ಒಂದೇ ವರ್ಷದಲ್ಲಿ 4 ಕೋಟಿ ಜನ ಮೈಲುಗಲ್ಲು ಸಾಧಿಸಿದ ಕಾರಣ ಬೆಂಗಳೂರು ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ (ಎಸಿಐ) ಅನ್ವಯ ‘ದೊಡ್ಡ ವಿಮಾನ ನಿಲ್ದಾಣ’ ಸ್ಥಾನವನ್ನು ಪಡೆದುಕೊಂಡಿದೆ. 2024ರ ಅ.20ರ ಒಂದೇ ದಿನ 1,26,532 ಜನರು ಪ್ರಯಾಣಿಸಿರುವುದು ಒಂದೇ ದಿನದ ದಾಖಲೆಯಾಗಿದೆ.
ಮುಂಬೈ(ಜ.10): ದೇಶದ ಮೂರನೇ ದೊಡ್ಡ ವಿಮಾನ ನಿಲ್ದಾಣವಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ವರ್ಷ 4.07 ಕೋಟಿ ಜನರು ಪ್ರಯಾಣ ಮಾಡಿದ್ದಾರೆ. ಇದು 2023ಕ್ಕೆ ಹೋಲಿಸಿದರೆ ಶೇ.9ರಷ್ಟು ಬೆಳವಣಿಗೆಯಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ತಿಳಿಸಿದೆ.
ಒಂದೇ ವರ್ಷದಲ್ಲಿ 4 ಕೋಟಿ ಜನ ಮೈಲುಗಲ್ಲು ಸಾಧಿಸಿದ ಕಾರಣ ಬೆಂಗಳೂರು ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ (ಎಸಿಐ) ಅನ್ವಯ ‘ದೊಡ್ಡ ವಿಮಾನ ನಿಲ್ದಾಣ’ ಸ್ಥಾನವನ್ನು ಪಡೆದುಕೊಂಡಿದೆ. 2024ರ ಅ.20ರ ಒಂದೇ ದಿನ 1,26,532 ಜನರು ಪ್ರಯಾಣಿಸಿರುವುದು ಒಂದೇ ದಿನದ ದಾಖಲೆಯಾಗಿದೆ. ಅ.17ರಂದು ಗರಿಷ್ಠ 782 ವಿಮಾನಗಳು ಸಂಚರಿಸಿವೆ. ಡಿ.31ರವರೆಗೆ ಬೆಂಗಳೂರು 75 ದೇಶೀಯ ಮತ್ತು 30 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಜೊತೆ ನೇರ ಸಂಪರ್ಕ ಹೊಂದಿದೆ ಎಂದು ಬಿಐಎಎಲ್ ತಿಳಿಸಿದೆ.
ಕೆಂಪೇಗೌಡ ಏರ್‌ಪೋರ್ಟ್‌ನಿಂದ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳ!
ಹೊಸ ಏರ್‌ಲೈನ್ಸ್ ಆಗಮನ:
ಬೆಂಗಳೂರು ವಿಮಾನ ನಿಲ್ದಾಣಕ್ಕೆ 2024 ಶುಭವರ್ಷವಾಗಿದ್ದು, ಹೊಸ ದೇಶೀಯ ಮತ್ತು ಅಂತಾರಾಷ್ಟ್ರೀಯ ಏರ್‌ಲೈನ್ಸ್‌ಗಳು ಆಗಮಿಸಿವೆ. ಓಮಾನ್‌ನ ಸಲಾಂ ಏರ್, ಮಾಲ್ಡೀವ್ಸ್‌ನ ಮಾಂತಾ ಏರ್, ಬ್ರಿಟನ್‌ನ ವರ್ಜಿನ್ ಅಟ್ಲಾಂಟಿಕ್ ಮತ್ತು ಭಾರತದ ಹೊಸ ಕಂಪನಿ ಫ್ಲೈ-91 ಬೆಂಗಳೂರಿನಿಂದ ಕಾರ್ಯಾಚರಣೆ ಆರಂಭಿಸಿವೆ. ಇದರ ಜೊತೆಗೆ ಹಾಲಿ ಇರುವ ವಿಮಾನಗಳು ತಮ್ಮ ಸಂಚಾರ ಸಾಮರ್ಥ್ಯವನ್ನು ಇಮ್ಮಡಿಗೊಳಿಸಿಕೊಂಡಿವೆ.
ಸರಕು ಸಾಗಣೆಯಲ್ಲಿಯೂ ಗಣನೀಯ ಏರಿಕೆ:
2024ರಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಮೂಲಕ 4,96,227 ಮೆಟ್ರಿಕ್ ಟನ್ ಸರಕು ಸಾಗಣೆಯಾಗಿವೆ. ಇದು 2023ಕ್ಕೆ ಹೋಲಿಸಿದರೆ ಶೇ.17ರಷ್ಟು ಏರಿಕೆಯಾಗಿದೆ. ಇನ್ನು ಅಂತಾರಾಷ್ಟ್ರೀಯವಾಗಿ 3,13,981 ಮೆಟ್ರಿಕ್ ಟನ್ ಸರಕು ಸಾಗಣೆಯಾಗಿದ್ದು, ಶೇ.23ರಷ್ಟು ಏರಿಕೆಯಾಗಿದೆ. ದೇಶೀಯವಾಗಿ 1,82,246 ಮೆಟ್ರಿಕ್ ಟನ್ ಸರಕು ಚಲನವಾಗಿದ್ದು, ಶೇ.9ರಷ್ಟು ವೃದ್ಧಿಯಾಗಿದೆ ಎಂದು ಬಿಐಎಎಲ್ ತಿಳಿಸಿದೆ.