
ಬೆಂಗಳೂರು : ಬೆಂಗಳೂರಿನಲ್ಲಿ ಚರ್ಮರೋಗ ತಜ್ಞೆ ಕೃತಿಕಾಳನ್ನು ಆಕೆಯ ಪತಿ ಮಹೇಂದ್ರನೇ ಅನಸ್ಥೇಶಿಯಾ ನೀಡಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಮಹೇಂದ್ರ ರೆಡ್ಡಿ ಹಲವು ಮಹಿಳೆಯರ ಮೇಲೆ ಕಣ್ಣು ಹಾಕಿದ್ದು, ಪತ್ನಿ ಕೃತಿಕಾಳನ್ನು ಕೊಲೆ ಮಾಡಿದ ನಂತರ ಆರೋಪಿ 'ನಿನಗಾಗಿ ನಾನು ನನ್ನ ಹೆಂಡತಿಯನ್ನು ಕೊಂದೆ' ಎಂದು ಹಲವು ಮಹಿಳೆಯರಿಗೆ ಸಂದೇಶ ಕಳುಹಿಸಿದ್ದ ಎಂಬ ಸ್ಫೋಟಕ ಸತ್ಯ ಬಯಲಾಗಿದೆ. ಆಕೆಯ ಮೊಬೈಲ್‌ನ್ನು ವಶಕ್ಕೆ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ ತನಿಖಾಧಿಕಾರಿಗಳಿಂದ ಈ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ಮಹೇಂದ್ರ ರೆಡ್ಡಿ ಜಿಎಸ್, ಇತರ ಮಹಿಳೆಯರನ್ನು ಮೆಚ್ಚಿಸಲು ಮತ್ತು ಗೆಲ್ಲಲು ಈ ರೀತಿಯ ಭಯಾನಕ ಸಂದೇಶವನ್ನು ಯಾವುದೇ ಭಯವಿಲ್ಲದೇ 4 ರಿಂದ 5 ಮಹಿಳೆಯರಿಗೆ ಕಳುಹಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮಹೇಂದ್ರ ರೆಡ್ಡಿ ತಮ್ಮ 29 ವರ್ಷದ ಪತ್ನಿ ಚರ್ಮರೋಗ ತಜ್ಞೆ ಕೃತಿಕಾಳನ್ನು ಅನಸ್ಥೇಸಿಯಾ ನೀಡಿ ಕೊಲೆ ಮಾಡಿದ್ದ. ಈ ದಂಪತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಮಹೇಂದ್ರ ಸಂದೇಶ ಕಳುಹಿಸಿದ ಓರ್ವರಲ್ಲಿ ಓರ್ವ ಮಹಿಳೆ ವೈದ್ಯಕೀಯ ವೃತ್ತಿಯಲ್ಲಿ ಇದ್ದರು ಹಾಗೂ ಅವರು ಈ ಹಿಂದೆಯೇ ಮಹೇಂದ್ರನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದರು ಎಂದು ತಿಳಿಸಿದ್ದಾರೆ. ಪತ್ನಿಯ ಸಾವಿನ ನಂತರ ಮಹೇಂದ್ರ ಯಾವುದೇ ಭಯವಿಲ್ಲದೇ ಹೆಂಗಸರಿಗೆ ಈ ರೀತಿಯ ಸಂದೇಶ ಕಳುಹಿಸಿದ್ದ.
ಅನಸ್ಥೇಸಿಯಾ ನೀಡಿ ಪತ್ನಿಯ ಕೊಂದಿದ್ದ ಮಹೇಂದ್ರ ರೆಡ್ಡಿ
ಈ ವರ್ಷ ಏಪ್ರಿಲ್ 24 ರಂದು ಚರ್ಮರೋಗ ತಜ್ಞೆ ಕೃತಿಕಾ ತಮ್ಮ ಮನೆಯಲ್ಲೇ ಸಾವನ್ನಪ್ಪಿದ್ದರು. ಅವರ ತಂದೆಯ ಮನೆಯಲ್ಲೇ ಆರೋಪಿ ಮಹೇಂದ್ರ ಕೃತಿಕಾಗೆ ಅನಸ್ತೇಸಿಯಾ ಓವರ್‌ಡೊಸ್ ನೀಡಿ ಕೊಲೆ ಮಾಡಿದ್ದ. ಮನೆಯವರು ಕೂಡ ಆರಂಭದಲ್ಲಿ ಇದು ಸಹಜ ಸಾವು ಎಂದೇ ಭಾವಿಸಿದ್ದರು. ಆದರೆ ಪೊಲೀಸರೇ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ನಂತರ ಇದೊಂದು ಕೊಲೆ ಎಂಬುದು ತಿಳಿದು ಬಂದಿದೆ.
ಫೋನ್ ಪೇ ಮೂಲಕ ಹಲವು ಮಹಿಳೆಯರಿಗೆ ಸಂದೇಶ ಕಳುಹಿಸಿದ್ದ ಕಾಮುಕ ಡಾಕ್ಟರ್
ಕೊಲೆ ನಡೆದು ಬರೋಬ್ಬರಿ 5 ತಿಂಗಳ ನಂತರ ಮಹೇಂದ್ರನ ಕೃತ್ಯದ ಬಗ್ಗೆ ಖಚಿತವಾದ ಹಿನ್ನೆಲೆ ಅಕ್ಟೋಬರ್ 14 ರಂದು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ಮಹೇಂದ್ರ ಡಿಜಿಟಲ್ ಪಾವತಿ ಅಪ್ಲಿಕೇಶನ್ ಆದ ಫೋನ್‌ಪೇ ಮೂಲಕ ವೈದ್ಯರಲ್ಲದ ಆದರೆ ವೈದ್ಯಕೀಯ ವೃತ್ತಿಯಲ್ಲಿದ್ದ ಇತರ ಮಹಿಳೆಯರಿಗೆ ರಹಸ್ಯ ಸಂದೇಶವನ್ನು ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಬ್ಲಾಕ್ ಮಾಡಿದ ನಂತರ ಮೆಸೇಜ್ ಮಾಡಲು ಫೋನ್ ಪೇ ಬಳಸ್ತಿದ್ದ ಆರೋಪಿ
ಮಹಿಳೆಯರು ಇವನನ್ನು ಬೇರೆ ಬೇರೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬ್ಲಾಕ್ ಮಾಡಿದ ನಂತರ ಆತ ಪೋನ್ ಪೇಯಲ್ಲಿ ಅವರಿಗೆ ಸಂದೇಶ ಕಳುಹಿಸಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಪೊಲೀಸರು ಮಹೇಂದ್ರನ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಂಡಿದ್ದು, ಅವುಗಳನ್ನು ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಅಲ್ಲಿ ವಶಕ್ಕೆ ಪಡೆದ ದತ್ತಾಂಶಗಳಿಂದ ಆತ ಈ ರೀತಿ ಸಂದೇಶಗಳನ್ನು ಕಳುಹಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಟ್‌ಪೀಲ್ಡ್‌ನ ಪೊಲೀಸ್ ಉಪ ಆಯುಕ್ತ ಕೆ. ಪರಶುರಾಮ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿಯೂ ಫೋನ್‌ಪೇ ಮೂಲಕ ಸಂದೇಶ ಕಳುಹಿಸಿರುವುದನ್ನು ದೃಢಪಡಿಸಿದ್ದಾರೆ. ಮಹಿಳೆಯರ ಹೇಳಿಕೆಯನ್ನು ದಾಖಲಿಸಲಾಗಿದೆ ಆದರೆ ತನಿಖೆ ನಡೆಯುತ್ತಿರುವುದರಿಂದ ಪೊಲೀಸರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಕೃತಿಕಾ ಜೊತೆಗೆ ಮಹೇಂದ್ರನ ವಿವಾಹಕ್ಕೂ ಮೊದಲೇ ಮಹೇಂದ್ರ ಅವರನ್ನು ನಿರ್ಬಂಧಿಸಿರುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕೃತಿಕಾಳನ್ನು ಅವನು ಮದುವೆಯಾಗಿದ್ದಾನೆಂದು ತಿಳಿದ ನಂತರ, ಆ ಮಹಿಳೆ ಅವನಿಂದ ಸಂಪೂರ್ಣವಾಗಿ ದೂರವಾಗಿದ್ದಾಳೆ. ಆದರೆ ಕೃತಿಕಾ ಕೊಲೆಯಾದ ಕೆಲವು ತಿಂಗಳ ನಂತರ, ಮಹೇಂದ್ರ ಈ ರೀತಿ ಸಂದೇಶ ಕಳುಹಿಸಿದಾಗ, ಮಹೇಂದ್ರ ಸುಳ್ಳು ಹೇಳುತ್ತಿದ್ದಾನೆಂದು ಭಾವಿಸಿದ್ದಾಗಿ ಮತ್ತು ಅವನು ಮತ್ತೆ ತನ್ನೊಂದಿಗೆ ಮಾತನಾಡುವುದಕ್ಕೆ ಈ ರೀತಿ ನಟಿಸುತ್ತಿರಬಹುದೆಂದು ಭಾವಿಸಿದ್ದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಅಪರಾಧದಲ್ಲಿ ಅವಳು ಯಾವುದೇ ಪಾತ್ರ ವಹಿಸಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
2023ರಲ್ಲಿ ಮುಂಬೈ ಮಹಿಳೆಯ ಜೊತೆ ಕಂಟಾಕ್ಟ್: ತನ ನವರಂಗಿ ಆಟಕ್ಕೆ ಅಪ್ಪನನ್ನು ಬಳಸಿಕೊಂಡಿದ್ದ ಮಹೇಂದ್ರ
ಇದಕ್ಕೂ ಮೊದಲು ಮಹೇಂದ್ರ 2023 ರವರೆಗೆ ಮುಂಬೈನ ಇನ್ನೊಬ್ಬ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಎಂಬ ವಿಚಾರವೂ ತನಿಖೆಯಿಂದ ತಿಳಿದುಬಂದಿದೆ. ಅವನು ಆಕೆಗೆ ಪ್ರಪೋಸ್ ಮಾಡಿದ್ದ ಮತ್ತು ಆಕೆಯನ್ನು ಹಲವಾರು ಬಾರಿ ಭೇಟಿಯಾಗಿದ್ದ. ನಂತರ, ತಾನು ಅಪಘಾತದಲ್ಲಿ ಮೃತಪಟ್ಟಿದ್ದೇನೆ ಎಂದು ಸುಳ್ಳು ಹೇಳಲು ತನ್ನ ತಂದೆಯ ಮೂಲಕ ಆ ಮಹಿಳೆಗೆ ಕರೆ ಮಾಡಿಸಿದ್ದ
ಕೃತಿಕಾ ಸಾವಿನ ನಂತರ ಮತ್ತೆ ಮುಂಬೈ ಮಹಿಳೆಗೆ ಕರೆ ಮದುವೆಯ ಪ್ರಸ್ತಾಪ
ಈ ನಡುವೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಮಹೇಂದ್ರ ಮತ್ತೆ ಕಾಣಿಸಿಕೊಂಡು ಅದೇ ಮಹಿಳೆಯನ್ನು ಮತ್ತೆ ಸಂಪರ್ಕಿಸಿದ. ಹಾಗೂ ತಾನು ಜೀವಂತವಾಗಿದ್ದೇನೆ ಮತ್ತು ತನ್ನ ಜ್ಯೋತಿಷ್ಯ ಚಾರ್ಟ್ ಪ್ರಕಾರ, ತನ್ನ ಮೊದಲ ಹೆಂಡತಿ ಸಾಯುವಳಯ ಎಂದು ಹೇಳಿದ್ದ. ನಾನು ಅಂದು ನನ್ನ ಸಾವಿನ ಬಗ್ಗೆ ಸುಳ್ಳು ಹೇಳಿದ್ದೇನೆ, ನಂತರ ಕೃತಿಕಾಳನ್ನು ಮದುವೆಯಾಗಿದ್ದೇನೆ ಮತ್ತು ಈಗ ಅವಳು ಸತ್ತಿರುವುದರಿಂದ, ಮುಂಬೈ ಮಹಿಳೆಯನ್ನು ಮತ್ತೆ ಮದುವೆಯಾಗಲು ಬಯಸಿದ್ದೆ ಎಂಬುದನ್ನು ಆತ ಪೊಲೀಸರ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಬಿಹಾರದಲ್ಲಿ 6 ವರ್ಷದ ಹಿಂದಷ್ಟೇ ನಿರ್ಮಿಸಿದ ಸೇತುವೆ ಕುಸಿತ
ಇದನ್ನೂ ಓದಿ: ಯುಎಇನಲ್ಲಿ ಬಂಧಿತನಾಗಿರುವ ಸೋದರನ ಬಿಡುಗಡೆಗೆ ದೆಹಲಿ ಕೋರ್ಟ್ ಮೆಟ್ಟಿಲೇರಿದ ನಟಿ ಸೆಲೀನಾ ಜೇಟ್ಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ