ಯುಪಿಯಲ್ಲಿ ತೀವ್ರ ಶಾಖದ ಹೊಡೆತ: 3 ದಿನದಲ್ಲಿ 54 ಜನರ ಸಾವು, 400 ಜನ ಆಸ್ಪತ್ರೆಗೆ ದಾಖಲು

Published : Jun 18, 2023, 04:29 PM IST
 ಯುಪಿಯಲ್ಲಿ ತೀವ್ರ ಶಾಖದ ಹೊಡೆತ: 3 ದಿನದಲ್ಲಿ 54 ಜನರ ಸಾವು, 400 ಜನ ಆಸ್ಪತ್ರೆಗೆ ದಾಖಲು

ಸಾರಾಂಶ

ಸಾವಿಗೆ ಬೇರೆ ಬೇರೆ ಕಾರಣಗಳಿದ್ದರೂ, ತೀವ್ರ ಶಾಖವೂ ಒಂದು ಕಾರಣ ಆಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೆ, ತೀವ್ರ ಶಾಖದ ಹೊಡೆತದಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದೂ ಅವರು ಹೇಳಿದರು.

ನವದೆಹಲಿ (ಜೂನ್ 18, 2023): ಜೂನ್‌ ತಿಂಗಳು ಅರ್ಧ ಕಳೆದಿದ್ರೂ ದೇಶದ ಬಹುತೇಕ ಕಡೆ ಬಿಸಿಲು ಸಿಕ್ಕಾಪಟ್ಟೆ ಇದೆ. ಇದರಿಂದ ಶಾಖವೂ ಅಧಿಕವಾಗಿದೆ. ಈ ಹಿನ್ನೆಲೆ ಜನ ಸಾಯುತ್ತಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಲ್ಲಿ 54 ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 400 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದೂ ವರದಿಯಾಗಿದೆ.

ಇನ್ನು, ಸಾವಿಗೆ ಬೇರೆ ಬೇರೆ ಕಾರಣಗಳಿದ್ದರೂ, ತೀವ್ರ ಶಾಖವೂ ಒಂದು ಕಾರಣ ಆಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೆ, ತೀವ್ರ ಶಾಖದ ಹೊಡೆತದಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದೂ ಅವರು ಹೇಳಿದರು. ತೀವ್ರವಾದ ಶಾಖದ ಅಲೆಯು ಉತ್ತರ ಪ್ರದೇಶವನ್ನು ಆವರಿಸಿದ್ದು, ಹೆಚ್ಚಿನ ಸ್ಥಳಗಳು 40 ಡಿಗ್ರಿಗೂ ಅಧಿಕ ತಾಪಮಾನವನ್ನು ನೋಡುತ್ತವೆ.

ಇದನ್ನು ಓದಿ: ಬಿಸಿಲಿನ ಬೇಗೆಯಿಂದ ಬಳಲುತ್ತಿರುವವರಿಗೆ ಗುಡ್‌ ನ್ಯೂಸ್‌: ರಾಜ್ಯದಲ್ಲಿ ಇಂದಿನಿಂದ 5 ದಿನ ಮಳೆ..!

ಹಠಾತ್ ಸಾವುಗಳು ಮತ್ತು ರೋಗಿಗಳು ಜ್ವರ, ಉಸಿರಾಟದ ತೊಂದರೆ ಮತ್ತು ಇತರ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದು, ಇದರಿಂದ ಆಸ್ಪತ್ರೆ ತುಂಬುತ್ತಿದೆ. ಇದು ತನ್ನ ಸಿಬ್ಬಂದಿಯನ್ನು ಎಚ್ಚರದಿಂದಿರುವಂತೆ ಮಾಡಿದೆ. ಜೂನ್ 15 ರಂದು 23 ರೋಗಿಗಳು, 16 ರಂದು 20 ರೋಗಿಗಳು ಹಾಗೂ 17 ರಂದು ಅಂದರೆ ನಿನ್ನೆ 11 ರೋಗಿಗಳು ಮೃತಪಟ್ಟಿದ್ದಾರೆ ಎಂದು ಬಲ್ಲಿಯಾ ಜಿಲ್ಲಾ ಆಸ್ಪತ್ರೆಯ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಎಸ್‌.ಕೆ. ಯಾದವ್ ತಿಳಿಸಿದ್ದಾರೆ.

ಇನ್ನು, ಈ ಸಂಬಂಧ ಪ್ರತಿಕ್ರಿಯೆ ನೀಡಿದ ಅಜಂಗಢ ಸರ್ಕಲ್‌ನ ಹೆಚ್ಚುವರಿ ಆರೋಗ್ಯ ನಿರ್ದೇಶಕ ಡಾ. ಬಿ.ಪಿ. ತಿವಾರಿ, ಲಕ್ನೋದಿಂದ ತಂಡವೊಂದು ಬರುತ್ತಿದ್ದು, ಯಾವುದಾದರೂ ಕಾಯಿಲೆ ಪತ್ತೆಯಾಗದಿದ್ದಲ್ಲಿ ತನಿಖೆ ನಡೆಸುತ್ತದೆ ಎಂದು ಹೇಳಿದ್ದಾರೆ. ಹಾಗೆ, ತುಂಬಾ ಬಿಸಿಯಾಗಿದ್ದಾಗ ಅಥವಾ ಶೀತವಾಗಿದ್ದಾಗ, ಉಸಿರಾಟದ ರೋಗಿಗಳು, ಮಧುಮೇಹ ರೋಗಿಗಳು ಮತ್ತು ರಕ್ತದೊತ್ತಡ ರೋಗಿಗಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಈ ಹಿನ್ನೆಲೆ ತಾಪಮಾನ ಸ್ವಲ್ಪ ಹೆಚ್ಚಾಗುವುದು ಅವರ ಸಾವಿಗೆ ಕಾರಣವಾಗಬಹುದು ಎಂದು ಡಾ. ಬಿ.ಪಿ. ತಿವಾರಿ ಊಹಿಸಿದ್ದಾರೆ.

ಇದನ್ನೂ ಓದಿ: ಬಿಸಿಗಾಳಿಗೆ ಉತ್ತರ ತತ್ತರ: ಪ್ರಯಾಗದಲ್ಲಿ 44.2 ದಾಖಲು , ಧಗಧಗಿಸಿದ ಧರೆ

ಇನ್ನು, ಜಿಲ್ಲಾಸ್ಪತ್ರೆಯಲ್ಲಿ ನೂಕು ನುಗ್ಗಲು ಉಂಟಾಗಿದ್ದು, ರೋಗಿಗಳು ಸ್ಟ್ರೆಚರ್‌ಗಳನ್ನು ಪಡೆಯಲು ಸಹ ಸಾಧ್ಯವಾಗುತ್ತಿಲ್ಲ. ಅನೇಕ ಅಟೆಂಡರ್‌ಗಳು ತಮ್ಮ ರೋಗಿಗಳನ್ನು ತುರ್ತು ವಿಭಾಗಕ್ಕೆ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಹೆಚ್ಚುವರಿ ಆರೋಗ್ಯ ನಿರ್ದೇಶಕರು ಹೇಳಿಕೊಂಡಿದ್ದು, ಹತ್ತು ರೋಗಿಗಳು ಒಂದೇ ಸಮಯದಲ್ಲಿ ಬಂದರೆ ಕಷ್ಟವಾಗುತ್ತದೆ. ಆದರೆ ನಮ್ಮ ಬಳಿ ಸ್ಟ್ರೆಚರ್‌ಗಳಿವೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ಮದ್ಯೆ, ಬಲ್ಲಿಯಾದಲ್ಲಿ ನಡೆದ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಮತ್ತು ಅವರು ಅಲ್ಲಿನ ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಗಮನಿಸುತ್ತಿದ್ದೇನೆ ಎಂದು ಯುಪಿ ಆರೋಗ್ಯ ಸಚಿವ ಬ್ರಜೇಶ್ ಪಾಠಕ್ ಅವರು ಹೇಳಿದ್ದಾರೆ. "ನಿರ್ದೇಶಕ ಮಟ್ಟದ ಇಬ್ಬರು ಹಿರಿಯ ವೈದ್ಯರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅವರು ಶೀಘ್ರದಲ್ಲೇ ಪರಿಸ್ಥಿತಿಯನ್ನು ಲಿಖಿತವಾಗಿ ತಿಳಿಸುತ್ತಾರೆ" ಎಂದು ಅವರು ಹೇಳಿದರು. ಅಲ್ಲದೆ, ಬಿಸಿಗಾಳಿಯಿಂದ ಉಂಟಾದ ಸಾವುಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಅಸಡ್ಡೆ ಹೇಳಿಕೆ ನೀಡುತ್ತಿದ್ದ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ದಿವಾಕರ್ ಸಿಂಗ್ ಅವರನ್ನು ತಮ್ಮ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದೂ ತಿಳಿಸಿದ್ದಾರೆ. 

ಇದನ್ನೂ ಓದಿ: ದೇಶದ ಹಲವು ರಾಜ್ಯಗಳಿಗೆ ಬಿಸಿಗಾಳಿ ಹೊಡೆತ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಈ ಭಾಗದ ಎಲ್ಲ ಮುಖ್ಯ ವೈದ್ಯಾಧಿಕಾರಿಗಳಿಗೆ ಕೂಡಲೇ ಪ್ರತಿ ರೋಗಿಯನ್ನು ಗುರುತಿಸಿ ಸೂಕ್ತ ವೈದ್ಯಕೀಯ ಸೇವೆ ಒದಗಿಸುವಂತೆ ಸೂಚಿಸಲಾಗಿದೆ. ಎಲ್ಲಾ ಔಷಧಗಳು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದ್ದು, ಯಾವುದೇ ರೋಗಿ ಅವುಗಳನ್ನು ಹೊರಗಿನಿಂದ ಖರೀದಿಸಬೇಕಾಗಿಲ್ಲ. ನಾನೇ ಇದನ್ನು ಗಮನಿಸುತ್ತಿದ್ದೇನೆ ಎಂದೂ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ