ಇಂದಿನಿಂದ ಹಾಕಿ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ
16 ತಂಡಗಳು ಪ್ರಶಸ್ತಿಗಾಗಿ ಕಾದಾಟ
ಸತತ ಎರಡನೇ ಬಾರಿಗೆ ಹಾಕಿ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ
ಭುವನೇಶ್ವರ(ಜ.13): 2023ರ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್‌ಗೆ ಶುಕ್ರವಾರ ಚಾಲನೆ ದೊರೆಯಲಿದೆ. ಜ.29ರ ವರೆಗೂ ನಡೆಯಲಿರುವ 15ನೇ ಆವೃತ್ತಿಯಲ್ಲಿ ಒಟ್ಟು 16 ತಂಡಗಳು ಸ್ಪರ್ಧಿಸಲಿದ್ದು, 17 ದಿನಗಳ ಪಂದ್ಯಾವಳಿಯಲ್ಲಿ ಫೈನಲ್ ಸೇರಿ ಒಟ್ಟು 44 ಪಂದ್ಯಗಳು ನಡೆಯಲಿವೆ.
ಸತತ 2ನೇ ಬಾರಿಗೆ ಭಾರತ ಆತಿಥ್ಯ ವಹಿಸುತ್ತಿದೆ. 2018ರಲ್ಲೂ ಒಡಿಶಾದ ಭುವನೇಶ್ವರದಲ್ಲಿ ಪಂದ್ಯಾವಳಿ ನಡೆದಿತ್ತು. ಈ ಬಾರಿ ಭುವನೇಶ್ವರದ ಕಳಿಂಗಾ ಕ್ರೀಡಾಂಗಣದ ಜೊತೆಗೆ ಹೊಸದಾಗಿ ನಿರ್ಮಾಣವಾಗಿರುವ, ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ ಎನಿಸಿರುವ ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲೂ ಪಂದ್ಯಗಳು ನಡೆಯಲಿವೆ.
undefined
ಮಲೇಷ್ಯಾ ಓಪನ್: ಪ್ರಣಯ್ ಕ್ವಾರ್ಟರ್‌ಗೆ ಲಗ್ಗೆ
2019ರ ನವೆಂಬರ್‌ನಲ್ಲಿ ಭಾರತಕ್ಕೆ ಆತಿಥ್ಯ ಹಕ್ಕು ದೊರೆಯಿತು. ಯುರೋ ಹಾಕಿ ಚಾಂಪಿಯನ್‌ಶಿಪ್ ಮೂಲಕ 5, ಯೂರೋಪಿಯನ್ ಅರ್ಹತಾ ಸುತ್ತಿನ ಮೂಲಕ 2, ಆಫ್ರಿಕಾ ನೇಷನ್ಸ್ ಕಪ್ ಮೂಲಕ 1, ಪ್ಯಾನ್ ಅಮೆರಿಕ ಕಪ್ ಮೂಲಕ 2, ಏಷ್ಯಾಕಪ್ ಮೂಲಕ 3, ಓಷಿಯಾನಿಯಾ ಕಪ್ ಮೂಲಕ 2 ತಂಡಗಳಿಗೆ ಪ್ರವೇಶ ದೊರೆಯಿತು. ಚಿಲಿ ಹಾಗೂ ವೇಲ್ಸ್ ತಂಡಗಳು ಈ ಟೂರ್ನಿಯಲ್ಲಿ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಲಿವೆ.
ಹೀಗಿವೆ ತಂಡಗಳ ಬಲಾಬಲ
ವಿಶ್ವಕಪ್‌ನಲ್ಲಿ ಆಡುತ್ತಿರುವ 16 ತಂಡಗಳ ಬಲಾಬಲ, ಹಿಂದಿನ ಸಾಧನೆ, ತಂಡ ಹೀಗೆ ಸಿದ್ಧತೆ ನಡೆಸಿದೆ ಎನ್ನುವ ವಿವರ ಇಲ್ಲಿದೆ.
ಗುಂಪು ‘ಎ’
ಆಸ್ಪ್ರೇಲಿಯಾ ವಿಶ್ವ ರ‍್ಯಾಂಕಿಂಗ್: 01
ಕಳೆದ 30 ವರ್ಷದಲ್ಲಿ ಸ್ಥಿರ ಪ್ರದರ್ಶನ ತೋರಿರುವ ತಂಡ ವಿಶ್ವ ರಾರಯಂಕಿಂಗ್ ಪರಿಚಯವಾದಾಗಿನಿಂದಲೂ ಅಗ್ರ 4ರಲ್ಲೇ ಉಳಿದಿದೆ. ಒಲಿಂಪಿಕ್ಸ್, ವಿಶ್ವಕಪ್, ಪ್ರೋ ಲೀಗ್, ಓಷಿಯಾನಿಯಾ ಪ್ರಶಸ್ತಿ ಹೀಗೆ ಎಲ್ಲವನ್ನೂ ಗೆದ್ದಿದೆ. ಈ ಸಲವೂ ಫೇವರಿಟ್ ತಂಡಗಳಲ್ಲಿ ಒಂದು. 4ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
ಅರ್ಜೆಂಟೀನಾ ವಿಶ್ವ ರ‍್ಯಾಂಕಿಂಗ್: 07
ರಿಯೋ ಒಲಿಂಪಿಕ್ಸ್ ಚಾಂಪಿಯನ್, 14 ಬಾರಿ ಪ್ಯಾನ್ ಅಮೆರಿಕ ಪ್ರಶಸ್ತಿ ಜಯಿಸಿದೆ. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. ತಾಂತ್ರಿಕವಾಗಿ ಬಹಳ ಮುಂದಿದೆ. ತನ್ನ ದಿನದಂದು ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ. ಪೆನಾಲ್ಟಿಕಾರ್ನರ್ ತಜ್ಞ ಗೊಂಜಾಲೊ ಅನುಪಸ್ಥಿತಿ ಕಾಡಬಹುದು.
ಫ್ರಾನ್ಸ್ ವಿಶ್ವ ರ‍್ಯಾಂಕಿಂಗ್: 12
ಇತ್ತೀಚಿನ ವರ್ಷಗಳಲ್ಲಿ ಸುಧಾರಿತ ತಂಡಗಳಲ್ಲಿ ಒಂದು. 2021-22ರ ಪ್ರೊ ಲೀಗ್‌ನಲ್ಲಿ 8ನೇ ಸ್ಥಾನ ಪಡೆದರೂ ಟೂರ್ನಿಯಲ್ಲಿ ತಂಡ ತೋರಿದ ಪ್ರದರ್ಶನ ಗಮನಾರ್ಹ. ಭಾರತ ವಿರುದ್ಧ 5-0 ಗೆಲುವು ಸಾಧಿಸಿತ್ತು. ಅರ್ಜೆಂಟೀನಾಕ್ಕೂ ಸೋಲುಣಿಸಿತ್ತು. ಉತ್ತಮ ಡ್ರ್ಯಾಗ್ ಫ್ಲಿಕರ್‌ಗಳ ಬಲ ಹೊಂದಿದೆ.
ದ.ಆಫ್ರಿಕಾ ವಿಶ್ವ ರ‍್ಯಾಂಕಿಂಗ್: 14
ವಿಶ್ವಕಪ್‌ಗಳಲ್ಲಿ ತಂಡದ ಪ್ರದರ್ಶನ ಹೇಳಿಕೊಳ್ಳುವಂತದ್ದೇನಲ್ಲ. 1994, 2010ರಲ್ಲಿ 10ನೇ ಸ್ಥಾನ ಪಡೆದಿತ್ತು. ಇತ್ತೀಚಿನ ನೇಷನ್ಸ್ ಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ತಂಡ ಬಲಿಷ್ಠ ತಂಡಗಳನ್ನು ಸೋಲಿಸಿತ್ತು. ಪ್ರತಿಭಾನ್ವಿತ ಕ್ಯಾಸಿಯಮ್ ಸಹೋದರರು ತಂಡದ ಟ್ರಂಪ್ ಕಾರ್ಡ್‌ಗಳೆನಿಸಿದ್ದಾರೆ.
ಗುಂಪು ‘ಬಿ’
ಬೆಲ್ಜಿಯಂ, ವಿಶ್ವ ರ‍್ಯಾಂಕಿಂಗ್: 02
ಹಾಲಿ ವಿಶ್ವ, ಒಲಿಂಪಿಕ್ಸ್ ಚಾಂಪಿಯನ್. ಈ ಸಲವೂ ಟ್ರೋಫಿ ಗೆಲ್ಲುವ ಫೇವರಿಟ್ ಎನಿಸಿಕೊಂಡು ಕಣಕ್ಕಿಳಿಯಲಿದೆ. ಪ್ರತಿ ವಿಭಾಗದಲ್ಲೂ ಬಲಿಷ್ಠವಾಗಿದೆ. ಅನುಭವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಅರ್ಧಕ್ಕಿಂತ ಹೆಚ್ಚು ಆಟಗಾರರು 30 ವರ್ಷಕ್ಕೂ ಹೆಚ್ಚು ವಯಸ್ಸಿನವರಾಗಿದ್ದು ಸರಾಸರಿ 200 ಪಂದ್ಯಗಳನ್ನಾಡಿದ್ದಾರೆ.
ಜರ್ಮನಿ, ವಿಶ್ವ ರ‍್ಯಾಂಕಿಂಗ್: 04
ಅಂ.ರಾ.ಹಾಕಿಯಲ್ಲಿ ಅತ್ಯುತ್ತಮ ದಾಖಲೆ ಹೊಂದಿದೆ. ತಂಡವು ತಂತ್ರಗಾರಿಕೆಯಲ್ಲಿ ಚುರುಕು ಹಾಗೂ ತಾಂತ್ರಿಕವಾಗಿ ಅದ್ಭುತವಾಗಿದೆ. ಒಲಿಂಪಿಕ್ಸ್, ವಿಶ್ವಕಪ್ ಸಮೀಪಿಸಿದಾಗ ತಂಡ ಉತ್ಕೃಷ್ಟಲಯ ಕಂಡುಕೊಳ್ಳುವ ಸಂಪ್ರದಾಯ ಪಾಲಿಸಿಕೊಂಡು ಬಂದಿದೆ. ಕಳೆದೊಂದು ವರ್ಷದಲ್ಲಿ 18 ಪಂದ್ಯಗಳಲ್ಲಿ 13ರಲ್ಲಿ ಗೆದ್ದಿದೆ.
ದ.ಕೊರಿಯಾ, ವಿಶ್ವ ರ‍್ಯಾಂಕಿಂಗ್: 10
2018ರ ವಿಶ್ವಕಪ್‌ಗೆ ಅರ್ಹತೆ ಪಡೆಯದ ತಂಡ ಈ ಬಾರಿ ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಜಯಿಸಿ ವಿಶ್ವಕಪ್‌ಗೆ ಪ್ರವೇಶಿಸಿದೆ. ಇತ್ತೀಚಿನ ಸುಲ್ತಾನ್ ಅಜ್ಲಾನ್ ಶಾ ಕಪ್‌ನಲ್ಲಿ ರನ್ನರ್-ಅಪ್ ಸ್ಥಾನ ಪಡೆದಿತ್ತು. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. 39 ವರ್ಷದ ನಾಯಕ ನಾಮ್‌ಯೊಂಗ್ ಲೀ ಪ್ರಮುಖ ಆಟಗಾರ.
ಜಪಾನ್, ವಿಶ್ವ ರ‍್ಯಾಂಕಿಂಗ್: 16
ಏಷ್ಯನ್ ಚಾಂಪಿಯನ್ಸ್ ಟ್ರೋಫಿ, ನೇಷನ್ಸ್ ಕಪ್ ಸೇರಿ ಕಳೆದೆರಡು ವರ್ಷಗಳಲ್ಲಿ ಉತ್ತಮ ಪ್ರದರ್ಶನ ತೋರಿದೆ. ತಂಡ ನಿರ್ಣಾಯಕ ಹಂತಗಳಲ್ಲಿ ಒತ್ತಡ ನಿಭಾಯಿಸುವಲ್ಲಿ ಪದೇಪದೇ ಎಡವಿದೆ. ಕಳೆದೊಂದು ವರ್ಷದಲ್ಲಿ ತಂಡದಲ್ಲಿ ಅನೇಕ ಆಟಗಾರರು ಬದಲಾಗಿದ್ದಾರೆ. ಹೆಚ್ಚಾಗಿ ಯುವಕರೇ ತಂಡದಲ್ಲಿದ್ದಾರೆ.
ಗುಂಪು ‘ಸಿ’
ನೆದರ್‌ಲೆಂಡ್‌್ಸ, ವಿಶ್ವ ರ‍್ಯಾಂಕಿಂಗ್: 03
ದಿಗ್ಗಜ ಡಿಫೆಂಡರ್ ಜೆರೊಯಿನ್ ಡೆಲ್ಮೀ ಕೋಚ್ ಆಗಿ ನೇಮಕಗೊಂಡ ಬಳಿಕ ನೆದರ್‌ಲೆಂಡ್‌್ಸ ತನ್ನ ಆಟದಲ್ಲಿ ಸ್ಥಿರತೆ ಕಂಡುಕೊಂಡಿದೆ. 2021-22ರ ಪ್ರೊ ಲೀಗ್‌ನಲ್ಲಿ ತಂಡ 16ರಲ್ಲಿ 12 ಪಂದ್ಯ ಗೆದ್ದು ಚಾಂಪಿಯನ್ ಆಗಿತ್ತು. ಕಳೆದೆರಡು ವಿಶ್ವಕಪ್‌ಗಳಲ್ಲಿ ರನ್ನರ್-ಅಪ್ ಆಗಿತ್ತು.
ನ್ಯೂಜಿಲೆಂಡ್, ವಿಶ್ವ ರ‍್ಯಾಂಕಿಂಗ್: 09
ತಂಡದಲ್ಲಿ ವಿಶ್ವ ಶ್ರೇಷ್ಠ ಆಟಗಾರರಿದ್ದಾರೆ. ‘ಬ್ಲ್ಯಾಕ್ ಸ್ಟಿಕ್ಸ್ ’ ವಿಶ್ವಕಪ್‌ನಲ್ಲಿ 10 ಬಾರಿ ಆಡಿದ್ದು 7ನೇ ಸ್ಥಾನಕ್ಕಿಂತ ಮೇಲಿನ ಸ್ಥಾನವನ್ನು ಗಳಿಸಲು ಸಾಧ್ಯವಾಗಿಲ್ಲ. ಅನುಭವಿ ಸ್ಟೆ್ರೖಕರ್ ಸೈಮನ್ ಚೈಲ್ಡ್, ಪೆನಾಲ್ಟಿಕಾರ್ನರ್ ತಜ್ಞ ಕೇನ್ ರಸ್ಸೆಲ್ ಪ್ರಮುಖ ಆಟಗಾರರು. 19ರ ಚಾರ್ಲಿ ಮೊರಿಸ್ಸನ್ ಮೇಲೆ ನಿರೀಕ್ಷೆ ಇದೆ.
ಮಲೇಷ್ಯಾ, ವಿಶ್ವ ರ‍್ಯಾಂಕಿಂಗ್: 11
2022ರ ಅಜ್ಲಾನ್ ಶಾ ಕಪ್‌ನಲ್ಲಿ ಚಾಂಪಿಯನ್ ಆಗಿದ್ದ ಮಲೇಷ್ಯಾ, ಏಷ್ಯಾಕಪ್‌ನಲ್ಲಿ ರನ್ನರ್-ಅಪ್ ಸ್ಥಾನ ಪಡೆದಿತ್ತು. ನೇಷನ್ಸ್ ಕಪ್‌ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಅಚ್ಚರಿಯ ಫಲಿತಾಂಶಗಳಿಗೆ ತಂಡ ಹೆಸರುವಾಸಿ. 306 ಪಂದ್ಯಗಳನ್ನಾಡಿರುವ ಡಿಫೆಂಡರ್ ರಹೀಂ ತಂಡದ ಪ್ರಮುಖ ಆಟಗಾರ.
ಚಿಲಿ, ವಿಶ್ವ ರ‍್ಯಾಂಕಿಂಗ್: 22
ಚೊಚ್ಚಲ ವಿಶ್ವಕಪ್ ಆಡುತ್ತಿರುವ ಚಿಲಿ. ಟೂರ್ನಿಗೆ ಯುವ ತಂಡವನ್ನು ಆಯ್ಕೆ ಮಾಡಿದೆ. 2022ರ ಪ್ಯಾನ್ ಅಮೆರಿಕನ್ ಕಪ್‌ನಲ್ಲಿ ರನ್ನರ್-ಅಪ್ ಆಗುವ ಮೂಲಕ ವಿಶ್ವಕಪ್‌ಗೆ ಅರ್ಹತೆ ಪಡೆಯಿತು. ಬಲಿಷ್ಠ ತಂಡಗಳನ್ನು ಎದುರಿಸಿದ ಅನುಭವವಿಲ್ಲ. ತಂಡ ಗುಂಪು ಹಂತ ದಾಟುವುದು ಅನುಮಾನ.
ಗುಂಪು ‘ಡಿ’
ಭಾರತ, ವಿಶ್ವ ರ‍್ಯಾಂಕಿಂಗ್: 06
1975ರಲ್ಲಿ ವಿಶ್ವಕಪ್ ಗೆದ್ದಿದ್ದ ಭಾರತ ಆ ಬಳಿಕ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿದೆ. ಟೋಕಿಯೋ ಒಲಿಂಪಿಕ್‌ನಲ್ಲಿ ಕಂಚು, 2021-22ರ ಪ್ರೊ ಲೀಗ್‌ನಲ್ಲಿ 3ನೇ ಸ್ಥಾನ ಪಡೆದ ಭಾರತ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ. ಇತ್ತೀಚಿನ ಆಸ್ಪ್ರೇಲಿಯಾ ಪ್ರವಾಸದಲ್ಲಿ 1-4ರಲ್ಲಿ ಸರಣಿ ಸೋತರೂ ಸುಧಾರಿತ ಪ್ರದರ್ಶನ ತೋರಿತ್ತು.
ಇಂಗ್ಲೆಂಡ್, ವಿಶ್ವ ರ‍್ಯಾಂಕಿಂಗ್: 05
ಕಳೆದ 3 ಆವೃತ್ತಿಗಳಲ್ಲಿ 4ನೇ ಸ್ಥಾನ ಪಡೆದಿದೆ. ಹಾಲಿ ಪ್ರಧಾನ ಕೋಚ್ ಪಾಲ್ ರೆವಿಂಗ್ಟನ್ ತಂಡದಲ್ಲಿ ಸಾಕಷ್ಟುಬದಲಾವಣೆ ತಂದಿದ್ದು, 10 ಯುವ ಆಟಗಾರರನ್ನು ವಿಶ್ವಕಪ್‌ಗೆ ಕರೆತಂದಿದ್ದಾರೆ. ಅನುಭವದ ಕೊರತೆ ಎದ್ದು ಕಾಣುತ್ತಿದೆಯಾದರೂ ಹಿರಿಯ ಆಟಗಾರರಾದ ವ್ಯಾಲೆಸ್, ಕೊಂಡನ್, ಹ್ಯಾರಿ, ರೋಪರ್ ಮೇಲೆ ನಿರೀಕ್ಷೆ ಇದೆ.
ಸ್ಪೇನ್, ವಿಶ್ವ ರ‍್ಯಾಂಕಿಂಗ್: 08
ಗುಂಪು ‘ಡಿ’ನ ಡಾರ್ಕ್ ಹಾರ್ಸ್ ಎನಿಸಿದೆ. ಇತ್ತೀಚೆಗೆ ಭಾರತ, ನ್ಯೂಜಿಲೆಂಡ್ ಸೇರಿ ಬಲಿಷ್ಠ ತಂಡಗಳನ್ನು ಸೋಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆಲ್ವರೋ ಇಗ್ಲೇಷಿಯಸ್, ರಿಕಾರ್ಡೊ ಸ್ಯಾಂಚೆಜ್, ಎನ್ರಿಕೆ ಗೊಂಜಾಲೆಜ್‌ರಿಂದ ಉತ್ತಮ ಆಟ ನಿರೀಕ್ಷಿಸಲಾಗಿದೆ. 2 ಬಾರಿ ರನ್ನರ್-ಅಪ್ ಸ್ಪೇನ್ ಚೊಚ್ಚಲ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ.
ವೇಲ್ಸ್, ವಿಶ್ವ ರ‍್ಯಾಂಕಿಂಗ್: 15
ವೇಲ್ಸ್ ಕೂಡ ಚೊಚ್ಚಲ ಬಾರಿಗೆ ವಿಶ್ವಕಪ್‌ಗೆ ಕಾಲಿಟ್ಟಿದೆ. ಕಾಮನ್‌ವೆಲ್ತ್ ಗೇಮ್ಸ್, ಯುರೋ ಚಾಂಪಿಯನ್‌ಶಿಪ್ ಸೇರಿ ಪ್ರತಿಷ್ಠಿತ ಟೂರ್ನಿಗಳಲ್ಲಿ ದೊಡ್ಡ ಸಾಧನೆ ಏನು ಮಾಡಿಲ್ಲ. ವಿಶ್ವಕಪ್ ತಂಡದ ಬಹುತೇಕ ಆಟಗಾರರು ಯುರೋಪ್‌ನ ಲೀಗ್‌ಗಳಲ್ಲಿ ಆಡುವ ಕಾರಣ ಉತ್ತಮ ಪ್ರದರ್ಶನ ನಿರೀಕ್ಷೆ ಮಾಡಬಹುದು.