
ಭುವನೇಶ್ವರ: ಸಾವಿಗೀಡಾಗಿದ್ದಾರೆ ಎಂದು ನಂಬಲಾಗಿದ್ದ ಮಹಿಳೆಯೊಬ್ಬರು ಇನ್ನೇನು ಅಂತ್ಯಸಂಸ್ಕಾರ ಮಾಡಬೇಕು ಅನ್ನುವಷ್ಟರಲ್ಲಿ ಎದ್ದು ಕುಳಿತ ಅಚ್ಚರಿಯ ಘಟನೆ ಒಡಿಶಾದ ಬೆರ್ಹಾಂಪುರದಲ್ಲಿ ನಡೆದಿದೆ. 52 ವರ್ಷದ ಬುಜ್ಜಿ ಅಮ್ಮ ಎಂಬುವವರೇ ಹೀಗೆ ಚಿತೆಯಿಂದ ಎದ್ದು ಕುಳಿತ ಮಹಿಳೆ.
ಬುಜ್ಜಿ ಅಮ್ಮ ಮೃತಪಟ್ಟಿದ್ದಾರೆ ಎಂದು ಮಕ್ಕಳು ಬಂಧುಗಳು ನೆಂಟರು ಎಲ್ಲರೂ ಬಂದು ಸೇರಿದ್ದು, ಬುಜ್ಜಿ ಅಮ್ಮನ ಸಾವಿಗೆ ಶೋಕಿಸುತ್ತಿದ್ದರು. ಬುಜ್ಜಿ ಅಮ್ಮನ ಶವವನ್ನು ಅಂತಿಮ ಸಂಸ್ಕಾರಕ್ಕಾಗಿ ವಾಹನವೊಂದರ ಮೂಲಕ ಶವ ಸಂಸ್ಕಾರ ನಡೆಸುವ ಸ್ಥಳಕ್ಕೂ ಕರೆತಂದು ಇನ್ನೇನು ಶವ ಸಂಸ್ಕಾರ ಮಾಡಬೇಕು ಎನ್ನುವಷ್ಟರಲ್ಲಿ ಬುಜ್ಜಿ ಅಮ್ಮ ರಫನೇ ಎದ್ದು ಕುಳಿತಿದ್ದಾರೆ. ಈ ವಿಚಿತ್ರ ಕಂಡು ಮನೆ ಮಂದಿಯೆಲ್ಲಾ ಖುಷಿ ಅಚ್ಚರಿಯ ಜೊತೆ ಶಾಕ್ ಆಗಿದ್ದಾರೆ.
ಅಂತ್ಯಕ್ರಿಯೆ ಸ್ನಾನದ ವೇಳೆ ಸತ್ತ ಮಹಿಳೆ ಬದುಕಿದಳು!
ಕೆಲ ದಿನಗಳ ಹಿಂದಷ್ಟೇ ಬುಜ್ಜಿ ಅಮ್ಮನನ್ನು ಎಂಕೆಸಿಜೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಇತ್ತೀಚೆಗೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿದ್ದರು. ಫೆಬ್ರವರಿ 1 ರಂದು ಮನೆಯಲ್ಲಿ ಆದ ಅಗ್ನಿ ಅನಾಹುತದಿಂದಾಗಿ ಅವರ ದೇಹದ ಶೇಕಡಾ 50 ರಷ್ಟು ಸುಟ್ಟಗಾಯಗಳಾಗಿದ್ದವು. ಚಿಕಿತ್ಸೆಯ ನಂತರವೂ ಅವರು ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ, ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಅವರನ್ನು ಕುಟುಂಬದವರು ಎಂಕೆಸಿಜೆ ಮೆಡಿಕಲ್ ಕಾಲೇಜಿನಿಂದ ಡಿಸ್ಚಾರ್ಜ್ ಮಾಡಿ ಬೇರೊಂದು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಮನೆಗೆ ಕರೆದುಕೊಂಡು ಬಂದಿದ್ದರು.
ಬುಜ್ಜಿ ಅಮ್ಮ ಅವರ ಪತಿ ಶಿಬರಾಮ್ ಪಾಲೋ ಅವರ ಪ್ರಕಾರ, ಸೋಮವಾರ( ಫೆಬ್ರವರಿ 12) ರಂದು ಅವರು ಉಸಿರಾಟ ನಿಲ್ಲಿಸಿದ್ದರು. ಕಣ್ಣುಗಳನ್ನು ತೆರೆಯುತ್ತಿರಲಿಲ್ಲ, ಹೀಗಾಗಿ ಆಕೆ ಸಾವನ್ನಪ್ಪಿದ್ದಾಳೆ ಎಂದು ನಾವು ನಮ್ಮ ಕುಟುಂಬದವರು ಬಂಧಿಗಳು, ನೆಂಟರಿಗೆ ವಿಚಾರ ತಿಳಿಸಿದ್ದೆವು ಜೊತೆಗೆ ಆಕೆಯ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೆವು. ಅಲ್ಲದೇ ಆಕೆಯ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕಾಗಿ ಬಿಜಾಪುರಸಮೀಪದ ಅಂತ್ಯಸಂಸ್ಕಾರ ಸ್ಥಳಕ್ಕೂ ಕರೆತಂದಿದ್ದೆವು ಎಂದು ಹೇಳಿದ್ದಾರೆ.
ಒಂದೇ ದಿನದಲ್ಲಿ ಎರಡೆರಡು ಸಾರಿ ಸತ್ತ ಮಹಿಳೆ !
ಇತ್ತ ಬುಜ್ಜಿ ಅಮ್ಮನ ಕುಟುಂಬದವರು ತುಂಬಾ ಬಡವರಾಗಿರುವುದರಿಂದ ಸ್ಥಳೀಯರು ಹಣ ಸಂಗ್ರಹಿಸಿ ಆಕೆಯ ಅಂತ್ಯಸಂಸ್ಕಾರಕ್ಕಾಗಿ ಚಿತೆಯನ್ನು ಸಿದ್ಧಪಡಿಸಲಾಗಿತ್ತು. ಆದರೆ ಅವರು ಒಮ್ಮೆಲೇ ಎದ್ದು ಕುಳಿತಿದ್ದು, ಕಣ್ಣುಗಳನ್ನು ತೆರೆದು ಸಮೀಪದವರ ಕರೆಗಳಿಗೆ ಸ್ಪಂದಿಸಿದ್ದಾರೆ. ನಂತರ ಅಂತ್ಯಸಂಸ್ಕಾರ ಸ್ಥಳಕ್ಕೆ ಅವರನ್ನು ಕರೆದೊಯ್ದ ವಾಹನವನ್ನು ಮತ್ತೆ ಕರೆಸಿ ಅವರನ್ನು ಮನೆಗೆ ಕರೆತಂದು ಬಿಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ