
ನವದೆಹಲಿ[ಜು.01]: ಇಂಗ್ಲೆಂಡ್ ವಿರುದ್ಧ ಸೋಲಿನ ಆಘಾತದಿಂದ ಭಾರತ ಹೊರಬರುವ ಮುನ್ನವೇ ಮತ್ತೊಂದು ಶಾಕ್ ಎದುರಾಗಿದ್ದು, ತಂಡದ ಆಲ್ರೌಂಡರ್ ವಿಜಯ್ ಶಂಕರ್ ಕಾಲ್ಬೆರಳಿನ ಗಾಯದಿಂದಾಗಿ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ ವಿಜಯ್ ಶಂಕರ್ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರ್‌ವಾಲ್ ಟೀಂ ಇಂಡಿಯಾ ಕೂಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಮೊದಲ ಸೋಲು-ಪಾಕಿಸ್ತಾನಕ್ಕೆ ನಿರಾಸೆ!
ಈಗಾಗಲೇ ಶಿಖರ್ ಧವನ್ ಗಾಯದ ಸಮಸ್ಯೆಯಿಂದಾಗಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದೀಗ ವಿಜಯ್ ಶಂಕರ್ ಕೂಡಾ ತಂಡದಿಂದ ಹೊರಬಿದ್ದಿದ್ದು ವಿರಾಟ್ ಪಡೆಗೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ. ನೆಟ್ ಪ್ರಾಕ್ಟೀಸ್ ವೇಳೆ ಜಸ್ಪ್ರೀತ್ ಬುಮ್ರಾ ಹಾಕಿದ ಯಾರ್ಕರ್ ವಿಜಯ್ ಕಾಲಿಗೆ ಪೆಟ್ಟಾಗುವಂತೆ ಮಾಡಿದೆ. ಹೀಗಾಗಿ ಅವರು ಸದ್ಯಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆ ಕ್ಷೀಣವಾಗಿರುವುದರಿಂದ ಅವರನ್ನು ತವರಿಗೆ ಕಳಿಸುವುದಾಗಿ ಬಿಸಿಸಿಐ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಧವನ್ ಭಾವನಾತ್ಮಕ ಸಂದೇಶ
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಜಯ್ ಶಂಕರ್ ಕಣಕ್ಕಿಳಿದಿರಲಿಲ್ಲ. ಅವರ ಬದಲಿಗೆ ರಿಷಭ್ ಪಂತ್ ವಿಶ್ವಕಪ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದರು. ಈ ಪಂದ್ಯವನ್ನು ಭಾರತ 31 ರನ್ ಗಳಿಂದ ಸೋಲು ಕಂಡಿತ್ತು.
ಈ ಹಿಂದೆ ಸುವರ್ಣನ್ಯೂಸ್.ಕಾಂ ಮಯಾಂಕ್ ಜತೆ ನಡೆಸಿದ ಸಂದರ್ಶನ ಇಲ್ಲಿದೆ ನೋಡಿ: ಮಯಾಂಕ್ ಅಗರ್’ವಾಲ್ ಜತೆ 10 ಮಾತು ನೂರು ದನಿ..!
ಕನ್ನಡಿಗನಿಗೆ ಚಾನ್ಸ್: ಕಳೆದ ವರ್ಷವಷ್ಟೇ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಮಯಾಂಕ್ ಅಗರ್‌ವಾಲ್ ಆಡಿದ ಎರಡೂ ಪಂದ್ಯಗಳಲ್ಲೂ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಇದೀಗ ಮುಂದಿನ 2 ಪಂದ್ಯಗಳಲ್ಲಿ ಪಂತ್ ವಿಫಲರಾದರೆ, ರಾಹುಲ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಹೀಗಾದಲ್ಲಿ ಮಯಾಂಕ್ ಅಗರ್‌ವಾಲ್ ವಿಶ್ವಕಪ್ ಟೂರ್ನಿಯಲ್ಲೇ ಏಕದಿನ ಕ್ರಿಕೆಟ್’ಗೆ ಆರಂಭಿಕನಾಗಿ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.