* ಭಾರತ ಮಹಿಳಾ ಹಾಕಿ ಸಂಭಾವ್ಯ ತಂಡದಲ್ಲಿ ರಾಣಿ ರಾಂಪಾಲ್‌ಗಿಲ್ಲ ಸ್ಥಾನ
* 33 ಆಟಗಾರ್ತಿಯರ ಭಾರತ ಮಹಿಳಾ ತಂಡವನ್ನು ಪ್ರಕಟ
* ಭಾನುವಾರದಿಂದ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಆರಂಭಗೊಳ್ಳಲಿದೆ
ನವದೆಹಲಿ(ಏ.09): ಮುಂಬರುವ ಏಷ್ಯನ್ ಗೇಮ್ಸ್ ಪೂರ್ವಸಿದ್ಧತೆಗಾಗಿ ಹಾಕಿ ಇಂಡಿಯಾ, 33 ಆಟಗಾರ್ತಿಯರ ಭಾರತ ಮಹಿಳಾ ತಂಡವನ್ನು ಪ್ರಕಟಗೊಳಿಸಿದ್ದು, ಮಾಜಿ ನಾಯಕಿ ರಾಣಿ ರಾಂಪಾಲ್‌ಗೆ ಸ್ಥಾನ ದೊರೆತಿಲ್ಲ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತಂಡವನ್ನು ಐತಿಹಾಸಿಕ 4ನೇ ಸ್ಥಾನಕ್ಕೆ ಮುನ್ನಡೆಸಿದ ಬಳಿಕ ರಾಣಿ ಹೆಚ್ಚಾಗಿ ತಂಡದಲ್ಲಿ ಕಾಣಿಸಿಕೊಂಡಿಲ್ಲ.
ಈ ವರ್ಷ ಜನವರಿಯಲ್ಲಿ ದ.ಆಫ್ರಿಕಾ ವಿರುದ್ಧದ ಸರಣಿ ವೇಳೆ ತಂಡಕ್ಕೆ ಮರಳಿದ್ದ ರಾಣಿ ನಿರೀಕ್ಷಿತ ಪ್ರದರ್ಶನವನ್ನು ನೀಡಿರಲಿಲ್ಲ. ಈ ಕಾರಣದಿಂದಾಗಿ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಶಿಬಿರವು ಭಾನುವಾರದಿಂದ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಆರಂಭಗೊಳ್ಳಲಿದ್ದು, ಮೇ 13ರ ವರೆಗೂ ನಡೆಯಲಿದೆ.
undefined
ವಿಶ್ವ ಪುರುಷರ ಬಾಕ್ಸಿಂಗ್ಸ್: ಭಾರತದ 13 ಮಂದಿ ಸ್ಪರ್ಧೆ
ನವದೆಹಲಿ: ಏಪ್ರಿಲ್ 30ರಿಂದ ಮೇ 14ರ ವರೆಗೂ ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ನಡೆಯಲಿರುವ ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 13 ಮಂದಿ ಸ್ಪರ್ಧಿಸಲಿದ್ದಾರೆ. 2019ರ ವಿಶ್ವಚಾಂಪಿಯನ್‌ಶಿಪ್ ಬೆಳ್ಳಿ ಪದಕ ಜಯಿಸಿದ್ದ ಅಮಿತ್ ಪಂಘಲ್ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. 6 ಬಾರಿ ಏಷ್ಯನ್ ಚಾಂಪಿಯನ್‌ಶಿಪ್ ಪದಕ ವಿಜೇತ ಶಿವ ಥಾಪ ಹಾಗೂ 2019ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ದೀಪಕ್ ಭೋರಿಯಾ ದೇಶದ ಸವಾಲು ಮುನ್ನಡೆಸಲಿದ್ದಾರೆ.
ಎಂ ಎಸ್ ಧೋನಿ ಏಕದಿನ ವಿಶ್ವಕಪ್ ವಿನ್ನಿಂಗ್ ಸಿಕ್ಸರ್ ಅಜರಾಮರವಾಗಿಸಿದ ಮುಂಬೈ ಕ್ರಿಕೆಟ್ ಸಂಸ್ಥೆ..!
ಅನುಭವಿ ಬಾಕ್ಸರ್ ಮುಹಮದ್ ಹುಸ್ಮುದ್ದೀನ್, ಗೋವಿಂದ್ ಸಹನಿ, ಆಕಾಶ್ ಸಾಂಗ್ವಾನ್, ಸಚಿನ್ ಸಿವಾಚ್, ನಿಶಾಂತ್ ದೇವ್ ಸಹ ಭಾರತದ ಪ್ರಮುಖ ಸ್ಪರ್ಧಿಗಳೆನಿಸಿದ್ದಾರೆ. ಚಾಂಪಿಯನ್‌ಶಿಪ್‌ನಲ್ಲಿ 104 ದೇಶಗಳ ಒಟ್ಟು 640 ಬಾಕ್ಸರ್‌ಗಳು ಸ್ಪರ್ಧಿಸಲಿದ್ದಾರೆ.
ಆರ್ಲಿಯಾನ್ಸ್ ಮಾಸ್ಟರ್ಸ್: ಫೈನಲ್‌ಗೆ ಪ್ರಿಯಾನ್ಶು
ಆರ್ಲಿಯಾನ್ಸ್(ಫ್ರಾನ್ಸ್): ಭಾರತದ ಯುವ ಶಟ್ಲರ್ ಪ್ರಿಯಾನ್ಶು ರಾಜವಾತ್ ಇಲ್ಲಿ ನಡೆಯುತ್ತಿರುವ ಆರ್ಲಿಯಾನ್ಸ್ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 21 ವರ್ಷದ ಪ್ರಿಯಾನ್ಶು, ವಿಶ್ವ ನಂ.35 ಐರ್ಲೆಂಡ್‌ನ ಎನ್‌ಹ್ಯಾಟ್ ಎನ್‌ಗುಯೆನ್ ವಿರುದ್ಧ 21-12, 21-9 ನೇರ ಗೇಮ್‌ಗಳಲ್ಲಿ ಸುಲಭ ಜಯ ಸಾಧಿಸಿದರು. ಸೂಪರ್ 300 ವಿಶ್ವ ಟೂರ್ ಸ್ಪರ್ಧೆಯಲ್ಲಿ ಪ್ರಿಯಾನ್ಶು ಮೊದಲ ಬಾರಿಗೆ ಫೈನಲ್‌ಗೇರಿದ್ದು, ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಫೈನಲ್‌ನಲ್ಲಿ ಡೆನ್ಮಾರ್ಕ್ನ ಮ್ಯಾಗ್ನಸ್ ಜೊಹಾನ್ಸೆನ್ ವಿರುದ್ಧ ಆಡಲಿದ್ದಾರೆ.
ಸೂಪರ್ ಕಪ್: ಡ್ರಾಗೆ ತೃಪ್ತಿಪಟ್ಟ ಬಿಎಫ್‌ಸಿ
ಕಲ್ಲಿಕೋಟೆ: 2023ರ ಸೂಪರ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತನ್ನ ಅಭಿಯಾನವನ್ನು ಡ್ರಾನೊಂದಿಗೆ ಆರಂಭಿಸಿದೆ. ಐ-ಲೀಗ್ ತಂಡ ಶ್ರೀನಿಧಿ ಡೆಕ್ಕನ್ ವಿರುದ್ಧ ಶನಿವಾರ ನಡೆದ ಪಂದ್ಯವನ್ನು ಬಿಎಫ್‌ಸಿ 1-1 ಗೋಲುಗಳಲ್ಲಿ ಡ್ರಾ ಮಾಡಿಕೊಂಡಿತು. ಮೊದಲಾರ್ಧದಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ಬಾರಿಸಿದವು. ದ್ವಿತೀಯಾರ್ಧ ಭಾರೀ ಪೈಪೋಟಿಯಿಂದ ಕೂಡಿತ್ತಾದರೂ ಗೋಲು ದಾಖಲಾಗಲಿಲ್ಲ. 9ನೇ ನಿಮಿಷದಲ್ಲಿ ಜಾವಿ ಹರ್ನಾಂಡೆಜ್ ಆಕರ್ಷಕ ಗೋಲು ಬಾರಿಸಿ ಬಿಎಫ್‌ಸಿಗೆ ಮುನ್ನಡೆ ಒದಗಿಸಿದರು. ಆದರೆ 21ನೇ ನಿಮಿಷದಲ್ಲಿ ಫೈಸಲ್ ಸಯಶ್ಥೆ, ಶ್ರೀನಿಧಿ ಡೆಕ್ಕನ್ ಸಮಬಲ ಸಾಧಿಸಲು ಕಾರಣರಾದರು.
ಬಿಎಫ್‌ಸಿ ತನ್ನ ‘ಎ’ ಗುಂಪಿನ 2ನೇ ಪಂದ್ಯವನ್ನು ಬುಧವಾರ ರೌಂಡ್‌ಗ್ಲಾಸ್ ಪಂಜಾಬ್ ತಂಡದ ವಿರುದ್ಧ ಇಲ್ಲಿನ ಇಎಂಎಸ್ ಕಾರ್ಪೋರೇಷನ್ ಕ್ರೀಡಾಂಗಣದಲ್ಲಿ ಆಡಲಿದೆ.
ಒಲಿಂಪಿಕ್ಸ್ ಅರ್ಹತಾ ಟೂರ್ನಿ: 2ನೇ ಸುತ್ತಿಗೆ ಭಾರತ ತಂಡ
ಬಿಶ್ಕೆಕ್(ಕಿರ್ಗಿಸ್ತಾನ): ಭಾರತ ಮಹಿಳಾ ಫುಟ್ಬಾಲ್ ತಂಡ ಕಿರ್ಗಿಸ್ತಾನ ವಿರುದ್ಧ 2ನೇ ಪಂದ್ಯದಲ್ಲಿ 4-0 ಗೋಲುಗಳ ಜಯ ಸಾಧಿಸಿ, 2024ರ ಒಲಿಂಪಿಕ್ಸ್ ಅರ್ಹತಾ ಟೂರ್ನಿಯ 2ನೇ ಸುತ್ತಿಗೆ ಪ್ರವೇಶಿಸಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ತಂಡವನ್ನು ಭಾರತ 5-0 ಅಂತರದಲ್ಲಿ ಸೋಲಿಸಿತ್ತು. ಮೊದಲ ಸುತ್ತಿನಲ್ಲಿ 26 ತಂಡಗಳು ಸ್ಪರ್ಧಿಸಿದ್ದು, 2ನೇ ಸುತ್ತಿಗೆ 12 ತಂಡಗಳು ಪ್ರವೇಶಿಸಲಿವೆ. 4 ತಂಡಗಳು 3ನೇ ಸುತ್ತಿಗೆ ಪ್ರವೇಶಿಸಲಿದ್ದು, ಅಗ್ರ 2 ತಂಡಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿವೆ.