ಅಪ್ಪಚೆಟ್ಟೋಳಂಡ ಕಪ್ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆ
ನಿರ್ಣಾಯಕ ಘಟ್ಟ ತಲುಪಿದ ಹಾಕಿ ಟೂರ್ನಮೆಂಟ್
ಪ್ರಶಸ್ತಿಗಾಗಿ ಕುಲ್ಲೇಟಿರ ಮತ್ತು ಕುಪ್ಪಂಡ(ಕೈಕೇರಿ) ತಂಡಗಳು ಪೈಪೋಟಿ
ದುಗ್ಗಳ ಸದಾನಂದ, ಕನ್ನಡಪ್ರಭ
ನಾಪೋಕ್ಲು(ಏ.08): ಕುಲ್ಲೇಟಿರ ಮತ್ತು ಕುಪ್ಪಂಡ(ಕೈಕೇರಿ) ತಂಡಗಳು ಅಪ್ಪಚೆಟ್ಟೋಳಂಡ ಕಪ್ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಫೈನಲ್ ಪ್ರವೇಶಿಸಿದೆ. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಕ್ರಮವಾಗಿ ನೆಲ್ಲಮಕ್ಕಡ ಹಾಗೂ ಪಳಂಗಂಡ ತಂಡವನ್ನು ಸೋಲಿಸಿತು. ಭಾನುವಾರ ಈ ಎರಡೂ ತಂಡಗಳು ಅಪ್ಪಚೆಟ್ಟೋಳಂಡ ಕಪ್‌ಗಾಗಿ ಸೆಣೆಸಾಡಲಿವೆ.
undefined
ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕುಲ್ಲೇಟಿರ ಮತ್ತು ನೆಲ್ಲಮಕ್ಕಡ ತಂಡಗಳ ನಡುವಿನ ಮೊದಲ ಸೆಮಿಫೈನಲ್ ರೋಚಕತೆಯಿಂದ ಕೂಡಿತ್ತು. ಈ ಪಂದ್ಯ 1-1 ಗೋಲುಗಳಿಂದ ಸಮಬಲದಲ್ಲಿ ಮುಕ್ತಾಯವಾಯಿತು. ಫಲಿತಾಂಶ ಟೈಬ್ರೇಕರ್ ಮೊರೆ ಹೋಗಬೇಕಾಯಿತು. ಟೈ ಬ್ರೇಕರ್‌ನಲ್ಲಿ ಕುಲ್ಲೇಟಿರ ತಂಡ 4-3 ಅಂತರದ ಜಯಸಾಧಿಸಿತು.
ಪಂದ್ಯದ ನಿಗದಿತ ಅವಧಿಯಲ್ಲಿ ಕುಲ್ಲೇಟಿರ ಪರ ಯಶಿಕ್ ಹಾಗೂ ನೆಲ್ಲಮಕ್ಕಡ ಮೊಣ್ಣಪ್ಪ ತಲಾ 1 ಗೋಲು ಸಿಡಿಸಿದ್ದರು. ಎರಡನೇ ಸೆಮಿಫೈನಲ್ ಕೂಟ ಶೂಟೌಟ್‌ನಲ್ಲಿ ನಿರ್ಧಾರವಾಯಿತು. ಇದರಲ್ಲಿ ಕುಪ್ಪಂಡ ಕೈಕೇರಿ ತಂಡ 4-2 ಅಂತರದಿಂದ ಪಳಂಗಂಡ ವಿರುದ್ಧ ಗೆಲುವು ಕಂಡಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು ಯಾವುದೇ ಗೋಲು ಗಳಿಸಲಿಲ್ಲ. ಶೂಟೌಟ್‌ನಲ್ಲಿ ಕುಪ್ಪಂಡ ತಂಡ ಏಲುಗೈ ಸಾಧಿಸಿತು.
ಮೊದಲ ಸೆಮಿಫೈನಲ್ಸ್ ಸ್ಪರ್ಧೆಯ ತೀರ್ಪುಗಾರರಾಗಿ ಕುಮ್ಮಂಡ ಬೋಸ್ ಹಾಗೂ ಮುಕಚಂಡ ನಾಚಪ್ಪ ಕಾರ್ಯನಿರ್ವಹಿಸಿದರು. ಎರಡನೇ ಸಮಿಫೈನಲ್ಸ್ ತೀರ್ಪುಗಾರರಾಗಿ ಬೊಳ್ಳಚಂಡ ನಾಣಯ್ಯ ಹಾಗೂ ಚನ್ನಪಂಡ ಆಕಾಶ್ ನೀಡಿದರು. ಚೆಪ್ಪುಡಿರ ಕಾರ್ಯಪ್ಪ ಮಾಲೇಟಿರ ಶ್ರೀನಿವಾಸ್ ಹಾಗೂ ಮೂಡೇರ ಹರೀಶ್ ಕಾಳಯ್ಯ ವೀಕ್ಷಕ ವಿವರಣೆಯನ್ನು ನೀಡಿದರು.
ಸೆಮಿಫೈನಲ್ ಪಂದ್ಯಾಟ ಉದ್ಘಾಟನಾ ಸಮಾರಂಭ
ಸೆಮಿಫೈನಲ್ ಪಂದ್ಯಾವಳಿ ಉದ್ಘಾಟನಾ ಕಾರ‍್ಯಕ್ರಮ ಅಪ್ಪಚೆಟ್ಟೋಳಂಡ ಕುಟುಂಬದ ಪಟ್ಟೆದಾರ ಅಪ್ಪಚೆಟ್ಟೋಳಂಡ ಈರಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ‍್ಯಕ್ರಮದಲ್ಲಿ ಯುಸಿಒ ಮುಖ್ಯಸ್ಥ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಮೂರು ವರ್ಷಗಳ ನಂತರ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಆರಂಭಗೊಂಡಿದ್ದು ಜಯಪ್ರಿಯವಾಗುತ್ತಿದೆ. ಕೊಡವ ಕುಟಂಬಗಳ ಆಟಗಾರರು ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯ. ಜಿಲ್ಲೆಯ ಹಾಕಿ ಕ್ರೀಡೆಯನ್ನು ಮತ್ತಷ್ಟುಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದ ಹೇಳಿದರು.
ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಮೇಶ್ ಕುಟ್ಟಪ್ಪ ಮಾತನಾಡಿ, ಯಾವುದೇ ಪರಿಸ್ಥಿತಿಯಲ್ಲೂ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಸ್ಥಗಿತಗೊಳ್ಳಬಾರದು. ಹಾಕಿ ಪಂದ್ಯಾಟದಲ್ಲಿ ಪಾಲ್ಗೊಳ್ಳುವ ತಂಡಗಳ ಸಂಖ್ಯೆ ಕಡಿಮೆಯಾದರೂ ಪಂದ್ಯಾಟಗಳು ನಿಲ್ಲದೇ ನಿರಂತರವಾಗಿ ಜರುಗಬೇಕು ಎಂದರು. ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜನಿಕಂಡ ಮಹೇಶ್ ನಾಚಪ್ಪ ಮಾತನಾಡಿ, ಕೊಡವ ಜನಾಂಗದವರ ಪರಸ್ಪರ ಸಹಕಾರ ಮನೋಭಾವದಿಂದ ಪಂದ್ಯಾಟಗಳು ಯಶಸ್ವಿಯಾಗಿ ಜರುಗುತ್ತಿದೆ. ಕೊಡವ ಸಂಸ್ಕೃತಿಯನ್ನು ಬೆಳೆಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದರು.
ಕೊಡವ ಹಾಕಿ ನಮ್ಮೆ: ಇಂದು ಸೆಮಿಫೈನಲ್ ಫೈಟ್
ಒಲಿಂಪಿಯನ್ ಮನಿಯಪಂಡ ಸೋಮಯ್ಯ ಮಾತನಾಡಿ, ಕೌಟುಂಬಿಕ ಹಾಕಿ ಪಂದ್ಯಾಟಗಳಿಂದ ಜನಾಂಗ ಬಾಂಧವರಲ್ಲಿ ಸಾಮರಸ್ಯ ಮೂಡುತ್ತದೆ ಎಂದು ಹೇಳಿದರು. ಅತಿಥಿಗಳು ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಸೆಮಿಫೈನಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕ್ರಮದ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ
ಕಾರ‍್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಪಾಲಚಂಡ ಬೋಪಯ್ಯ ಸಹೋದರ ಡಿಕ್ಕಿ ಬೆಳ್ಯಪ್ಪ ಹಾಗೂ ಮಾರಮ್ಮಡ ಮಾಚಮ್ಮ ಅವರನ್ನು ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪರವಾಗಿ ಪಟ್ಟೆದಾರ ಅಪ್ಪಚೆಟ್ಟೋಳಂಡ ಈರಪ್ಪ ಕುಟುಂಬದ ಪ್ರಮುಖರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ನಾಳೆ ಫೈನಲ್
ಏಪ್ರಿಲ್ 9ರಂದು ಫೈನಲ್ ಪಂದ್ಯಾಟ ನಡೆಯಲಿದೆ. ಅಪ್ಪಚೆಟ್ಟೋಳಂಡ ಕುಟುಂಬದ ಪಟ್ಟೆದಾ ಈರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಪಾಂಡಂಡ ಲೀಲಾ ಕುಟ್ಟಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಏರ್ ಮಾರ್ಷಲ್ ಬಲ್ಟಿಕಾಳಂಡ ಯು. ಚೆಂಗಪ್ಪ, ಗಾರ್ಡನ್ ಸಿಟಿ ಯೂನಿವರ್ಸಿಟಿಯ ಚಾನ್ಸಲರ್ ಡಾ. ಜೋಸೆಫ್ ವಿ.ಜಿ., ಕೆಎಐಜಿ ಗ್ರೂಪ್ ಅಧ್ಯಕ್ಷ ಕುಟ್ಟಂಡ ಸುದಿನ್ ಮಂದಣ್ಣ, ಪದ್ಮಶ್ರೀ ಪ್ರಶಸ್ತಿ ವಿಜೇತ ಜಾಫರ್ ಇಕ್ಬಾಲ್, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತ ಧನರಾಜ್ ಪಿಳ್ಳೆ, ಒಲಿಂಪಿಯನ್ ಡಾ. ಅಂಜಪರವಂಡ ಬಿ. ಸುಬ್ಬಯ್ಯ, ಚೆಪ್ಪುಡಿರ ಎಸ್. ಪೂಣಚ್ಚ, ಎಸ್.ವಿ. ಸುನಿಲ್ ಪಾಲ್ಗೊಳ್ಳಲಿರುವರು. ಅಂತಿಮ ಪಂದ್ಯವನ್ನು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ. ಬೋಪಣ್ಣ ಉದ್ಘಾಟಿಸುವರು.