ಮುಂಬೈನಲ್ಲಿ 25 ವರ್ಷದ ಏರ್ ಇಂಡಿಯಾ ಮಹಿಳಾ ಪೈಲಟ್ ಸಾವಿಗೆ ಶರಣಾಗಿದ್ದು,. ಪೋಷಕರು ಯುವತಿಯ ಬಾಯ್‌ಫ್ರೆಂಡ್ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
ನವದೆಹಲಿ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿದ್ದ 25ರ ಹರೆಯದ ಮಹಿಳಾ ಪೈಲಟ್‌ವೊಬ್ಬರು ನೇಣಿಗೆ ಶರಣಾದ ಆಘಾತಕಾರಿ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಆದರೆ ಯುವತಿಯ ಪೋಷಕರು ಹಾಗೂ ಸಂಬಂಧಿಗಳು ಯುವತಿಯ ಬಾಯ್‌ಫ್ರೆಂಡ್ ವಿರುದ್ಧ ಆರೋಪ ಮಾಡಿದ್ದಾರೆ. ಆತ ತಮ್ಮ ಪುತ್ರಿಯನ್ನು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಗೋರಕ್‌ಪುರ ಮೂಲದ ಸೃಷ್ಟಿ ಟುಲಿ, ಮುಂಬೈನ ತನ್ನ ಬಾಡಿಗೆ ಮನೆಯಲ್ಲಿ ಸಾವಿಗೆ ಶರಣಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಕೆಯ ಬಾಯ್‌ಫ್ರೆಂಡ್ ಆದಿತ್ಯ ಪಂಡಿತ್(27)ನನ್ನು ಪೊಲೀಸರು ಬಂಧಿಸಿದ್ದಾರೆ. ಸಾವಿಗೆ ಕುಮ್ಮಕ್ಕು ನೀಡಿದ್ದಾನೆ, ಮಾನಸಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆಯುವ 15 ನಿಮಿಷಕ್ಕೂ ಮೊದಲು ಸೃಷ್ಟಿ ತನ್ನ ತಾಯಿ ಹಾಗೂ ಅತ್ತೆಯ ಜೊತೆ ಸಹಜವಾಗಿ ನಗುನಗುತ್ತಾ ಮಾತನಾಡಿದ್ದಾರೆ. ಹೀಗಾಗಿ ಆಕೆಗೆ 15 ನಿಮಿಷದ ಒಳಗೆ ಏನಾಯ್ತು, ಆಕೆ ಸಾವಿಗೆ ಶರಣಾಗಿಲ್ಲ, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಸಾವಿಗೆ ಶರಣಾದ ಸೃಷ್ಟಿ ಪೋಷಕರು ದೂರಿದ್ದಾರೆ. ಆಕೆಯನ್ನು ಆಕೆಯ ಗೆಳೆಯ ಆದಿತ್ಯ ಪಂಡಿತ್ ಹತ್ಯೆ ಮಾಡಿದ್ದಾನೆ. ಅಲ್ಲದೇ ಆತ ಹಣಕ್ಕಾಗಿ ಆಕೆಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಾರೆ. ಆತ ಆಕೆಯನ್ನು ಮೇಲಿಂದ ತಳ್ಳಿದರೆ ಆಕೆ ಏನು ಮಾಡಲಾಗುತ್ತದೆ. 15 ನಿಮಿಷದ ಮೊದಲು ಆಕೆ ಚೆನ್ನಾಗಿ ಮಾತನಾಡಿದ್ದಳು. ಆದರೆ ಅದಾಗಿ ಸ್ವಲ್ಪ ಹೊತ್ತಿನಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಇದು ಹೇಗೆ ಆಗಲು ಸಾಧ್ಯ?ಆಕೆಗೆ ಆತ ಏನು ಹೇಳಿದ್ದಾನೆ ಹಾಗೂ ಆತ ಏನು ಮಾಡಿದ್ದಾನೆ ಎಂಬ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ ಎಂದು ಸೃಷ್ಟಿಯ ಚಿಕ್ಕಪ್ಪ ವಿವೇಕ್ ಟುಲಿ ಹೇಳಿದ್ದಾರೆ. ಅಲ್ಲದೇ ಅವರು ಮುಂಬೈ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.
ಪೊಲೀಸರ ಪ್ರಕಾರ, ವಿಚಾರಣೆ ವೇಳೆ 27 ವರ್ಷದ ಆದಿತ್ಯ ತಾನು ಫರಿದಾಬಾದ್‌ಗೆ ಕಾರಿನಲ್ಲಿ ಹೋಗುತ್ತಿದ್ದಾಗ ಸೋಮವಾರ ಕರೆ ಮಾಡಿದ ಸೃಷ್ಟಿ ತಾನು ಸಾವಿಗೆ ಶರಣಾಗುವುದಾಗಿ ಆತನನ್ನು ಬೆದರಿಸಿದ್ದಾಳೆ. ಹೀಗಾಗಿ ಮರಳಿ ಬಂದ ಆತ ಸೃಷ್ಟಿ ವಾಸವಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ರೂಮ್ ಒಳಗಿನಿಂದ ಲಾಕ್ ಆಗಿತ್ತು. ಇದಾದ ನಂತರ ಕೀ ಮೇಕರ್‌ಗೆ ಕರೆ ಮಾಡಿದ್ದು, ಬಳಿಕ ಬಾಗಿಲು ತೆಗೆದು ನೋಡಿದಾಗ ಡಾಟಾ ಕೇಬಲ್ ಸುತ್ತಿಕೊಂಡಿದ್ದ ಸ್ಥಿತಿಯಲ್ಲಿ ಆಕೆ ಕಂಡು ಬಂದಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
ಈ ಯುವ ಪೈಲಟ್ ಸೃಷ್ಟಿಗೆ ಆದಿತ್ಯ ದೆಹಲಿಯಲ್ಲಿ ಕಾಮರ್ಷಿಯಲ್ ಫ್ಲೈಯಿಂಗ್ ಕೋರ್ಸ್ ನಡೆಸುತ್ತಿದ್ದ ವೇಳೆ ಪರಿಚಯವಾಗಿದ್ದು, ಆಕೆ ಕೋರ್ಸ್ ಮುಗಿಸುತ್ತಿದ್ದ ಸಂದರ್ಭದಲ್ಲೇ ಆದಿತ್ಯ ಕಾಲೇಜಿನಿಂದ ಹೊರ ಬಿದ್ದಿದ್ದ, ಇದಾದ ನಂತರ ಕೋರ್ಸ್ ಪೂರ್ಣಗೊಳಿಸಿದ್ದ ಸೃಷ್ಟಿ ಕಳೆದ ವರ್ಷ ಮುಂಬೈಗೆ ಶಿಫ್ಟ್ ಆಗಿದ್ದಳು. ಇತ್ತ ಆದಿತ್ಯ ದೆಹಲಿಯಲ್ಲಿ ವಾಸ ಮಾಡುತ್ತಿದ್ದು, ಆಗಾಗ ಸೃಷ್ಟಿಯನ್ನು ಬಂದು ಭೇಟಿ ಮಾಡುತ್ತಿದ್ದ. ಆದರೆ ಈಗ ಸೃಷ್ಟಿ ಪೋಷಕರು ಆದಿತ್ಯ ವಿರುದ್ಧ ಕೊಲೆ ಆರೋಪ ಮಾಡಿದ್ದು, ಆದಿತ್ಯ ಆಕೆಗೆ ಮಾನಸಿಕ ಕಿರುಕುಳ ನೀಡಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಆಕೆಗೆ ಅವಹೇಳನ ಮಾಡಿದ್ದಾನೆ. ಮಾಂಸಹಾರ ತಿನ್ನುವುದನ್ನು ನಿಲ್ಲಿಸುವಂತೆ ಒತ್ತಡ ಹೇರಿದ್ದಾನೆ ಎಂದು ಸೃಷ್ಟಿ ಟುಲಿ ಪೋಷಕರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಮಕ್ಕಳ ಈ ಬುದ್ಧೀಗೇಡಿ ನಿಲುವಿನಿಂದ ಪೋಷಕರು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ., ಮಕ್ಕಳನ್ನು ಅವರಿಷ್ಟ ಬಂದಂತೆ ಓದಿಸಿ ದುಡಿಮೆ ಮಾಡಿ ಕನಿಷ್ಠ ಅವರ ಬದುಕು ಅವರು ನೋಡಿಕೊಳ್ಳಲಿ ಎಂದು ಕಳುಹಿಸಿದರೆ ಪ್ರೀತಿ ಪ್ರೇಮದ ಹೆಸರಲ್ಲಿ ಕೆಲ ಮಕ್ಕಳು ಪೋಷಕರು ಇದ್ದಾರೆ ನಮ್ಮ ಮೇಲೆ ಜೀವವನ್ನೇ ಇಟ್ಟಿದ್ದಾರೆ ಎಂಬುದನ್ನು ಮರೆತು ಬದುಕನ್ನೇ ಅಂತ್ಯಗೊಳಿಸಿಕೊಳ್ಳುತ್ತಾರೆ. ಆದರೆ ಈ ಪ್ರಕರಣದಲ್ಲಿ ಇದು ಆತ್ಮಹತ್ಯೆಯೋ ಕೊಲೆಯೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಇದನ್ನೂ ಓದಿ: ಹಿಂದೂ, ಸಿಖ್‌ರಿಗೆ 'ಹಲಾಲ್' ಪ್ರಮಾಣೀಕೃತ ಊಟ ವಿತರಣೆ ನಿಲ್ಲಿಸಲು ಮುಂದಾದ ಏರ್ ಇಂಡಿಯಾ
ಇದನ್ನೂ ಓದಿ:ವಿಮಾನಗಳಿಗೆ ಹುಸಿ ಬಾಂಬ್ ಕರೆ; ನೀವು ಅಪರಾಧಕ್ಕೆ ಬೆಂಬಲ ನೀಡುತ್ತಿದ್ದೀರಿ; ಎಕ್ಸ್‌ಗೆ ಕೇಂದ್ರ ತೀವ್ರ ತರಾಟೆ