ಕೊರೋನಾ ಲಸಿಕೆ ರೇಸ್‌ನಲ್ಲಿ ಭಾರತದ 7 ಕಂಪನಿಗಳು| ಕೆಲವೇ ತಿಂಗಳಲ್ಲಿ ಲಸಿಕೆ ಲಭ್ಯ| ಬಹುತೇಕ ಕಂಪನಿಗಳ ವಿಶ್ವಾಸ
ನವದೆಹಲಿ(ಜು.20): ಕೊರೋನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯಲು ವಿಶ್ವದಲ್ಲಿ ದೇಶ-ದೇಶಗಳ ನಡುವೆ ಸ್ಪರ್ಧೆ ನಡೆದಿರುವ ನಡುವೆಯೇ ಭಾರತದಲ್ಲಿ ಕೂಡ ಔಷಧ ತಯಾರಿಕಾ ಕಂಪನಿಗಳ ನಡುವೆ ಅಂಥ ಸ್ಪರ್ಧೆ ಏರ್ಪಟ್ಟಿದೆ. ದೇಶದ 7 ಕಂಪನಿಗಳು ಕೊರೋನಾ ಲಸಿಕೆ ಸಂಶೋಧನೆಗಾಗಿ ಕೆಲಸ ಮಾಡುತ್ತಿವೆ.
ಭಾರತ್ ಬಯೋಟೆಕ್, ಸೀರಂ ಇನ್ಸ್‌ಟಿಟ್ಯೂಟ್, ಝೈಡಸ್ ಕ್ಯಾಡಿಲಾ, ಪೆನೇಸಿಯಾ ಬಯೋಟೆಕ್, ಇಂಡಿಯನ್ ಇಮ್ಯುನಾಲಾಜಿಕಲ್ಸ್, ಮೈನ್‌ವ್ಯಾಕ್ಸ್ ಹಾಗೂ ಬಯೋಲಾಜಿಕಲ್-ಇ ಕಂಪನಿಗಳು ಲಸಿಕೆ ಕಂಡುಹಿಡಿವ ಕಾಯಕದಲ್ಲಿ ತೊಡಗಿವೆ.
ದೇಶೀಯ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಮಾನವ ಪ್ರಯೋಗ ಶುರು!
ಲಸಿಕೆ ಸಂಶೋಧನೆಗೆ ವರ್ಷಗಳೇ ಬೇಕಾಗುತ್ತವೆ. ಆದರೆ ಕೊರೋನಾ ಸೋಂಕು ತೀವ್ರವಾಗಿರುವ ಈ ಸಂದರ್ಭದಲ್ಲಿ ಲಸಿಕೆಯನ್ನು ಕೆಲವೇ ತಿಂಗಳಲ್ಲಿ ಅಭಿವೃದ್ಧಿಪಡಿಸುವ ವಿಶ್ವಾಸವಿದೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿವಿಧ ಕಂಪನಿಗಳ ಪ್ರಯತ್ನ:
ಸೀರಂ ಇನ್ಸ್‌ಟ್ಯಿಟ್ಯೂಟ್ ಸಿಇಒ ಅದಾರ್ ಪೂನಾವಾಲಾ ಪ್ರತಿಕ್ರಿಯೆ ನೀಡಿ, ‘ಈಗ ನಾವು ಆ್ಯಸ್ಟ್ರಾಝೆನೆಕಾ ಆಕ್ಸ್‌ಫರ್ಡ್ ಎಂಬ ಲಸಿಕೆ ಕಂಡುಹಿಡಿವ ಯತ್ನದಲ್ಲಿ ತೊಡಗಿದ್ದೇವೆ. 3ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆದಿದೆ. 2020ರ ಆಗಸ್ಟ್‌ನಲ್ಲಿ ಮಾನವರ ಮೇಲೆ ಇದರ ಪ್ರಯೋಗ ಆರಂಭಿಸಲಿದ್ದೇವೆ. ಈ ವರ್ಷಾಂತ್ಯದೊಳಗೆ ಲಸಿಕೆ ಲಭಿಸುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.
ಝೈಡಸ್ ಕ್ಯಾಡಿಲಾ ಫಾರ್ಮಾ ಕಂಪನಿಯು ಅಧ್ಯಕ್ಷ ಪಂಕಜ್ ಪಟೇಲ್ ಅವರು ಇನ್ನು 7 ತಿಂಗಳಲ್ಲಿ ತಮ್ಮ ಕಂಪನಿಯು ಪ್ರಯೋಗ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದಿದ್ದಾರೆ.
ಚೀನಾ ಕಂಪನಿಯಿಂದ ನೌಕರರ ಮೇಲೇ ಕೊರೋನಾ ಲಸಿಕೆ ಪ್ರಯೋಗ!
ಇನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಳೆದ ತಿಂಗಳೇ ಮಾನವರ ಮೇಲೆ ಪ್ರಯೋಗ ಆರಂಭಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಸಹಯೋಗದಲ್ಲಿ ಇದು ಕೆಲಸ ಮಾಡುತ್ತಿದೆ. ಈ ಆಗಸ್ಟ್ 15ರೊಳಗೇ ಲಸಿಕೆ ಲಭಿಸುವಂತಾಗಬೇಕು ಎಂಬ ಐಸಿಎಂಆರ್ ನಿರ್ದೇಶನದ ಮೇರೆಗೆ ಟ್ರಯಲ್ ನಡೆದಿದೆ.
ಪೆನೇಸಿಯಾ ಬಯೋಟೆಕ್ ಕಂಪನಿಯು ಮುಂದಿನ ವರ್ಷಾರಂಭದ ವೇಳೆಗೆ ಲಸಿಕೆ ಲಭಿಸುವ ವಿಶ್ವಾಸ ವ್ಯಕ್ತಪಡಿಸಿದ್ದು, 500 ದಶಲಕ್ಷ ಡೋಸ್ ಉತ್ಪಾದಿಸುವ ಗುರಿ ಹೊಂದಿದೆ.
ಇನ್ನು ಇಂಡಿಯನ್ ಇಮ್ಯುನಾಲಾಜಿಕಲ್ಸ್ ಕಂಪನಿ, ಆಸ್ಪ್ರೇಲಿಯಾದ ಗ್ರೀಫಿತ್ ವಿವಿ ಜತೆಗೂಡಿ ಲಸಿಕೆ ಸಿದ್ಧಪಡಿಸುತ್ತಿದೆ.
ಲಸಿಕೆಯನ್ನು ವಿವಿಧ ಹಂತದಲ್ಲಿ ಅಭಿವೃದ್ಧಿಪಡಿಸಬೇಕಾಗುತ್ತದೆ. ಮೊದಲ ಹಂತದಲ್ಲಿ ಕಮ್ಮಿ ಜನರ ಮೇಲೆ ಇದನ್ನು ಪ್ರಯೋಗಿಸಿ ಲಸಿಕೆ ಸುರಕ್ಷಿತವಾ ಹಾಗೂ ರೋಗನಿರೋಧಕ ಶಕ್ತಿ ಉತ್ಪತ್ತಿ ಮಾಡುತ್ತಾ ಎಂದು ಖಚಿತಪಡಿಸಿಕೊಳ್ಳಬೇಕು. 2ನೇ ಹಂತದಲ್ಲಿ ಸುರಕ್ಷತಾ ಅಧ್ಯಯನ ನಡೆಸಲಾಗುತ್ತದೆ. 3ನೇ ಹಂತದಲ್ಲಿ ಸಾವಿರಾರು ಜನರ ಮೇಲೆ ಟೆಸ್ಟ್ ಮಾಡಿ ಲಸಿಕೆಯ ಕ್ಷಮತೆ ಪರೀಕ್ಷಿಸಲಾಗುತ್ತದೆ.