Canada Federal Election 2025: ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಮುಂಬರುವ ಫೆಡರಲ್ ಚುನಾವಣೆಯಲ್ಲಿ ಕೆನಡಾದ ಪ್ರಧಾನ ಮಂತ್ರಿ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದ್ದು, ಚಂದ್ರ ಆರ್ಯ ಅವರು ಭಾರತೀಯ ಮೂಲದ ಎರಡನೇ ಸ್ಪರ್ಧಿಯಾಗಿದ್ದಾರೆ.
ಒಟ್ಟಾವ: ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನವರಾದ ಕೆನಡಾದ ಸಂಸದ ಚಂದ್ರ ಆರ್ಯ, ಮುಂಬರುವ ಫೆಡರಲ್ ಚುನಾವಣೆಯಲ್ಲಿ ಕೆನಡಾದ ಪ್ರಧಾನ ಮಂತ್ರಿ ಸ್ಥಾನಕ್ಕೆ ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ತಮ್ಮ ನಾಯಕತ್ವದ ಬಗ್ಗೆ ಲಿಬರಲ್ ಪಕ್ಷದೊಳಗೆ ಅಸಮಾಧಾನ ಎದುರಿಸುತ್ತಿದ್ದ ಜಸ್ಟಿನ್ ಟ್ರುಡೊ ಅವರು ರಾಜೀನಾಮೆ ನೀಡಿದ 2 ದಿನಗಳ ನಂತರ ಕೆನಡಾ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಲು ಚಂದ್ರ ಆರ್ಯ ಅವರು ತಾವೂ ಸ್ಪರ್ಧೆ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಇವರಿಗೂ ಮುನ್ನ ಭಾರತೀಯ ಮೂಲದ ಕೆನಡಾ ಸಚಿವೆ ಅನಿತಾ ಆನಂದ್ ಸ್ಪರ್ಧೆ ಘೋಷಿಸಿದ್ದರು.
ಇದನ್ನೂ ಓದಿ: ಜಸ್ಟಿನ್ ಟ್ರುಡೊ ರಾಜೀನಾಮೆಗೆ ಭಾರತವನ್ನ ಎದುರು ಹಾಕಿಕೊಂಡಿದ್ದೇ ಮೊದಲ ಕಾರಣ!
ಚಂದ್ರ ಆರ್ಯ ಅವರು ಧಾರವಾಡದ ಕೌಸಾಳಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2006ರಲ್ಲಿ ಕೆನಡಾಕ್ಕೆ ವಲಸೆ ಬಂದರು ಹಾಗೂ 2015 ರ ಫೆಡರಲ್ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದ್ದರು ಮತ್ತು 2019ರ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾಗಿದ್ದರು. ಖಲಿಸ್ತಾನಿ ಉಗ್ರರ ವಾದಿಸುವ ನಿರ್ಗಮಿತ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಬೆಂಬಲಿಗರಾಗಿದ್ದರೂ, ಆರ್ಯ ಅವರು ಹಿಂದೂಗಳ ಪರ ದನಿ ಎತ್ತಿ ಖ್ಯಾತಿ ಪಡೆದಿದ್ದಾರೆ.