
ನವದೆಹಲಿ: ಸರ್ಕಾರಿ ಜಾಹೀರಾತುಗಳ ಸೋಗಿನಲ್ಲಿ ರಾಜಕೀಯ ಜಾಹೀರಾತು ನೀಡಿದ ಆರೋಪ ಸಂಬಂಧ 163.62 ಕೋಟಿ ರು. ಪಾವತಿಸುವಂತೆ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಆಪ್)ಕ್ಕೆ ನೋಟಿಸ್ ಜಾರಿಯಾಗಿದೆ. ಇದು ಭರ್ಜರಿ ವಾಕ್ಸಮರಕ್ಕೆ ಕಾರಣವಾಗಿದೆ. ಸರ್ಕಾರಿ ಜಾಹೀರಾತಿನ ಹೆಸರಿನಲ್ಲಿ ಆಪ್ ರಾಜಕೀಯ ಪ್ರಚಾರ ಮಾಡಿಕೊಂಡಿದ್ದು, ಈ ಸಂಬಂಧ 97 ಕೋಟಿ ರೂ. ವಸೂಲಿ ಮಾಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಒಂದು ತಿಂಗಳ ಹಿಂದೆ ಸೂಚಿಸಿದ್ದರು. ಅದಾದ ಬೆನ್ನಲ್ಲೇ ವಾರ್ತಾ ಮತ್ತು ಪ್ರಚಾರ ನಿರ್ದೇಶನಾಲಯ ನೋಟಿಸ್ ಜಾರಿಗೊಳಿಸಿ, 163.62 ಕೋಟಿ ರೂ. ಗಳನ್ನು 10 ದಿನದಲ್ಲಿ ಪಾವತಿಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಆಪ್ ಈ ಹಣ ಕಟ್ಟಲು ವಿಫಲವಾದರೆ ಪಕ್ಷದ ಆಸ್ತಿ ಮುಟ್ಟುಗೋಲು ಸೇರಿದಂತೆ ಕಾಲಮಿತಿಯಲ್ಲಿ ಎಲ್ಲ ಗಂಭೀರ ಕಾನೂನು ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.
ನೋಟಿಸ್ ಜಾರಿಯಾಗಿರುವುದಕ್ಕೆ ತೀವ್ರ ಕೆಂಡಾಮಂಡಲಗೊಂಡಿರುವ ಆಪ್, ದೆಹಲಿ ಸರ್ಕಾರ ಹಾಗೂ ಸಚಿವರನ್ನು ಟಾರ್ಗೆಟ್ ಮಾಡಲು ಅಧಿಕಾರಿಗಳ ಮೇಲೆ ಬಿಜೆಪಿ ಅಸಾಂವಿಧಾನಿಕ ಅಧಿಕಾರ ಪ್ರಯೋಗಿಸುತ್ತಿದೆ. 163.62 ಕೋಟಿ ರೂ. ಪಾವತಿಸುವಂತೆ ನೋಟಿಸ್ ನೀಡಿರುವುದು ನಿರಂಕುಶ ಹಾಗೂ ಮೊಂಡುತನದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಮುಖ್ಯಮಂತ್ರಿಗಳು ದೆಹಲಿಯ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ. ಅವರಿಂದಲೂ ಹಣ ವಸೂಲಿ ಮಾಡಲಾಗುತ್ತದೆಯೇ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಶ್ನಿಸಿದ್ದಾರೆ.
ಇದನ್ನು ಓದಿ: Assembly election: ಬಿಜೆಪಿಗೆ ಅನುಕೂಲ ಆಗುವಂತೆ ಎಎಪಿ ಪ್ರಚಾರ: ದಿನೇಶ್ ಗುಂಡೂರಾವ್
ಈ ಮಧ್ಯೆ, ಸರ್ಕಾರಿ ಹಣವನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಆಪ್‌ನ ಬ್ಯಾಂಕ್ ಖಾತೆ ಹಾಗೂ ಆ ಪಕ್ಷದ ನಾಯಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಆಗ್ರಹಿಸಿದ್ದಾರೆ.
ಏನಿದು ಪ್ರಕರಣ?:
ದೆಹಲಿ ಸರ್ಕಾರ ರಾಜಕೀಯ ಪ್ರಚಾರಕ್ಕೆ ಭಾರಿ ಪ್ರಮಾಣದ ಜಾಹೀರಾತುಗಳನ್ನು ನೀಡುತ್ತಿದೆ ಎಂದು ದೆಹಲಿ ಹೈಕೋರ್ಟಿಗೆ 2016ರಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಈ ಬಗ್ಗೆ ಪರಿಶೀಲಿಸಲು ಸರ್ಕಾರಿ ಜಾಹೀರಾತಿನಲ್ಲಿನ ಮಾಹಿತಿ ನಿಯಂತ್ರಣ ಸಮಿತಿಗೆ ಹೈಕೋರ್ಚ್ ಸೂಚಿಸಿತ್ತು. ಒಂದು ರಾಜಕೀಯ ಪಕ್ಷ ಅಥವಾ ರಾಜಕಾರಣಿಯ ಇಮೇಜ್ ವೃದ್ಧಿಗೆ ಸರ್ಕಾರಿ ಹಣ ಬಳಕೆಯಾಗುವುದನ್ನು ತಡೆಯಲು ಸುಪ್ರೀಂಕೋರ್ಟ್ ಮಾರ್ಗಸೂಚಿ ರೂಪಿಸಿದೆ. ಅದಾದ ತರುವಾಯವೂ ಇಮೇಜ್ ವೃದ್ಧಿ ಕೆಲಸ ಆಗಿದೆ. ಹೀಗಾಗಿ ಆಪ್‌ನಿಂದ ಹಣ ವಸೂಲಿ ಮಾಡಬೇಕು ಎಂದು ಸಮಿತಿ ಹೇಳಿತ್ತು. ಆ ಪ್ರಕಾರ ಈಗ ನೋಟಿಸ್ ಜಾರಿಗೊಳಿಸಲಾಗಿದೆ.
ಇದನ್ನು ಓದಿ: ಎಲ್ಲರೂ ಹಸುವಿನ ಹಾಲು ಕರೆದರೆ ನಾವು ___ ಹಾಲು ಕರೆದೆವು ಎಂದ ಕೇಜ್ರಿವಾಲ್
ಇದೀಗ ಆಪ್‌ಗೆ ನೀಡಲಾಗಿರುವ 163.62 ಕೋಟಿ ರೂ. ವಸೂಲಾತಿ ನೋಟಿಸ್ 2017ರ ಮಾರ್ಚ್ 31ರವರೆಗಿನ ಜಾಹೀರಾತುಗಳದ್ದು ಮಾತ್ರ. ನಂತರದ ಅವಧಿಯದ್ದರ ಲೆಕ್ಕಾಚಾರ ನಡೆಯುತ್ತಿದೆ. 163.62 ಕೋಟಿ ರೂ. ಗಳಲ್ಲಿ 99.31 ಕೋಟಿ ರೂ. ಅಸಲು ಆಗಿದ್ದರೆ, 64.31 ಕೋಟಿ ರೂ. ಬಡ್ಡಿಯಾಗಿದೆ.
ಇದನ್ನು ಓದಿ: Delhi MCD Election Results: ಎಎಪಿಯಿಂದ ಸಂಭ್ರಮಾಚರಣೆ, ಕಾಂಗ್ರೆಸ್ ಕಚೇರಿ ಖಾಲಿ ಖಾಲಿ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ