* ಭಾರತೀಯ ಹಾಕಿ ತಂಡಕ್ಕೆ ವಿದಾಯ ಘೋಷಿಸಿದ ರೂಪಿಂದರ್ ಪಾಲ್ ಸಿಂಗ್
* 2010ರಲ್ಲಿ ಅಂತಾರಾಷ್ಟ್ರೀಯ ಹಾಕಿಗೆ ಪಾದಾರ್ಪಣೆ ಮಾಡಿದ್ದ ರೂಪಿಂದರ್
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು
ನವದೆಹಲಿ(ಸೆ.30): ಕೆಲ ತಿಂಗಳ ಹಿಂದಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್ (Tokyo Olympics) ಕ್ರೀಡಾಕೂಟದಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಡ್ರ್ಯಾಗ್ ಫ್ಲಿಕ್ಕರ್ ರೂಪಿಂದರ್ ಪಾಲ್ ಸಿಂಗ್ (Rupinder Pal Singh) ಗುರವಾರ(ಸೆ.30) ಅಂತಾರಾಷ್ಟ್ರೀಯ ಹಾಕಿ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಯುವ ಹಾಕಿ (Hockey) ಆಟಗಾರರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ರೂಪಿಂದರ್ ತಿಳಿಸಿದ್ದಾರೆ.
30 ವರ್ಷದ ರೂಪಿಂದರ್ ಪಾಲ್ ಸಿಂಗ್ ಭಾರತ ಹಾಕಿ ಕಂಡಂತಹ ಶ್ರೇಷ್ಠ ಡ್ರ್ಯಾಗ್ ಫ್ಲಿಕ್ಕರ್‌ಗಳಲ್ಲಿ ಒಬ್ಬರು ಎನಿಸಿದ್ದರು. ಭಾರತ ಪರ 223 ಪಂದ್ಯಗಳನ್ನಾಡಿ ದೇಶಕ್ಕೆ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. 'ಬಾಬ್' ಎನ್ನುವ ನಿಕ್‌ನೇಮ್ ಹೊಂದಿದ್ದ ರೂಪಿಂದರ್ ಪಾಲ್ ಸಿಂಗ್ 4 ಮಹತ್ವದ ಗೋಲುಗಳನ್ನು ದಾಖಲಿಸಿದ್ದರು. ಅದರಲ್ಲಿ ಜರ್ಮನಿ ವಿರುದ್ದ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿನ ಪೆನಾಲ್ಟಿ ಸ್ಟ್ರೋಕ್ ಗೋಲು ಕೂಡಾ ಒಂದೆನಿಸಿದೆ.
Hi everyone, wanted to share an important announcement with you all. pic.twitter.com/CwLFQ0ZVvj
— Rupinder Pal Singh (@rupinderbob3)undefined
2010ರ ಮೇ ತಿಂಗಳಿನಲ್ಲಿ ಇಂಪೂನಲ್ಲಿ ನಡೆದ ಸುಲ್ತಾನ್ ಅಜ್ಲಾನ್ ಶಾ ಕಪ್ ಟೂರ್ನಿ ಮೂಲಕ ಅಂತಾರಾಷ್ಟ್ರೀಯ ಹಾಕಿಗೆ ಪಾದಾರ್ಪಣೆ ಮಾಡಿದ ರೂಪಿಂದರ್ ಪಾಲ್ ಸಿಂಗ್ ಅನುಭವಿ ಆಟಗಾರ ವಿ.ಆರ್. ರಘುನಾಥ್ ಜತೆ ಪ್ರಮುಖ ಡ್ರ್ಯಾಗ್ ಫ್ಲಿಕ್ಕರ್ ಆಗಿ ಗುರುತಿಸಿಕೊಂಡರು.
2014ರ ಹಾಕಿ ವಿಶ್ವಕಪ್ ಟೂರ್ನಿಗೆ ರೂಪಿಂದರ್ ಉಪನಾಯಕರಾಗಿ ಆಯ್ಕೆಯಾಗಿದ್ದರು. ಅದೇ ವರ್ಷ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡವು ಕಂಚಿನ ಪದಕಕ್ಕೆ ಮುತ್ತಿಕ್ಕಿತ್ತು. ಈ ಗೆಲುವಿನಲ್ಲೂ ರೂಪಿಂದರ್ ಪ್ರಮುಖ ಪಾತ್ರ ವಹಿಸಿದ್ದರು. ರೂಪಿಂದರ್ ಪಾಲ್ ಎರಡು ಏಷ್ಯನ್ ಗೇಮ್ಸ್ ಪದಕಗಳಿಗೆ ಕೊರಳೊಡ್ಡಿದ್ದಾರೆ. 2014ರಲ್ಲಿ ಇಂಚೋನ್‌ನಲ್ಲಿ ನಡೆದ ಟೂರ್ನಿಯಲ್ಲಿ ಚಿನ್ನ ಹಾಗೂ 2018ರಲ್ಲಿ ಜಕಾರ್ತಾದಲ್ಲಿ ನಡೆದ ಗೇಮ್ಸ್‌ನಲ್ಲಿ ಭಾರತ ಕಂಚಿನ ಪದಕ ಜಯಿಸಿತ್ತು.
ಟೋಕಿಯೋ 2020: ಪಂಜಾಬಿನ 10 ಸರ್ಕಾರಿ ಶಾಲೆಗಳಿಗೆ ಹಾಕಿ ಆಟಗಾರರ ಹೆಸರು..!
ಗಾಯದ ಸಮಸ್ಯೆ ರೂಪಿಂದರ್ ಅವರನ್ನು ಬಹುವಾಗಿ ಕಾಡಿತ್ತು. 2017ರ ವೇಳೆಗೆ ರೂಪಿಂದರ್ ವೃತ್ತಿ ಬದುಕು ಅಂತ್ಯವಾಯಿತೇನೋ ಎನ್ನುವಷ್ಟರ ಮಟ್ಟಿಗೆ ಗಾಯದ ಸಮಸ್ಯೆ ಕಾಡಿತ್ತು. ಇದು ರೂಪಿಂದರ್ ಪಾಲ್ ಅವರ ಪಾಲಿಗೆ ಅತ್ಯಂತ ಕಠಿಣ ಅಗ್ನಿಪರೀಕ್ಷೆ ಎನಿಸಿತ್ತು. ರೂಪಿಂದರ್ ಪಾಲ್ ಸಿಂಗ್ ಅನುಪಸ್ಥಿತಿಯಲ್ಲಿ ಹರ್ಮನ್‌ಪ್ರೀತ್ ಸಿಂಗ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವ ಮೂಲಕ ಭಾರತ ತಂಡದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ಈ ಜೋಡಿ ಟೋಕಿಯೋ ಒಲಿಂಪಿಕ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಮನ್‌ಪ್ರೀತ್ ಸಿಂಗ್ (Manpreet Singh) ನೇತೃತ್ವದ ಭಾರತೀಯ ಹಾಕಿ ತಂಡವು (Indian Hockey Team) 1980ರ ಬಳಿಕ ಅಂದರೆ ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಸಾಧನೆ ಮಾಡಿತ್ತು. ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಜರ್ಮನಿ ತಂಡದ ಎದುರು ಭಾರತ 5-4 ಗೋಲುಗಳ ಅಂತರದ ಗೆಲುವು ದಾಖಲಿಸುವ ಮೂಲಕ ಚಾರಿತ್ರ್ಯಿಕ ಸಾಧನೆ ಮಾಡಿತ್ತು.