23ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ಫೈನಲ್ ಇಂದು
ಅಪ್ಪಚೆಟ್ಟೋಳಂಡ ಕಪ್ ಗೆಲ್ಲಲು ಕುಲ್ಲೇಟಿರ-ಕುಪ್ಪಂಡ ಫೈಟ್
ಹೊಸ ಚಾಂಪಿಯನ್ ಆಗುವ ತವಕದಲ್ಲಿರುವ ಕುಪ್ಪಂಡ
ವಿಘ್ನೇಶ್ ಎಂ. ಭೂತನಕಾಡು, ಕನ್ನಡಪ್ರಭ
ಮಡಿಕೇರಿ(ಏ.09): ಕಳೆದ 22 ದಿನಗಳಿಂದ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ 23ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ಅಪ್ಪಚೆಟ್ಟೋಳಂಡ ಕಪ್ ಭಾನುವಾರ ತೆರೆ ಕಾಣಲಿದೆ. ಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಕುಲ್ಲೇಟಿರ ಹಾಗೂ ಹೊಸ ಚಾಂಪಿಯನ್ ಆಗುವ ತವಕದಲ್ಲಿರುವ ಕುಪ್ಪಂಡ(ಕೈಕೇರಿ) ತಂಡ ಸೆಣಸಲಿವೆ.
undefined
ಕಳೆದ ನಾಲ್ಕು ವರ್ಷದಿಂದ ಪ್ರಕೃತಿ ವಿಕೋಪ ಹಾಗೂ ಕೊರೋನಾ ಕಾರಣದಿಂದಾಗಿ ಹಾಕಿ ಉತ್ಸವ ಸ್ಥಗಿತಗೊಂಡಿತ್ತು. ನಾಲ್ಕು ವರ್ಷದ ಬಳಿಕ ಯಶಸ್ವಿಯಾಗಿ ಅಪ್ಪಚೆಟ್ಟೋಳಂಡ ಕಪ್ ನಡೆದಿದ್ದು, ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸಮಾರು 336 ತಂಡಗಳು ನೋಂದಾಯಿಸಿಕೊಂಡಿತ್ತು. ಈ ಪೈಕಿ 329 ತಂಡಗಳು ಉತ್ಸವದಲ್ಲಿ ಪಾಲ್ಗೊಂಡು ಹಾಕಿ ಕ್ರೀಡೆಯಲ್ಲಿ ಸಂಭ್ರಮಿಸಿದೆ. 22 ದಿನ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಮೈದಾನದಲ್ಲಿ ಹಾಕಿ ಆಡಿದ್ದಾರೆ. ಅಲ್ಲದೆ 25 ಸಾವಿರಕ್ಕೂ ಅಧಿಕ ಹಾಕಿ ಕ್ರೀಡಾ ಪ್ರೇಮಿಗಳು ಉತ್ಸದಲ್ಲಿ ಭಾಗಿಯಾಗಿದ್ದಾರೆ.
ಕೊಡವ ಹಾಕಿ ನಮ್ಮೆ: ಇಂದು ಸೆಮಿಫೈನಲ್ ಫೈಟ್
ಫೈನಲ್‌ಗೆ ಬಂದಿರುವ ಬಲಿಷ್ಠ ಕುಲ್ಲೇಟಿರ ಕುಟುಂಬವು ಈ ವರೆಗೆ ಮೂರು ಬಾರಿ ಚಾಂಪಿಯನ್ ಪಟ್ಟಅಲಂಕರಿಸಿದೆ. 1998ರಲ್ಲಿ ಕಡಂಗದಲ್ಲಿ ನಡೆದಿದ್ದ ಕೋಡಿರ ಕಪ್, 1999 ಕಾಕೋಟುಪರಂಬುವಿನಲ್ಲಿ ನಡೆದಿದ್ದ ಬಲ್ಲಚಂಡ ಕಪ್, 2002ರಲ್ಲಿ ಹುದಿಕೇರಿಯಲ್ಲಿ ನಡೆದಿದ್ದ ಚೆಕ್ಕೇರ ಕಪ್‌ನಲ್ಲಿ ಪ್ರಶಸ್ತಿ ಜಯಿಸಿತ್ತು. 2001ರಲ್ಲಿ ಅಮ್ಮತ್ತಿಯಲ್ಲಿ ನಡೆದಿದ್ದ ನೆಲ್ಲಮಕ್ಕಡ ಕಪ್ ಹಾಕಿ ಉತ್ಸವದಲ್ಲಿ ತೃತೀಯ ಬಹುಮಾನ ಗಳಿಸಿತ್ತು.
ಅಪ್ಪಚೆಟ್ಟೋಳಂಡ ಕೊಡವ ಕೌಟುಂಬಿಕ ಹಾಕಿ ಉತ್ಸವದ ಫೈನಲ್‌ಗೆ ಮಾಜಿ ಚಾಂಪಿಯನ್ ಕುಲ್ಲೇಟಿರ ಹಾಗೂ ಹೊಸ ತಂಡ ಕುಪ್ಪಂಡ ಕೈಕೇರಿ ಆಗಮಿಸಿದ್ದು, ಯಾವ ತಂಡ ಗೆಲುವಿನ ವಿಜಯ ಪತಾಕೆ ಹಾರಿಸಲಿದೆ ಎಂಬುದು ಭಾನುವಾರ ಗೊತ್ತಾಗಲಿದೆ. ಎರಡೂ ತಂಡಗಳು ಕೂಡ ಬಲಿಷ್ಠವಾಗಿದ್ದು, ಫೈನಲ್ ಪಂದ್ಯ ತೀವ್ರ ರೋಚಕತೆಯಿಂದ ಕೂಡಿರಲಿದೆ.
ಏಕಲವ್ಯ ಪ್ರಶಸ್ತಿ ಪಡೆದ ಮೊದಲ ‘ಕೊಡವ’ ಎಂಬ ಹೆಗ್ಗಳಿಕೆಯ ಕುಲ್ಲೇಟಿರ ಎಸ್. ಉತ್ತಯ್ಯ ಅವರು ತಮ್ಮ ತಂಡದಲ್ಲಿ ಪಾಲ್ಗೊಂಡಿರುವುದು ವಿಶೇಷ.
ಅಪ್ಪಚೆಟ್ಟೋಳಂಡ ಕುಟುಂಬದ ವಿಶೇಷತೆ
23ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ಆಯೋಜಿಸಿರುವ ಅಪ್ಪಚೆಟ್ಟೋಳಂಡ ಕುಟುಂಬ, ನಾಪೋಕ್ಲು ಸಮೀಪದ ಬಲ್ಲಮಾವಟಿಯವರು. ಇವರ ಕುಟುಂಬದಲ್ಲಿ 180 ಮಂದಿ ಸದಸ್ಯರಿದ್ದು, ಬಲ್ಲಮಾವಟಿ, ಮಡಿಕೇರಿ, ಸುಂಟಿಕೊಪ್ಪ, ಹೊಸ್ಕೇರಿ, ಮೈಸೂರು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಹಾಕಿ ಉತ್ಸವಕ್ಕೆ ಸುಮಾರು 1.5 ಕೋಟಿ ರು. ವೆಚ್ಚ ಮಾಡಿದೆ. ಸರ್ಕಾರ 1 ಕೋಟಿ ರು. ಅನುದಾನ ಘೋಷಣೆ ಮಾಡಿದ್ದು, ಇನ್ನಷ್ಟೇ ಬಿಡುಗಡೆಯಾಗಲಿದೆ. ಕುಟುಂಬದ ಸದಸ್ಯರು ಐಎಎಸ್ ಅಧಿಕಾರಿ, ತಹಸೀಲ್ದಾರ್ ಮತ್ತಿತರ ಹುದ್ದೆಗೇರಿದ್ದಾರೆ. ರಾಜಕೀಯವಾಗಿ ಮನು ಮುತ್ತಪ್ಪ ಅವರು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಹಾಸನ ಉಸ್ತುವಾರಿಯಾಗಿದ್ದಾರೆ. ಸಹಕಾರ ಸಂಘದಲ್ಲಿ ಕೂಡ ರಾಜ್ಯ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ.
ಈ ಕುಟುಂಬವು 1800ಕ್ಕೂ ಹಿಂದೆ ಮೂಲತಃ ಅಯ್ಯಂಗೇರಿಯಲ್ಲಿ ನೆಲೆಸಿತ್ತು. ಟಿಪ್ಪು ಹಾಗೂ ಫ್ರೆಂಚರು ನಡೆಸಿದ್ದಾರೆ ಎನ್ನಲಾದ ಹತ್ಯಾಂಕಾಂಡದಲ್ಲಿ ಕುಟುಂಬ ಸಂಪೂರ್ಣ ನಿರ್ನಾಮವಾಗಿತ್ತು. ಮಧ್ಯ ವಯಸ್ಸಿನ ಜೋಡಿ ಬಲ್ಲಮಾವಟಿಯಲ್ಲಿ ನೆಲೆಸಿದ್ದರು. ಅವರಿಗೆ ಪೊಣ್ಣಚ್ಚ-ಚನ್ನಚ್ಚ ಎಂಬ ಮಕ್ಕಳು ಜನಿಸಿದರು. ನಂತರ ಈ ಕುಟುಂಬದ ತಲೆಮಾರು ಬೆಳೆಯಿತು. 1807ರಲ್ಲಿ ಅಂದಿನ ರಾಜರು ಐನ್‌ಮನೆ ಕಟ್ಟಲು ಸರ್ಟಿಫಿಕೇಟ್ ನೀಡಿದ್ದರು. ಅದು ಈಗಲೂ ಇದೆ. ಕುಟುಂಬದ ಭೀಮಯ್ಯ ಹಾಗೂ ಸುಬ್ಬಯ್ಯ ಸೈನ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಮಾಚಯ್ಯ ಎಂಬವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇದೀಗ ಕುಟುಂಬದ ಸದಸ್ಯ ಆದಶ್‌ರ್, ಚೆಸ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದು, 53 ದೇಶಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಇವರು ಮುಂದಿನ ಬಾರಿಯ ಆಯೋಜಕರು
24ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಜವಾಬ್ದಾರಿಯನ್ನು ನಾಪೋಕ್ಲು ವ್ಯಾಪ್ತಿಯ ಕೊಳಕೇರಿಯ ಕುಂಡ್ಯೋಳಂಡ ಕುಟುಂಬ ವಹಿಸಿಕೊಂಡಿದೆ. ಇದರಿಂದ ಮುಂದಿನ ಬಾರಿ ಅಂದರೆ 2024ರಲ್ಲಿ ನಾಪೋಕ್ಲುವಿನಲ್ಲೇ ಹಾಕಿ ಉತ್ಸವ ನಡೆಯುವ ಸಾಧ್ಯತೆಯಿದೆ. ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಭಾನುವಾರ ನಡೆಯುವ ಅಪ್ಪಚೆಟ್ಟೋಳಂಡ ಹಾಕಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಕೊಡವ ಹಾಕಿ ಅಕಾಡೆಮಿಯು ಕುಂಡ್ಯೋಳಂಡ ಕುಟುಂಬಕ್ಕೆ ಧ್ವಜ ನೀಡುವ ಮೂಲಕ ಮುಂದಿನ ಬಾರಿಯ ಹಾಕಿ ಉತ್ಸದ ಅಧಿಕಾರ ವಹಿಸಲಿದೆ.