
ಕಾಕಮಿಗಹರಾ(ಜೂ.12): ಕಿರಿಯ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ಚೊಚ್ಚಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 8ನೇ ಆವೃತ್ತಿಯ ಟೂರ್ನಿಯ ದ.ಕೊರಿಯಾ ವಿರುದ್ಧದ ರೋಚಕ ಫೈನಲ್ನಲ್ಲಿ 2-1 ಗೋಲುಗಳಿಂದ ಗೆಲುವು ಸಾಧಿಸಿದ ಭಾರತ ವನಿತೆಯರು 31 ವರ್ಷಗಳ ಪ್ರಶಸ್ತಿ ಬರ ನೀಗಿಸಿದರು. ಇದರೊಂದಿಗೆ ದಾಖಲೆಯ 5ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳುವ ಕೊರಿಯಾ ಕನಸು ಭಗ್ನಗೊಂಡಿತು. ಇತ್ತೀಚೆಗಷ್ಟೇ ಭಾರತ ಪುರುಷರ ತಂಡವೂ ಕಿರಿಯರ ಏಷ್ಯಾಕಪ್ನಲ್ಲಿ ಚಾಂಪಿಯನ್ ಎನಿಸಿಕೊಂಡಿತ್ತು.
ಭಾನುವಾರದ ಪಂದ್ಯದಲ್ಲಿ ಭಾರತದ ಪರ ಅನ್ನು 22ನೇ ನಿಮಿಷದಲ್ಲಿ ಪೆನಾಲ್ಟಿಸ್ಟೊ್ರೕಕ್ ಮೂಲಕ ಗೋಲು ದಾಖಲಿಸಿದರೂ, ಬಳಿಕ ಕೇವಲ 3 ನಿಮಿಷಗಳಲ್ಲೇ ಕೊರಿಯಾ ಸಮಬಲ ಸಾಧಿಸಿತು. ಆದರೆ 41ನೇ ನಿಮಿಷದಲ್ಲಿ ನೀಲಂ ಹೊಡೆದ ಗೋಲು ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟಿತು. ಭಾರತ ಈ ಮೊದಲು 2012ರಲ್ಲಿ ಫೈನಲ್ಗೇರಿದ್ದರೂ, ಚೀನಾ ವಿರುದ್ಧ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತ್ತು. 5 ಬಾರಿ ಸೆಮೀಸ್ನಲ್ಲೇ ಮುಗ್ಗರಿಸಿತ್ತು.
ಗಣ್ಯರ ಅಭಿನಂದನೆ: ಕಿರಿಯ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತ ತಂಡದ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಫುಟ್ಬಾಲ್: ಭಾರತಕ್ಕಿಂದು ವಾನವಾಟು ಸವಾಲು
ಭುವನೇಶ್ವರ: 3ನೇ ಆವೃತ್ತಿಯ ಇಂಟರ್ ಕಾಂಟಿನೆಂಟಲ್ ಫುಟ್ಬಾಲ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿರುವ ಆತಿಥೇಯ ಭಾರತ, ಲೀಗ್ ಹಂತದ ತನ್ನ 2ನೇ ಪಂದ್ಯದಲ್ಲಿ ಸೋಮವಾರ ವಾನವಾಟು ವಿರುದ್ಧ ಸೆಣಸಲಿದೆ. ಮುಂಬರುವ ಸ್ಯಾಫ್ ಚಾಂಪಿಯನ್ಶಿಪ್ನ ಸಿದ್ಧತೆಗಾಗಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ ಶುಕ್ರವಾರ ಮಂಗೋಲಿಯಾ ವಿರುದ್ಧ ಗೆದ್ದು ಶುಭಾರಂಭ ಮಾಡಿತ್ತು.
23ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದು ದಾಖಲೆ ಬರೆದ ನೋವಾಕ್ ಜೋಕೋವಿಚ್!
4 ತಂಡಗಳ ನಡುವಿನ ಟೂರ್ನಿಯಲ್ಲಿ ಸದ್ಯ ಭಾರತ 3 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಅಗ್ರ-2 ಸ್ಥಾನ ಬಹುತೇಕ ಖಚಿತವಾಗಲಿದೆ. ವಾನವಾಟು ಮೊದಲ ಪಂದ್ಯದಲ್ಲಿ ಲೆಬನಾನ್ ವಿರುದ್ಧ ಸೋತಿತ್ತು. ಸೋಮವಾರದ ಮತ್ತೊಂದು ಪಂದ್ಯದಲ್ಲಿ ಲೆಬನಾನ್-ಮಂಗೋಲಿಯಾ ಮುಖಾಮುಖಿಯಾಗಲಿವೆ.
ಏಷ್ಯನ್ ಸ್ಕ್ವ್ಯಾಶ್: ಸೆಂಥಿಲ್ಗೆ ಬೆಳ್ಳಿ
ನವದೆಹಲಿ: 2023ರ ಏಷ್ಯನ್ ಸ್ಕ್ವ್ಯಾಶ್ ಚಾಂಪಿಯನ್ಶಿಪ್ನಲ್ಲಿ ಭಾರತದ ವೇಲವನ್ ಸೆಂಥಿಲ್ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ. ಹಾಂಕಾಂಗ್ನಲ್ಲಿ ನಡೆದ ಕೂಟದ ಫೈನಲ್ನಲ್ಲಿ 25 ವರ್ಷದ ಸೆಂಥಿಲ್ ಮಲೇಷ್ಯಾದ ಯೀನ್ ಯೊವ್ ವಿರುದ್ಧ 0-3 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟರು. ಇದರೊಂದಿಗೆ ಕೂಟದ ಇತಿಹಾಸದಲ್ಲಿ ಪದಕ ಗೆದ್ದ ಭಾರತದ 2ನೇ ಆಟಗಾರ ಎನಿಸಿಕೊಂಡರು. ಈ ಮೊದಲು ಸೌರವ್ ಘೋಷಾಲ್ 2019ರಲ್ಲಿ ಚಾಂಪಿಯನ್ ಆಗಿದ್ದರೆ, 2017ರಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.