
ನವದೆಹಲಿ (ಅ.7): ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿ ಅಮಾನತಾಗಿರುವ ಹಿರಿಯ ವಕೀಲ ರಾಕೇಶ್ ಕಿಶೋರ್, ತಮ್ಮ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ ಮತ್ತು ಈ ಘಟನೆ ಗವಾಯಿ ಅವರು ಸನಾತನ ಧರ್ಮದ ವಿರುದ್ಧ ನಿರಂತರ ನಿಲುವು ತಾಳಿದ್ದಕ್ಕೆ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.
ನ್ಯಾಯಾಲಯದ ಕಲಾಪದ ವೇಳೆ ನಡೆದ ಅತ್ಯಂತ ಕೆಟ್ಟ ಘಟನೆಯ ಸಂದರ್ಭದಲ್ಲಿ ಯಾವುದೇ ಮುಜುಗರಕ್ಕೆ ಒಳಗಾಗದ ಸಿಜೆಐ, ನ್ಯಾಯಾಲಯದ ಅಧಿಕಾರಿಗಳು ಮತ್ತು ನ್ಯಾಯಾಲಯದ ಒಳಗೆ ಇದ್ದ ಭದ್ರತಾ ಸಿಬ್ಬಂದಿಗೆ ಇದನ್ನು "ನಿರ್ಲಕ್ಷಿಸಿ" ಮತ್ತು ತಪ್ಪಿತಸ್ಥ ವಕೀಲರನ್ನು ಎಚ್ಚರಿಕೆ ನೀಡಿ ಬಿಡುಗಡೆ ಮಾಡುವಂತೆ ಕೇಳಿಕೊಂಡರು.
ಮಧ್ಯಪ್ರದೇಶದ ಖಜುರಾಹೊ ದೇವಾಲಯಗಳಲ್ಲಿ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಸಲ್ಲಿಸಲಾದ ಅರ್ಜಿಯ ಕುರಿತು ಸೆಪ್ಟೆಂಬರ್ 16 ರಂದು ನ್ಯಾಯಾಲಯವು ನೀಡಿದ ಆದೇಶದ ಆಧಾರದ ಮೇಲೆ ತಮ್ಮ ಪ್ರತಿಕ್ರಿಯೆ ಎಂದು ಕಿಶೋರ್ ಹೇಳಿದ್ದಾರೆ.
ಹಲ್ದ್ವಾನಿಯಲ್ಲಿ ರೈಲ್ವೇಸ್‌ನ ಭೂಮಿಯನ್ನು ಒಂದು ನಿರ್ದಿಷ್ಟ ಸಮುದಾಯ ಅತಿಕ್ರಮ ಮಾಡಿಕೊಂಡಿದೆ. ಇದನ್ನು ತೆಗೆದುಹಾಕಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ್ದ ಸುಪ್ರೀಂ ಕೋರ್ಟ್ ಅದಕ್ಕೆ ತಡೆ ನೀಡಿತು. ನೂಪುರ್ ಶರ್ಮ ಪ್ರಕರಣದಲ್ಲಿ ನ್ಯಾಯಾಲಯವು ಅವರಿಗೆ ನೀವು ಮಾತಾವರಣವನ್ನು ಹಾಳು ಮಾಡಿದ್ದೀರಿ ಎಂದು ಹೇಳುತ್ತದೆ. ಆದೆ, ಸನಾತನ ಧರ್ಮಕ್ಕೆ ಸಂಬಂಧಪಟ್ಟ ಯಾವುದೇ ವಿಚಾರವಾಗಿರಲಿ, ಅದು ಜಲ್ಲಿ ಕಟ್ಟು ಆಗಿರಲಿ, ಮೊಸರುಗಡಿಗೆ ಉತ್ಸವವಾಗಿರಲಿ ಸುಪ್ರೀಂ ಕೋರ್ಟ್ ಆದೇಶಗಳು ನನಗೆ ನೋವುಂಟು ಮಾಡಿದೆ ಎಂದಿದ್ದಾರೆ.
"ಸೆಪ್ಟೆಂಬರ್ 16 ರಂದು ಸಿಜೆಐ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು. ಸಿಜೆಐ ಅದನ್ನು ಅಪಹಾಸ್ಯ ಮಾಡಿ, 'ಹೋಗಿ ವಿಗ್ರಹವನ್ನು ಪ್ರಾರ್ಥನೆ ಮಾಡಿಕೊಳ್ಳಿ ಮತ್ತು ಅದರ ಸ್ವಂತ ತಲೆಯನ್ನು ಪುನಃಸ್ಥಾಪಿಸಲು ಹೇಳಿ' ಎಂದಿದ್ದರು. ನಮ್ಮ ಸನಾತನ ಧರ್ಮಕ್ಕೆ ಸಂಬಂಧಿಸಿದ ವಿಷಯ ಬಂದಾಗ, ಸುಪ್ರೀಂ ಕೋರ್ಟ್ ಅಂತಹ ಆದೇಶಗಳನ್ನು ನೀಡುತ್ತದೆ. ಅರ್ಜಿದಾರರಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೆ, ಅವರನ್ನು ಅಪಹಾಸ್ಯ ಮಾಡಬೇಡಿ. ನನಗೆ ಇದರಿಂದ ನೋವಾಗಿತ್ತು. ನಾನು ಕುಡಿದಿರಲಿಲ್ಲ. ಇದು ಅವರ ಕ್ರಿಯೆಗೆ ನನ್ನ ಪ್ರತಿಕ್ರಿಯೆಯಾಗಿತ್ತು. ನನಗೆ ಭಯವಿಲ್ಲ. ಏನಾಯಿತು ಎನ್ನುವುದಕ್ಕೆ ನನಗೆ ವಿಷಾದವಿಲ್ಲ" ಎಂದು ಹೇಳಿದ್ದಾರೆ.
ಘಟನೆಯನ್ನು ವಿವರಿಸಿದ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದು, ಸಿಜೆಐ ನೇತೃತ್ವದ ಪೀಠವು ವಕೀಲರ ಪ್ರಕರಣಗಳ ಪ್ರಸ್ತಾಪವನ್ನು ಆಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಿದರು. ಕಿಶೋರ್ ಎತ್ತರದ ವೇದಿಕೆಯ ಬಳಿಗೆ ಬಂದು ತನ್ನ ಶೂ ತೆಗೆದು ನ್ಯಾಯಾಧೀಶರ ಕಡೆಗೆ ಎಸೆಯಲು ಪ್ರಯತ್ನಿಸಿದರು.
ಕಿಶೋರ್ ಅವರನ್ನು ನ್ಯಾಯಾಲಯದ ಆವರಣದಿಂದ ಬೇಗನೆ ಹೊರಗೆ ಕರೆದೊಯ್ಯಲಾಯಿತು. ಕರೆದೊಯ್ಯುವಾಗ, ವಕೀಲ ರಾಕೇಶ್ ಕಿಶೋರ್ "ಸನಾತನ ಕಾ ಅಪ್ಮಾನ್ ನಹಿ ಸಹೇಂಗೆ" (ಸನಾತನ ಧರ್ಮಕ್ಕೆ ಮಾಡುವ ಅವಮಾನಗಳನ್ನು ಸಹಿಸುವುದಿಲ್ಲ) ಎಂದು ಕೂಗುತ್ತಿರುವುದು ಕೇಳಿಸಿತು.
ಘಟನೆಯ ನಂತರ ರಾಕೇಶ್ ಕಿಶೋರ್ ಭೇಟಿಯಾದ SCBA ಜಂಟಿ ಕಾರ್ಯದರ್ಶಿ ಮೀನೇಶ್ ದುಬೆ, ವಕೀಲರ ಕೃತ್ಯ ಸಮರ್ಥನೀಯವಲ್ಲ ಎಂದಾಗಿದ್ದರೂ, ಅವರಿಗೆ ಯಾವುದೇ ತಪ್ಪಿತಸ್ಥ ಭಾವನೆ ಇದ್ದಿರಲಿಲ್ಲ. ತಾವು ಮಾಡಿದ್ದು ಸರಿ ಎಂದಿದ್ದಲ್ಲದೆ, ಕ್ಷಮೆ ಯಾಚಿಸಲು ನಿರಾಕರಿಸಿದ್ದರು.
ನನ್ನ ಈ ಕೃತ್ಯಕ್ಕೆ ಜೈಲು ಎದುರಿಸಲು ಕೂಡ ಸಿದ್ದ ಎಂದ ರಾಕೇಶ್ ಕಿಶೋರ್, ಯಾವುದೇ ರಾಜಕೀಯ ಪಕ್ಷದ ಜೊತೆಗೂ ನಾನಿಲ್ಲ ಎಂದರು. ನಾನು ಜೈಲಲ್ಲಿದ್ದರೆ ಉತ್ತಮ ಎನಿಸುತ್ತಿತ್ತು. ನಾನು ಮಾಡಿದ ಕೃತ್ಯಕ್ಕೆ ನನ್ನ ಕುಟುಂಬ ಸಂತೋಷವಾಗಿಲ್ಲ. ಆದರೆ, ಅವರಿಗೆ ಅರ್ಥ ಮಾಡಿಸುವುದು ಕಷ್ಟವಾಗುತ್ತಿದೆ ಎಂದಿದ್ದಾರೆ.
ಈ ಘಟನೆಯಿಂದ ಮುಜುಗರಕ್ಕೊಳಗಾದ ಅವರ ಕುಟುಂಬವು ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ನಿರಾಕರಿಸಿತು. ಕಿಶೋರ್ ತನ್ನ ಸಂಬಂಧಿಕರು "ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ" ಎಂದು ಒಪ್ಪಿಕೊಂಡರು, ಆದರೆ ಅವರು ಪ್ರಚೋದನೆಯಿಂದಲ್ಲ, ದೃಢನಿಶ್ಚಯದಿಂದ ಹೀಗೆ ಮಾಡಿದ್ದಾಗಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ