ಜಪಾನ್ ಕಾಲಮಾನಕ್ಕೆ ತಕ್ಕಂತೆ ಭಾರತ ಮಹಿಳಾ ಹಾಕಿ ತಂಡದ ಅಭ್ಯಾಸ

By Suvarna NewsFirst Published Jun 5, 2021, 1:07 PM IST
Highlights

* ಟೋಕಿಯೋ ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ದತೆ ನಡೆಸುತ್ತಿದೆ ಭಾರತ ಮಹಿಳಾ ಹಾಕಿ ತಂಡ

* ಜಪಾನ್ ಕಾಲಮಾನಕ್ಕೆ ದೇಹವನ್ನು ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಟೋಕಿಯೋ ಕಾಲಮಾನಕ್ಕೆ ಅನುಗುಣವಾಗಿ ತರಬೇತಿ

* ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿದೆ ಭಾರತ ಹಾಕಿ ತಂಡ

ಬೆಂಗಳೂರು(ಜೂ.05): ಟೋಕಿಯೋ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ರಾಣಿ ರಾಂಪಾಲ್‌ ನೇತೃತ್ವದ ಭಾರತದ ಮಹಿಳಾ ಹಾಕಿ ತಂಡ, ಅಲ್ಲಿನ ಸ್ಥಿತಿಗೆ ಅನುಗುಣವಾಗುವಂತೆಯೇ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಆರಂಭಿಸಿದೆ. 

ಅಲ್ಲಿನ ಕಾಲಮಾನಕ್ಕೆ ದೇಹವನ್ನು ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಟೋಕಿಯೋ ಕಾಲಮಾನಕ್ಕೆ ಅನುಗುಣವಾಗಿ ತರಬೇತಿ ನಡೆಸಲಾಗುತ್ತಿದೆ. ಜೊತೆಗೆ ನಾವು ತಂಡದೊಳಗೆ ಪಂದ್ಯ ಆಡುವ ಮೂಲಕ ಸಾಮರ್ಥ್ಯ ಕಾಪಾಡಿಕೊಳ್ಳುವ ಮತ್ತು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ತಂಡದ ಮಿಡ್‌ಫೀಲ್ಡರ್‌ ನಮಿತಾ ಟೊಪ್ಪೋ ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ಗೆ ಭಾಗವಹಿಸುವ ಅಂತಿಮ 16 ಆಟಗಾರ್ತಿಯರನ್ನೊಳಗೊಂಡ ಭಾರತ ಮಹಿಳಾ ಹಾಕಿ ತಂಡವನ್ನು ಇನ್ನೂ ಆಯ್ಕೆ ಮಾಡಿಲ್ಲ. ನಮ್ಮ ತಂಡದಲ್ಲಿ ಪ್ರತಿಭಾನ್ವಿತ ಆಟಗಾರ್ತಿಯರಿಗೇನು ಕೊರತೆಯಿಲ್ಲ ಎಂದು ನಮಿತಾ ಟೊಪ್ಪೋ ಹೇಳಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಾಕಷ್ಟು ಪ್ರತಿಭಾನ್ವಿತ ಯುವ ಆಟಗಾರ್ತಿಯರು ತಂಡವನ್ನು ಕೂಡಿಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ವಿದೇಶಿ ಪ್ರವಾಸದಲ್ಲೂ ನಮ್ಮ ತಂಡ ಉತ್ತಮ ಪ್ರದರ್ಶನ ತೋರಿದೆ. ಅದಷ್ಟೇ ಅಲ್ಲದೇ ಮಹತ್ವದ ಟೂರ್ನಿಗಳಾದ ಏಷ್ಯನ್ ಗೇಮ್ಸ್‌, ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡು ಸಾಕಷ್ಟು ಅನುಭವವನ್ನು ನಮ್ಮ ಆಟಗಾರ್ತಿಯರು ಪಡೆದಿದ್ದಾರೆಂದು ನಮಿತಾ ಟೊಪ್ಪೋ ತಿಳಿಸಿದ್ದಾರೆ.

ಎಫ್‌ಐಎಚ್‌ ಅಥ್ಲೀಟ್ಸ್‌ ಸಮಿತಿಗೆ ಭಾರತದ ಹಾಕಿ ಗೋಲ್‌ ಕೀಪರ್ ಶ್ರೀಜೇಶ್‌

ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲಥ 23ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ. ಭಾರತದ ಪುರುಷರ ಹಾಕಿ ತಂಡ ಹಾಗೂ ಮಹಿಳಾ ಹಾಕಿ ತಂಡಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆಯನ್ನು ಗಿಟ್ಟಿಸಿಕೊಂಡಿವೆ.

click me!