ವಿಶ್ವಕಪ್ ಸೆಮೀಸ್‌ನಲ್ಲಿ ಟಾಪ್ 4 ತಂಡಗಳ ಸೆಣಸಾಟ

By Web DeskFirst Published Jul 5, 2019, 2:04 PM IST
Highlights

 ಐಸಿಸಿ ಆಗ್ರ 4 ತಂಡಗಳು ಬಹುತೇಕ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಆಡುವುದು ಖಚಿತವಾದಂತಾಗಿದೆ. ಈಗಾಗಲೇ ಆಸ್ಟ್ರೇಲಿಯಾ, ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸೆಮೀಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದು, ನ್ಯೂಜಿಲೆಂಡ್ ಕೂಡಾ ನಾಲ್ಕರಘಟ್ಟ ಪ್ರವೇಶಿಸುವುದು ಬಹುತೇಕ ಗ್ಯಾರಂಟಿ ಆಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲಂಡನ್[ಜು.05]: 2019ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 10 ತಂಡಗಳು ಮಾತ್ರ ಆಡಲಿವೆ ಎಂದಾಗ ಹಲವು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ವಿರೋಧಿಸಿದ್ದರು. ತಂಡಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದಕ್ಕೆ ಐಸಿಸಿ ಭಾರಿ ಟೀಕೆಗೂ ಗುರಿಯಾಗಿತ್ತು. ಆದರೆ ಸ್ಪರ್ಧೆಯ ಗುಣಮಟ್ಟನ್ನು ಹೆಚ್ಚಿಸುವ ಸಲುವಾಗಿ ಕೇವಲ 10 ತಂಡಗಳಿಗೆ ಪ್ರವೇಶ ನೀಡುತ್ತಿರುವುದಾಗಿ ಐಸಿಸಿ ತನ್ನ ನಿರ್ಧಾರ ಸಮರ್ಥಿಸಿಕೊಂಡಿತ್ತು. ಅದರಂತೆಯೇ ಏಕದಿನ ವಿಶ್ವಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 4 ಸ್ಥಾನಗಳಲ್ಲಿರುವ ತಂಡಗಳೇ ಸೆಮಿಫೈನಲ್‌ನಲ್ಲಿ ಸೆಣಸಲಿವೆ. 

ವಿಶ್ವಕಪ್ 2019 ಒಂದೂ ಜಯ ಕಾಣದೆ ಆಫ್ಘನ್ ಗುಡ್ ಬೈ..!

ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್, 2ನೇ ಸ್ಥಾನದಲ್ಲಿರುವ ಭಾರತ, ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಉಪಾಂತ್ಯದಲ್ಲಿ ಸೆಣಸಲಿವೆ. ನಾಲ್ಕು ಬಲಿಷ್ಠ ತಂಡಗಳ ನಡುವೆ ಫೈನಲ್ ಸ್ಥಾನಕ್ಕಾಗಿ ನಡೆಯುವ ಪೈಪೋಟಿ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ. 

ರೌಂಡ್ ರಾಬಿನ್‌ನಿಂದ ಅನುಕೂಲ: ಈ ಹಿಂದಿನ ವಿಶ್ವಕಪ್‌ಗಳಲ್ಲಿ ಪಾಲ್ಗೊಳ್ಳುವ ತಂಡಗಳನ್ನು 2 ಅಥವಾ 4 ಗುಂಪುಗಳಾಗಿ ವಿಂಗಡಿಸಲಾಗುತ್ತಿತ್ತು. 2015ರ ವಿಶ್ವಕಪ್ ಟೂರ್ನಿಯನ್ನೇ ಉದಾಹರಣೆ ಯಾಗಿ ತೆಗೆದುಕೊಳ್ಳುವುದಾದರೆ, ಇಂಗ್ಲೆಂಡ್ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಹಿಂದಿನ ವಿಶ್ವಕಪ್‌ಗಳಲ್ಲೂ ಇಂತಹ ಪ್ರಸಂಗಗಳು ನಡೆದಿವೆ. ಬಲಿಷ್ಠ ತಂಡವೊಂದು ಗುಂಪು ಹಂತದಲ್ಲಿ ಒಂದು ಪಂದ್ಯ ಸೋತ ಕಾರಣ, ಟೂರ್ನಿಯಿಂದಲೇ ಹೊರಬಿದ್ದಿದೆ. ಇಂತಹ ಎಡವಟ್ಟುಗಳನ್ನು ತಪ್ಪಿಸಲು ಐಸಿಸಿ, ಈ ಬಾರಿ ರೌಂಡ್ ರಾಬಿನ್ ಮಾದರಿಯನ್ನು ಅಳವಡಿಸಿತು. ಈ ಮಾದರಿ ಪ್ರಕಾರ, ಪ್ರತಿ ತಂಡ ಟೂರ್ನಿಯಲ್ಲಿ ಆಡುವ ಇನ್ನುಳಿದ ಎಲ್ಲಾ ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡಬೇಕು. ಮಳೆಯಿಂದಾಗಿ ಭಾರತ-ನ್ಯೂಜಿಲೆಂಡ್ ಪಂದ್ಯ ನಡೆಯದಿದ್ದರೂ, ಎರಡೂ ತಂಡಗಳಿಗೆ ಹೆಚ್ಚಿನ ನಷ್ಟವೇನೂ ಆಗಲಿಲ್ಲ. 

ರಾಯುಡು ವಿದಾಯ: ಶುಭ ಕೋರಿದ ಕೊಹ್ಲಿಗೆ ಅಭಿಮಾನಿಗಳಿಂದ ಕ್ಲಾಸ್..!

ಭಾರತ-ಇಂಗ್ಲೆಂಡ್ ಸೆಮೀಸ್?: ಸೆಮಿಫೈನಲ್‌ನಲ್ಲಿ ಆಡಲಿರುವ ತಂಡಗಳು ಯಾವ್ಯಾವು ಎನ್ನುವುದು ನಿರ್ಧಾರವಾಗಿದ್ದರೂ, ಯಾರ ವಿರುದ್ಧ ಯಾರು ಆಡಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ, ಶನಿವಾರ ತನ್ನ ಅಂತಿಮ ಪಂದ್ಯವನ್ನು ದ.ಆಫ್ರಿಕಾ ವಿರುದ್ಧ ಆಡಲಿದೆ. 13 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿರುವ ಭಾರತ ತನ್ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ದ. ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಗೆದ್ದರೆ 16 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ. ಆಗ ಭಾರತ, ಲಂಕಾವನ್ನು ಸೋಲಿಸಿದರೂ 2ನೇ ಸ್ಥಾನದಲ್ಲೇ ಉಳಿಯಲಿದೆ. ಒಂದೊಮ್ಮೆ ಆಸೀಸ್ ಸೋತು ಭಾರತ ಗೆದ್ದರೆ, ಭಾರತ ಅಗ್ರಸ್ಥಾನಕ್ಕೇರಲಿದೆ. ಭಾರತ ಸೋತರೂ, 2ನೇ ಸ್ಥಾನದಲ್ಲೇ ಉಳಿದುಕೊಳ್ಳಲಿದೆ. ರೌಂಡ್ ರಾಬಿನ್ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡ 4ನೇ ಸ್ಥಾನ ಪಡೆಯುವ ತಂಡದ ವಿರುದ್ಧ ಸೆಮಿಫೈನಲ್‌ನಲ್ಲಿ ಆಡಲಿದೆ. 2 ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು ಮುಖಾಮುಖಿಯಾಗಲಿವೆ. ದ.ಆಫ್ರಿಕಾ ವಿರುದ್ಧ ಆಸೀಸ್ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿ, ಸೆಮೀಸ್‌ನಲ್ಲಿ ಆಸ್ಟ್ರೇಲಿಯಾ- ನ್ಯೂಜಿಲೆಂಡ್ ಹಾಗೂ ಭಾರತ-ಇಂಗ್ಲೆಂಡ್ ಎದುರಾಗಲಿವೆ ಎಂದು ನಿರೀಕ್ಷೆ ಮಾಡಲಾಗಿದೆ.
 

click me!