಳದ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಕಳೆದ ಶುಕ್ರವಾರವಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಶರದ್‌ ಪವಾರ್‌ ಅವರ ಪತ್ನಿ ಪ್ರತಿಭಾ ಪವಾರ್‌ ಅವರನ್ನು ಅಜಿತ್‌ ಪವಾರ್‌ ಆಸ್ಪತ್ರೆಯಲ್ಲಿ ಭೇಟಿ ಆಗಿದ್ದರು. ಅದರ ಬೆನ್ನಲ್ಲೇ ನಡೆದ ಈ ದಿಢೀರ್‌ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಕಳೆದ ಜುಲೈ 2ರಂದು ಅಜಿತ್‌ ಪವಾರ್‌ ನೇತೃತ್ವದಲ್ಲಿ 9 ಸಚಿವರು ಎನ್‌ಸಿಪಿಯಿಂದ ಬಂಡೆದ್ದು ಬಂದು ಸರ್ಕಾರ ಸೇರಿದ್ದರು. ಜೊತೆಗೆ ತಮಗೆ 40ಕ್ಕೂ ಹೆಚ್ಚು ಶಾಸಕರ ಬೆಂಬಲ ಇದೆ ಎಂದು ಅಜಿತ್‌ ಘೋಷಿಸಿಕೊಂಡಿದ್ದರು. ಅದಾದ ಬಳಿಕ ನಡೆದ ಸಭೆಯಲ್ಲಿ ಶರದ್‌ ಪವಾರ್‌ಗೆ 80 ವರ್ಷವಾದರೂ ಇನ್ನೂ ಅಧಿಕಾರದಿಂದ ಕೆಳಗೆ ಇಳಿಯುವ ಮನಸ್ಸಿಲ್ಲ ಎಂದು ಬಹಿರಂಗವಾಗಿಯೇ ಕಿಡಿಕಾರಿದ್ದರು.

ಇದನ್ನೂ ಓದಿ: ಪವಾರ್‌ ಕದನ: ಅಜಿತ್‌ ಅನರ್ಹತೆಗೆ ಶರದ್‌ ಅಸ್ತ್ರ: ಶರದ್‌ ಬಣದ ಪ್ರಮುಖರ ಅನರ್ಹತೆಗೆ ಅಜಿತ್ ಮೊರೆ; ಯಾರ ಪಾಲಾಗುತ್ತೆ ಪಕ್ಷ?

click me!