
ನವದೆಹಲಿ: ಕೆನಡಾದ ವ್ಯಾಂಕೋವರ್‌ನಿಂದ ವಿಯೆನ್ನಾ ಮೂಲಕ ದೆಹಲಿಗೆ ಬರಬೇಕಿದ್ದ ವಿಮಾನವನ್ನು ಹಾರಿಸಬೇಕಿದ್ದ ಏರ್ ಇಂಡಿಯಾ ಪೈಲಟ್ ಒಬ್ಬರನ್ನು ವಿಮಾನ ಹಾರಾಟಕ್ಕೆ ಸ್ವಲ್ಪ ಸಮಯದ ಮೊಲದು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಮದ್ಯ ಸೇವಿಸಿದ ಅಥವಾ ಮದ್ಯದ ವಾಸನೆ ಬಂದ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ವ್ಯಾಂಕೋವರ್‌ನಲ್ಲಿ ಕರ್ತವ್ಯದಲ್ಲಿಲ್ಲದ ವಿಮಾನದ ಸಿಬ್ಬಂದಿಯೊಬ್ಬರು ಕ್ರಿಸ್‌ಮಸ್ ಹಾಗೂ ಹೊಸವರ್ಷದ ಹಬ್ಬದ ಸಂಭ್ರಮದಲ್ಲಿ ಯಾರೋ ಆಫರ್ ಮಾಡಿದ ವೈನ್ ಅನ್ನು ಅಜಾಗರೂಕತೆಯಿಂದ ಕುಡಿಯುವುದನ್ನು ನೋಡಿದ್ದಾರೆ ಅಥವಾ ಅವರು ಬಾಟಲಿಯನ್ನು ಖರೀದಿಸುವಾಗ ಮದ್ಯದ ವಾಸನೆಯನ್ನು ಕಂಡುಕೊಂಡಿದ್ದಾರೆ. ಇದನ್ನು ನೋಡಿದ ಅವರು ಈ ಬೋಯಿಂಗ್ 777 ಪೈಲಟ್ ಬಗ್ಗೆ ಕೆನಡಾದ ಅಧಿಕಾರಿಗಳಿಗೆ ವರದಿ ಮಾಡಿದ್ದಾರೆ. ಇದಾದ ನಂತರ ಅವರಿಗೆ ಕೆನಡಾದ ಅಧಿಕಾರಿಗಳು ಪರೀಕ್ಷೆ ಮಾಡಿದಾಗ ಅವರು ಪರೀಕ್ಷೆಯಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಕರ್ತವ್ಯದಲ್ಲಿದ್ದ ವಿಮಾನ ಸಿಬ್ಬಂದಿಯೊಬ್ಬರ ಸಮಯಪ್ರಜ್ಞೆಯಿಂದ ಏರ್ ಇಂಡಿಯಾಗೆ ಮುಂದಾಗಬಹುದಿದ್ದ ದೊಡ್ಡ ಅನಾಹುತ ತಪ್ಪಿದೆ.
ಅದೃಷ್ಟವಶಾತ್ ಇದೇ ಸಮಯದಲ್ಲಿ ಈ ವಿಮಾನದ ಪ್ರಯಾಣಿಕರಿಗೆ, ಏರ್ ಇಂಡಿಯಾ ಬೇಗನೆ ಬದಲಿ ಪೈಲಟ್‌ನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದರಿಂದಾಗಿ ಎರಡು ಗಂಟೆಗಳ ವಿಳಂಬದ ನಂತರ ಈ ವಿಮಾನ ವ್ಯಾಂಕೋವರ್‌ನಿಂದ ಪ್ರಯಾಣಿಕರನ್ನು ಹೊತ್ತು ಟೇಕಾಫ್ ಆಗಿದ್ದು, ವಿಯೆನ್ನಾದಲ್ಲಿ ಇಳಿದಿದೆ. ಅಲ್ಲಿಂದ ನಂತರ ಮತ್ತೊಬ್ಬರು ಪೈಲಟ್ ವಿಮಾನವನ್ನು ದೆಹಲಿಗೆ ಹಾರಿಸಿದ್ದಾರೆ. ಈ ಬಗ್ಗೆ ಈಗ ಏರ್ ಇಂಡಿಯಾ ಶಿಸ್ತು ಕ್ರಮಕೈಗೊಂಡಿದ್ದು, ಡ್ರಿಂಕ್ಸ್ ಮಾಡಿದ್ದ ಪೈಲಟ್‌ನ್ನು ಒಂದೆರಡು ದಿನಗಳ ನಂತರ ದೆಹಲಿಗೆ ಕಳುಹಿಸಿ ವಿಚಾರಣೆ ಆರಂಭಿಸಿದೆ. ಘಟನೆ ಬಗ್ಗೆನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (DGCA) ವರದಿ ಮಾಡಲಾಗಿದೆ.
ವಿಮಾನ ನಿಲ್ದಾಣದಲ್ಲಿ ಪೈಲಟ್ ಅಜಾಗರೂಕತೆಯಿಂದ ಮದ್ಯ ಸೇವಿಸಿದ್ದಾನೆ ಮತ್ತು ಡ್ಯೂಟಿ ಫ್ರೀ ಸಿಬ್ಬಂದಿಯೊಬ್ಬರು ಹಾಗೆ ಮಾಡುವುದನ್ನು ನೋಡಿದ್ದಾರೆ ಎಂದು ಕೆಲವು ಮೂಲಗಳು ಹೇಳಿವೆ. ಸಿಬ್ಬಂದಿ ಈ ವಿಚಾರವನ್ನು ಕೆನಡಾದ ಅಧಿಕಾರಿಗಳಿಗೆ ವರದಿ ಮಾಡಿದರು, ನಂತರ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಪೈಲಟ್ ವಿಮಾನವನ್ನು ಚಲಾಯಿಸಬೇಕೇ ಬೇಡವೇ ಎಂದು ಪತ್ತೆಹಚ್ಚಿದರು ಎಂದು ವರದಿಯಾಗಿದೆ.
ಡಿಸೆಂಬರ್ 23 ರಂದು ವ್ಯಾಂಕೋವರ್‌ನಿಂದ ದೆಹಲಿಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನ ಕಾಕ್‌ಪಿಟ್ ಸಿಬ್ಬಂದಿಯಲ್ಲಿ ಒಬ್ಬರನ್ನು ಹೊರಡುವ ಮೊದಲು ಇಳಿಸಿದ ನಂತರ ಕೊನೆಯ ಕ್ಷಣದಲ್ಲಿ ವಿಳಂಬವಾಯಿತು. ವಿಮಾನ ಹಾರಿಸಲಿರುವ ಪೈಲಟ್‌ನ ಫಿಟ್ನೆಸ್ ಬಗ್ಗೆ ಕೆನಡಾದ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದರು. ನಂತರ ಸಿಬ್ಬಂದಿಯನ್ನು ಹೆಚ್ಚಿನ ವಿಚಾರಣೆಗೆ ಕರೆದೊಯ್ಯಲಾಯಿತು. ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಅನುಸಾರವಾಗಿ, ವಿಮಾನವನ್ನು ನಿರ್ವಹಿಸಲು ಪರ್ಯಾಯ ಪೈಲಟ್‌ನನ್ನು ನೇಮಿಸಲಾಯಿತು, ಇದರ ಪರಿಣಾಮವಾಗಿ ವಿಳಂಬವಾಯಿತು ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಬಡವನಿರಬಹುದು ಆದರೆ ಭಿಕಾರಿ ಅಲ್ಲ: ಸ್ವಾಭಿಮಾನಿ ವೃದ್ಧನ ವೀಡಿಯೋ ಭಾರಿ ವೈರಲ್
ಏರ್ ಇಂಡಿಯಾ ತನ್ನ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತಿದೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದೆ. ವಿಚಾರಣೆಯ ಸಮಯದಲ್ಲಿ ಪೈಲಟ್‌ನನ್ನು ಹಾರಾಟದ ಕರ್ತವ್ಯಗಳಿಂದ ತೆಗೆದುಹಾಕಲಾಗಿದೆ. ಅನ್ವಯವಾಗುವ ನಿಯಮಗಳು ಮತ್ತು ನಿಬಂಧನೆಗಳ ಯಾವುದೇ ಉಲ್ಲಂಘನೆಗೆ ಏರ್ ಇಂಡಿಯಾ ಶೂನ್ಯ ಸಹಿಷ್ಣುತಾ ನೀತಿಯನ್ನು ಕಾಯ್ದುಕೊಳ್ಳುತ್ತದೆ. ತನಿಖೆಯ ಫಲಿತಾಂಶ ಬರುವವರೆಗೆ, ಯಾವುದೇ ದೃಢಪಡಿಸಿದ ಉಲ್ಲಂಘನೆಯು ಕಂಪನಿಯ ನೀತಿಗೆ ಅನುಗುಣವಾಗಿ ಕಠಿಣ ಶಿಸ್ತು ಕ್ರಮಕ್ಕೆ ಒಳಗಾಗುತ್ತದೆ. ಸುರಕ್ಷತೆಯು ಎಲ್ಲಾ ಸಮಯದಲ್ಲೂ ಏರ್ ಇಂಡಿಯಾದ ಅತ್ಯುನ್ನತ ಆದ್ಯತೆಯಾಗಿದೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: 2700 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಮಣಿಪುರ ಮಿಜೋರಾಂನಲ್ಲಿ ವಾಸಿಸುವ ಇಸ್ರೇಲಿಗರು ಮತ್ತೆ ತವರಿಗೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ