ಕೊರೋನಾ ನಿಯಂತ್ರಣ: ಮೋದಿಗೆ ಶೇ.74 ಜನ ಮೆಚ್ಚುಗೆ!

By Kannadaprabha News  |  First Published Aug 11, 2020, 7:37 AM IST

ಕೊರೋನಾ ನಿಯಂತ್ರಣ: ಮೋದಿಗೆ ಶೇ.74 ಜನ ಮೆಚ್ಚುಗೆ| ದೇಶದ ಗ್ರಾಮೀಣ ಭಾಗದ ಜನರಿಂದ ಪ್ರಶಂಸೆ: ಲೋಕನೀತಿ, ಸಿಎಸ್‌ಡಿಎಸ್‌ನಿಂದ ಸಮೀಕ್ಷೆ| ಲಾಕ್‌ಡೌನ್‌ನಿಂದ ಸಮಸ್ಯೆ ಅನುಭವಿಸಿದ್ದರೂ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಬಹುಪರಾಕ್‌


ನವದೆಹಲಿ(ಆ.11): ದೇಶಾದ್ಯಂತ ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಸಾಕಷ್ಟುತೊಂದರೆಯಾಗಿದ್ದರೂ ಕೇಂದ್ರ ಸರ್ಕಾರ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಗೆ ಗ್ರಾಮೀಣ ಭಾರತ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ದೇಶದ ಆರ್ಥಿಕತೆ ಮೇಲೆತ್ತಲು ಸರ್ಕಾರಕ್ಕೆ ಡಾ| ಸಿಂಗ್‌ 3 ಸಲಹೆ!

Tap to resize

Latest Videos

‘ಗಾಂವ್‌ ಕನೆಕ್ಷನ್‌’ ಎಂಬ ಮಾಧ್ಯಮ ಸಂಸ್ಥೆಗಾಗಿ ಲೋಕನೀತಿ ಮತ್ತು ಸಿಎಸ್‌ಡಿಎಸ್‌ (ಸೆಂಟರ್‌ ಫಾರ್‌ ಸ್ಟಡಿ ಆಫ್‌ ಡೆವಲಪಿಂಗ್‌ ಸೊಸೈಟೀಸ್‌) ಸಂಸ್ಥೆಗಳು ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ ಶೇ.74ರಷ್ಟುಜನರು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ತೃಪ್ತಿದಾಯಕವಾಗಿವೆ ಎಂದು ಹೇಳಿದ್ದಾರೆ. ವಿಶೇಷವೆಂದರೆ, ಸರಾಸರಿ ಶೇ.78ರಷ್ಟುಗ್ರಾಮೀಣ ಜನರು ತಮ್ಮ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"

23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 179 ಜಿಲ್ಲೆಗಳ 25,371 ಜನರನ್ನು ಮುಖಾಮುಖಿ ಸಂದರ್ಶಿಸಿ ಸಮೀಕ್ಷೆ ನಡೆಸಲಾಗಿದೆ ಎಂದು ‘ಗಾಂವ್‌ ಕನೆಕ್ಷನ್‌’ ತಿಳಿಸಿದೆ. ಕರ್ನಾಟಕದಲ್ಲಿ ಈ ಸಮೀಕ್ಷೆ ನಡೆದಿಲ್ಲ. ಲಾಕ್‌ಡೌನ್‌ ಸೇರಿದಂತೆ ಕೇಂದ್ರ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಅತ್ಯಂತ ತೃಪ್ತಿಕರವಾಗಿವೆ ಎಂದು ಶೇ.37ರಷ್ಟುಜನ, ತೃಪ್ತಿದಾಯಕವಾಗಿವೆ ಎಂದು ಶೇ.37ರಷ್ಟುಜನರು ಹೇಳಿದ್ದಾರೆ. ಶೇ.7ರಷ್ಟುಜನರು ಮಾತ್ರ ಅತ್ಯಂತ ಅತೃಪ್ತಿದಾಯಕವಾಗಿವೆ ಎಂದು ಹೇಳಿದ್ದಾರೆ.

ಮೋದಿ 1 ಲಕ್ಷ ಕೋಟಿ ಘೋಷಣೆ ದಾರಿ ತಪ್ಪಿಸುವ ಕೆಲಸ: ಮಲ್ಲಿಕಾರ್ಜುನ ಖರ್ಗೆ

ಲಾಕ್‌ಡೌನ್‌ ವೇಳೆ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರ ಸಮಸ್ಯೆ ನಿಭಾಯಿಸಿದ ರೀತಿಗೆ ಶೇ.73ರಷ್ಟುಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಶೇ.23ರಷ್ಟುಜನರು ಮಾತ್ರ ಲಾಕ್‌ಡೌನ್‌ ಜಾರಿಗೊಳಿಸಿದ ರೀತಿಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಇನ್ನು, ಶೇ.40ರಷ್ಟುಜನರು ಲಾಕ್‌ಡೌನ್‌ ತುಂಬಾ ಕಠಿಣವಾಗಿತ್ತು ಎಂದು ಹೇಳಿದರೆ, ಶೇ.38ರಷ್ಟುಜನರು ತಕ್ಕಮಟ್ಟಿಗೆ ಕಠಿಣವಾಗಿತ್ತು ಎಂದೂ, ಶೇ.11ರಷ್ಟುಜನರು ಇನ್ನೂ ಕಠಿಣವಾಗಿರಬೇಕಿತ್ತು ಎಂದೂ ಹೇಳಿದ್ದಾರೆ. ಶೇ.4ರಷ್ಟುಗ್ರಾಮೀಣ ಜನರು ಮಾತ್ರ ಲಾಕ್‌ಡೌನ್‌ ಜಾರಿಗೊಳಿಸುವ ಅಗತ್ಯವೇ ಇರಲಿಲ್ಲ ಎಂದಿದ್ದಾರೆ.

37%: ಮೋದಿ ಸರ್ಕಾರದ ಕ್ರಮದ ಬಗ್ಗೆ ತೃಪ್ತಿ ಇದೆ

37%: ಪರವಾಗಿಲ್ಲ ತೃಪ್ತಿ ಇದೆ

14%: ತೃಪ್ತಿ ಇಲ್ಲ

7%: ಒಂಚೂರು ತೃಪ್ತಿ ಇಲ್ಲ

73%: ವಲಸಿಗ ಕಾರ್ಮಿಕರ ವಿಚಾರದಲ್ಲಿ ಸರ್ಕಾರದ ನಡೆ ಉತ್ತಮವಾಗಿತ್ತು

23 ರಾಜ್ಯ: ಈ ರಾಜ್ಯಗಳ 179 ಜಿಲ್ಲೆಗಳಲ್ಲಿ ಸಮೀಕ್ಷೆ

25,371 ಜನರು: ಭಾರಿ ಸಂಖ್ಯೆಯ ಜನರಿಂದ ಮುಖಾಮುಖಿ ಅಭಿಪ್ರಾಯ ಸಂಗ್ರಹ

ಸಮೀಕ್ಷೆಯ ಇತರ ಪ್ರಮುಖಾಂಶಗಳು

- ಲಾಕ್‌ಡೌನ್‌ ವೇಳೆಯಲ್ಲಿ ಶೇ.23ರಷ್ಟುಹಳ್ಳಿಗರು ಸಾಲ ಮಾಡಿದ್ದಾರೆ.

- ಶೇ.8ರಷ್ಟುಹಳ್ಳಿಗರು ತಮ್ಮಲ್ಲಿದ್ದ ಫೋನ್‌, ವಾಚ್‌ ಇತ್ಯಾದಿಗಳನ್ನು ಮಾರಿದ್ದಾರೆ.

- ಶೇ.7ರಷ್ಟುಜನರು ಚಿನ್ನಾಭರಣ ಅಡ ಇಟ್ಟಿದ್ದಾರೆ.

- ಶೇ.5ರಷ್ಟುಜನರು ಚಿನ್ನ ಅಥವಾ ಅಡಮಾನ ಜಮೀನನ್ನು ಮಾರಿದ್ದಾರೆ.

- ಶೇ.71 ಪಡಿತರದಾರರಿಗೆ ಲಾಕ್‌ಡೌನ್‌ ವೇಳೆಯಲ್ಲಿ ಪಡಿತರ ದೊರೆತಿದೆ.

- ರೇಶನ್‌ ಕಾರ್ಡ್‌ ಇಲ್ಲದ ಶೇ.17ರಷ್ಟುಜನರ ಪೈಕಿ ಕೇವಲ ಶೇ.27ರಷ್ಟುಜನರಿಗೆ ಮಾತ್ರ ಪಡಿತರ ದೊರೆತಿದೆ.

- ಶೇ.23ರಷ್ಟುವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಹಳ್ಳಿಗಳಿಗೆ ಮರಳಿದ್ದಾರೆ.

- ಶೇ.33ರಷ್ಟುವಲಸಿಗರು ಮತ್ತೆ ನಗರಕ್ಕೆ ತೆರಳುವುದಾಗಿ ಹೇಳಿದ್ದಾರೆ.

- ಸಂದರ್ಶಿತ ಪ್ರತಿ 8 ಮನೆಯಲ್ಲಿ ಒಂದು ಮನೆಯವರು ಲಾಕ್‌ಡೌನ್‌ ವೇಳೆ ಹಣವಿಲ್ಲದೆ ಅನೇಕ ಸಲ ದಿನವಿಡೀ ಉಪವಾಸ ಇದ್ದುದಾಗಿ ಹೇಳಿದ್ದಾರೆ.

- ಶೇ.20ರಷ್ಟುಜನರು ಮಾತ್ರ ತಮಗೆ ಉದ್ಯೋಗ ಖಾತ್ರಿಯಡಿ ಕೆಲಸ ದೊರೆತಿದೆ ಎಂದಿದ್ದಾರೆ.

- ಶೇ.68ರಷ್ಟುಗ್ರಾಮೀಣರು ಲಾಕ್‌ಡೌನ್‌ ವೇಳೆ ಹಣಕಾಸಿನ ಸಮಸ್ಯೆ ಎದುರಿಸಿದ್ದಾರೆ.

- ಶೇ.71ರಷ್ಟುಜನರ ಮನೆಗಳಲ್ಲಿ ಲಾಕ್‌ಡೌನ್‌ನಿಂದ ಆದಾಯ ಕುಸಿತವಾಗಿದೆ.

click me!