
ಇತ್ತಿಚೆಗೆ ಅನೇಕ ಕಂಪನಿಗಳಲ್ಲಿ ಉದ್ಯೋಗ ಕಡಿತ ನಡೆಯುತ್ತಿದೆ. ಎಐ ಬಂದಾಗಿನಿಂದಲೂ ವೆಚ್ಚ ಕಡಿತದ ನೆಪದಲ್ಲಿ ಹಲವು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿದ್ದಾರೆ. ಬಹುತೇಕ ಎಲ್ಲಾ ಐಟಿ ಸೇರಿದಂತೆ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ಬಹುತೇಕ ಉದ್ಯೋಗಿಗಳು ಇಂದು ನಾಳೆ ಏನಾಗುವುದೋ ಎಂಬ ಆತಂಕದಲ್ಲೇ ಕಚೇರಿಗೆ ಹೋಗುತ್ತಾರೆ. ನಮ್ಮ ಉದ್ಯೋಗಕ್ಕೆ ಯಾವಾಗ ಕುತ್ತು ಬರುವುದೋ ಎಂದು ಭಯದಲ್ಲೇ ಕೆಲಸ ಮಾಡುತ್ತಾರೆ. ಹೀಗಿರುವಾಗ ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯೇ(HR) ಕಂಪನಿಯ ಸಿಇಒ, ಹಿರಿಯ ಎಕ್ಸಿಕ್ಯೂಟಿವ್‌ಗಳು ಸೇರಿದಂತೆ ಎಲ್ಲಾ ಉದ್ಯೋಗಿಗಳಿಗೆ ಟರ್ಮಿನೇಷನ್ ಲೆಟರ್(ಉದ್ಯೋಗದಿಂದ ವಜಾ ಮಾಡಲಾಗಿದೆ ಎಂಬುದನ್ನು ಸೂಚಿಸುವ ಪತ್ರ) ಕಳುಹಿಸಿದ್ದಾರೆ. ಯಾವುದೇ ಉದ್ದೇಶ ಇಲ್ಲದೇ ಬೈ ಮಿಸ್ಟೇಕ್ ಆಗಿ ಹೆಚ್‌ಆರ್ ಅವರು ಹೀಗೆ ಒಬ್ಬರನ್ನು ಬಿಡದೇ ಕಂಪನಿಯ ಎಲ್ಲರಿಗೂ ನೋಟೀಸ್ ಕಳುಹಿಸಿದ್ದು ಇದರಿಂದ ಸಂಸ್ಥೆಯ ಉದ್ಯೋಗಿಗಳೆಲ್ಲಾ ಗಾಬರಿಯಾಗಿದ್ದಾರೆ.
ಗಾಬರಿಯಾದ ಉದ್ಯೋಗಿಗಳು: ಹೆಚ್‌ಆರ್ ಕಡೆಯಿಂದ ಸ್ಪಷ್ಟನೆ
ಈ ವಿಚಾರವನ್ನು ರೆಡಿಟ್‌ನಲ್ಲಿ ಒಬ್ಬರು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಯ್ತು. ಹೆಚ್ ಆರ್ ಆಕಸ್ಮಿಕವಾಗಿ ಕಂಪನಿಯ ಸಿಇಒ ಸೇರಿದಂತೆ ಎಲ್ಲರಿಗೂ ಟರ್ಮಿನೇಷನ್ ನೊಟೀಸ್ ಕಳುಹಿಸಿದರು. ಅದರಲ್ಲಿ ಅವರು ಹೆಚ್ ಆರ್ ಟೀಮ್ ಕಂಪನಿಯಿಂದ ನಿರ್ಗಮಿಸುವ ಉದ್ಯೋಗಿಗಳಿಗೆ ನಿರ್ಗಮನ ಇಮೇಲ್‌ಗಳನ್ನು ಕಳುಹಿಸಲು ವಿನ್ಯಾಸಗೊಳಿಸಲಾದ ಹೊಸ ಆಫ್‌ಬೋರ್ಡಿಂಗ್ ಯಾಂತ್ರೀಕೃತಗೊಂಡ ಸಾಧನವನ್ನು ಹೆಚ್‌ಆರ್ ತಂಡವು ಪರೀಕ್ಷಿಸುತ್ತಿದೆ ಎಂದು ವಿವರಿಸಿದ್ದಾರೆ.
ದುರದೃಷ್ಟವಶಾತ್, ಯಾರೋ ಒಬ್ಬರು ಪರೀಕ್ಷಾ ಮೋಡ್‌ನಿಂದ ಲೈವ್ ಮೋಡ್‌ಗೆ ಸಿಸ್ಟಂ ಅನ್ನು ಬದಲಾಯಿಸಲು ಮರೆತಿದ್ದಾರೆ. ಈ ಗೊಂದಲದ ಪರಿಣಾಮವಾಗಿ 300 ಉದ್ಯೋಗಿಗಳಿಗೆ ನಿಮ್ಮ ಕೊನೆಯ ಕೆಲಸದ ದಿನವು ತಕ್ಷಣವೇ ಜಾರಿಗೆ ಬರುತ್ತದೆ ಎಂಬ ಸಾಲಿನೊಂದಿಗೆ ತೆರೆಯುವ ಆತಂಕಕಾರಿ ಇಮೇಲ್ ಬಂದಿದೆ. ಈ ವಿಚಾರ ನ್ಯೂಕ್ಲಿಯರ್ ಬಾಂಬ್‌ನಂತೆ ಹರಿದಾಡಿದ್ದು, ಒಬ್ಬರು ಮ್ಯಾನೇಜರ್ ನಾನು ಈಗಲೇ ಪ್ಯಾಕ್ ಮಾಡಬೇಕೆ ಎಂದು ಕೇಳಿದ್ದಾರೆ. ಈ ಮೇಲ್‌ನಿಂದ ಸಂಸ್ಥೆಯೊಳಗೆ ಉಂಟಾದ ಆತಂಕದಿಂದಾಗಿ ಕಚೇರಿಯ ಐಟಿ ತಂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ತತ್‌ಕ್ಷಣವೇ ಸ್ಪಷ್ಟನೆಯ ಸಂದೇಶವನ್ನು ಕಳುಹಿಸಬೇಕಾಯ್ತು. ಯಾರನ್ನು ಕೆಲಸದಿಂದ ತೆಗೆದು ಹಾಕಿಲ್ಲ, ದಯವಿಟ್ಟು ನಿಮ್ಮ ಬ್ಯಾಡ್ಜ್ ಕಳಚಬೇಡಿ ಎಂದು ದೊಡ್ಡ ಅಕ್ಷರಗಳಲ್ಲಿ ಟೈಪ್ ಮಾಡಿ ಸಂದೇಶ ಕಳುಹಿಸಿತ್ತು ಎಂದು ಆ ಬಳಕೆದಾರರು ಹೇಳಿಕೊಂಡಿದ್ದಾರೆ.
ರೆಡಿಟ್ ಬಳಕೆದಾರರು ಹಂಚಿಕೊಂಡ ಸ್ಕ್ರೀನ್‌ಶಾಟ್‌ನಲ್ಲಿ ಯಾರು ಭಯಪಡುವುದು ಬೇಡ ಸ್ವಯಂಚಾಲಿತವಾಗಿ ಕೆಲಸ ಮಾಡುವ ಟೂಲೊಂದರಿಂದ ಪರೀಕ್ಷಾರ್ಥ ಟರ್ಮಿನೇಷನ್ ಸಂದೇಶವನ್ನು ಎಲ್ಲರಿಗೂ ಕಳುಹಿಸಲಾಗಿದೆ. ನಿಮ್ಮಲ್ಲಿ ಯಾರನ್ನು ಕೂಡ ಕೆಲಸದಿಂದ ತೆಗೆದು ಹಾಕಿಲ್ಲ, ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ ಎಂದು ಬರೆಯಲಾಗಿದೆ. ಇಂದು ಯಾರೊಬ್ಬರೂ ಕೆಲಸ ಮಾಡಿರ್ತಾರೆ ಅಂತ ನಾನು ಭಾವಿಸುವುದಿಲ್ಲ ಎಂದು ರೆಡಿಟ್ ಬಳಕೆದಾರರು ತಮ್ಮ ಪೋಸ್ಟ್‌ನ ಕೊನೆಗೆ ಹೇಳಿದ್ದಾರೆ.
ಪೋಸ್ಟ್ ವೈರಲ್
ಈ ಪೋಸ್ಟ್ ವೈರಲ್ ಆಗಿದ್ದು ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ನೀವು ಯೋಗ್ಯ ಕಾರ್ಮಿಕ ಹಕ್ಕುಗಳನ್ನು ಹೊಂದಿರುವ ದೇಶದಲ್ಲಿ ವಾಸಿಸುತ್ತಿದ್ದರೆ, ಅದು ಒಂದು ಆಶೀರ್ವಾದವಾಗಬಹುದು. ನಾನು ನನ್ನ ಕಂಪನಿಯನ್ನು ತೊರೆಯಲು ಬಯಸಿದ್ದೆ ಮತ್ತು ಸರಿಯಾದ ಸಮಯದಲ್ಲಿ ಅವರು ನನ್ನನ್ನು ಕೆಲಸದಿಂದ ತೆಗೆದುಹಾಕಲಾಗುವುದು ಎಂದು ನನಗೆ ತಿಳಿಸಿದರು. ಆದ್ದರಿಂದ ನನಗೆ 3 ತಿಂಗಳ ವೇತನ ಸಿಗುತ್ತದೆ ಮತ್ತು ತಕ್ಷಣ ಕೆಲಸ ಮಾಡುವುದನ್ನು ನಿಲ್ಲಿಸಬಹುದು. ಅದು ಅದ್ಭುತವಾಗಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಭಾರತದಿಂದ ದತ್ತು ಪಡೆದ ಮಗಳಿಗೆ ಹಿಂಸೆ: ಅಮೆರಿಕನ್ ಪೋಷಕರಿಂದ ರಕ್ಷಿಸುವಂತೆ ಸಿಎಂಗೆ ಮನವಿ
ಇದನ್ನೂ ಓದಿ: ತಾನು ಕೆಲಸ ಮಾಡ್ತಿದ್ದ ಅಲ್ ಫಲಾಹ್ ಕಾಲೇಜು ಲ್ಯಾಬನ್ನೇ ಆರ್‌ಡಿಎಕ್ಸ್ ಮಾಡಲು ಬಳಿಸಿದ್ನಾ ಟೆರರಿಸ್ಟ್ ಡಾಕ್ಟರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ