* ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಅಂಕಿತಾ ಸುರೇಶ್‌ಗೆ ಸಿಎಂ ಬೊಮ್ಮಾಯಿ ಸನ್ಮಾನ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ಭಾರತೀಯ ಮಹಿಳಾ ಹಾಕಿ ತಂಡ
* ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್‌ಗೇರಿದ್ದ ರಾಣಿ ರಾಂಪಾಲ್ ಪಡೆ
ಬೆಂಗಳೂರು(ಆ.14): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರಾಣಿ ರಾಂಪಾಲ್ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ದಿಟ್ಟ ಪ್ರದರ್ಶನದ ಮೂಲಕ ಗಮನ ಸೆಳೆದಿತ್ತು. ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್, ಕನ್ನಡತಿ ಅಂಕಿತಾ ಸುರೇಶ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು.`
ಟೋಕಿಯೋ ಒಲಿಂಪಿಕ್ ಟೂರ್ನಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಮಹಿಳಾ ತಂಡ ಗೆದ್ದಿದೆ. ರಾಣಿ ರಾಂಪಾಲ್ ನೇತೃತ್ವದ ಭಾರತ ಮಹಿಳಾ ಹಾಕಿ ತಂಡದ ತರಬೇತಿದಾರರಾದ ನಿಮಗೆ ತುಂಬು ಹೃದಯದ ಶುಭಾಶಯ ಕೋರುತ್ತೇನೆ. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
undefined
ಹಾಕಿ ಸಹಾಯಕ ಕೋಚ್ ಸಂದರ್ಶನ: ಜಗತ್ತಿನೆದುರು ನಮ್ಮ ಶಕ್ತಿ, ಸಾಮರ್ಥ್ಯ ಅನಾವರಣಗೊಳಿಸಿದ್ದೇವೆ..!
ಅಂಕಿತಾ ಅವರು ಮಡಿಕೇರಿ ಮೂಲದವರು. ಇವರ ತರಬೇತಿಯಲ್ಲಿ ಪಳಗಿದ ದೇಶದ ಮಹಿಳಾ ಹಾಕಿ ತಂಡ ಬಲಿಷ್ಠವಾಗಿದೆ. ಕಳೆದ ಎರಡು ವರ್ಷಗಳಿಂದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಂಕಿತಾ ತರಬೇತಿ ನೀಡುತ್ತಿದ್ದಾರೆ. ಹಲವಾರು ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಮಹಿಳಾ ತಂಡ ಸೆಮಿಫೈನಲ್ ಹಂತಕ್ಕೆ ತಲುಪಿ ಅಭೂತಪೂರ್ವ ಅಮೋಘ ಸಾಧನೆ ಮಾಡಿದೆ. ಒಟ್ಟು ಮೂರು ಜನ ಕೋಚ್ ಗಳ ಪೈಕಿ ಅಂಕಿತಾ ಒಬ್ಬರು. ಅವರು ಕನ್ನಡಿಗರು ಎನ್ನುವುದು ಶ್ಲಾಘನೀಯ ಮತ್ತು ಹೆಮ್ಮೆ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು.
ರಾಣಿ ರಾಂಪಾಲ್ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಸೆಮಿಫೈನಲ್‌ಗೇರಿದ ಸಾಧನೆ ಮಾಡಿತ್ತು. ಆದರೆ ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿತ್ತು. ಇನ್ನು ಕಂಚಿನ ಪದಕಕ್ಕಾಗಿ ನಡೆದ ಸೆಣಸಾಟದಲ್ಲಿ ರಾಣಿ ಪಡೆ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಗ್ರೇಟ್ ಬ್ರಿಟನ್ ಎದುರು 4-3 ಗೋಲುಗಳ ಅಂತರದಲ್ಲಿ ಸೋಲು ಕಾಣುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.