ವರ್ಷದ ಮೊದಲ ದಿನ ಅಯೋಧ್ಯೆಗೆ 3 ಲಕ್ಷ ಭಕ್ತರು: ಕರ್ನಾಟಕದಲ್ಲೂ ಪ್ರವಾಸಿಗರ ದಂಡು!

Published : Jan 02, 2025, 04:43 AM IST
ವರ್ಷದ ಮೊದಲ ದಿನ ಅಯೋಧ್ಯೆಗೆ 3 ಲಕ್ಷ ಭಕ್ತರು: ಕರ್ನಾಟಕದಲ್ಲೂ ಪ್ರವಾಸಿಗರ ದಂಡು!

ಸಾರಾಂಶ

ಹೊಸ ವರ್ಷದ ಮೊದಲ ದಿನವಾದ ಬುಧವಾರ ದೇಶವ್ಯಾಪಿ ಪೂಜಾ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಭಕ್ತರು ಇಷ್ಟಾರ್ಥ ನೆರವೇರಿಸುವಂತೆ ಬೇಡಿಕೊಂಡಿದ್ದಾರೆ. ಅದರಲ್ಲೂ ಹಿಂದೂಗಳ ಪ್ರಮುಖ ಕ್ಷೇತ್ರವಾಗಿರುವ ಅಯೋಧ್ಯೆ ಮತ್ತು ಕಾಶಿಯಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದರು.   

ನವದೆಹಲಿ(ಜ.02):  ಹೊಸ ವರ್ಷದ ಮೊದಲ ದಿನವಾದ ಬುಧವಾರ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತಸಾಗರವೇ ಹರಿದುಬಂತು. ಬೆಳಗ್ಗೆ 7ರಿಂದ ಆರಂಭವಾದ ಶ್ರೀರಾಮನ ದರ್ಶನ ರಾತ್ರಿ 9ರವೆಗೂ ಅಡೆತಡೆಯಿಲ್ಲದೇ ನಡೆಯಿತು ಹಾಗೂ ಈ 14 ಗಂಟೆಯ ಅವಧಿಯಲ್ಲಿ 3 ಲಕ್ಷ ಭಕ್ತರು ಭೇಟಿ ನೀಡಿದರು. ಇದೇ ರೀತಿ ದೇಶದ ಹಾಗೂ ಕರ್ನಾಟಕದ ವಿವಿಧ ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಜನಸಾಗರವೇ ಹರಿದು ಬಂತು.

ಹೊಸ ವರ್ಷದ ಮೊದಲ ದಿನವಾದ ಬುಧವಾರ ದೇಶವ್ಯಾಪಿ ಪೂಜಾ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಭಕ್ತರು ಇಷ್ಟಾರ್ಥ ನೆರವೇರಿಸುವಂತೆ ಬೇಡಿಕೊಂಡಿದ್ದಾರೆ. ಅದರಲ್ಲೂ ಹಿಂದೂಗಳ ಪ್ರಮುಖ ಕ್ಷೇತ್ರವಾಗಿರುವ ಅಯೋಧ್ಯೆ ಮತ್ತು ಕಾಶಿಯಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದರು. 

ಭಕ್ತರ ಅನುಕೂಲಕ್ಕಾಗಿ ಅಯೋಧ್ಯೆ ರಾಮ ಮಂದಿರಕ್ಕೆ 3 ಲಿಫ್ಟ್‌ ಅಳವಡಿಕೆ

ಕಳೆದ ವರ್ಷ ಜನವರಿಯಲ್ಲಿ ಉದ್ಘಾಟನೆಗೊಂಡ ರಾಮ ಮಂದಿರದಲ್ಲಿ 3 ಲಕ್ಷಕ್ಕಿಂತ ಹೆಚ್ಚಿನ ಜನರು ಬಾಲರಾಮನ ದರ್ಶನ ಪಡೆದರೆ, ಇತ್ತ ಕಾಶಿಯಲ್ಲಿ 8 ಲಕ್ಷಕ್ಕೂ ಅಧಿಕ ಭಕ್ತರು ವಿಶ್ವನಾಥನ ದರ್ಶನ ಪಡೆದರು. ಹನುಮಾನ್‌ ಗಡಿ ಮಂದಿರದಲ್ಲಿಯೂ ಜನದಟ್ಟಣೆ ಹೆಚ್ಚಿತ್ತು. ಇನ್ನು ಕಾಶಿಯಲ್ಲಿ ಬುಧವಾರ ಮುಂಜಾನೆ 3ರಿಂದಲೇ ಭಕ್ತರು ಸಾಲುಗಟ್ಟಿನಿಂತು ದೇವರ ದರ್ಶನ ಪಡೆದುಕೊಂಡರು. ಉಳಿದಂತೆ ತಿರುಪತಿ, ದೆಹಲಿ, ಪಟನಾ, ಅಮೃತಸರ, ಪುರಿ, ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶದ ವಿವಿಧ ದೇಗುಲಗಳಿಗೂ ಜನರು ಭಾರೀ ಪ್ರಮಾಣದಲ್ಲಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು, ಹಂಪಿಗೆ 25 ಸಾವಿರ ಪ್ರವಾಸಿಗರು

ಬೆಂಗಳೂರು: ರಾಜ್ಯಾದ್ಯಂತ ಹೊಸ ವರ್ಷಾಚರಣೆಯ ಸಡಗರ. ಸಂಭ್ರಮ ಮನೆ ಮಾಡಿದೆ. ಬೀಚ್, ಪ್ರವಾಸಿ ತಾಣ ಗಳಲ್ಲಿ ಪ್ರವಾಸಿಗರು ರಜೆಯ ಮೋಜು ಅನುಭವಿ ಸುತ್ತಿದ್ದಾರೆ. ಪ್ರಸಿದ್ದ ದೇವಸ್ಥಾನಗಳಿಗೆ ಭಕ್ತರು ಸಾಗ ರೋಪಾದಿಯಲ್ಲಿ ಆಗಮಿಸುತ್ತಿದ್ದು, ವಿಶೇಷ ಪೂಜೆ ನೆರವೇರಿಸುತ್ತಿದ್ದಾರೆ. ಹಲವು ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದೆ. 

ವಿಶ್ವವಿಖ್ಯಾತ ಹಂಪಿಗೆ 25 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು. ಕೊಪ್ಪಳದ ಹುಲಿಗೆಮ್ಮ ದೇವಸ್ಥಾನ, ಆಂಜನಾದ್ರಿಯ ಬೆಟ್ಟಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು. ಕೊಪ್ಪಳದ ಗವಿಮಠಕ್ಕೂ ಭಕ್ತರು ಭೇಟಿ ನೀಡಿ ಕರ್ತೃ ಗದ್ದುಗೆಯ ದರ್ಶನ ಪಡೆದರು. ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮಿ ಮಠಕ್ಕೆ 20 ಸಾವಿರ ಭಕ್ತರು ಭೇಟಿ ನೀಡಿದ್ದರು. 

ಗೋಕರ್ಣ, ಇಡಗುಂಜಿ, ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ, ಮೈಸೂರಿನ ಚಾಮುಂಡಿ ಬೆಟ್ಟ ಶೃಂಗೇರಿ ಸೇರಿ ವಿವಿಧ ದೇವಾಲಯಗಳಲ್ಲಿ ಭಕ್ತರ ದಂಡೇ ನೆರೆದಿದೆ. ಮೈಸೂರಿನ ವಿಜಯನಗರದ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷಾಚರಣೆ ಅಂಗವಾಗಿ ಭಕ್ತರಿಗೆ 2 ಲಕ್ಷ ಲಾಡುಗಳನ್ನು ವಿತರಿಸಲಾಯಿತು. ಮಲೆ ಮಾದೇಶ್ವರ ಬೆಟ್ಟದಲ್ಲಿ ತಮಿಳುನಾಡಿನ ಉದ್ಯಮಿಯೊಬ್ಬರು ದೇವಾಲಯಕ್ಕೆ ವಿಶೇಷ ಅಲಂಕಾರ ಸೇವೆ ಮಾಡಿಸಿದರು. ಬಿಳಿಗಿರಿರಂಗನ ಬೆಟ್ಟದಲ್ಲಿ ಭಕ್ತರ ದಟ್ಟಣೆಯಿತ್ತು. ಧರ್ಮಸ್ಥಳದಲ್ಲಿ ಸುಮಾರು 80 ಜನರ ತಂಡ ₹20 ಲಕ್ಷ ವೆಚ್ಚದಲ್ಲಿ ಅಲಂಕಾರ ಸೇವೆ ಮಾಡಿದ್ದರು. 

ಶಿವಗಂಗೆ ಕ್ಷೇತ್ರಕ್ಕೆ ಎರಡೂ ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ಕೊಟ್ಟಿದ್ದರು. ನಂದಿಗಿರಿಧಾಮದಲ್ಲಿ ಪ್ರವಾಸಿಗರು ವರ್ಷದ ಮೊದಲ ಸೂರ್ಯೋದಯ ಕಣ್ಣುಂಬಿಕೊಂಡರು. ಆವಲಗುರ್ಕಿಯ ಈಶಾ ಕೇಂದ್ರಕ್ಕೆ ಲಕ್ಷಕ್ಕೂ ಅಧಿಕ ಸಂಖ್ಯೆಯ ಪ್ರವಾ ಸಿಗರು ಭೇಟಿ ನೀಡಿದ್ದರು. ಗುಡಿಬಂಡೆಯ ಅಮಾನಿ ಭೈರ ಸಾಗರ ಕೆರೆ ವೀಕ್ಷಣೆಗೂ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಕೆ.ಆರ್.ಪೇಟೆಯ ಭೂ ವರಹನಾಥ ದೇವಾಲಯದಲ್ಲಿ ಹಲವು ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಹೊಸವರ್ಷಕ್ಕೆ ಅಯೋಧ್ಯೆ ಹೋಟೆಲ್‌ ಪೂರ್ತಿ ಬುಕ್‌: ದರ್ಶನ ಅವಧಿ ವಿಸ್ತರಣೆ

ಮುರ್ಡೇಶ್ವರ ಕಡಲತೀರ ಪ್ರವಾಸಿಗರಿಗೆ ಮುಕ್ತ 

ಮುರ್ಡೇಶ್ವರ ಸಮುದ್ರ ತೀರ ಬುಧವಾರ ಸಂಜೆ ಸಾರ್ವಜನಿಕರಿಗೆ ಮುಕ್ತವಾಗಿದೆ. ಮುರ್ಡೇಶ್ವರದಲ್ಲಿ ಕಳೆದ ಡಿ.10ರಂದು ಕೋಲಾರದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದ ಅಲೆಯ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದರಿಂದ ಭದ್ರತಾ ವ್ಯವಸ್ಥೆ ಇಲ್ಲ ಎಂದು ಸಂಪೂರ್ಣ ಬೀಚನ್ನು ಬಂದ್ ಮಾಡಿ ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಬೀಚ್ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಪ್ರತಿವರ್ಷವೂ ಡಿಸೆಂಬರ್‌ನಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮುರ್ಡೇಶ್ವರ ಈ ವರ್ಷ ಖಾಲಿಯಾಗಿತ್ತು. ಡಿಸೆಂಬರ್ ಕೊನೆ ದಿನ ಹೊಸ ವರ್ಷದ ವರ್ಷಾಚರಣೆಗೂ ಬೀಚ್ ಸಾರ್ವಜನಿಕರಿಗೆ ಮುಕ್ತವಾಗಲಿಲ್ಲ. 

ಜ.1ರಂದು ಸಂಜೆ ಸಾಕಷ್ಟು ಮುಂಜಾಗ್ರತಾ ಕ್ರಮದೊಂದಿಗೆ ಲೈಫ್ ಜಾಕೆಟ್, ಲೈಫ್ ಗಾರ್ಡ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ನೇಮಕ ಮಾಡುವುದರೊಂದಿಗೆ ಜಿಲ್ಲಾಧಿಕಾರಿ ಸಮುದ್ರ ಕಿನಾರೆಯನ್ನು ಸಾರ್ವಜನಿಕರಿಗೆ ಮುಕ್ತ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..